ಉಡುಪಿ: ರಾಜ್ಯದಲ್ಲಿ ಎಲ್ಲಿ ನೋಡಿದ್ರು ಜಾತಿ ಸಮೀಕರಣದ್ದೇ ಲೆಕ್ಕಾಚಾರ. ಜಾತಿ ಲೆಕ್ಕಾಚಾರದ ಮೇಲೆ ಮತಬೇಟೆ ಜೋರಾಗಿಯೇ ನಡೆಯುತ್ತಿದೆ. ಆದರೆ ಕರಾವಳಿಯ ಉಡುಪಿ (Udupi) ಜಿಲ್ಲೆಯ ಆ ಒಂದು ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಜಾತಿ ಸಮೀಕರಣದ ಮೇಲಾದ್ರೂ ಮತಬೇಟೆ, ಎಲೆಕ್ಷನ್ ಫೈಟ್ ಹಿಂದುತ್ವದ (Hindutva) ಮೇಲೆ ನಡೆಯುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರ (Karkal Assembly Constituency) ಈಗ ರಾಜ್ಯದ ಎಲ್ಲರ ಗಮನ ಸೆಳೆಯುತ್ತಿದೆ. ಹಿಂದುತ್ವದ ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಪ್ರಮೋದ್ ಮುತಾಲಿಕ್ (Pramod Mutalik) ಪಕ್ಷೇತರರಾಗಿ ಸ್ಪರ್ಧೆಯಿಂದ ಕಾರ್ಕಳ ಕ್ಷೇತ್ರದ ಚಿತ್ರಣವೇ ಬದಲಾಗಿತ್ತು. ಹಿಂದುತ್ವದಡಿ ಮೂರು ಬಾರಿ ಗೆದ್ದಿರುವ ಇಂಧನ ಸಚಿವ ವಿ.ಸುನಿಲ್ ಕುಮಾರ್ (Minister V Sunil Kumar) ವಿರುದ್ಧ ಯುದ್ದವನ್ನೇ ಮಾಡಿದಂತೆ ಪ್ರಚಾರಕ್ಕಿಳಿದಿದ್ದಾರೆ ಮುತಾಲಿಕ್.
ಹೀಗೆ ಗುರು ಶಿಷ್ಯರ ನಡುವಿನ ಚುನಾವಣಾ ಸ್ಪರ್ಧೆ ನಡುವೆ ಕಾಂಗ್ರೆಸ್ ಪಕ್ಷ ಮತ್ತೊಬ್ಬ ಹಿಂದುತ್ವದ ಅಸ್ತ್ರ ಮೊದಲ ಬಾರಿಗೆ ಬಳಕೆ ಮಾಡಿದೆ. ಕೈ ನಾಯಕರು ಇದೇ ಮೊದಲ ಬಾರಿಗೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸಾಫ್ಟ್ ಹಿಂದುತ್ವ ನಾಯಕನಿಗೆ ಟಿಕೆಟ್ ನೀಡುವ ಮೂಲಕ ಸುನಿಲ್ ಕುಮಾರ್ ಮತವನ್ನು ಕದಿಯಲು ರಣತಂತ್ರ ರೂಪಿಸಿದೆ.
ಉದಯ್ ಕುಮಾರ್ ಶೆಟ್ಟಿಗೆ ಕಾಂಗ್ರೆಸ್ ಟಿಕೆಟ್
ಈ ಹಿಂದೆ ಬಿಜೆಪಿ ಜೊತೆಯಲ್ಲಿದ್ದು ಆರ್ಎಸ್ಎಸ್, ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡು ಕಾರ್ಕಳ ಕ್ಷೇತ್ರದಲ್ಲಿ ಖ್ಯಾತ ಗುತ್ತಿಗೆದಾರನಾಗಿರುವ ಉದಯ್ ಕುಮಾರ್ ಶೆಟ್ಟಿ ಅವರಿಗೆ ಈ ಬಾರಿ ಕಾಂಗ್ರೆಸ್ನಿಂದ ಟಿಕೆಟ್ ಸಿಕ್ಕಿದೆ.
ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಸುನಿಲ್ ಕುಮಾರ್, ನಮ್ಮ ಫಲಾನುಭವಿಯ ನೈಜ ಮುಖ ಮುಂದೆ ಬಯಲಾಗಲಿದೆ. ಜೊತೆಗೆ ಪ್ರಮೋದ್ ಮುತಾಲಿಕ್ ಲೆಕ್ಕಕ್ಕೇ ಇಲ್ಲ ಎನ್ನುವ ಮೂಲಕ ಈ ಬಾರಿಯ ಸ್ಪರ್ಧೆ ತಮಗೆ ಟಫ್ ಫೈಟ್ ಇರೋದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ ಸುನಿಲ್ ಕುಮಾರ್.
ಇದನ್ನೂ ಓದಿ: Harshika Poonacha: ‘ನಾನು ಕ್ಯಾಂಪೇನ್ ಮಾಡಿದವರೆಲ್ಲರೂ ಗೆದ್ದಿದ್ದಾರೆ’ -ಎಲೆಕ್ಷನ್ ಅಖಾಡದಲ್ಲಿ ನಟಿ ಹರ್ಷಿಕಾ ಪೂಣಚ್ಚ
ಗುರು-ಶಿಷ್ಯರ ಕಾಳಗ
ಒಟ್ಟಾರೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವಿನ ರುಚಿ ಕಂಡು ಸಚಿವ ಸ್ಥಾನ ಪಡೆದಿರುವ ಸುನಿಲ್ ಕುಮಾರ್ ಗೆ ಈ ಬಾರಿಯ ಚುನಾವಣೆ ಕಬ್ಬಿಣದ ಕಡಲೆ ಆಗೋದಂತು ಸತ್ಯ. ಗುರು ಶಿಷ್ಯರ ಎಲೆಕ್ಷನ್ ಫೈಟ್ ಕೈ ಅಭ್ಯರ್ಥಿಗೆ ಲಾಭವಾಗುತ್ತಾ ಕಾದುನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ