ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಹೈಡ್ರಾಮ; ಸಾಗರ ತಾ.ಪಂ. ಸಿಇಓ ವಿರುದ್ಧ ಅಧ್ಯಕ್ಷರ ಪ್ರತಿಭಟನೆ

ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಓ ಕಚೇರಿ ಮುಂದೆ ಸಾಗರ ತಾ.ಪಂ. ಸಿಇಓ ವಿರುದ್ಧ ಸಾಗರ ತಾ.ಪಂ ಅಧ್ಯಕ್ಷ ಮಲ್ಲಿಕಾರ್ಜುನ್ ಹಕ್ರೆ ಮತ್ತು ಉಪಾಧ್ಯಕ್ಷ ಅಶೋಕ್ ಪ್ರತಿಭಟನೆ ನಡೆಸಿದರು. ಜಿ. ಪಂ. ಕಚೇರಿಯ ಇನ್ನೊಂದು ಕಡೆ ಸಾಗರ ತಾ.ಪಂ. ಬಿಜೆಪಿ ಮತ್ತು ಕೆಲ ಕಾಂಗ್ರೆಸ್, ಪಕ್ಷೇತರ ಸದಸ್ಯರು ಮಲ್ಲಿಕಾರ್ಜುನ್ ಹಕ್ರೆ ವಿರುದ್ಧ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಓಗೆ ದೂರು ನೀಡಿದ ತಾ.ಪಂ. ಸದಸ್ಯರು

ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಓಗೆ ದೂರು ನೀಡಿದ ತಾ.ಪಂ. ಸದಸ್ಯರು

  • Share this:
ಶಿವಮೊಗ್ಗ (ಜು. 29): ಒಂದು ಕಡೆ ಸಾಗರ ತಾಲೂಕು ಪಂಚಾಯತ್ ಸಿಇಓ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ತಾ.ಪಂ. ಅಧ್ಯಕ್ಷರು ಪ್ರತಿಭಟನೆ ನಡೆಸಿದರು. ಮತ್ತೊಂದು ಕಡೆ ಅಧ್ಯಕ್ಷರು ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷದ ಸದಸ್ಯರು ಪ್ರತಿಭಟನೆ ಮಾಡಿದರು. ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಓ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಯಿತು.

ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಓ ಕಚೇರಿ ಮುಂದೆ ಸಾಗರ ತಾ.ಪಂ. ಸಿಇಓ ವಿರುದ್ಧ ಸಾಗರ ತಾ.ಪಂ ಅಧ್ಯಕ್ಷ ಮಲ್ಲಿಕಾರ್ಜುನ್ ಹಕ್ರೆ ಮತ್ತು ಉಪಾಧ್ಯಕ್ಷ ಅಶೋಕ್ ಪ್ರತಿಭಟನೆ ನಡೆಸಿದರು. ಸಾಗರ ತಾಪಂ ಸಿಇಓ ಪುಷ್ಪಾ ಕಮ್ಮಾರ್ ಆವರು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ಮಾಡಿದರು. ಕೆಡಿಪಿ, ಕೆಎಫ್​ಡಿ ಸಭೆ ಸೇರಿದಂತೆ ಸಾಮಾನ್ಯ ಮತ್ತು ವಿಶೇಷ ಸಭೆಗಳನ್ನು ಕರೆಯುವಂತೆ 26 ಪತ್ರಗಳನ್ನು ಬರೆದರೂ ಅಧ್ಯಕ್ಷರ ಪತ್ರಗಳಿಗೆ ಖ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: ‘ನನ್ನ ಮಗನ ಮೇಲೆ ಆಣೆ, ಬಿಜೆಪಿ ಸೇರೋಕೆ ಒಂದು ರೂ. ಕೂಡ ತಗಂಡಿಲ್ಲ‘ - ಸಚಿವ ಶ್ರೀಮಂತ ಪಾಟೀಲ್​​

ಸಾಗರ ತಾಲೂಕಿನ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅಡೆತಡೆ ಉಂಟಾಗಿದೆ. ಪುಷ್ಪಾ ಅವರು ಕಚೇರಿಗೆ ಬರುತ್ತಿಲ್ಲ. ಮನೆಯಲ್ಲೇ ಇದ್ದು ಕಾರ್ಯ ನಿರ್ವಹಿಸುತ್ತೇವೆ ಎನ್ನುತ್ತಾರೆ. ಫೋನ್ ಕರೆ ಮಾಡಿದರೆ ರಿಸೀವ್ ಮಾಡುತ್ತಿಲ್ಲ. ಸುಮಾರು 400 ಬಾರಿ ಕರೆ ಮಾಡಿದರೂ ಅವರು ರಿಸೀವ್ ಮಾಡಿಲ್ಲ. ಮಾತನಾಡುವುದಿಲ್ಲ ಅಂದರೆ ಅವರು ಈ ಹುದ್ಧೆಯಲ್ಲಿ ಏಕೆ ಮುಂದುವರಿಯಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಸಾಮಾನ್ಯ ಸಭೆ ಕರೆಯಬೇಕು ಎಂದು ಅಧ್ಯಕ್ಷ ಮಲ್ಲಿಕಾರ್ಜುನ್ ಆಗ್ರಹಿಸಿದ್ದಾರೆ. ಪುಷ್ಪಾ ಅವರು ಕೃಷಿ ಇಲಾಖೆಯ ಅಧಿಕಾರಿಯಾಗಿದ್ದಾರೆ. ಇಲ್ಲಿಗೆ ಡೆಪ್ಯುಟೇಶನ್ ಮೇಲೆ ಬಂದಿದ್ದಾರೆ. ಸಾರ್ವಜನಿಕರಿಗೆ ಸ್ಪಂದಿಸದ ಅಧಿಕಾರಿ ಸಾಗರ ತಾ.ಪಂ.ಗೆ ಬೇಡ ಎಂದಿದ್ದಾರೆ.ಸಾಗರ ಶಾಸಕರ ಕುಮ್ಮಕ್ಕಿನಿಂದ ಸಿಇಒ ಪುಷ್ಪಾ ಈ ರೀತಿ ಮಾಡುತ್ತಿದ್ದಾರೆ ಎಂದು ಸಾಗರ ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಗಂಭೀರ ಆರೋಪ ಮಾಡಿದ್ದಾರೆ. ಪುಷ್ಪಾ ಅವರನ್ನು ಇಲ್ಲಿಂದ ಬದಲಿಸಿ ಬೇರೆ ಅಧಿಕಾರಿಯನ್ನು ನೇಮಿಸಬೇಕು. ಇಲ್ಲವೆ, ಅವರು ಸೂಕ್ತ ರೀತಿಯಲ್ಲಿ ಕೆಲಸ ಮಾಡಲು ಸೂಚನೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒಗೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಅವರೇ‌ ಮುಂದಿನ ಮೂರು ವರ್ಷಕ್ಕೂ ಮುಖ್ಯಮಂತ್ರಿ: ಲಕ್ಷ್ಮಣ ಸವದಿ ಸ್ಪಷ್ಟನೆ

ಜಿಲ್ಲಾ ಪಂಚಾಯತ್ ಕಚೇರಿಯ ಇನ್ನೊಂದು ಕಡೆ ಸಾಗರ ತಾ.ಪಂ.ನ ಬಿಜೆಪಿ ಮತ್ತು ಕೆಲ ಕಾಂಗ್ರೆಸ್, ಪಕ್ಷೇತರ ಸದಸ್ಯರು ಮಲ್ಲಿಕಾರ್ಜುನ್ ಹಕ್ರೆ ವಿರುದ್ಧ ಪ್ರತಿಭಟನೆ ನಡೆಸಿದರು. ಹಕ್ರೆ ಸೂಕ್ತ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ. ಸಾಗರ ತಾ.ಪಂ.ನಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. 15 ಜನ ಸದಸ್ಯರಲ್ಲಿ ನಾವು ಪಕ್ಷಾತೀತವಾಗಿ 10 ಜನ ಒಟ್ಟಾಗಿ ಇದ್ದೇವೆ. ಪಕ್ಷಾತೀತವಾಗಿ ಮಲ್ಲಿಕಾರ್ಜುನ್ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ವಿನಾಕಾರಣ ಬಿಜೆಪಿ ಸದಸ್ಯರು ಸೇರಿದಂತೆ 3 ಜನ ಸದಸ್ಯರನ್ನು ಉಪಾಧ್ಯಕ್ಷರು ಸಭೆಯೊಂದರಲ್ಲಿ ಅಮಾನತು ಮಾಡಿದ್ದಾರೆ. ಅಧಿಕಾರ ದಾಹದಿಂದ ಇಂತಹ ಕ್ರಮ ಕೈಗೊಂಡು ಸದಸ್ಯರ ಹಕ್ಕನ್ನು ಮೊಟಕುಗೊಳಿಸುತ್ತಿದ್ದಾರೆ. ಇಂತವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯ ಮಾಡಿದರು.

ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸಿಇಓ ಬಂದು ಮನವಿ ಸ್ವೀಕರಿಸುವವರೆಗೂ ಮಲ್ಲಿಕಾರ್ಜುನ್ ಹಕ್ರೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೇ ಬಂದ ಜಿ.ಪಂ ಸಿಇಓ ವೈಶಾಲಿ ಪರಿಶೀಲನೆ ನಡೆಸಿ ತಪ್ಪು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಳಿಸಲಾಯಿತು. ಬಿಜೆಪಿ ಸದಸ್ಯರಿಂದಲೂ ಸಿಇಓ ಮನವಿ ಸ್ವೀಕರಿಸಿದರು. ಸದಸ್ಯರ ಜಗಳದಿಂದಾಗಿ ಸಾಗರ ತಾಲೂಕಿನ ಸಾರ್ವಜನಿಕರ ಕೆಲಸಗಳಿಗೆ ಅಡಚಣೆ ಆಗದಿರಲಿ ಎಂಬುದು ಜನರ ಅಪೇಕ್ಷೆಯಾಗಿದೆ.
Published by:Sushma Chakre
First published: