ಬೆಂಗಳೂರು (ಜೂ. 18): ಕೊರೋನಾ ಅಟ್ಟಹಾಸವನ್ನು ನಿಯಂತ್ರಿಸಲು ಮಾರ್ಚ್ 24ರಿಂದ ದಿಢೀರಾಗಿ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿಯ ಒಂದು ಪರೀಕ್ಷೆ ಸೇರಿದಂತೆ ಎಲ್ಲ ಶಾಲಾ-ಕಾಲೇಜುಗಳ ಪರೀಕ್ಷೆಗಳೂ ಮುಂದೂಡಲ್ಪಟ್ಟಿದ್ದವು. ಲಾಕ್ಡೌನ್ ನಡುವೆಯೇ ಇಂದು ಕರ್ನಾಟಕದಲ್ಲಿ ಮೊದಲ ಪರೀಕ್ಷೆ ನಡೆಯುತ್ತಿದೆ. ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇಂಗ್ಲಿಷ್ ಪರೀಕ್ಷೆ ಬರೆಯಲಿದ್ದಾರೆ.
ಲಾಕ್ಡೌನ್ ಘೋಷಣೆ ಆದ ಬಳಿಕ ಇಂದು ರಾಜ್ಯದಲ್ಲಿ ಮೊದಲ ಪರೀಕ್ಷೆ ನಡೆಯುತ್ತಿದೆ. ಬೆಳಗ್ಗೆ 10.30ರಿಂದ ಪರೀಕ್ಷೆ ಆರಂಭವಾಗಲಿದೆ. ಕರ್ನಾಟಕದ 1,016 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇಂದು ಒಟ್ಟಾರೆ 5,95,997 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಸಮಯಕ್ಕೂ ಮೊದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವುದರಿಂದ ಬೇಗ ಬರುವಂತೆ ಸೂಚನೆ ನೀಡಲಾಗಿದೆ.
ಇಂದು ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಲೇಜು ಗೇಟ್ ಪ್ರವೇಶದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗಡೆ ಬಿಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಪಟ್ಟಿ ಅಂತಿಮ; ಎಂಟಿಬಿ, ಆರ್. ಶಂಕರ್ಗೆ ಟಿಕೆಟ್, ಹೆಚ್. ವಿಶ್ವನಾಥ್ಗೆ ಮತ್ತೊಮ್ಮೆ ನಿರಾಸೆ
ಕಾಲೇಜು ಪ್ರವೇಶಿಸುತ್ತಿದ್ದಂತೆ ಸಾಮಾಜಿಕ ಅಂತರ ಪಾಲನೆಗೆ ಒತ್ತು ನೀಡುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳಲ್ಲದೆ ಕಾಲೇಜು ಸಿಬ್ಬಂದಿ, ಉಪನ್ಯಾಸಕರಿಗೂ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುವುದು. ಸ್ಯಾನಿಟೈಸ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳ ಬಿಡಲಾಗುವುದು. ಶೇಷಾದ್ರಿಪುರಂ ಕಾಲೇಜಿನ ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆಗೆ ಕೂರಲು ವ್ಯವಸ್ಥೆ ಮಾಡಲಾಗಿದೆ. 6 ಅಡಿ ಅಂತರದಲ್ಲಿ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರು ಮಾತ್ರವಲ್ಲದೆ ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶೇಷಾದ್ರಿಪುರಂ ಕಾಲೇಜಿನಲ್ಲಿ ಅವಕಾಶ ನೀಡಲಾಗಿದೆ. ಶೇಷಾದ್ರಿಪುರಂ ಕಾಲೇಜಿನಲ್ಲಿ 29 ಹೊರ ಜಿಲ್ಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೊರೋನಾ ಭೀತಿಯಿಂದ ಪಿಯು ಮಂಡಳಿ ವಿದ್ಯಾರ್ಥಿಗಳು ಕೇಳಿದ ಕಡೆ ಪರೀಕ್ಷೆಗೆ ಅವಕಾಶ ಕಲ್ಪಿಸಿಕೊಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ