ಬೆಂಗಳೂರು (ನ.25): ಡಿಸೆಂಬರ್ 5ರಂದು ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡಿದೆ. ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ,ನಾವು ಸರ್ಕಾರದ ಈ ನಿರ್ಧಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಮರಾಠ ಸಮಾಜದ ವಿರುದ್ಧವಲ್ಲ. ಭಾಷೆಗೊಂದು ಅಭಿವೃದ್ದಿ ಪ್ರಾಧಿಕಾರ ಮಾಡಿಕೊಂಡರೆ ಎಲ್ಲ ಜಾತಿ, ಭಾಷಿಕರು ಕೇಳುತ್ತಾರೆ. ಸರ್ಕಾರದ ಈ ನಿಲುವನ್ನು ನಾವು ವಿರೋಧಿಸುತ್ತೇವೆ. ಕಾನೂನು ಕೈಗೆತ್ತಿಕೊಳ್ಳದೆ, ಸಾಂಕೇತಿಕವಾಗಿ, ಶಾಂತ ರೀತಿಯಲ್ಲಿ ಬಂದ್ ಮಾಡುತ್ತೇವೆ. ಬಲವಂತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲ್ಲ. ಜನರಲ್ಲಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡುತ್ತೇವೆ ಎಂದರು. ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳು ನೆರೆಹಾವಳಿಯಿಂದ ತತ್ತರಿಸಿ ಹೋಗಿದೆ. ಇದುವರೆಗೂ ಇಲ್ಲಿನ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿಲ್ಲ. ಇಂಥ ಸಂದರ್ಭದಲ್ಲಿ ಚುನಾವಣೆ ಗೆಲ್ಲಲು ಏಕಾಏಕಿ ಮರಾಠ ಅಭಿವೃದ್ದಿ ಪ್ರಾಧಿಕಾರ ಘೋಷಣೆ ಮಾಡಲಾಗಿದೆ. ಇದು ಚುನಾವಣೆ ಗೆಲ್ಲಲು ಮಾಡಿರುವ ಹುನ್ನಾರ. ನಾವು ಮರಾಠ ಸಮಾಜದ ವಿರೋಧಿಗಳಲ್ಲ
ವಾಟಾಳ್ ನಾಗರಾಜ್ ಕರೆ ಮಾಡಿ ಬಂದ್‌ಗೆ ಬೆಂಬಲ ಕೇಳಿದ್ದಾರೆ. ಈ ಹಿನ್ನೆಲೆ ಇಂದು ರಾಜ್ಯದಾದ್ಯಂತ ಕರವೇ ಮುಖಂಡರ ಜೊತೆ ಸಭೆ ನಡೆಸಿದ್ದೇವೆ. ಕರ್ನಾಟಕ ರಕ್ಷಣಾ ವೇದಿಕೆ 21 ವರುಷದಿಂದ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಗಟ್ಟಿಯಗಿ ದನಿ ಎತ್ತಿದೆ. ರಾಜ್ಯ, ಕೇಂದ್ರ, ಪಕ್ಷದ ವಿರುದ್ದ ಹೋರಾಟ ಮಾಡಿದೆ. ರಾಜ್ಯದ ನಾನಾ ಮೂಲೆಗಳಲ್ಲಿ ಪ್ರತಿಭಟನೆ ಮಾಡಲಾಗಿದೆ.
ಬಿಬಿಎಂಪಿ ಗೆಲ್ಲಲು ವಿವಿಧ ಭಾಷಿಕರು ಬೆದರಿಸುತ್ತಾರೆ. ತೆಲುಗು, ಮಲೆಯಾಳಿ, ತಮಿಳು, ಗುಜರಾತಿ ಪ್ರಾಧಿಕಾರ ಮಾಡುತ್ತಾರೆ. ಸರ್ಕಾರದ ಈ ರೀತಿ ನಿರ್ಧರಿಸುವುದು ಸರಿಯಲ್ಲ ಎಂದು ಟೀಕಿಸಿದರು.
ಯತ್ನಾಳ್ ಹೇಳಿಕೆಗೆ ಕಿಡಿ:
ಬಂದ್ ಮಾಡುವ ನಕಲಿ ಕನ್ನಡಪರ ಹೋರಾಟಗಾರರಿಗೆ ಸಿಎಂ ಹೆದರಬಾರದು ಎಂಬ ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆಗೆ ಇದೇ ವೇಳೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ: ಸರ್ಕಾರ ಏನೇ ಹರಸಾಹಸ ಮಾಡಿದರೂ ಡಿ. 5ರ ಕರ್ನಾಟಕ ಬಂದ್ ನಿಲ್ಲಲ್ಲ: ವಾಟಾಳ್ ನಾಗರಾಜ್
ಕನ್ನಡ ಹೋರಾಟಗಾರರನ್ನು ಕೇವಲವಾಗಿ ಮಾತಾಡುವ ಮೂಲಕ ಅವರ ಸಂಸ್ಕೃತಿ ವ್ಯಕ್ತವಾಗುತ್ತದೆ. ಅವರು ಈ ರೀತಿ ಅವರೇ ಹೇಳುತ್ತಿದ್ದಾರೋ ಸರ್ಕಾರ ಹೇಳಿಸುತ್ತಿದೆಯೋ ಗೊತ್ತಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ನಿಮ್ಮ ಕ್ಷೇತ್ರದಲ್ಲಿ ಕನ್ನಡದವರ ಮತ ಬೇಡ ಎಂದು ಗೆದ್ದು ಬಂದು ಈ ರೀತಿ ಮಾತನಾಡಿ ಎಂದು ಇದೇ ವೇಳೆ ಸವಾಲ್ ಹಾಕಿದರು.
ವಿಜಯಪುರದಲ್ಲಿ ಸಮಾವೇಶ
ವಿಜಯಪುರದಲ್ಲಿ ಸಮಾವೇಶ ಮಾಡಲಾಗುವುದು. ಅತಿ ದೊಡ್ಡ ಸಮಾವೇಶದಲ್ಲಿ ನಾನು ಭಾಗಿಯಾಗುತ್ತೇನೆ. ಅಲ್ಲಿಯೇ ಶಾಸಕ ಯತ್ನಾಳ್ ಅವರಿಗೆ ಉತ್ತರ ಕೊಡುತ್ತೇನೆ. ಸಮಾವೇಶ ನಡೆಸುವ ದಿನಾಂಕ ನಾಳೆ ಘೋಷಣೆ ಮಾಡುತ್ತೇನೆ.
ರಾಜ್ಯದಾದ್ಯಂತ ಉಪಚುನಾವಣೆಯಲ್ಲಿ ಕರವೇ ಮತದಾರರ ಬಳಿ ಹೋಗುತ್ತದೆ. ಈ ವೇಳೆ ಕನ್ನಡಿಗರ ಮತ ಬಿಜೆಪಿಗೆ ಬೇಡ ಇದೇ ಕಾರಣಕ್ಕೆ ಪ್ರಾಧಿಕಾರ ರಚಿಸಲಾಗಿದೆ ಎಂದು ಮತದಾರರಿಗೆ ತಿಳಿಹೇಳುತ್ತೇವೆ. ನಾನೇ ಉಪ ಚುನಾವಣೆಯಲ್ಲಿ ಭಾಗಿಯಾಗಿ ಪ್ರಚಾರ ಮಾಡುತ್ತೇನೆ. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಕರವೇ ಪ್ರತಿಭಟನೆ ನಡೆಸಲಿದೆ. ಯಾವ ರೀತಿ ಬಂದ್ ಮಾಡಲಿದೆ ಎಂಬುದು ಎಲ್ಲವನ್ನೂ ಹೇಳಲಾಗುವುದು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ