ಬೆಂಗಳೂರು (ಫೆ.19): ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂದು ಈ ಮೊದಲಿನಿಂದಲೂ ಹೋರಾಟಗಳು ನಡೆಯುತ್ತಲೇ ಇವೆ. ಆದರೆ, ಈವರೆಗೆ ತುಳುನಾಡಿನವರ ಬೇಡಿಕೆ ಈಡೇರಿಲ್ಲ. ಈಗ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡಲು ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಕನ್ನಡ ಹಾಗೂ ಸಂಸ್ಕೃತಿ ಸಚಿವ ಸಿ.ಟಿ. ರವಿ ಸೋಮವಾರ ಈ ಘೋಷಣೆ ಮಾಡಿದ್ದಾರೆ. ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂಬುದು ಹಲವು ವರ್ಷಗಳಿಂದ ಇರುವ ಬೇಡಿಕೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಳಿ ಕೋರಿದ್ದೇನೆ ಎಂದಿದ್ದಾರೆ ಸಿಟಿ ರವಿ.
ಇನ್ನು, ಈ ವಿಚಾರವಾಗಿ ತುಳು ಅಕಾಡೆಮಿ ಜೊತೆಯೂ ಸಿ.ಟಿ. ರವಿ ಮಾತುಕತೆ ನಡೆಸುತ್ತಿದ್ದಾರಂತೆ. ತುಳು ಭಾಷೆಗೆ ಮಾನ್ಯತೆ ನೀಡಲು ಕೇಂದ್ರ ಸರ್ಕಾರ ಕೇಳಬಹುದಾದ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳುವಂತೆ ಅವರು ತುಳು ಅಕಾಡೆಮಿಗೆ ಸೂಚಿಸಿದ್ದಾರೆ.
ಕರ್ನಾಟಕದ ಕರಾವಳಿ ಭಾಗದಲ್ಲಿ 25-30 ಲಕ್ಷ ಮಂದಿ ತುಳು ಭಾಷೆಯನ್ನು ಮಾತನಾಡುತ್ತಾರೆ. ತುಳು ಭಾಷೆಯನ್ನು ಉಳಿಸಿ, ತುಳುಗೆ ಮಾನ್ಯತೆ ನೀಡಿ ಎನ್ನುವ ಆಂದೋಲನಗಳು ಈ ಮೊದಲಿನಿಂದಲೂ ನಡೆದು ಬಂದಿವೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮರ ಗಣತಿ ಆರಂಭಿಸದ ಬಿಬಿಎಂಪಿ ಅಧಿಕಾರಿಗಳಿಗೆ ಹೈಕೋರ್ಟ್ ತರಾಟೆ
“ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ನಾವು ಮೊದಲು ಪತ್ರ ಬರೆಯುತ್ತೇವೆ. ನಂತರ ಆ ಭಾಷೆಯ ಖ್ಯಾತಿ ಮತ್ತಿತ್ಯಾದಿ ವಿಷಯಗಳಲ್ಲಿ ನಾವು ದಾಖಲೆಗಳನ್ನು ನೀಡಬೇಕು,” ಎಂದಿದ್ದಾರೆ ಸಚಿವ ಸಿ.ಟಿ. ರವಿ.
ಭಾರತದ 22 ಭಾಷೆಗಳಿಗೆ ಸಾಂವಿಧಾನಿಕ ಮಾನ್ಯತೆ ದೊರೆತಿದೆ. ಇವುಗಳ ಪೈಕಿ ಸಂಸ್ಕೃತ, ತಮಿಳು ಹಾಗೂ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ