ಉಪಚುನಾವಣೆ ವಾಸ್ತವ ವರದಿ | ಬಿಜೆಪಿ ಪ್ರಬಲವಾಗಿಲ್ಲದ ಚಿಕ್ಕಬಳ್ಳಾಪುರದಲ್ಲಿ ತ್ರಿಕೋನ ಸ್ಪರ್ಧೆ

Karnataka By Elections 2019 Ground Report | ಈ ಬಾರಿ ಚಿಕ್ಕಬಳ್ಳಾಪುರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೂರು ಪಕ್ಷಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ಅಷ್ಟೆನೂ ಪ್ರಬಲವಾಗಿಲ್ಲದ ಚಿಕ್ಕಬಳ್ಳಾಪುರದಲ್ಲಿ ಮತದಾರರು ವ್ಯಕ್ತಿ ವರ್ಚಸ್ಸಿಗೆ ಮತ ನೀಡಿದರೆ ಸುಧಾಕರ್ ಗೆಲುವು ಸಾಧಿಸಲಿದ್ದಾರೆ. ಇಲ್ಲವಾದಲ್ಲಿ ಜೆಡಿಎಸ್ ಅಥವಾ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವಿನ ಸಾಧ್ಯತೆ ಹೆಚ್ಚಿದೆ.

HR Ramesh
Updated:November 21, 2019, 8:48 PM IST
ಉಪಚುನಾವಣೆ ವಾಸ್ತವ ವರದಿ | ಬಿಜೆಪಿ ಪ್ರಬಲವಾಗಿಲ್ಲದ ಚಿಕ್ಕಬಳ್ಳಾಪುರದಲ್ಲಿ ತ್ರಿಕೋನ ಸ್ಪರ್ಧೆ
ಆಂಜಿನಪ್ಪ, ರಾಧಾಕೃಷ್ಣ ಮತ್ತು ಕೆ.ಸುಧಾಕರ್
  • Share this:
ಬೆಂಗಳೂರು: ಶಾಸಕರ ರಾಜೀನಾಮೆಯಿಂದ ತೆರವಾದ 17 ಕ್ಷೇತ್ರಗಳಲ್ಲಿ 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಉಪಚುನಾವಣೆ ನಡೆಯುತ್ತಿದೆ. ಈಗಾಗಲೇ ಚುನಾವಣೆಯ ಬಹುತೇಕ ಪ್ರಕ್ರಿಯೆಗಳು ಮುಗಿದಿದ್ದು, ಅಭ್ಯರ್ಥಿಗಳು ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಈ ಉಪಚುನಾವಣೆ ಬಿಜೆಪಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿರುವ ಕಾರಣ, ಎಲ್ಲ ಕ್ಷೇತ್ರಗಳು ಹೈವೋಲ್ಟೆಜ್ ಕಣಗಳಾವೆ. ಅವುಗಳಲ್ಲಿ ಚಿಕ್ಕಬಳ್ಳಾಪುರ ಕೂಡ ಪ್ರಮುಖ ಕಣವಾಗಿದ್ದು, ಇಲ್ಲಿನ ಲೆಕ್ಕಾಚಾರ ಹೇಗಿದೆ ಎಂಬ ಪ್ರತ್ಯಕ್ಷ ವರದಿ ಇಲ್ಲಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಡಾ.ಕೆ.ಸುಧಾಕರ್ ಅವರು ರಾಜೀನಾಮೆ ನೀಡಿ, ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇವರ ಪ್ರತಿಸ್ಪರ್ಧೆಯಾಗಿ ಕಾಂಗ್ರೆಸ್​ನಿಂದ ಒಕ್ಕಲಿಗ ಸಮುದಾಯದ ಆಂಜಿನಪ್ಪ ಹಾಗೂ ಜೆಡಿಎಸ್​ನಿಂದ ಒಕ್ಕಲಿಗ ಸಮುದಾಯದ ರಾಧಾಕೃಷ್ಣ ಅಖಾಡದಲ್ಲಿದ್ದಾರೆ. ಜೆಡಿಎಸ್‌ನ ಎರಡನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೆ.ಪಿ.ಬಚ್ಚೇಗೌಡ ನಾಮಪತ್ರ ತಿರಸ್ಕೃತಗೊಂಡ ಕಾರಣ ಮೊದಲ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಧಾಕೃಷ್ಣ ಅವರ ಅರ್ಜಿ ಊರ್ಜಿತವಾಗಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಟ್ಟು 2,00,622 ಮತದಾರರಿದ್ದಾರೆ. ಇವರಲ್ಲಿ ಮಹಿಳೆಯರು 1,00,776 ಹಾಗೂ ಪುರುಷರು 99825 ಮತ್ತು ಇತರೆ 21 ಮತದಾರರಿದ್ದಾರೆ. ಜಾತಿವಾರು ಲೆಕ್ಕಾಚಾರಕ್ಕೆ ಬರುವುದಾದರೆ ಪರಿಶಿಷ್ಠಜಾತಿ 51,000, ಪರಿಶಿಷ್ಟ ವರ್ಗ 20,000,  ಒಕ್ಕಲಿಗರು 48,000, ಬಲಿಜ ಸಮಾಜ 34,000, ಅಲ್ಪ ಸಂಖ್ಯಾತರು 20,000 ಹಾಗೂ  ಹಿಂದುಳಿದ ವರ್ಗ (ಕುರುಬರು, ಬೆಸ್ತರು, ಈಡಿಗರು, ಸವಿತ, ಇತರೆ)  28,000 ಮತದಾರರಿದ್ದಾರೆ. ಮೊದಲ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಬಂದರೆ ಎರಡನೇ ಸ್ಥಾನದಲ್ಲಿ ಒಕ್ಕಲಿಗರು ಇಲ್ಲಿನ ಪ್ರಬಲ ಮತಬ್ಯಾಂಕ್ ಆಗಿದೆ. ಬಲಿಜ ಸಮುದಾಯದವರು ಇಲ್ಲಿ ನಿರ್ಣಾಯಕ ಮತದಾರರಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್​ಗೆ ಬಂಡಾಯ ಅಭ್ಯರ್ಥಿಯಾಗಿದ್ದ ಬಲಿಜ ಸಮುದಾಯದ ನವೀನ್ ಕಿರಣ್ ಅವರು 31 ಸಾವಿರ ಮತಗಳನ್ನು ಪಡೆದುಕೊಂಡಿದ್ದರೂ. ಆದಾಗ್ಯೂ ಸುಧಾಕರ್ ಅವರು 30 ಸಾವಿರ ಮತಗಳ ಅಂತರದ ಗೆಲುವು ಸಾಧಿಸಿದ್ದರು.

2018ರ ಚುನಾವಣೆಯ ಫಲಿತಾಂಶ ನೋಡುವುದಾದರೆ, ಕಾಂಗ್ರೆಸ್​ ಸ್ಪರ್ಧಿ, ರೆಡ್ಡಿ ಸಮುದಾಯದ ಡಾ.ಕೆ.ಸುಧಾಕರ್, 81,528 ಮತಗಳನ್ನು ಪಡೆದಿದ್ದರು. ಜೆಡಿಎಸ್​ ಸ್ಪರ್ಧಿ ಒಕ್ಕಲಿಗ ಸಮುದಾಯದ ಕೆ.ಪಿ.ಬಚ್ಚೇಗೌಡ 51,575 ಮತಗಳನ್ನು ಪಡೆದರೆ, ಬಿಜೆಪಿಯ ರೆಡ್ಡಿ ಸಮುದಾಯದ ಅಭ್ಯರ್ಥಿ ಡಾ.ಮಂಜುನಾಥ್ ಕೇವಲ 4,605 ಮತಗಳನ್ನು ಪಡೆದುಕೊಂಡಿದ್ದರು. ಇನ್ನು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಬಲಿಜ ಸಮುದಾಯದ ನವೀನ್ ಕಿರಣ್ 30,925 ಮತಗಳನ್ನು ಪಡೆದಿದ್ದರು.

ಇದನ್ನು ಓದಿ: ಜನರಿಗೆ ಬೆಲೆಬಾಳುವ ಉಡುಗೊರೆ ನೀಡುವುದಾಗಿ ಆಡಿಯೋ ಮೂಲಕ ಹೇಳಿದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್

ಈ ಬಾರಿ ಚಿಕ್ಕಬಳ್ಳಾಪುರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೂರು ಪಕ್ಷಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ಅಷ್ಟೆನೂ ಪ್ರಬಲವಾಗಿಲ್ಲದ ಚಿಕ್ಕಬಳ್ಳಾಪುರದಲ್ಲಿ ಮತದಾರರು ವ್ಯಕ್ತಿ ವರ್ಚಸ್ಸಿಗೆ ಮತ ನೀಡಿದರೆ ಸುಧಾಕರ್ ಗೆಲುವು ಸಾಧಿಸಲಿದ್ದಾರೆ. ಇಲ್ಲವಾದಲ್ಲಿ ಜೆಡಿಎಸ್ ಅಥವಾ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವಿನ ಸಾಧ್ಯತೆ ಹೆಚ್ಚಿದೆ.

 
First published: November 21, 2019, 8:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading