ನೂತನ ಸಚಿವರಾಗಿ ಆಯ್ಕೆಯಾದ ಶಾಸಕರ ಬಗ್ಗೆ ನಿಮಗೆಷ್ಟು ಗೊತ್ತು?

ಇಬ್ಬರು ಸಚಿವರಿಗೆ ಮಂತ್ರಿ ಸ್ಥಾನದಿಂದ ಕೊಕ್​ ನೀಡಿ, ಆ ಸ್ಥಾನಕ್ಕೆ ಮತ್ತಿಬ್ಬರ ಹೆಸರನ್ನು ಅಂತಿಮಗೊಳಿಸಿದೆ. ನೂತನ ಸಚಿವರಾದ ಎಂಟು ಶಾಸಕರ ಹಿನ್ನೆಲೆ, ಕ್ಷೇತ್ರ, ಅನುಭವದ ಸ್ಥೂಲ ಪರಿಚಯ ಇಲ್ಲಿದೆ.

Seema.R | news18
Updated:December 22, 2018, 7:35 PM IST
ನೂತನ ಸಚಿವರಾಗಿ ಆಯ್ಕೆಯಾದ ಶಾಸಕರ ಬಗ್ಗೆ ನಿಮಗೆಷ್ಟು ಗೊತ್ತು?
ಶಿವಳ್ಳಿ, ಇ ತುಕಾರಾಂ, ಎಂಬಿ ಪಾಟೀಲ್​, ಎಟಿಬಿ ನಾಗರಾಜ್​, ಪಿಟಿ ಪರಮೇಶ್ವರ್​ ನಾಯಕರ್​, ಆರ್​.ಬಿ ತಿಮ್ಮಾಪುರ್​, ರಹೀಂಖಾನ್​, ಸತೀಶ್​ ಜಾರಕಿಹೊಳಿ
  • News18
  • Last Updated: December 22, 2018, 7:35 PM IST
  • Share this:
- ಸೀಮಾ ಆರ್​

ಕಡೆಗೂ ನಾಲ್ಕು ತಿಂಗಳ ನಂತರ ಸಚಿವ ಸಂಪುಟ ವಿಸ್ತರಣೆಯಾಗಿದೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್​ ಪಾಲಿಗೆ ಉಳಿದಿದ್ದ ಆರು ಮಂತ್ರಿ ಸ್ಥಾನಗಳಿಗೆ ಇಪ್ಪತ್ತಕ್ಕೂ ಹೆಚ್ಚು ಸಚಿವಾಕಾಂಕ್ಷಿಗಳು ಇದ್ದರು. ಅಂತಿಮವಾಗಿ ಕಾಂಗ್ರೆಸ್​ ರಾಜ್ಯ ನಾಯಕರು ಹೈಕಮಾಂಡ್​ನಿಂದ ಗ್ರೀನ್​ ಸಿಗ್ನಲ್​ ಪಡೆದು ಆರು ಮಂದಿ ಶಾಸಕರನ್ನು ಸಚಿವರನ್ನಾಗಿ ಆಯ್ಕೆ ಮಾಡಿದ್ದಾರೆ. ಇಬ್ಬರು ಸಚಿವರಿಗೆ ಮಂತ್ರಿ ಸ್ಥಾನದಿಂದ ಕೊಕ್​ ನೀಡಿ, ಆ ಸ್ಥಾನಕ್ಕೆ ಮತ್ತಿಬ್ಬರ ಹೆಸರನ್ನು ಅಂತಿಮಗೊಳಿಸಿದೆ. ನೂತನ ಸಚಿವರಾದ ಎಂಟು ಶಾಸಕರ ಹಿನ್ನೆಲೆ, ಕ್ಷೇತ್ರ, ಅನುಭವದ ಸ್ಥೂಲ ಪರಿಚಯ ಇಲ್ಲಿದೆ.

 

ಸಿ ಎಸ್​ ಶಿವಳ್ಳಿ - ಕುಂದಗೋಳ ಕ್ಷೇತ್ರ

ಧಾರವಾಡ ಜಿಲ್ಲೆಯ ಕುಂದಗೋಳದ ಶಾಸಕ ಸಿಎಸ್​ ಶಿವಳ್ಳಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಕುರುಬ ಸಮುದಾಯದ ಪ್ರಬಲ ನಾಯಕ. ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಇವರು ಸರ್ಕಾರ ರಚನೆಯಾದ ಸಂದರ್ಭದಲ್ಲಿ ಸಚಿವ ಸ್ಥಾನದ ಅವಕಾಶ ತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದರು. ಪಕ್ಷದ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ ಶಿವಳ್ಳಿ ಅವರನ್ನು ಸೆಳೆಯಲು ಬಿಜೆಪಿ ಮುಂದಾಗಿತ್ತು. ಈ ಕುರಿತು ಬಹಿರಂಗವಾಗಿ ತಿಳಿಸಿದ ಅವರು ಬಿಜೆಪಿ ಗಾಳಕ್ಕೆ ನಾವು ಬಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೇ ನನಗೂ ಸಚಿವ ಸ್ಥಾನದ ಮೇಲೆ ಆಸೆ ಇದೆ. ವರಿಷ್ಠರು ಹಾಗೂ ಹೈಕಮಾಂಡ್ ಸೇರಿ ತೆಗದುಕೊಳ್ಳುವ  ನಿರ್ಣಯಕ್ಕೆ ಬದ್ಧರಾಗಿರುತ್ತೇವೆ. ನನಗೆ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸವನ್ನು ಈ ಹಿಂದೆ ವ್ಯಕ್ತಪಡಿಸಿದ್ದರು.

ಎಂಟಿಬಿ ನಾಗಾರಾಜ್ - ಹೊಸಕೋಟೆ ಕ್ಷೇತ್ರ​

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರದ ಶಾಸಕ ಎಂಟಿಬಿ ನಾಗರಾಜ್​ ಕೂಡ ಕುರುಬ ಸಮುದಾಯದ ಮುಖಂಡ. ಸಚಿವ ಸ್ಥಾನ ಕೈ ತಪ್ಪಿದರೆ ರಾಜೀನಾಮೆ ನೀಡುವ ಬೆದರಿಕೆಯನ್ನು ಹಾಕಿದ್ದರು. "ಮೂರು ಬಾರಿ ನಾನು ಗೆದ್ದಿರುವುದು ಕಾಂಗ್ರೆಸ್​ನಿಂದ ಅಲ್ಲ, ನನ್ನ ಸ್ವಂತ ವರ್ಚಸ್ಸಿನ ಮೇಲೆ. 35 ವರ್ಷಕ್ಕಾಗಿ ದುಡಿದ ನನ್ನನ್ನು ಪಕ್ಷ ಯಾಕೆ ಪರಿಗಣಿಸುತ್ತಿಲ್ಲ," ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.  ಅಲ್ಲದೇ, ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್​ ಶಾಸಕರಿಗೆ ಮಣೆ ಇಲ್ಲದಂತೆ ಆಗಿದೆ ಎಂದು ಆರೋಪಿಸಿದ್ದರು. ತಮಗೆ ಪಕ್ಷ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಪಕ್ಷ ತೊರೆಯುವುದಾಗಿ ಬೆದರಿಕೆ ಹಾಕಿದ್ದಾಗ ಸಚಿವರಾದ ಡಿ.ಕೆ.ಶಿವಕುಮಾರ್, ಜಮೀರ್ ಅಹಮ್ಮದ್ ಖಾನ್, ಕೃಷ್ಣಬೈರೇಗೌಡ ಭೇಟಿ ನೀಡಿ ಮಾತುಕತೆ ನಡೆಸಿ, ಅವರ ಮನವೊಲಿಕೆ ಮಾಡಿದ್ದರು.ಇ ತುಕಾರಂ - ಸಂಡೂರು ಕ್ಷೇತ್ರ

ಬಳ್ಳಾರಿ ಜಿಲ್ಲೆಯ ಸಂಡೂರು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಇ. ತುಕಾರಾಂ ವಾಲ್ಮೀಕಿ ಸಮುದಾಯದ ನಾಯಕರಾಗಿದ್ದು, ಮೂರನೇ ಬಾರಿ ಶಾಸಕರಾಗಿದ್ದಾರೆ. ಕಾಂಗ್ರೆಸ್​ ಭದ್ರ ಕೋಟೆಯಾದ ಸಂಡೂರಿನಲ್ಲಿ ಸತತ ಹ್ಯಾಟ್ರಿಕ್​ ಗೆಲುವು ದಾಲಿಸಿದವರು ಇವರು. ಜಾರಕಿಹೊಳಿ ಬಂಡಾಯದ ಬೆನ್ನಲ್ಲೆ ತುಕಾರಂ ಕೂಡ ಸಚಿವ ಸ್ಥಾನಕ್ಕಾಗಿ ರೆಬೆಲ್​ ಆಗಿದ್ದರು. ಸಚಿವ ಸ್ಥಾನಕ್ಕಾಗಿ ಹೈಕಮಾಂಡ್​ನಲ್ಲಿ ಲಾಬಿ ಕೂಡ ಮಾಡಿದ್ದರು. ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದ ತುಕಾರಾಂ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಎಂ ಬಿ ಪಾಟೀಲ್​ - ಬಬಲೇಶ್ವರ ಕ್ಷೇತ್ರ

ಲಿಂಗಾಯತ ಸಮುದಾಯದ ಪ್ರಬಲ ನಾಯಕರಾದ ಬಬಲೇಶ್ವರ ಕ್ಷೇತ್ರದ ಶಾಸಕ ಎಂಬಿ ಪಾಟೀಲ್​ ಸಿದ್ದರಾಮಯ್ಯ ಸರ್ಕಾರದಲ್ಲಿ ನೀರಾವರಿ ಸಚಿವರಾಗಿ ಕಾರ್ಯ ನಿರ್ವಹಿಸಿದವರು. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ನೇತೃತ್ವ ವಹಿಸಿದವರು. ಐದು ಬಾರಿ ಶಾಸಕರಾಗಿ, ಸಚಿವ ಹುದ್ದೆ ನಿರ್ವಹಣೆ ಅನುಭವದೊಂದಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಬಲರಾಗಿದ್ದ ಇವರನ್ನು ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ಕೈ ಬಿಟ್ಟ ಕಾರಣದಿಂದ ಬಂಡಾಯ ಸಾರಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಆಕಾಂಕ್ಷೆಯಾಗಿದ್ದ ಇವರು ಸಚಿವ ಸ್ಥಾನವೂ ಕೈ ತಪ್ಪಿದ್ದರಿಂದ ದೆಹಲಿ ಮಟ್ಟದಲ್ಲಿ ಭಿನ್ನಮತವನ್ನು ಹೊರಹಾಕಿದ್ದರು. ಸಿದ್ದರಾಮಯ್ಯ ಹಾಗೂ ಸೋನಿಯಾ ಗಾಂಧಿ ಆಪ್ತರಾಗಿರುವ ಇವರಿಗೆ ವಿಸ್ತರಣೆ ಸಮಯದಲ್ಲಿ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ಈಗ ಸಚಿವ ಸ್ಥಾನ ಪಡೆದಿದ್ದಾರೆ.

ಪಿ ಟಿ ಪರಮೇಶ್ವರ್​ ನಾಯ್ಕ್​​ - ಹಡಗಲಿ ಶಾಸಕ

ಲಂಬಾಣಿ ಸಮುದಾಯದ ಪ್ರಮುಖ ನಾಯ್ಕ್​ರಾದ ಬಳ್ಳಾರಿ ಜಿಲ್ಲೆಯ ಹಡಗಲಿ ಶಾಸಕ ಪಿ ಟಿ ಪರಮೇಶ್ವರ್​  ನಾಯಕ್​ ಸಿದ್ದರಾಮಯ್ಯ ಆಪ್ತರು ಕೂಡ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಕೆಲಸ ಮಾಡಿದ್ದ ವೇಳೆ ಡಿವೈಎಸ್​ಪಿ ಅನುಪಮಾ ಶೆಣೈ ಪ್ರಕರಣದಲ್ಲಿ ಸಾಕಷ್ಟು ಸುದ್ದಿಯಾಗಿದ್ದರು. ಕೂಡ್ಲಿಗಿ ಡಿವೈಎಸ್​ಪಿ ಅನುಪಮಾ ಶೆಣೈ ತಮ್ಮ ಪೋನ್​ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಪ್ರಭಾವ ಬಳಸಿ ವರ್ಗಾವಣೆ ಮಾಡಿಸಿದ್ದಾರೆ, ಅಲ್ಲದೇ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಅನುಪಮಾ ಬಹಿರಂಗವಾಗಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇವರ ರಾಜೀನಾಮೆ ವಿಚಾರ ಹೈ ಕಮಾಂಡ್​ ಅಂಗಳ ತಲುಪಿತ್ತು. ಈ ಬಾರಿ ಸಚಿವ ಸ್ಥಾನ ಕೈ ತಪ್ಪಿದ ಕಾರಣ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೇ, ತಾವು ಯಾವುದೇ ಕಾರಣಕ್ಕೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಮುಂಬೈಗೆ ಹೋಗಿ ರೆಸಾರ್ಟ್​ ಪಾಲಿಟಿಕ್ಸ್​ ಕೂಡ ಮಾಡುವುದಿಲ್ಲ, ಹೈಕಮಾಂಡ್​ , ಸಿದ್ದರಾಮಯ್ಯ ಆದೇಶ ಪಾಲಿಸುತ್ತೇವೆ ಎಂದಿದ್ದರು.

ಸತೀಶ್​ ಜಾರಕಿಹೊಳಿ - ಯಮಕನಮರಡಿ ಕ್ಷೇತ್ರ

ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದ ಶಾಸಕರಾಗಿರುವ ಸತೀಶ್​ ಜಾರಕಿಹೊಳಿ ಸಿದ್ದರಾಮಯ್ಯ ಬೆಂಬಲಿಗರಾಗಿ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ನಾಯಕ. ಈ ಹಿಂದೆ ಸಣ್ಣ ಕೈಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಅವರು ಸಚಿವ ಸ್ಥಾನ ತಪ್ಪಿದ್ದರಿಂದ ಪಕ್ಷದ ವಿರುದ್ಧ ಶೀತಲ ಸಮರ ಆರಂಭಿಸಿದ್ದರು. ಪಿಎಲ್​ಡಿ ಬ್ಯಾಂಕ್​ ಚುನಾವಣೆ ವಿಚಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಹಾಗೂ ತಮ್ಮ ಜಿಲ್ಲೆಯಲ್ಲಿ ಸಚಿವ ಡಿಕೆ ಶಿವಕುಮಾರ್​ ಹಸ್ತಕ್ಷೇಪಕ್ಕೆ ಸಂಬಂಧಿಸಿದಂತೆ ಜಾರಕಿಹೊಳಿ ಸಹೋದರರು ಸರ್ಕಾರವನ್ನು ಅಸ್ಥಿರಗೊಳಿಸುವ ಮಟ್ಟಕ್ಕೆ ಮುಂದಾಗಿದ್ದರು. ಅಲ್ಲದೇ ತಮ್ಮ ಅಣ್ಣನಿಗೆ ಸಚಿವ ಸ್ಥಾನ ನೀಡಬೇಕು ಎಂದು ರಮೇಶ್​ ಕೂಡ ವರಿಷ್ಠರಿಗೆ ತಾಕೀತು ಮಾಡಿದ್ದರು.  ಹೈಕಮಾಂಡ್​ ಭರವಸೆ ಹಿನ್ನೆಲೆಯಲ್ಲಿ ಕಾದು ಕುಳಿತಿದ್ದ ಸತೀಶ್​ಗೆ ಸಚಿವ ಸ್ಥಾನ ನೀಡುವುದರ ಜೊತೆಗೆ ಪಕ್ಷದ ವಿರುದ್ಧ ಬಂಡಾಯ ಸಾರಿದ್ದ ರಮೇಶ್​ ಜಾರಕಿಹೊಳಿಯನ್ನು ಸಚಿವ ಸ್ಥಾನದಿಂದ ಕೈ ಬಿಡಲಾಗಿದೆ.

ಇದನ್ನು ಓದಿ: ಸಚಿವ ಸ್ಥಾನದ ಜೊತೆಗೆ ಸತೀಶ್​ ಜಾರಕಿಹೊಳಿಗೆ ಕಾಂಗ್ರೆಸ್​ ವಹಿಸಿದ 3 ಹೊಣೆಗಾರಿಕೆ​ಗಳೇನು?

ಆರ್​ ಬಿ ತಿಮ್ಮಾಪುರ - ಮುಧೋಳ ಕ್ಷೇತ್ರ

ಬಾಗಲಕೋಟೆಯ ಮುಧೋಳ ಮೀಸಲು ಕ್ಷೇತ್ರ ಮೇಲ್ಮನೆ ಸದಸ್ಯರಾದ  ಆರ್‌.ಬಿ.ತಿಮ್ಮಾಪುರ ಎಸ್​.ಎಂ ಕೃಷ್ಣಾ ಅವರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದವರು. ಎರಡು ಗೆಲುವು, ನಾಲ್ಕು ಸೋಲು ಕಂಡಿರುವ ಇವರು ಬಾಗಲಕೋಟೆ ಜಿಲ್ಲೆಯ ಅಹಿಂದ ವರ್ಗದ ಮಾದಿಗ ಸಮುದಾಯದ ಉತ್ತರ ಕರ್ನಾಟಕದ ಏಕೈಕ ನಾಯಕರು ಕೂಡ. ಉತ್ತರ ಕರ್ನಾಟಕ ಅಹಿಂದ ವರ್ಗ ಪ್ರಬಲಗೊಳಿಸುವ ನಿಟ್ಟಿನಲ್ಲಿ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಲಾಗಿದೆ.

ರಹೀಂಖಾನ್ - ಬೀದರ್ ಉತ್ತರ ಕ್ಷೇತ್ರ

ಮುಸ್ಲಿಂ ಕೋಟಾದಲ್ಲಿ ಬೀದರ್​ ಉತ್ತರ ಕ್ಷೇತ್ರದ  ಶಾಸಕರ ರಹೀಂ ಖಾನ್​ಗೆ ಈ ಬಾರಿ ಸಚಿವ ಸ್ಥಾನದ ಅದೃಷ್ಟ ಒಲಿದಿದೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ತಮಗೆ ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಈ ಹಿಂದೆ ಬೇಸರ ವ್ಯಕ್ತಪಡಿಸಿದ್ದರು.

First published:December 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading