ಬೆಂಗಳೂರು (ಫೆ. 21): ವಿಧಾನಸೌಧಕ್ಕೆ ಮಾಧ್ಯಮಗಳಿಗೆ ಪ್ರವೇಶ ನೀಡಬಾರದು ಎಂದು ನಿರ್ಬಂಧ ಹೇರಿರುವ ಬೆನ್ನಲ್ಲೇ ಶಾಸಕರ ಭವನಕ್ಕೂ ಪತ್ರಕರ್ತರು ಪ್ರವೇಶಿಸುವಂತಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೊಸ ಆದೇಶ ಹೊರಡಿಸಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪೀಕರ್ ಆಗಿ ನೇಮಕಗೊಂಡ ಕೂಡಲೇ ಕೂಡಲೆ ವಿಧಾನಸೌಧದಲ್ಲಿ ನಡೆಯುವ ಅಧಿವೇಶನವನ್ನು ಚಿತ್ರೀಕರಿಸಲು ಎಲ್ಲ ಮಾಧ್ಯಮಗಳಿಗೆ ನಿರ್ಬಂಧ ಹೇಳಿದ್ದರು. ಇದು ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಶಾಸಕರು ಸದನದಲ್ಲಿ ಕುಳಿತು ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ನೋಡಿದ ದೃಶ್ಯಗಳನ್ನು ಚಾನೆಲ್ ಮತ್ತು ಪತ್ರಿಕೆಗಳು ವರದಿ ಮಾಡಿದ್ದವು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸಭಾ ಅಧಿವೇಶನವನ್ನು ಚಿತ್ರೀಕರಿಸಲು ಮಾಧ್ಯಮಗಳಿಗೆ ಅವಕಾಶ ನೀಡಿರಲಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು.
ಇದನ್ನೂ ಓದಿ: ನಾವು ಆಪರೇಷನ್ ಕಮಲ ನಿಲ್ಲಿಸಿದ್ದೇವೆ, ಹಾಗೆಂದು ಪಕ್ಷಕ್ಕೆ ಬರುವವರನ್ನು ಬೇಡ ಅನ್ನಲ್ಲ; ನಳಿನ್ ಕುಮಾರ್ ಕಟೀಲ್
ಇದೀಗ, ಮತ್ತೊಂದು ಆದೇಶ ಹೊರಡಿಸಿರುವ ಸ್ಪೀಕರ್ ಕಾಗೇರಿ, ಶಾಸಕರ ಭವನದೊಳಗೆ ಹೋಗಿ ಶಾಸಕರ ಖಾಸಗಿತನಕ್ಕೆ ಅಡಚಣೆ ಮಾಡುತ್ತಾರೆ. ಇದರಿಂದ ಶಾಸಕರ ಏಕಾಂತಕ್ಕೆ ಧಕ್ಕೆಯಾಗುತ್ತದೆ. ಶಾಸಕರು ತಮ್ಮ ಮತಕ್ಷೇತ್ರದಿಂದ ಬೆಂಗಳೂರಿಗೆ ಬಂದು ತಮ್ಮ ಕೆಲಸವನ್ನು ಮುಗಿಸಿ, ಶಾಸಕರ ಭವನದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಈ ಸಮಯದಲ್ಲಿ ಮಾಧ್ಯಮದವರು ಶಾಸಕರನ್ನು ಭೇಟಿಯಾಗಲು ಬಂದರೆ ಅವರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಒಂದುವೇಳೆ ಶಾಸಕರು ಮಾಧ್ಯಮಗಳಿಗೆ ಸಂದರ್ಶನ ನೀಡಬೇಕಾದರೆ ಶಾಸಕರೇ ಶಾಸಕರ ಭವನದ ಗೇಟಿನ ಹೊರಗೆ ಬಂದು ಭೇಟಿಯಾಗಬಹುದು ಎಂದು ಸ್ಪಷ್ಟ ಆದೇಶ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ