ನಿನ್ನೆಯ ಸಭೆಯಲ್ಲಿ ಸಿಎಂ, ವಿಜಯೇಂದ್ರ ಬಗ್ಗೆ ಚರ್ಚೆಯಾಗಿಲ್ಲ; ಜಗದೀಶ್ ಶೆಟ್ಟರ್​ ಸ್ಪಷ್ಟನೆ

ಬಿಜೆಪಿಯಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿರುವ ಶಾಸಕರು ಸೋಮವಾರ ರಾತ್ರಿ ಸಭೆ ನಡೆಸಿದ್ದರು. ಈ ಬಗ್ಗೆ ಸಚಿವ ಜಗದೀಶ್ ಶೆಟ್ಟರ್​ ಸ್ಪಷ್ಟನೆ ನೀಡಿದ್ದು, ಪಕ್ಷದೊಳಗೆ ಯಾವುದೇ ಭಿನ್ನಮತವಿಲ್ಲ ಎಂದು ಪುನರುಚ್ಛರಿಸಿದ್ದಾರೆ.

news18-kannada
Updated:February 18, 2020, 3:30 PM IST
ನಿನ್ನೆಯ ಸಭೆಯಲ್ಲಿ ಸಿಎಂ, ವಿಜಯೇಂದ್ರ ಬಗ್ಗೆ ಚರ್ಚೆಯಾಗಿಲ್ಲ; ಜಗದೀಶ್ ಶೆಟ್ಟರ್​ ಸ್ಪಷ್ಟನೆ
ಜಗದೀಶ್​ ಶೆಟ್ಟರ್
  • Share this:
ಬೆಂಗಳೂರು (ಫೆ. 18): ಸೋಮವಾರ ರಾತ್ರಿ ಬಿಜೆಪಿಯ ಭಿನ್ನಮತೀಯರು ಸಚಿವ ಜಗದೀಶ್ ಶೆಟ್ಟರ್​ ಮನೆಯಲ್ಲಿ ಸಭೆ ನಡೆಸಿದ್ದರು. ಸಂಪುಟ ವಿಸ್ತರಣೆ ವೇಳೆ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗಿದೆ ಎಂದು ಸಭೆಯಲ್ಲಿ ಅಸಮಾಧಾನ ಹೊರಹಾಕಲಾಗಿತ್ತು, ಈ ಬಗ್ಗೆ ಸಿಎಂ ವಿರುದ್ಧ ಹೈಕಮಾಂಡ್​ಗೆ ದೂರು ನೀಡುವ ಬಗ್ಗೆಯೂ ಚರ್ಚಿಸಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಜಗದೀಶ್ ಶೆಟ್ಟರ್​, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಸಭೆ ಸೇರಿದ್ದೆವು. ಸರ್ಕಾರದ ವಿರುದ್ಧ ಯಾರಿಗೂ ಅಸಮಾಧಾನವಿಲ್ಲ ಎಂದು ಹೇಳಿದ್ದಾರೆ.

ಸೋಮವಾರ ರಾತ್ರಿ ಶೆಟ್ಟರ್​ ಮನೆಯಲ್ಲಿ ನಡೆದ ಸಭೆಯಲ್ಲಿ ಉಮೇಶ್ ಕತ್ತಿ, ಮುರುಗೇಶ ನಿರಾಣಿ, ರಾಜೂಗೌಡ, ಎ.ಎಸ್​. ಪಾಟೀಲ್, ಬಸನಗೌಡ ಪಾಟೀಲ ಯತ್ನಾಳ್​ ಸೇರಿದಂತೆ ಇನ್ನೂ ಕೆಲವು ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಸಿಎಂ ಯಡಿಯೂರಪ್ಪನವರ ಮಗ ಬಿ.ವೈ. ವಿಜಯೇಂದ್ರ ವಿರುದ್ಧ ಅಪಸ್ವರ ಕೇಳಿಬಂದಿದೆ ಎನ್ನಲಾಗಿತ್ತು. ಈ ಬಗ್ಗೆ ನಿನ್ನೆ ರಾತ್ರಿಯೇ ಗುಪ್ತಚರ ಇಲಾಖೆ ಮುಖ್ಯಸ್ಥರಿಗೆ ಫೋನ್ ಮಾಡಿದ್ದ ಸಿಎಂ ಯಡಿಯೂರಪ್ಪ, ಈ ಸಭೆಯ ಬಗ್ಗೆ ಮಾಹಿತಿ ನೀಡದಿದ್ದಕ್ಕೆ ಅಸಮಾಧಾನ ಹೊರಹಾಕಿದ್ದರು ಎನ್ನಲಾಗಿತ್ತು.

ಇದನ್ನೂ ಓದಿ: ಸಿಎಂ ಬಿಎಸ್​ವೈಗೆ ಮತ್ತೊಂದು ತಲೆನೋವು; ಶೆಟ್ಟರ್​ ಮನೆಯಲ್ಲಿ ರಾತ್ರೋರಾತ್ರಿ ಭಿನ್ನಮತೀಯರ ಸಭೆ

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಜಗದೀಶ್ ಶೆಟ್ಟರ್, ಸಚಿವ ಸ್ಥಾನ ವಂಚಿತರು ಅಸಮಾಧಾನದಿಂದ ಸಭೆ ನಡೆಸಿಲ್ಲ. ಅವರೆಲ್ಲ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ಬಂದಿದ್ದರು. ಯಾವುದೇ ಸಚಿವ ಸ್ಥಾನದ ಬಗ್ಗೆ ಸಭೆಯಲ್ಲಿ ಮಾತಾಡಿಲ್ಲ. ಯಡಿಯೂರಪ್ಪನವರ ಮಗ ವಿಜಯೇಂದ್ರ ಬಗ್ಗೆಯೂ ಭಿನ್ನಾಭಿಪ್ರಾಯ ವ್ಯಕ್ತಪಡಿಸಿಲ್ಲ. ಇದು ಅನೌಪಚಾರಿಕವಾಗಿ ನಡೆದ ಸಭೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: KSRTC ಡ್ರೈವರ್-ಕಂಡಕ್ಟರ್​ಗಳ ಜೀವಕ್ಕೆ ಆಪತ್ತು; ಅಧ್ಯಯನದಲ್ಲಿ ಬಯಲಾಯ್ತು ಆತಂಕಕಾರಿ ಸಂಗತಿ

ಈ ಹಿಂದೆಯೂ ಬಿಜೆಪಿ ಶಾಸಕರು ಕೆಲವೊಮ್ಮೆ ನಮ್ಮ ಮನೆಗೆ ಬರುತ್ತಿದ್ದರು. ಅದರಂತೆ ನಿನ್ನೆ ಕೆಲ ಶಾಸಕರು ಬಂದಿದ್ದರು. ಸಚಿವ ಸ್ಥಾನ ಬೇಕು ಅಂತ ಯಾರೂ ಕೇಳಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಮಾತಾಡಿದ್ದಾರೆ. ಕೆಲ ಶಾಸಕರಿಗೆ ಕಚೇರಿಗೆ ಬನ್ನಿ ಎಂದಿದ್ದೇನೆ. ಗುಪ್ತಚರ ಇಲಾಖೆ ಈ ಬಗ್ಗೆ ನೀಡಿರುವ ಮಾಹಿತಿ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ನ್ಯೂಸ್ 18 ಕನ್ನಡಕ್ಕೆ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.
First published:February 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ