ದುಬೈನಲ್ಲಿ ಜನಪ್ರಿಯವಾಗುತ್ತಿದೆ ಕನ್ನಡ ಶಾಲೆ; ಮಂಡ್ಯ ಸೇರಿ ದುಬೈ ಕನ್ನಡಿಗರ ಶ್ಲಾಘನೀಯ ಕಾರ್ಯ

ಕರ್ನಾಟಕದಲ್ಲಿ ಕನ್ನಡ ಕಲಿಸುವ ಸರ್ಕಾರಿ ಶಾಲೆಗಳು ಪ್ರತಿವರ್ಷ ಮುಚ್ಚುತ್ತಿವೆ. ಆದರೆ ದೂರದ ದುಬೈನಲ್ಲಿ ಕನ್ನಡಿಗರ ತಂಡವೊಂದು ಕನ್ನಡ ಶಾಲೆ ತೆರೆದು ಅಲ್ಲಿರುವ ಕನ್ನಡಿಗರ ಮಕ್ಕಳಿಗೆ ಉಚಿತವಾಗಿ ಕನ್ನಡ ಕಲಿಸುವ ಕಾರ್ಯ ಮಾಡುತ್ತಾ ಬರುತ್ತಿದೆ.

ದುಬೈನಲ್ಲಿ ನಡೆಯುತ್ತಿರುವ ಕನ್ನಡ ಶಾಲೆ

ದುಬೈನಲ್ಲಿ ನಡೆಯುತ್ತಿರುವ ಕನ್ನಡ ಶಾಲೆ

  • Share this:
ಮಂಡ್ಯ: ಕನ್ನಡನಾಡಲ್ಲಿ ಪ್ರತಿವರ್ಷ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದೆ. ಅಲ್ಲದೆ, ಕನ್ನಡ ಭಾಷೆ ಕಲಿಸಬೇಕಾದ ಸರ್ಕಾರಗಳು ಕೂಡ ಕನ್ನಡ ಶಾಲೆಗಳನ್ನ ಮುಚ್ಚುತ್ತಾ ಬರುತ್ತಿವೆ. ಪೋಷಕರು ಕೂಡ ಪರಭಾಷೆ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಮಕ್ಕಳಿಗೆ ಇಂಗ್ಲೀಷ್ ಕಲಿಸುವ ಹಂಬಲದಿಂದ ಮಾತೃಭಾಷೆ ಕನ್ನಡವನ್ನೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇಂತಹದರ ನಡುವೆ ದೂರದ ದುಬೈನಲ್ಲಿ ಕನ್ನಡಿಗರ ತಂಡವೊಂದು, ಅದರಲ್ಲೂ ಮಂಡ್ಯದ ವ್ಯಕ್ತಿಯೊಬ್ಬರ ಸಾರಥ್ಯದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಾ, ದುಬೈನಲ್ಲಿ ಕನ್ನಡಪಾಠ ಶಾಲೆಯನ್ನು ತೆರದು ಅಲ್ಲಿರೋ ತಮ್ಮ ನೂರಾರು ಮಕ್ಕಳಿಗೆ ಉಚಿತವಾಗಿ ಕನ್ನಡ ಕಲಿಸುವ ಮೂಲಕ ಕನ್ನಡ ಭಾಷೆ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ‌.

ಆರು ವರ್ಷಗಳ ಹಿಂದೆ ದುಬೈನಲ್ಲಿ ಆರಂಭಿಸಲಾದ ಕನ್ನಡ ಪಾಠ ಶಾಲೆಯಲ್ಲಿ ಅಂದು 20 ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಇಂದು 300ರ ಗಡಿ ದಾಟಿದೆ. ಈ ಮೂಲಕ ವಿಶ್ವದಲ್ಲಿ ಹೊರನಾಡ ಕನ್ನಡಿಗರು‌ ಕನ್ನಡ ಕಲಿಸುವ ಶಾಲೆಯಲ್ಲಿ ಅತಿ ದೊಡ್ಡ ಕನ್ನಡ ಪಾಠಶಾಲೆಯಾಗಿ ದುಬೈನಲ್ಲಿರುವ ಈ ಕನ್ನಡಮಿತ್ರ ಸಂಘಟನೆ ಕನ್ನಡ ಪಾಠ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಈ ಸಂಘಟನೆಯ ಸದಸ್ಯರು ಈ ಮೂಲಕ ಹೊರನಾಡಲ್ಲಿ ಕೂಡ ಕನ್ನಡಿಗರ ನೂರಾರು ಮಕ್ಕಳಿಗೆ ಕನ್ನಡ ಕಲಿಸುವ ಮತ್ತು ಕನ್ನಡ ಉಳಿಸಿ ಬೆಳೆಸುವ ಕಾರ್ಯವನ್ನು‌ ಮಾಡ್ತಿದ್ದಾರೆ. ಪ್ರತಿವರ್ಷ ದುಬೈನಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಮೂಲಕ ಕೋರ್ಸ್ ನಡೆಸುತ್ತಾ ಮಕ್ಕಳಲ್ಲಿ ಮಾತೃಭಾಷಾಭಿಮಾನ ತುಂಬುತ್ತಾ ಕನ್ನಡ ಉಳಿಸಿ ಬೆಳೆಸುವ ಕೆಲಸ ಮಾಡ್ತಿದ್ದಾರೆ.

ಇದನ್ನೂ ಓದಿ: ಕರೆದ ತಕ್ಷಣ ಬರಲು ದರ್ಶನ್ ಕರು ಅಲ್ಲ, ಡಿಕೆ ಶಿವಕುಮಾರ್ ಹಸು ಅಲ್ಲ: ಆರ್ ಅಶೋಕ್

“ದುಬೈನಲ್ಲೇ ಹುಟ್ಟಿ, ಬೆಳೆಯುವ ನಮ್ಮ ಮಕ್ಕಳಿಗೆ ಕನ್ನಡ ಬರುತ್ತಿರಲಿಲ್ಲ. ಮಾತೃಭಾಷೆಯಿಂದ ನಮ್ಮ ಮಕ್ಕಳು ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಾಲೆ ಸ್ಥಾಪನೆ ಮಾಡಿದ್ದಾರೆ. ಸಣ್ಣದಾಗಿ ಆರಂಭವಾದ ಶಾಲೆ ಈಗ ಹೊರನಾಡಿನ ಕನ್ನಡಿಗರು ನಡೆಸುತ್ತಿರುವ ಅತೀದೊಡ್ಡ ಶಾಲೆಯಾಗಿ ಬೆಳೆದಿದೆ” ಎಂದು ದುಬೈನ ಕನ್ನಡ ಮಿತ್ರರು ಸಂಘಟನೆ ಅಧ್ಯಕ್ಷ ಶಶಿಧರ್‌ ನಾಗರಾಜಪ್ಪ ತಿಳಿಸಿದ್ದಾರೆ.

ಇನ್ನು ದುಬೈನಲ್ಲಿರುವ ಈ ಕನ್ನಡ ಪಾಠಶಾಲೆಗೆ ಅಲ್ಲಿರೋ ನೂರಾರು ಕನ್ನಡಿಗರು ತಮ್ಮ ಮಕ್ಕಳನ್ನು ಕಳುಹಿಸಿ, ಮಾತೃಭಾಷೆಯನ್ನು ಕಲಿಯಲು ಪ್ರೇರೇಪಿಸುತ್ತಾ, ಮಕ್ಕಳಲ್ಲಿ ಕನ್ನಡ ಭಾಷೆಯ ಅಭಿಮಾನ ಬೆಳೆಸುತ್ತಿದ್ದಾರೆ. ಇಲ್ಲಿ ಶುಕ್ರವಾರ ವಾರದ ರಜೆಯಾಗಿರೋ ಕಾರಣದಿಂದ ಇಲ್ಲಿ ಪ್ರತಿ ಶುಕ್ರವಾರ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಲಾಗುತ್ತದೆ. ಮಕ್ಕಳ ಬೌದ್ಧಿಕ ಮಟ್ಟಕ್ಕೆ ತಕ್ಕಂತೆ ಅವರಿಗೆ ಭಾಷೆ ಕಲಿಸಲಾಗುತ್ತಿದ್ದು, ಇದಕ್ಕಾಗಿ ನುರಿತ ಕನ್ನಡ ಶಿಕ್ಷಕರ ಮೂಲಕ ಈ ಮಕ್ಕಳಿಗೆ ಉಚಿತವಾಗಿ ಕನ್ನಡ ಶಿಕ್ಷಣ ಕೊಡಿಸುವ ಕೆಲಸ ಮಾಡ್ತಿದ್ದಾರೆ‌. ಶಿಕ್ಷಕರಾದವರು ಕೂಡ ಈ ಮಕ್ಕಳಿಗೆ ಕನ್ನಡ ಭಾಷೆಯನ್ನು ಶ್ರದ್ದೆಯಿಂದ ಕಲಿಸುವ ಮೂಲಕ ವಿಶೇಷ ಭಾಷಾಭಿಮಾನ ತುಂಬವ ಕೆಲಸ ಮಾಡ್ತಿದ್ದಾರೆ‌.

ಆರು ವರ್ಷಗಳಿಂದ ಮಾಮೂಲಿ ತರಗತಿ ಮಾಡುತ್ತಿದ್ದ ಶಿಕ್ಷಕರು ಈ‌ ಬಾರಿ ಕೋವಿಡ್ ಕಾರಣದಿಂದ ಆನ್​ಲೈನ್ ತರಗತಿ ಮಾಡಲು ಮುಂದಾಗಿದ್ದಾರೆ. ಪ್ರತಿ ವರ್ಷ 6 ತಿಂಗಳ ಕನ್ನಡ ಭಾಷೆಯ ಕೋರ್ಸ್ ನಡೆಸಿ ಮಕ್ಕಳಿಗೆ ಕನ್ನಡ ಶಿಕ್ಷಣ ನೀಡುತ್ತಾ, ಉತ್ತೀರ್ಣರಾದರಿಗೆ ಈ ಸಂಘಟನೆಯಿಂದ ಪ್ರಮಾಣಪತ್ರ ನೀಡಲಾಗುತ್ತಿದೆ. ‌ಈ ಶಾಲೆಯಲ್ಲಿ ಸುಮಾರು 15 ಕ್ಕೂ ಹೆಚ್ಚು ಮಹಿಳಾ ಶಿಕ್ಷಕರು ಕನ್ನಡವನ್ನು ಉಚಿತವಾಗಿ ಕಲಿಸುವ ಕೆಲಸದಲ್ಲಿ  ನಿರತರಾಗಿದ್ದಾರೆ. ವಿಶೇಷವೆಂದರೆ, ಈ ಸಂಘಟನೆಯ ಕನ್ನಡ ಕಲಿಸುವ ಉದ್ದೇಶದ ಹಿಂದೆ ಮಂಡ್ಯದವರ ಸಂಖ್ಯೆ ಹೆಚ್ಚಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಸರಳ ರಾಜ್ಯೋತ್ಸವ ಆಚರಣೆ; ನಗರದಲ್ಲಿ ರಾರಾಜಿಸಿದ ಕನ್ನಡ ಬಾವುಟಗಳು

ಇನ್ನು, ಕಳೆದ ಆರು ವರ್ಷಗಳಿಂದ ದುಬೈನಲ್ಲಿರುವ ಮಕ್ಕಳಿಗೆ ಕನ್ನಡ ಕಲಿಸಲು ಇಲ್ಲಿರುವ ಬಿಲ್ವ ಶಾಲೆಯಲ್ಲಿ ಪ್ರತಿ ಶುಕ್ರವಾರ ಕನ್ನಡ ಭಾಷೆಯ ಕುರಿತ ತರಗತಿಗಳನ್ನು ನಡೆಸಲಾಗುತ್ತದೆ. ಮಕ್ಕಳ ಬೌದ್ಧಿಕ ಮಟ್ಟದ ಆಧಾರದ ಮೇಲೆ ಅವ್ರಿಗೆ ವಿವಿಧ ಆಯಾಮದಲ್ಲಿ ಕನ್ನಡ ಕಲಿಸುವ ಕೆಲಸ ಮಾಡಲಾಗ್ತಿದ್ದು, ಮಕ್ಕಳು ಕೂಡ ಆಸಕ್ತಿಯಿಂದ ಕನ್ನಡ ಭಾಷೆಯನ್ನು‌ ಕಲಿಯುತ್ತಿದ್ದಾರೆ‌. ಇದೀಗ ದುಬೈನಲ್ಲಿರೋ ಜೆಎಸ್​ಎಸ್ ಶಾಲೆಯಲ್ಲಿ ಕನ್ನಡ ತರಗತಿ ನಡೆಯುತ್ತಿದ್ದು ಪೋಷಕರು ಕೂಡ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಹಂಬಲದಲ್ಲಿದ್ದಾರೆ. ಅಲ್ಲದೆ, ತಮ್ಮ ಮಕ್ಕಳಿಗೆ ಕನ್ನಡ ಕಲಿಯಲು ಪ್ರೇರೆಪಿಸುತ್ತಿದ್ದಾರೆ‌. ದೂರದ ದೇಶದಲ್ಲಿ ಕನ್ನಡ ಬೆಳೆಸಿ ಉಳಿಸಲು ಪೋಷಕರು ಸಹ ಕೈ ಜೋಡಿಸಿದ್ದಾರೆ.

ಒಟ್ಟಾರೆ ಕನ್ನಡನಾಡು ಎನಿಸಿಕೊಂಡ ಕರ್ನಾಟಕದಲ್ಲಿ ಕನ್ನಡ ಭಾಷೆ ಅಧೋಗತಿಗಿಳಿಯುತ್ತಿದ್ದು, ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸಂದರ್ಭ ದೂರದ ದುಬೈ ದೇಶದಲ್ಲಿ ತಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುತ್ತಿರುವ ಈ ಹೊರನಾಡು ಕನ್ನಡಿಗರ ಈ ಕನ್ನಡ ಮಿತ್ರ ಸಂಘಟನೆ ಮಾಡುತ್ತಿರುವ ನಾಡುನುಡಿ ಕಟ್ಟುವ ಕೆಲಸಕ್ಕೆ ನಾವು ಮೆಚ್ಚುಗೆ ಹೇಳಲೇಬೇಕು.

ವರದಿ: ರಾಘವೇಂದ್ರ ಗಂಜಾಮ್
Published by:Vijayasarthy SN
First published: