ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಬೇಕೆಂದು ಆಗ್ರಹ: ಆ. 14ರಂದು ಅಹೋರಾತ್ರಿ ಧರಣಿ

ಈಗಷ್ಟೇ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಮೀಸಲಾಗಬೇಕು ಎಂದು ಒತ್ತಾಯಿಸಿ ರಾಜ್ಯದ ನಾಲ್ಕು ಸಂಸದರು ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ಆದರೆ ಆಗಿನ ಮುಖ್ಯಮಂತ್ರಿಗಳು ತಾವು ನೀಡಿದ್ದ ಭರವಸೆಯನ್ನು ಈಡೇರಿಸಲು ಮುಂದಾಗುವ ಹೊತ್ತಿಗೇ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ನಡೆದು ರಾಜ್ಯ ಸರ್ಕಾರ ಪತನವಾಯಿತು.

Ganesh Nachikethu
Updated:August 13, 2019, 4:23 PM IST
ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಬೇಕೆಂದು ಆಗ್ರಹ: ಆ. 14ರಂದು ಅಹೋರಾತ್ರಿ ಧರಣಿ
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ
  • Share this:
ಬೆಂಗಳೂರು(ಆಗಸ್ಟ್​​​.13): "ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಲಿ" ಎಂದು ಒತ್ತಾಯಿಸಿ ಕನ್ನಡಿಗರು ಹೋರಾಟಕ್ಕೆ ಮುಂದಾಗಿದ್ದಾರೆ. ಇದೇ ಆಗಸ್ಟ್​​​ 14 ಮತ್ತು 15 ಸ್ವಾತಂತ್ರ್ಯ ದಿನಾಚರಣೆಯಂದು ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ಮೂಲಕ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ. ಕನ್ನಡಿಗರ ಈ ಹೋರಾಟಕ್ಕೆ ನಾಡಿನ ಹಿರಿ ಸಾಹಿತಿಗಳು, ನಟ-ನಟಿಯರು, ಪ್ರಜ್ಞಾವಂತ ನಾಗರಿಕರು ಸೇರಿದಂತೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

ಕರ್ನಾಟಕದ ಯುವಜನತೆ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆ ಪ್ರಮುಖವಾದುದು. ಒಂದೆಡೆ ಬೇಕಾದಷ್ಟು ಉದ್ಯೋಗ ಸೃಷ್ಟಿಯಾಗತ್ತಿಲ್ಲ ಎಂದು ಕನ್ನಡಿಗರು ಸಮಸ್ಯೆ ಎದುರಿಸುತ್ತಿದ್ದರೇ, ಇನ್ನೊಂದೆಡೆ ನಮಗಾಗಿ ಸೃಷ್ಟಿಯಾದ ಉದ್ಯೋಗಗಳನ್ನು ಪರಭಾಷಿಕರು ಬಂದು ಕಬಳಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನಮ್ಮ ನೆಲದಲ್ಲಿನ ಉದ್ಯೋಗ ನಮ್ಮವರಿಗೆ ಸಿಗದಂತಾಗಿದೆ ಎನ್ನುತ್ತಾರೆ ಕನ್ನಡಪರ ಹೋರಾಟಗಾರೊಬ್ಬರು.

ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಂಡು ಇಲ್ಲಿಯೇ ಬೀಡುಬಿಟ್ಟಿದ್ದರೂ ಇಲ್ಲಿನ ಬಹುರಾಷ್ತ್ರೀಯ ಕಂಪನಿಗಳು, ಬ್ಯಾಂಕುಗಳು ಮತ್ತು ಇತರ ಉದ್ಯಮಗಳು ಕನ್ನಡಿಗರಿಗೆ ಕೆಲಸ ಕೊಡಲು ಮೀನಮೇಷ ಎಣಿಸುತ್ತಿವೆ. ಹಾಗಾಗಿ ನಮ್ಮ ಕನ್ನಡಿಗರ ಅನ್ನಕ್ಕೆ ಇನ್ನಷ್ಟು ಕುತ್ತು ಬರುವುದನ್ನು ಹೇಗಾದರೂ ಮಾಡಿ ತಡೆಯಲೇಬೇಕೆಂದು ನಿರ್ಧರಿಸಿ ರಾಜ್ಯದಲ್ಲಿ ಜನಜಾಗೃತಿ ಮೂಡಿಸಬೇಕಿದೆ ಎಂದು ನ್ಯೂಸ್​​-18 ಜೊತೆಗೆ ಕನ್ನಡಪರ ಸಂಘಟನೆಯ  ಪದಾಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಈ ವಿಚಾರದ ಬಗ್ಗೆ ನಮ್ಮನ್ನಾಳುವ ಸರ್ಕಾರಗಳ ಗಮನ ಸೆಳೆಯಲು ಮೇ ತಿಂಗಳ 3ನೇ ತಾರೀಖಿನಂದು ನಾವು #KarnatakaJobsForKannadigas ಎಂಬ ಅಡಿಬರಹದ ಟ್ವಿಟರ್ ಅಭಿಯಾನವನ್ನು ಹಮ್ಮಿಕೊಂಡಿದ್ದೆವು. ಇಡಿ ದೇಶವೇ ನಮ್ಮತ್ತ ತಿರುಗಿ ನೋಡುವಂತೆ ನಾಡಾಭಿಮಾನಿಗಳ ಸಹಕಾರದಿಂದ ಈ ಅಭಿಯಾನ ನಡೆದಿತ್ತು. ಈ ಅಭಿಯಾನಕ್ಕೆ ಖುದ್ದು ಅಂದಿನ ಮುಖ್ಯಮಂತ್ರಿಗಳಾದ ಶ್ರೀಯುತ ಕುಮಾರ ಸ್ವಾಮಿಯವರು "ಕನ್ನಡಿಗರ ಹಕ್ಕೊತ್ತಾಯ ಪರಿಗಣಿಸಿ ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಕಾರ್ಯರೂಪಕ್ಕೆ ತರಬಹುದು ಎಂದು ಸಲಹೆ ಪಡೆಯಲಾಗುವುದು" ಎದಿದ್ದರು ಎಂದು ಹೇಳುತ್ತಾರೆ ಈ ಹೋರಾಟಕ್ಕೆ ಬೆಂಬಲ ಸೂಚಿಸುವ ಪ್ರಜ್ಞಾವಂತ ನಾಗರಿಕರು.ಹೀಗೆ ಮಾತು ಮುಂದುವರೆಸಿದ ಅವರು, ನಾವು ಸಮಸ್ತ ಕನ್ನಡಿಗರ ಪರವಾಗಿ ಮುಖ್ಯಮಂತ್ರಿ , ಪ್ರಧಾನ ಮಂತ್ರಿ, ಆರ್​ಬಿಐ ನಿರ್ದೇಶಕರು, ಐಬಿಪಿಎಸ್ ಮುಖ್ಯಸ್ಥರಿಗೆ ಪತ್ರ ಬರೆದು ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿದ್ದೆವು. ಮುಖ್ಯಮಂತ್ರಿಗಳು ಪತ್ರಕ್ಕೆ ಉತ್ತರಿಸಿ ಆಸ್ವಾಸನೆಗಳನ್ನು ನೀಡಿದ್ದರು. ನಂತರ ನಮ್ಮ ನೆಲದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ನಮ್ಮವರಿಗೇ ಸಿಗಬೇಕು ಎಂದು ಸ್ಪಷ್ಟವಾಗಿ ಕೇಳುವ ನಿಟ್ಟಿನಲ್ಲಿ ಮೇ 18ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ರಚಿಸಿದ್ದೆವು. ಈ ಮೂಲಕ ಮತ್ತೊಮ್ಮೆ ನಮ್ಮ ಹಕ್ಕೊತ್ತಾಯವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದರು.

ಇದನ್ನೂ ಓದಿ: ಅಭಿಪ್ರಾಯ: ಕೇಂದ್ರದ ತ್ರಿಭಾಷಾ ಸೂತ್ರ ಎಂಬ ಹಿಂದಿ ಹೇರಿಕೆಯ ಅಸ್ತ್ರ ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ
Loading...

ಇನ್ನು ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳ 500ಕ್ಕೂ ಹೆಚ್ಚು ಬ್ಯಾಂಕ್ ಶಾಖೆಗಳಿಗೆ ನಮ್ಮ ಕಾರ್ಯಕರ್ತರು ಖುದ್ದಾಗಿ ತೆರಳಿ ಕನ್ನಡಿಗರಿಗೇ ಉದ್ಯೋಗ ಕೊಡುವಂತೆ ಮನವಿ ಮಾಡಿದ್ದೇವೆ. ಇದಾದ ನಂತರ ರಾಜ್ಯದ ವಿವಿಧೆಡೆಗಳಲ್ಲಿ ಈ ಹೋರಾಟಕ್ಕೆ ಜನರನ್ನು ಸಿದ್ದಗೊಳಿಸಲು ಜನಸಂಪರ್ಕ, ಜನಜಾಗೃತಿ ಸಭೆಗಳನ್ನು ನಡೆಸಿದ್ದೇವೆ.
ಅಭಿಯಾನದ ಯಶಸ್ಸು ಎನ್ನುವಂತೆ ಈ ಅಭಿಯಾನ ಶುರುವಾದ ಮೇಲೆಯೇ ಕರ್ನಾಟಕದ ಕೆಲವು ಲೋಕಸಭಾ ಸದಸ್ಯರು ನಮ್ಮ ಬೇಡಿಕೆಗಳಲ್ಲೊಂದಾಗಿದ್ದ ಐಬಿಪಿಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶಕೊಡುವ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರು. ಇದರಿಂದ ನಮ್ಮ ತಾಯ್ನೆಲದ ಭಾಷೆಯಾದ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈಗಷ್ಟೇ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಮೀಸಲಾಗಬೇಕು ಎಂದು ಒತ್ತಾಯಿಸಿ ರಾಜ್ಯದ ನಾಲ್ಕು ಸಂಸದರು ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ಆದರೆ ಆಗಿನ ಮುಖ್ಯಮಂತ್ರಿಗಳು ತಾವು ನೀಡಿದ್ದ ಭರವಸೆಯನ್ನು ಈಡೇರಿಸಲು ಮುಂದಾಗುವ ಹೊತ್ತಿಗೇ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ನಡೆದು ರಾಜ್ಯ ಸರ್ಕಾರ ಪತನವಾಯಿತು. ನಂತರ ಮೊನ್ನೆ ಅಂದರೆ ಅಗಷ್ಟ್ 10ರಂದು ಮತ್ತೊಮ್ಮೆ ಟ್ವಿಟರ್ ಅಭಿಯಾನ ನಡೆಸಿ ನಮ್ಮ ಹಕ್ಕೊತ್ತಾಯವನ್ನು ಮಂಡಿಸಿದಾಗ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಈಗಿನ ಮುಖ್ಯಮಂತ್ರಿಗಳಾದ ಶ್ರೀಯುತ ಯಡಿಯೂರಪ್ಪನವರು ನೀಡಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಇದೂ ಸಹ ಕೇವಲ ಟ್ವಿಟರಿನಲ್ಲಿ ನೀಡಿದ ಭರವಸೆಯಾಗಿ ಉಳಿದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಕಳೆದ ತಿಂಗಳಷ್ಟೇ ನಮ್ಮ ಪಕ್ಕದ ರಾಜ್ಯವಾದ ಆಂಧ್ರಪ್ರದೇಶ ಸರ್ಕಾರ ಸ್ಥಳಿಯರಿಗೆ ತನ್ನ ಉದ್ಯೋಗದಲ್ಲಿ 75% ಮೀಸಲಾತಿ ನೀಡಲು ಶಾಸನ ಜಾರಿ ಮಾಡುವತ್ತ ಹೆಜ್ಜೆ ಇಟ್ಟಿದೆ. ನಮ್ಮ ರಾಜ್ಯದಲ್ಲೂ ಸಹ ಇಂತಹ ಒಂದು ಕಾಯ್ದೆಯನ್ನು ಮಾಡಿ ಎಂದು ನಾವು ನಮ್ಮ ಮುಖ್ಯಮಂತ್ರಿಯನ್ನು ಈ ಸಂದರ್ಭದಲ್ಲಿ ಬಲವಾಗಿ ಒತ್ತಾಯಿಸಬೇಕು. ಇಲ್ಲದೇ ಹೋದಲ್ಲಿ ನಮ್ಮ ಕೆಲಸಗಳನ್ನು ಬೇರೆಯವರು ಹೊಡೆದುಕೊಂಡು ನಮ್ಮ ಅನ್ನಕ್ಕೆ ಕುತ್ತು ಬರುವುದನ್ನು ನೋಡುತ್ತಾ ಕೂರಬೇಕಾಗುತ್ತದೆ ಎಂದು ತಮ್ಮ ಹೋರಾಟದ ಉದ್ದೇಶವನ್ನು ಬಿಚ್ಚಿಟ್ಟರು.ಇಲ್ಲಿಯವರೆಗಿನ ನಮ್ಮ ಪ್ರಯತ್ನಗಳು ನಾಡಿನ ಜನ ತಮ್ಮ ಉದ್ಯೋಗದ ಹಕ್ಕಿಗಾಗಿ ಆಗ್ರಹಿಸಲು ಮತ್ತು ರಾಜಕಾರಣಿಗಳು ಈ ಬಗ್ಗೆ ಚಿಂತಿಸಲು ಪ್ರಾರಂಭಿಸುವಷ್ಟು ಯಶಸ್ವಿಯಾಗಿದೆ. ಇದು ಕನ್ನಡಿಗರ ಹೊಟ್ಟೆ ತುಂಬಿಸುವಷ್ಟು ಯಶಸ್ವಿಯಾಗಿಲ್ಲ. ಅದಾಗಬೇಕಾದರೆ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಮೀಸಲಾಗುವಂತ ಒಂದು ಸ್ಪಷ್ಟವಾದ ಕಾನೂನು ರೂಪಿತವಾಗಬೇಕಾಗಿದೆ. ಇದಾಗಬೇಕೆಂದರೆ ಈ ಮಹತ್ವದ ಹೋರಾಟ ದೊಡ್ಡ ಪ್ರಮಾಣದಲ್ಲಿಯೇ ನಡೆಯಬೇಕಾಗಿದೆ. ಜೊತೆಗೆ ನಮ್ಮ ಜನರ ಜಾಗೃತಿಯೂ ಸಹ ಅಷ್ಟೇ ದೊಡ್ಡ ಪ್ರಮಾಣದಲ್ಲಿ ನಡೆಯಬೇಕಾಗಿದೆ. ಹೋರಾಟದ ಮುಂದಿನ ಭಾಗವಾಗಿ ಇದೇ ಆಗಷ್ಟ್ 14 ಮತ್ತು 15ರಂದು ಅಹೋರಾತ್ರಿ ಧರಣಿಯನ್ನು ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: ಉದ್ಯೋಗಕ್ಕಾಗಿ ಆಗ್ರಹಿಸಿ ಕನ್ನಡಿಗರ ಹೋರಾಟ; ಸಿಎಂ ಕುಮಾರಸ್ವಾಮಿ ಬೆಂಬಲ

ಬೆಂಗಳೂರಿನ ಆನಂದರಾವ್ ವೃತ್ತದ ಬಳಿಯಿರುವ ಗಾಂಧಿ ಪ್ರತಿಮೆ ಬಳಿ ನಡೆಸಿ ಈ ಧರಣಿ ನಡೆಯಲಿದೆ. ಈ ಧರಣಿಯಲ್ಲಿ ಹೋರಾಟಗಾರರಾದ ವಾಟಾಳ್ ನಾಗರಾಜ್, ಕರವೇ ನಾರಾಯಣ ಗೌಡ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ, ಚಿತ್ರನಟ ಉಪೇಂದ್ರ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳು,ಬರಹಗಾರರು, ನಟರು, ಹೋರಾಟಗಾರರು, ರಾಜಕಾರಣಿಗಳು ಮತ್ತು ದೊಡ್ಡ ಪ್ರಮಾಣದ ಯುವಜನತೆ ಭಾಗವಹಿಸಲಿದೆ. ಅಗಷ್ಟ್ 14 ರಂದು ಬೆಳಿಗ್ಗೆ 10 ಗಂಟೆಗೆ ಶುರುವಾಗುವ ಈ ಧರಣಿ, 24 ಗಂಟೆಗಳ ಕಾಲ ನಡೆಯಲಿದೆ ಎನ್ನಲಾಗಿದೆ.

ಹೋರಾಟದ ಪ್ರಮುಖ ಹಕ್ಕೊತ್ತಾಯಗಳು

1. ಎಲ್ಲಾ ಖಾಸಗಿ ವಲಯದ ಉದ್ಯಮಗಳಿಗೆ ರಾಜ್ಯ ಸರ್ಕಾರ ಹಲವು ಮೂಲಭೂತ(ನೆಲ,ಜಲ,ವಿದ್ಯುತ್, ರಸ್ತೆ ಮುಂತಾದ) ಸವಲತ್ತುಗಳನ್ನು ನೀಡುತ್ತಿರುವುದರಿಂದ ಕಟ್ಟುನಿಟ್ಟಾಗಿ ಉದ್ಯೋಗಗಳು ಸ್ಥಳಿಯರಿಗೆ(ಕನ್ನಡಿಗರಿಗೆ) ಮೀಸಲಿಡಲು ಕರಾರು ಪತ್ರದಲ್ಲೇ ಪೂರ್ವಷರತ್ತು ಹಾಕಬೇಕು. ರಾಜ್ಯದ ಸರ್ಕಾರಿ ವಲಯದ ಉದ್ಯಮಗಳಲ್ಲಿ ಎಲ್ಲ ಹುದ್ದೆಗಳಿಗೂ ಕನ್ನಡಿಗರನ್ನೇ ಆಯ್ಕೆ ಮಾಡಬೇಕು. ಅನಿವಾರ್ಯ ಸಂದರ್ಭದಲ್ಲಿ ಹೊರ ರಾಜ್ಯದವರನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆದು ನೇಮಕ ಮಾಡಿಕೊಳ್ಳಬೇಕು. ಇಲ್ಲಿನ ಐಟಿ ಉದ್ಯಮಗಳಿಗೆ ರಾಜ್ಯದ ಇಂಜಿನಿಯರಿಂಗ್/ಮ್ಯಾನೇಜ್ಮೆಂಟ್ ಕಾಲೇಜುಗಳಿಂದಲೇ ಕ್ಯಾಂಪಸ್ ನೇಮಕಾತಿ ಮಾಡಿಕೊಳ್ಳಲು ಸೂಚಿಸಬೇಕು.

2. ಮಹಾರಾಷ್ಟ್ರದಲ್ಲಿ ಇರುವಂತೆ ರಾಜ್ಯ ಸರ್ಕಾರ ಸ್ಥಳೀಯರಿಗೆ ನಿಗದಿಪಡಿಸಿದ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವ ಬಗ್ಗೆ ರಾಜ್ಯದ ಖಾಸಗಿ ಉದ್ದಿಮೆಗಳಿಂದ ಪ್ರತಿವರ್ಷ ಘೋಷಣೆ ಪತ್ರ ಪಡೆಯಬೇಕು. ಅಭ್ಯರ್ಥಿಗಳನ್ನು ಸ್ಥಳೀಯರು ಎಂದು ಪರಿಗಣಿಸಲು 15 ವರ್ಷಗಳ ಕಾಲ ಅವರು ರಾಜ್ಯದಲ್ಲಿ ವಾಸವಾಗಿದ್ದಲ್ಲದೇ ರಾಜ್ಯಭಾಷೆಯಾದ ಕನ್ನಡದಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ಬರಬೇಕು.

3. ರಾಜ್ಯದಲ್ಲಿ ವ್ಯವಹರಿಸುವ ಎಲ್ಲಾ ಬ್ಯಾಂಕುಗಳು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ರಾಜ್ಯದ ಅಧಿಕೃತ ಭಾಷೆಯಾದ ಕನ್ನಡ ಭಾಷಾಜ್ಞಾನವನ್ನು ಕಡ್ಡಾಯಗೊಳಿಸಬೇಕು.ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಸಂಸ್ಥೆಯು ಬ್ಯಾಂಕಿಂಗ್ ನೇಮಕಾತಿಗೆ ನಡೆಸುವ ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆಯನ್ನು ಕನ್ನಡದಲ್ಲೂ ಬರೆಯುವ ಅವಕಾಶವಿರಬೇಕು.

4. ರಾಜ್ಯ/ಕೇಂದ್ರ ಸರ್ಕಾರಿ ಉದ್ಯಮಗಳು ಹಾಗೂ ಇಲಾಖೆಗಳಲ್ಲಿ ದಿನಗೂಲಿ ಕೆಲಸಗಳಿಗೆ ಕಾರ್ಮಿಕರನ್ನು/ನೌಕರರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಕನ್ನಡಿಗರನ್ನೇ ನೇಮಿಸಿಕೊಳ್ಳಬೇಕು. ಹೊರಗುತ್ತಿಗೆ ಸಂಸ್ಥೆಗಳಿಗೂ ಈ ಷರತ್ತು ವಿಧಿಸಬೇಕು.

5.ಕೇಂದ್ರ/ರಾಜ್ಯ ಸರ್ಕಾರದ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ಇರಬೇಕು.
----------------------
First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...