ಬೆಂಗಳೂರು (ಡಿ. 1): ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವ ಸರ್ಕಾರದ ನಿರ್ಧಾರ ಖಂಡಿಸಿ ಕರೆ ನೀಡಲಾಗಿರುವ ಬಂದ್ಗೆ ಜನರು ಮನೆಯಲ್ಲಿದ್ದುಕೊಂಡು ಬೆಂಬಲ ಸೂಚಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಕರೆ ನೀಡಿದ್ದಾರೆ. ವಾಟಾಳ್ ನಾಗರಾಜ್ ಕರೆ ನೀಡಿರುವ ಬಂದ್ಗೆ ನಮ್ಮ ಬೆಂಬಲವಿದೆ. ಅಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುತ್ತಾರೆ. ಬೆಂಗಳೂರಿನಲ್ಲಿ ಕೂಡ ನೂರಾರು ಕಾರ್ಯಕರ್ತರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ. ಈ ಬಂದ್ ನಡೆಸಲು ಸರ್ಕಾರವೇ ಕಾರಣ ಹೊರತು ಕನ್ನಡ ಸಂಘಟನೆಗಳು ಅಲ್ಲ. ಇನ್ನಾದರೂ ಸಿಎಂ ಉದ್ಧಟನ ಬಿಟ್ಟು ಎಲ್ಲರನ್ನು ಒಂದೂಗೂಡಿಸಿಕೊಂಡು ಹೋಗಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಅವರು, ನಾನು ಇಲ್ಲಿಯವರೆಗೆ ಬಂದ್ ಬೆಂಬಲ ನೀಡಿಲ್ಲ. ಅದರೆ ಈ ಬಂದ್ ಗೆ ಕರವೇ ಸಂಪೂರ್ಣ ಬೆಂಬಲ ನೀಡುತ್ತಿದ್ದೇನೆ. ಭಾಷೆ ವಿಚಾರವಾಗಿ ಈ ಬಂದ್
ಬಸವಕಲ್ಯಾಣ ಚುನಾವಣೆಗೆ ಗೆಲ್ಲಲು , ಮರಾಠ ಸಮುದಾಯ ಓಲೈಕೆಗೆ, ಸರ್ಕಾರ ಮರಾಠ ಅಭಿವೃದ್ಧಿ ರಚಿಸಿದೆ. ಅಲ್ಲದೇ ಶಾಸಕ ಯತ್ನಾಳ್ ಅವರು ಕನ್ನಡ ಪರ ಸಂಘಟನೆಗಳ ಬಗ್ಗೆ ನೀಡಿರುವ ಹೇಳಿಕೆಗಳಿ ಬಿಜೆಪಿ ಪಕ್ಷದ ಅಜೆಂಡಾನಾ ಅಥವಾ ಈ ಹೇಳಿಕೆ ಕೇವಲ ಯತ್ನಾಳ್ ಹೇಳಿಕೆಯೋ ಸ್ಪಷ್ಟಪಡಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ಯಡಿಯೂರಪ್ಪ ಬಗ್ಗೆ ನಮಗೆ ಗೌರವವಿದೆ. ಸರ್ಕಾರದ ಧೋರಣೆಯಿಂದಾಗಿ ಡಿಸೆಂಬರ್ 5ರಿಂದ ಹೋರಾಟಗಾರರು ಬೀದಿಗಿಳಿಯುವ ಸ್ಥಿತಿ ಬಂದಿದೆ. ಈ ಕುರಿತು ಅವರು ಸಮಾಧಾನವಾಗಿ ಮಾತನಾಡುವ ಪ್ರಯತ್ನ ನಡೆಸಲಿಲ್ಲ. ಆದರೆ, ಸರ್ಕಾರ ತನ್ನ ಭಂಡ ಧೈರ್ಯಕ್ಕೆ ಮುಂದಾಗಿದೆ ಎಂದು ಕಿಡಿಕಾರಿದರು.
ಡಿಸೆಂಬರ್ 5 ರಂದು ಬೆಳಗ್ಗೆ 6 ಇಲ್ಲ 7ರಿಂದಲೇ ಕರವೇ ಜಿಲ್ಲೆ ಹಾಗೂ ತಾಲೂಕಿನಲ್ಲಿರುವ ಸರ್ಕಾರಿ ಕಚೇರಿ ಮುತ್ತಿಗೆ ಹಾಕಲಿದೆ. ಬೆಂಗಳೂರಿನಲ್ಲಿ 10 ಗಂಟೆಗೆ ಬೃಹತ್ ಮೆರವಣಿಗೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಈ ಮೆರವಣಿಗೆ ಗಾಂಧಿನಗರದಿಂದ ಸಿಎಂ ಗೃಹ ಕಚೇರಿವರೆಗೆ ಸಾಗಲಿದ್ದು, ಬಳಿಕ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುವುದು. ಡಿಸೆಂಬರ್ 5ರಂದು ಮಾತ್ರ ಬಂದ್, ಹೋರಾಟವಿರುವುದಿಲ್ಲ. ಮರಾಠ ಪ್ರಾಧಿಕಾರ ಆದೇಶ ಹಿಂಪಡೆಯುವವರೆಗೂ ಈ ಹೋರಾಟ ನಿರಂತರವಾಗಿರಲಿದೆ ಎಂದರು
ಕರವೇ ಪ್ರವೀಣ್ ಶೆಟ್ಟಿ ಬಣ ನೈತಿಕ ಬೆಂಬಲ
ಡಿ. 5ರಂದು ವಾಟಾಳ್ ನಾಗರಾಜ್ ಕರೆ ನೀಡಿರುವ ಬಂದ್ಗೆ ನಮ್ಮ ನೈತಿಕ ಬೆಂಬಲವಿದೆ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ ತಿಳಿಸಿದ್ದಾರೆ. ಸರ್ಕಾರದ ನಿರ್ಧಾರದ ವಿರುದ್ದ ಹೋರಾಟ ಮಾಡಲಾಗುವುದು. ವಾಟಾಳ್ ಕರೆ ನೀಡಿದ ಬಂದ್ಗೆ ಬೆಂಬಲವಿಲ್ಲ. ಒತ್ತಾಯ ಪೂರ್ವಕ ಬಂದ್ ಮಾಡಿಸುವುದಿಲ್ಲ. ವಾಟಾಳ್ ಹೋರಾಟಕ್ಕೆ ಪ್ರತಿಭಟಿಸಿ ಬೆಂಬಲ ನೀಡಲಾಗುವುದು. ಜಿಲ್ಲಾ ಗಡಿಭಾಗದಲ್ಲಿ ಪ್ರತಿಭಟನೆ, ಸತ್ಯಾಗ್ರಹ ಮಾಡಲಾಗುವುದು. ಬೆಂಗಳೂರಿನ ಪ್ರತಿಭಟನೆ ಅಂತಿಮವಾಗಿಲ್ಲ. ಬೆಂಗಳೂರಿನಲ್ಲಿ ಎಲ್ಲಿ, ಯಾವ ರೀತಿ ಪ್ರತಿಭಟನೆ, ಸತ್ಯಾಗ್ರಹ ಎನ್ನುವುದು ಇನ್ನೂ ಅಂತಿಮಗೊಳ್ಳಬೇಕಿದೆ ಎಂದರು.
ಬಿಜೆಪಿ ಸರ್ಕಾರದ ಶಾಸಕರ ಮಾತುಗಳನ್ನ ಕೇಳಿದ್ದೇವೆ. ಕನ್ನಡ ಹೋರಾಟಗಾರರನ್ನ ರೋಲ್‌ಕಾಲ್ ಎಂದು ಹೇಳಿರುವ ಶಾಸಕರ ಆಸ್ತಿ ವಿಚಾರ ತನಿಖೆ ಆಗಲಿ, ನಮ್ಮ ಹೋರಾಟಗಾರರ ಆಸ್ತಿಯ ತನಿಖೆಯಾಗಲಿ ಎಂದು ಇದೇ ವೇಳೆ ಸವಾಲ್ ಹಾಕಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ