ಸರೋಜಿನಿ ಮಹಿಷಿ ವರದಿ ಜಾರಿಯಾಗದಿದ್ದರೆ ಕಾನೂನು ಹೋರಾಟಕ್ಕೂ ಸಾಹಿತ್ಯ ಪರಿಷತ್ತು ಸಿದ್ಧ

ಖಾಸಗಿ ವಲಯದಲ್ಲೂ ಉದ್ಯೋಗಕ್ಕೆ ಮೀಸಲಾತಿ ಸಿಗಬೇಕು. ಅದನ್ನು ಅನುಷ್ಠಾನ ಮಾಡಲು ಸರ್ಕಾರ ಒಪ್ಟಿಕೊಂಡಿದೆ. ಒಂದು ವೇಳೆ ಅದು ಸಾಕಾರಗೊಳ್ಳದಿದ್ದರೆ ಸಾಹಿತ್ಯ ಪರಿಷತ್ ಅಧ್ಯಕ್ಷ ಒಬ್ಬ ಹೋರಾಟಗಾರನೂ ಆಗುತ್ತಾನೆ.

ಮಹೇಶ್ ಜೋಷಿ

ಮಹೇಶ್ ಜೋಷಿ

  • Share this:
ಕೊಡಗು (ಡಿ. 7) : ಸರೋಜಿನಿ ಮಹಿಷಿ ವರದಿ (Sarojini Mahishi Report) ಜಾರಿಗೆ ಕಾನೂನು ಹೋರಾಟಕ್ಕೂ ಸಿದ್ದರಿದ್ದೇವೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಷಿ (Mahesh Joshi) ಅವರು ಖಡಕ್ ಆಗಿ ಹೇಳಿದ್ದಾರೆ. ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ (Kannada Sahitya parishat) ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮಾತನಾಡಿದರು. ಕನ್ನಡ ಅಭಿವೃದ್ಧಿ ಹೊಂದಬೇಕಾದರೆ ಅದು ಅನ್ನದ ಭಾಷೆಯಾಗಬೇಕು. ಅದಕ್ಕಾಗಿ ಕರ್ನಾಟಕ ಸರ್ಕಾರ ಸರೋಜಿನಿ ಮಹಿಷಿ ವರದಿ ಜಾರಿ ಮಾಡಬೇಕು. ಖಾಸಗಿ ವಲಯದಲ್ಲೂ ಉದ್ಯೋಗಕ್ಕೆ ಮೀಸಲಾತಿ ಸಿಗಬೇಕು. ಅದನ್ನು ಅನುಷ್ಠಾನ ಮಾಡಲು ಸರ್ಕಾರ ಒಪ್ಟಿಕೊಂಡಿದೆ. ಒಂದು ವೇಳೆ ಅದು ಸಾಕಾರಗೊಳ್ಳದಿದ್ದರೆ ಸಾಹಿತ್ಯ ಪರಿಷತ್ ಅಧ್ಯಕ್ಷ ಒಬ್ಬ ಹೋರಾಟಗಾರನೂ ಆಗುತ್ತಾನೆ. ಆದರೆ ಸರ್ಕಾರದೊಂದಿಗೆ ವಿನಾಕಾರಣ ಸಂಘರ್ಷಕ್ಕೆ ಇಳಿಯುವುದಿಲ್ಲ. ಆದರೆ ಸರೋಜಿನಿ ಮಹಿಷಿ ವರದಿ ಜಾರಿಗೆ ಸರ್ಕಾರ ಹಿಂದೇಟು ಹಾಕಿದರೆ ಕಾನೂನು ಹೋರಾಟಕ್ಕೆ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಮಹೇಶ್ ಜೋಷಿ ಹೇಳಿದ್ದಾರೆ.

ಸದಸ್ಯತ್ವ ಹೆಚ್ಚಳದ ಗುರಿ

ಕನ್ನಡ ಸಾಹಿತ್ಯ ಪರಿಷತ್ತು ತೆಗೆದುಕೊಂಡ ಎಷ್ಟೋ ನಿರ್ಣಯಗಳು ಕಾನೂನಾಗಿ ಜಾರಿಗೆ ಬರುತ್ತಿದ್ದವು. ಕನ್ನಡ ಸಾಹಿತ್ಯ ಪರಿಷತ್ತಿಗೆ ಅಷ್ಟು ಘನತೆ, ಇತಿಹಾಸವಿದೆ. ಅದು ಹಾಗೆಯೇ ಉಳಿಯಬೇಕು ಎಂದರು. ಮುಂದುವರೆದು ಮಾತನಾಡಿದ ಅವರು "ದೇಶವನ್ನು ಕಾಯುತ್ತಿರುವ ಕರ್ನಾಟಕದ ಸೈನಿಕರಿಗೆ ಉಚಿತವಾಗಿ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಕೊಡಲಾಗುವುದು. ಜೊತೆಗೆ ದಿವ್ಯಾಂಗರಿಗೂ ಉಚಿತ ಸದಸ್ಯತ್ವ ನೀಡಲಾಗುವುದು. ಇದಲ್ಲದೆ ವಿಶ್ವ ವಿದ್ಯಾನಿಲಯಗಳಲ್ಲಿ ಅಧ್ಯಯನ ನಿರತರಾಗಿರುವ ವಿದ್ಯಾರ್ಥಿಗಳಿಗೂ ಕೇವಲ ರೂಪಾಯಿ ಪಡೆದು ಸದಸ್ಯತ್ವ ನೀಡಲಾಗುವುದು ಎಂದಿದ್ದಾರೆ. ಇದುವರೆಗೆ ಇದ್ದ ಸದಸ್ಯತ್ವದ ಶುಲ್ಕವನ್ನು 250 ರೂಪಾಯಿಗೆ ಇಳಿಸಲಾಗುವುದು. ಒಟ್ಟಿನಲ್ಲಿ ಮೂರುವರೆ ಲಕ್ಷದಷ್ಟಿರುವ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಒಂದು ಕೋಟಿಗೆ ತಲುಪಿಸಬೇಕಾದ ಗುರಿ ಇದೆ ಎಂದಿದ್ದಾರೆ.

ಕನ್ನಡ ಅಭಿವೃದ್ಧಿಗೆ ಪಣ

ಇನ್ನು ಮುಂದಿನ ದಿನಗಳಲ್ಲಿ ಪರಿಷತ್ ಚುನಾವಣೆಯನ್ನು ಬ್ಯಾಲೆಟ್ ಮೂಲಕ ಮಾಡುವ ಬದಲು ಉತ್ತಮವಾದ ಆ್ಯಪ್ ಅಭಿವೃದ್ಧಿಗೊಳಿಸಿ ಅದರ ಮೂಲಕವೇ ಮತದಾನಕ್ಕೆ ಅವಕಾಶ ಮಾಡಲು ಚಿಂತನೆ ಇದೆ. ಸದಸ್ಯತ್ವವನ್ನು ಇದೇ ರೀತಿ ನೋಂದಣಿ ಮಾಡಲಾಗುವುದು ಎಂದರು. ಕೊಡಗು ಗಡಿಭಾಗದ ಜಿಲ್ಲೆಯಾಗಿದ್ದು ಕನ್ನಡದ ಮೇಲೆ ಅನ್ಯ ಭಾಷೆಗಳ ಪ್ರಭಾವ ತೀವ್ರವಾಗಿರುತ್ತದೆ. ಅದನ್ನು ಮೀರಿ ಕನ್ನಡವನ್ನು ಅಭಿವೃದ್ಧಿಗೊಳಿಸುವ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಚಳಿಗಾಲದ ಎಫೆಕ್ಟ್.. ಬೆಂಗಳೂರಲ್ಲಿ 30 ರೂ. ಇದ್ದ ನುಗ್ಗೆಕಾಯಿ ಬೆಲೆ ಏಕಾಏಕಿ ₹350ಕ್ಕೆ ಏರಿಕೆ!

ಮಾತಿನ ಚಕಮಕಿಗೆ ವೇದಿಕೆಯಾದ ಕಾರ್ಯಕ್ರಮ

ಇದೇ ವೇಳೆ ಸಾಹಿತ್ಯ ಪರಿಷತ್ತು ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಗದ್ದಲ ನಡೆದು ಸಾಹಿತ್ಯ ಪರಿಷತ್ತಿಗೆ ಕಪ್ಪು ಚುಕ್ಕೆ ಇಟ್ಟಂತೆ ಆಯಿತು. ಅಧಿಕಾರ ಹಸ್ತಾಂತರ ಮಾಡಿದ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್ ತಮ್ಮ ಮಾತು ಆರಂಭಿಸುತ್ತಿದ್ದಂತೆ, ಚುನಾವಣೆಯಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು. ಈಗ ಗೆದ್ದಿರುವವರು ಹಿಂಬಾಗಿಲಿನಿಂದ ಬಂದರೋ ಇಲ್ಲ ಮುಂಭಾಗಿಲಿನಿಂದ ಬಂದರೋ ಎಂದು ಅವಹೇಳನ ಮಾಡಿ ಮಾತನಾಡಿದರು. ಇದಕ್ಕೆ ಕಾರ್ಯಕ್ರಮದಲ್ಲಿ ಇದ್ದ ಸಭಿಕರು ವಿರೋಧ ವ್ಯಕ್ತಪಡಿಸಿದರು.

ಇದನ್ನು ಓದಿ: ಕಾಂಗ್ರೆಸ್​​ನಲ್ಲಿ ಮೈಸೂರು ಗೂಳಿ-ಕನಕಪುರ ಗೂಳಿ ಮಧ್ಯೆ ಕಾಳಗ ನಡೆಯುತ್ತಿದೆ: ಶ್ರೀರಾಮುಲು ಮಾತಿನೇಟು!

ವೇದಿಕೆಯಲ್ಲಿ ಕುಳಿತಿದ್ದ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಷಿ ಅವರು ಎದ್ದು ಹೀಗೆ ಮಾತನಾಡುವುದು ಸರಿಯಲ್ಲ ನಿಲ್ಲಿಸಿ ಎಂದು ಲೋಕೇಶ್ ಸಾಗರ್ ಅವರಿಗೆ ತಿಳಿಹೇಳಿದರೂ ಲೋಕೇಶ್ ಸಾಗರ್ ಅದೇ ದಾಟಿಯಲ್ಲಿ ಮಾತನಾಡುತ್ತಲೇ ಇದ್ದರು. ಇದರಿಂದ ಸಿಟ್ಟಿಗೆದ್ದು ಕಾರ್ಯಕ್ರಮ ನಿರೂಪಿಸುತ್ತಿದ್ದ ಪರಿಷತ್ ಸದಸ್ಯ ಮುನೀರ್ ಅಹಮ್ಮದ್ ಅವರು ಲೋಕೇಶ್ ಸಾಗರ್ ಅವರಿಂದ ಮೈಕ್ ಕಿತ್ತುಕೊಂಡ ಪ್ರಸಂಗವೂ ನಡೆಯಿತು. ಬಳಿಕ ಲೋಕೇಶ್ ಸಾಗರ್ ಅವರು ತಮ್ಮ ಭಾಷಣವನ್ನು ಅಷ್ಟಕ್ಕೆ ಮೊಟಕುಗೊಳಿಸಿ ಕಾರ್ಯಕ್ರಮದಿಂದ ಹೊರ ನಡೆದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಕೇಶವ ಕಾಮತ್ ಇದೆಲ್ಲವನ್ನೂ ಸುಮ್ಮನೇ ನೋಡುತ್ತಾ ಮೂಕ ಪ್ರೇಕ್ಷಕರಂತೆ ನೋಡಬೇಕಾಯಿತು.
Published by:Seema R
First published: