ಉಪಚುನಾವಣೆ-19 ವಾಸ್ತವ ವರದಿ | ಜೆಡಿಎಸ್​ ಪ್ರಬಲ ಕೋಟೆಯಾಗಿರುವ ಕೆ.ಆರ್.ಪೇಟೆಯಲ್ಲಿ ಜನರು ಮತ್ತೆ ಪಕ್ಷ ನಿಷ್ಠೆ ತೋರಲಿದ್ದಾರಾ?

Karnataka By Elections 2019 Ground Report | ಇಲ್ಲಿ ಒಕ್ಕಲಿಗ ಸಮುದಾಯವೇ ಪ್ರಾಬಲ್ಯವಾಗಿದ್ದು, ಇದೀಗ ಅಖಾಡದಲ್ಲಿರುವ ಇರುವ ಮೂರು ಪಕ್ಷಗಳ ಅಭ್ಯರ್ಥಿಗಳು ಅದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕುರುಬ ಹಾಗೂ ಎಸ್ಸಿ-ಎಸ್ಟಿ ಮತಗಳು ಇಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ತಾಲೂಕಿನಲ್ಲಿ ಒಟ್ಟು 216 ಹಳ್ಳಿಗಳಿದ್ದು, 258 ಮತಗಟ್ಟೆಗಳನ್ನು ಸ್ಥಾಪಸಲಾಗುತ್ತದೆ.

HR Ramesh | news18-kannada
Updated:November 22, 2019, 7:06 AM IST
ಉಪಚುನಾವಣೆ-19 ವಾಸ್ತವ ವರದಿ | ಜೆಡಿಎಸ್​ ಪ್ರಬಲ ಕೋಟೆಯಾಗಿರುವ ಕೆ.ಆರ್.ಪೇಟೆಯಲ್ಲಿ ಜನರು ಮತ್ತೆ ಪಕ್ಷ ನಿಷ್ಠೆ ತೋರಲಿದ್ದಾರಾ?
ಬಿ.ಎಲ್.ದೇವರಾಜು, ಕೆ.ಬಿ.ಚಂದ್ರಶೇಖರ್, ನಾರಾಯಣಗೌಡ.
  • Share this:
ಬೆಂಗಳೂರು(ನ.22) : ಶಾಸಕರ ರಾಜೀನಾಮೆಯಿಂದ ತೆರವಾದ 17 ಕ್ಷೇತ್ರಗಳಲ್ಲಿ 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಉಪಚುನಾವಣೆ ನಡೆಯುತ್ತಿದೆ. ಈಗಾಗಲೇ ಚುನಾವಣೆಯ ಬಹುತೇಕ ಪ್ರಕ್ರಿಯೆಗಳು ಮುಗಿದಿದ್ದು, ಅಭ್ಯರ್ಥಿಗಳು ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಈ ಉಪಚುನಾವಣೆ ಬಿಜೆಪಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿರುವ ಕಾರಣ, ಎಲ್ಲ ಕ್ಷೇತ್ರಗಳು ಹೈವೋಲ್ಟೆಜ್ ಕಣಗಳಾಗಿವೆ. ಅವುಗಳಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕೂಡ ಪ್ರಮುಖ ಕಣವಾಗಿದ್ದು, ಇಲ್ಲಿನ ಲೆಕ್ಕಾಚಾರ ಹೇಗಿದೆ ಎಂಬ ಪ್ರತ್ಯಕ್ಷ ವರದಿ ಇಲ್ಲಿದೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಕೆ.ಸಿ.ನಾರಾಯಣಗೌಡ ರಾಜೀನಾಮೆಯಿಂದ ತೆರವಾಗಿರುವ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದೆ. ಈಗ ಅನರ್ಹ ಶಾಸಕರಾಗಿರುವ ನಾರಾಯಣಗೌಡ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿ ಜೆಡಿಎಸ್​ನಿಂದ ಬಿ.ಎಲ್.ದೇವರಾಜ್ ಹಾಗೂ ಕಾಂಗ್ರೆಸ್​ನಿಂದ ಕೆ.ಬಿ.ಚಂದ್ರಶೇಖರ್ ಅಖಾಡದಲ್ಲಿದ್ದಾರೆ.

2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ.ಸಿ.ನಾರಾಯಣಗೌಡ 88,016 ಮತಗಳನ್ನು ಪಡೆಯುವ ಮೂಲಕ ಜಯಶೀಲರಾಗಿದ್ದರು. ಇವರ ನಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಅವರು 70,897 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಬೂಕನಹಳ್ಳಿ ಮಂಜು 9519 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದರು. ಆ ಚುನಾವಣೆಯಲ್ಲಿ ನಾರಾಯಣಗೌಡ 17,119 ಮತಗಳ ಅಂತರದಿಂದ ಗೆದ್ದಿದ್ದರು.

ತಾಲೂಕಿನಲ್ಲಿ ಒಟ್ಟು 2,08,937 ಮತದಾರರಿದ್ದಾರೆ. 1,06,088 ಪುರುಷರು ಹಾಗೂ 1,02,844 ಮಹಿಳೆಯರು ಹಾಗೂ ಇತರೆ 5 ಮತದಾರನ್ನು ಒಳಗೊಂಡಿದೆ. ಕೆ.ಆರ್.ಪೇಟೆ ಕ್ಷೇತ್ರದ ಜಾತಿವಾರು ಲೆಕ್ಕಾಚಾರ ನೋಡುವುದಾದರೆ, ಒಕ್ಕಲಿಗರು 80,000,  ಕುರುಬ ಸಮುದಾಯದ 50,000, ಎಸ್ಸಿ‌, ಎಸ್ಟಿ 31,000, ಹಿಂದುಳಿದ ವರ್ಗ 22,000,  ವೀರಶೈವ 3,000, ಮುಸ್ಲಿಂ ಸಮುದಾಯ 10,000 ಹಾಗೂ ಇತರೆ 12,000 ಮತಗಳಿವೆ. ಇಲ್ಲಿ ಒಕ್ಕಲಿಗ ಸಮುದಾಯವೇ ಪ್ರಾಬಲ್ಯವಾಗಿದ್ದು, ಇದೀಗ ಅಖಾಡದಲ್ಲಿರುವ ಇರುವ ಮೂರು ಪಕ್ಷಗಳ ಅಭ್ಯರ್ಥಿಗಳು ಅದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕುರುಬ ಹಾಗೂ ಎಸ್ಸಿ-ಎಸ್ಟಿ ಮತಗಳು ಇಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ತಾಲೂಕಿನಲ್ಲಿ ಒಟ್ಟು 216 ಹಳ್ಳಿಗಳಿದ್ದು, 258 ಮತಗಟ್ಟೆಗಳನ್ನು ಸ್ಥಾಪಸಲಾಗುತ್ತದೆ.

ಇದನ್ನು ಓದಿ: ಉಪಚುನಾವಣೆ ವಾಸ್ತವ ವರದಿ | ಬಿಜೆಪಿ ಪ್ರಬಲವಾಗಿಲ್ಲದ ಚಿಕ್ಕಬಳ್ಳಾಪುರದಲ್ಲಿ ತ್ರಿಕೋನ ಸ್ಪರ್ಧೆ

ಇಲ್ಲೂ ಕೂಡ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್​ನಿಂದ ಪಲಾಯನಗೈದಿರುವ ನಾರಾಯಣಗೌಡ ಬಿಜೆಪಿಯಿಂದ ಗೆಲ್ಲಲು ಸಕಲ ಕಸರತ್ತುಗಳನ್ನು ನಡೆಸಿದ್ದಾರೆ. ಈಗಾಗಲೇ ತಾಲೂಕಿನ ಜನರಿಗೆ ಬಾಡೂಟ ಹಾಕಿಸುವ ಮೂಲಕ ಅವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ನಾರಾಯಣಗೌಡರ ಬಾಡೂಟ ರಾಜಕೀಯಕ್ಕೆ ನಲುಗಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್, ಈಗಾಗಲೇ ನಾನು ಚುನಾವಣೆ ಸೋತಿದ್ದು, ಈಗ ಎದುರಾಳಿ ಹಣದ ಮುಂದೆ ಚುನಾವಣೆ ಎದುರಿಸುವುದು ಕಷ್ಟ. ಹೀಗಾಗಿ ಬೇರೆ ಯಾರಿಗಾದರೂ ಟಿಕೆಟ್ ನೀಡಿ ಎಂದು ಕಾಂಗ್ರೆಸ್ ನಾಯಕರಲ್ಲಿ ಅಲವತ್ತುಕೊಂಡಿದ್ದರು. ನಾಯಕರು, ಧೈರ್ಯ ಹೇಳಿ, ಚುನಾವಣೆಗೆ ಸ್ಪರ್ಧಿಸಲು ಹೇಳಿದ್ದರಿಂದ ಅಖಾಡಕ್ಕೆ ಇಳಿದು, ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನೂ ಜೆಡಿಎಸ್​ ಪ್ರಬಲ ಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಜನರು ಮತ್ತೆ ಪಕ್ಷ ನಿಷ್ಠೆ ತೋರಲಿದ್ದಾರೆಯೇ ಎಂಬುದು ಡಿಸೆಂಬರ್ 9ರ ಫಲಿತಾಂಶದ ದಿನದಂದು ತಿಳಿದುಬರಲಿದೆ.
First published:November 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading