ಕನ್ನಡಿಗರ ಮೇಲೆ ಒತ್ತಾಯಪೂರ್ವಕವಾಗಿ ಹಿಂದಿ ಭಾಷೆಯನ್ನು ಹೇರುವ ಕಾರ್ಯ ಹಲವಾರು ವರ್ಷಗಳಿಂದ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ. ಸರ್ಕಾರಿ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕ್ಗಳು ಸೇರಿ ಇನ್ನೂ ಹಲವೆಡೆ ಹಿಂದಿಯಲ್ಲೇ ಸಂವಹನ ನಡೆಸುವಂತೆ ಒತ್ತಾಯಿಸಲಾಗುತ್ತಿದೆ. ಈ ವಿಷಯದಲ್ಲಿ ಕನ್ನಡಿಗರ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಲೇ ಇದೆ ಎಂಬ ಆರೋಪ ಇದೆ. ಈಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್ ಹಾಗೂ ನಿಲ್ದಾಣಗಳಲ್ಲಿ ತನ್ನ ಪ್ರಯಾಣಿಕರಿಗೆ ಹಿಂದಿ ಭಾಷೆಯಲ್ಲಿ ಮಾಹಿತಿ ನೀಡಲು ಮುಂದಾಗಿದೆ. ಬಿಎಂಟಿಸಿ ಸಂಸ್ಥೆಯ ಈ ನಡೆಗೆ ತೀವ್ರ ವಿರೋಧಗಳು ವ್ಯಕ್ತವಾಗಿವೆ.
ಹಿಂದಿ ಹೇರಿಕೆ ವಿರೋಧಿಸಿ ಅನೇಕ ಕನ್ನಡಪರ ಸಂಘಟನೆಗಳು ಇಂದು ಸಂಜೆ 6 ಗಂಟೆಗೆ #NammaBMTCHindiBeda ಎಂಬ ಹ್ಯಾಷ್ಟ್ಯಾಗ್ ಅಡಿಯಲ್ಲಿ ಟ್ವಿಟ್ಟರ್ ಅಭಿಯಾನ ನಡೆಸಲು ಮುಂದಾಗಿವೆ. ಕನ್ನಡ ಗ್ರಾಹಕರ ಕೂಟವು 'ಬೇಡದ ಹಿಂದಿ ಬಳಕೆಯ ವಿರುದ್ಧ ಟ್ವಿಟ್ಟರ್ ಅಭಿಯಾನ'ವನ್ನು ನಡೆಸಲು ತೀರ್ಮಾನಿಸಿದೆ.
ಕರ್ನಾಟಕ ಸರ್ಕಾರದ ಭಾಷಾ ನೀತಿ ಪ್ರಕಾರ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳು ಸಾಕು. ಬಿಎಂಟಿಸಿ ತನ್ನ ಪ್ರಯಾಣಿಕರಿಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಮಾಹಿತಿ ನೀಡಬಹುದು. ಆದರೆ ಹಿಂದಿ ಭಾಷೆ ಬಳಕೆ ಬೇಡ ಎಂಬ ಮಾತುಗಳು ಕೇಳಿ ಬಂದಿವೆ.
ಹಲವು ದಿನಗಳ ಹಿಂದೆ ಪ್ರಾದೇಶಿಕ ಭಾಷಾ ನೀತಿಯನ್ನು ಗಾಳಿಗೆ ತೂರಿ ರಾಜ್ಯ ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಅನಗತ್ಯವಾಗಿ ಹಿಂದಿ ಹೇರಿಕೆ ಮಾಡುತ್ತಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹಿಂದಿ ಹೇರಿಕೆ ಕ್ರಮ ಖಂಡಿಸಿ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಧುಮುಕಿದ್ದವು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೂಡ ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಿದ್ದರು. ಈ ಬಗ್ಗೆ ಸಾಕಷ್ಟು ಹೋರಾಟಗಳು ಸಹ ನಡೆದಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ