ಹಂಪಿ ಕನ್ನಡ ವಿವಿಗೆ ಅನುದಾನದ ಕೊರತೆ; ಗುತ್ತಿಗೆ ಸಿಬ್ಬಂದಿಗೆ ವೇತನ ನೀಡಲೂ ಹಣವಿಲ್ಲ!

ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ನೀಡುತ್ತಿರುವ ಅನುದಾನ ಸಾಕಾಗ್ತಿಲ್ಲ… ಕ್ರೂಢೀಕೃತ ನೌಕರರಿಗೆ ವೇತನ ನೀಡಲು ವಿವಿ ಬಳಿ ಹಣವಿಲ್ಲ… ವಿದ್ಯಾರ್ಥಿಗಳಿಗೂ ವಿವಿ ಪ್ರೋತ್ಸಾಹಧನ ನೀಡಲೂ ಸಂಕಷ್ಟದ ಪರಿಸ್ಥಿತಿ ಇದೆ…

news18-kannada
Updated:February 23, 2020, 7:13 PM IST
ಹಂಪಿ ಕನ್ನಡ ವಿವಿಗೆ ಅನುದಾನದ ಕೊರತೆ; ಗುತ್ತಿಗೆ ಸಿಬ್ಬಂದಿಗೆ ವೇತನ ನೀಡಲೂ ಹಣವಿಲ್ಲ!
ಹಂಪಿ ಕನ್ನಡ ವಿಶ್ವವಿದ್ಯಾಲಯ
  • Share this:
ಬಳ್ಳಾರಿ: ಕನ್ನಡ ನಾಡು-ನುಡಿ- ಭಾಷೆಗಾಗಿ ಇರುವ ಏಕೈಕ ವಿಶ್ವವಿದ್ಯಾಲಯವೆಂದರೆ ಅದು ಕನ್ನಡ ವಿಶ್ವವಿದ್ಯಾಲಯ! ಕೇವಲ ಪದವಿ ನೀಡುವ ವಿವಿಯಾಗದೇ ಸಂಶೋಧನೆಗೆ ಮೀಸಲಿರುವ ವಿಶ್ವವಿದ್ಯಾಲಯವಿದು. ಇಂಥ ಕನ್ನಡ ವಿವಿ ಪ್ರತಿವರುಷವೂ ಅನುದಾನದ ಕೊರತೆ ಎದುರಿಸುತ್ತಿದೆ. ಸರ್ಕಾರ ನೀಡುವ ಅರೆಕಾಸಿನ ಮಜ್ಜಿಗೆ ವಿವಿಗೆ ಯಾವ ರೀತಿಯಿಂದಲೂ ಸಾಕಾಗ್ತಿಲ್ಲ. ಈ ವರುಷವಂತೂ ಇದೇ ಮೊದಲ ಬಾರಿಗೆ ಕ್ರೋಢೀಕೃತ ನೌಕರರಿಗೆ ವೇತನ ನೀಡಲು ಹಣವಿಲ್ಲದೆ ಅಸಹಾಯಕತೆಯಿಂದ ಕೈಕಟ್ಟಿ ಕುಳಿತಿದೆ.

ಕನ್ನಡ ವಿಶ್ವವಿದ್ಯಾಲಯ ಅನುದಾನವಿಲ್ಲದೆ ಬರಿದಾಗಿದೆ. ಜ್ಞಾನಪೀಠ ಪುರಸ್ಕೃತ ಡಾ ಚಂದ್ರಶೇಖರ್ ಕಂಬಾರ್ ಕನಸಿನ ಹಂಪಿಯ ಬಳಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಕೊಡುತ್ತಿರುವ ಅನುದಾನ ಯಾವ ರೀತಿಯಿಂದಲೂ ಸಾಕಾಗ್ತಿಲ್ಲ. ಕನ್ನಡ ನಾಡು-ನುಡಿ-ಭಾಷೆ ಬೆಳವಣಿಗೆಗಾಗಿ ಇರುವ ಏಕೈಕ ದೇಶದ ವಿವಿಯೆಂದರೆ ಅದು ಕನ್ನಡ ವಿಶ್ವವಿದ್ಯಾಲಯವೇ. ಆದರೆ ರಾಜ್ಯ ಸರ್ಕಾರ ವಿವಿ ಅಭಿವೃದ್ಧಿಗಾಗಿ ನೀಡುವ ಅನುದಾನ ಹೇಳಿಕೊಳ್ಳಲಿಕ್ಕೂ ಸಾಕಾಗ್ತಿಲ್ಲ.

ಇದನ್ನೂ ಓದಿ: ಒಂದೂವರೆ ಎಕರೆ ಕಬ್ಬು ನಾಶ ಮಾಡಿ ಸಿಎಂಗೆ ತಲುಪುವವರೆಗೆ ವಿಡಿಯೋ ಶೇರ್ ಮಾಡಿ ಎಂದ ರೈತ; ಕಾರಣವೇನು?

ಪ್ರತಿವರುಷ ಕನಿಷ್ಠ ಆರು ಕೋಟಿಯಾದರೂ ವಿವಿ ಅಭಿವೃದ್ಧಿಗೆ ಬೇಕು. ಆದರೆ ಕಳೆದ ವರುಷ ಸರ್ಕಾರ ನೀಡಿರುವ ಒಂದು ಕೋಟಿ ಅನುದಾನ ಈಗಾಗಲೇ ಬಳಕೆಯಾಗಿದೆ. ಸದ್ಯ ವಿವಿ ಬಳಿ ದುಡ್ಡಿಲ್ಲದೆ ಇರುವ ಕಾರಣ ಇದೇ ಮೊದಲ ಬಾರಿಗೆ ಕಳೆದ ಹದಿನೈದು ವರುಷಗಳಿಂದ ಕೆಲಸ ಮಾಡುತ್ತ ಬಂದಿರುವ 140ಕ್ಕೂ ಹೆಚ್ಚೂ ಕ್ರೋಢೀಕೃತ, ಗುತ್ತಿಗೆ ನೌಕರರಿಗೆ ವೇತನ ನೀಡಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಸಂಬಳವಿಲ್ಲದೆ ಸಿಬ್ಬಂದಿ ಸಂಕಷ್ಟದಲ್ಲಿದ್ದಾರೆ. ಪ್ರತಿ ತಿಂಗಳು 20 ಲಕ್ಷಕ್ಕೂ ಹೆಚ್ಚು ವೇತನವನ್ನು ವಿವಿ ನೀಡಬೇಕಾಗಿದೆ. ಆದರೆ ಸದ್ಯ ವಿವಿ ಬಳಿ ಅನುದಾನ ಬರಿದಾದ ಕಾರಣ ವೇತನ ನೀಡಿಲ್ಲ ಎಂಬುದನ್ನು ಸ್ವತಃ ಕನ್ನಡ ವಿವಿ ಉಪ ಕುಲಪತಿ ಡಾ. ಸ.ಚಿ.ರಮೇಶ್ ಒಪ್ಪಿಕೊಳ್ಳುತ್ತಾರೆ. ಸರ್ಕಾರಕ್ಕೆ ಮೂರು ವರುಷಕ್ಕೆ 19 ಕೋಟಿ ಅನುದಾನವನ್ನು ಕೇಳಿದ್ದೇವೆ, ಈ ಬಾರಿಯ ಬಜೆಟ್​ನಲ್ಲಿ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಹೇಳುತ್ತಾರೆ.

ಕನ್ನಡ ವಿವಿ ರಾಜ್ಯದ ಇತರೆ ವಿಶ್ವವಿದ್ಯಾಲಯಗಳಂತೆ ವಿದ್ಯಾರ್ಥಿಗಳಿಗೆ ಪದವಿ ನೀಡುವ ವಿಶ್ವವಿದ್ಯಾಲಯವಲ್ಲ. ಕನ್ನಡಕ್ಕಾಗಿಯೇ ಇರುವ ವಿಶೇಷ ವಿವಿ ಇದಾಗಿದ್ದು, ಪದವಿ ನೀಡುವುದಕ್ಕಿಂತ ಸಂಶೋಧನೆಗೆ ಹೆಚ್ಚು ಆದ್ಯತೆ ನೀಡಿರುವ ವಿವಿಯಿದು. ಆದರೆ ಈ ವಿಶ್ವವಿದ್ಯಾಲಯಕ್ಕೆ ಸರ್ಕಾರ ಎಲ್ಲ ವಿವಿಗಳಂತೆ ಒಂದೇ ತಕ್ಕಡಿಯಲ್ಲಿ ತೂಗಿಹಾಕುತ್ತಿದೆ. ಇದರಿಂದ ಕನ್ನಡ ವಿವಿಗೆ ಪ್ರತಿವರುಷವೂ ಅನುದಾನದ ಕೊರತೆ ಎದುರಿಸುತ್ತಿದೆ.

ಇದನ್ನೂ ಓದಿ: ರಸ್ತೆಯಲ್ಲೇ ಬೋರ್​ವೆಲ್​ ಕೊರೆಸಿದ ಬಿಬಿಎಂಪಿ ಕಾರ್ಪೊರೇಟರ್; ಸಾರ್ವಜನಿಕರ ಆಕ್ರೋಶ

ಕನ್ನಡ ವಿವಿಯಲ್ಲಿ ಅತಿ ಹೆಚ್ಚು ಸಂಶೋಧನೆಗೊಂಡ ಪ್ರಸಾರಾಂಗ ಪುಸ್ತಕಗಳನ್ನು ಪ್ರಕಟಿಸಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯವನ್ನು ಕನ್ನಡದಲ್ಲಿ ಮುದ್ರಿಸಿದ ಕೀರ್ತಿಯಿದೆ. ತಂತ್ರಜ್ಞಾನದಲ್ಲಿ ಕನ್ನಡ ಸೇರಿದಂತೆ ಕನ್ನಡ ಭಾಷೆ ಅಳಿವು ಉಳಿವಿನ ಬಗ್ಗೆ ಸಮಾವೇಶ, ವಿಚಾರಸಂಕಿರಣ, ದೂರಶಿಕ್ಷಣದ ಸಂಪರ್ಕ ತರಗತಿಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇದಕ್ಕೆ ಕನ್ನಡ ವಿವಿ ಅಭಿವೃದ್ಧಿ ಅನುದಾನದಲ್ಲಿ ಹಣವನ್ನು ಬಳಕೆ ಮಾಡಬೇಕಾಗುತ್ತದೆ. ಪ್ರತಿವರುಷ ಕನಿಷ್ಟ ಆರು ಕೋಟಿ ಕೇಳಿದರೆ ಒಂದು ಕೋಟಿಯೋ ಇಲ್ಲಿವೇ ಎರಡು ಕೋಟಿಯೋ ಕೊಟ್ಟು ಕೈತೊಳೆದುಕೊಂಡುಬಿಡುತ್ತದೆ. ಈ ಅಭಿವೃದ್ಧಿ ಅನುದಾನದಲ್ಲಿಯೇ ವೇತನವನ್ನೂ ನೀಡಬೇಕಾಗಿರುವುದರಿಂದ ಕನ್ನಡ ವಿವಿ ಅನುದಾನದ ಕೊರತೆ ಎದುರಿಸುತ್ತಿದೆ. ಸರ್ಕಾರ ನಿರ್ಲಕ್ಷ್ಯ ಮಾಡದೆ ಬಜೆಟ್ ನಲ್ಲಿ ತಕ್ಕಮಟ್ಟಿಗಾದ್ರೂ ಅನುದಾನ ನೀಡಿ ಕನ್ನಡ ವಿವಿ ಉಳಿಸಬೇಕಿದೆ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಒತ್ತಾಯಿಸುತ್ತಾರೆ.ಬೇರೆ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ ಖರ್ಚು ನಿಭಾಯಿಸುತ್ತವೆ. ಆದರೆ ಕನ್ನಡ ವಿವಿ ಸಂಶೋಧನಾ ಪ್ರಾಧಾನ್ಯವಾಗಿರುವುದರಿಂದ ಸರ್ಕಾರದ ಅನುದಾನದ ಆಧಾರದ ಮೇಲೆ ನಿಂತಿದೆ. ಇದರಿಂದ ಸರ್ಕಾರ ಬೇರೆ ವಿವಿಗಳಿಗೆ ಅನುದಾನದ ಕತ್ತರಿ ಹಾಕಿದಂತೆ ಈ ವಿವಿಗೆ ಅನುದಾನ ನೀಡದೇ ಹೋದರೆ ನೌಕರರಿಗೆ ವೇತನವನ್ನು ನೀಡದ ದುಸ್ಥಿತಿಗೆ ಬಂದುಬಿಡುತ್ತದೆ. ಕನ್ನಡಕ್ಕಾಗಿ ಮೀಸಲಾಗಿರುವ ಕನ್ನಡ ವಿವಿಗೆ ಸರ್ಕಾರ ಅನುದಾನ ಕೊಟ್ಟು ಉಳಿಸಿ-ಬೆಳೆಸಬೇಕಾಗಿದೆ.

(ವರದಿ: ಶರಣು ಹಂಪಿ)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ

First published: February 23, 2020, 7:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading