• Home
  • »
  • News
  • »
  • state
  • »
  • ಎಲ್‍ಪಿಜಿ ದರ ಏರಿಕೆ: ಎಲ್ಲಿದ್ದೀಯಕ್ಕಾ ಸ್ಮೃತಿ ಇರಾನಿ? ಎಂದು ಆಪ್​​ ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ

ಎಲ್‍ಪಿಜಿ ದರ ಏರಿಕೆ: ಎಲ್ಲಿದ್ದೀಯಕ್ಕಾ ಸ್ಮೃತಿ ಇರಾನಿ? ಎಂದು ಆಪ್​​ ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ

ಎಲ್​​​ಪಿಜಿ ದರ ಏರಿಕೆ ಖಂಡಿಸಿ ಪ್ರತಿಭಟನೆ

ಎಲ್​​​ಪಿಜಿ ದರ ಏರಿಕೆ ಖಂಡಿಸಿ ಪ್ರತಿಭಟನೆ

ತರಕಾರಿ, ದಿನಸಿ ಸಾಮಗ್ರಿಗಳ ಬೆಲೆಗಳು ಗಗನಕ್ಕೇರುತ್ತಿವೆ. ಬೆಲೆ ಏರಿಕೆಯನ್ನು ನಿಯಂತ್ರಣ ಮಾಡುವ ಇಚ್ಛಾಶಕ್ತಿ ಕೇಂದ್ರ ಸರ್ಕಾರಕ್ಕೆ ಇದ್ದಂತಿಲ್ಲ. ಸಗಟುಬೆಲೆ ಹಣದುಬ್ಬರ ಶೇ. 1.92ರಷ್ಟು ಹೆಚ್ಚಾಗಿದೆ ಎನ್ನುತ್ತಾರೆ ಮೋಹನ್​​ ದಾಸರಿ.

  • Share this:

ಬೆಂಗಳೂರು(ಫೆ.18): ಅಡುಗೆ ಅನಿಲ ದರ ಏರಿಕೆ ಖಂಡಿಸಿ ಕರ್ನಾಟಕ ಆಮ್​​​ ಆದ್ಮಿ ಪಕ್ಷವೂ ವಿನೂತನ ಪ್ರತಿಭಟನೆ ಹಮ್ಮಿಕೊಂಡಿತು. ಇಂದು ನಗರದ ಟೌನ್​​ಹಾಲ್ ಮುಂಭಾಗ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಆಪ್​​​​​​ ಕಾರ್ಯಕರ್ತರು, ಸಿಲಿಂಡರ್ ಶ್ರಾದ್ಧ ಕಾರ್ಯ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಜತೆಗೆ ಸಿಲಿಂಡರ್ ಉರುಳು ಸೇವೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ ಆಪ್​​​ ಕಾರ್ಯಕರ್ತರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಿಡಿಕಾರಿದರು. ನಿರ್ಮಲಾ ಸೀತಾರಾಮನ್​​ ಭಾರತದ ಆರ್ಥಿಕತೆ ಮುಗಿಸಿದರು. ಅಡುಗೆ ಅನಿಲ ಎಲ್‍ಪಿಜಿ ದರದಲ್ಲಿ ಭಾರೀ ಏರಿಕೆ ಕಂಡಿದೆ. ಪ್ರತಿ ಸಿಲಿಂಡರ್​​​ ಬೆಲೆ 144.5 ರೂ. ಹೆಚ್ಚಳವಾಗಿದೆ. ಇಷ್ಟಾದರೂ ನೀವ್ಯಾಕೆ ಬಾಯಿಬಿಡುತ್ತಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಪ್ರಶ್ನಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿಎಲ್​​ಪಿಜಿ ಸಿಲಿಂಡರ್‌ ದರ ಏರಿಕೆಯಾಗಿದ್ದರ ವಿರುದ್ಧ ಅಂದು ಬಿಜೆಪಿ ನಾಯಕಿ ಸ್ಮೃತಿ ಇರಾನಿ ಪ್ರತಿಭಟಿಸಿದ್ದರು. ಈಗ ಎಲ್ಲಿದ್ದೀರಿ? ಎಂದು ಪ್ರತಿಭಟನಾಕಾರರು ಸ್ಮೃತಿ ಇರಾನಿ ವಿರುದ್ಧ ಕೆಂಡಕಾರಿದರು.

ಇನ್ನು, ಪ್ರತಿಭಟನೆಯನ್ನುದ್ದೇಶಿಸಿ ಮಾತಾಡಿದ ಆಪ್​​ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿಯವರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದುವರೆಗೂ ಆರು ಬಾರಿ ಎಲ್​​ಪಿಜಿ ಸಿಲಿಂಡರ್​​ ದರ ಏರಿಕೆಯಾಗಿದೆ. ಇತ್ತೀಚೆಗಂತೂ ಫೆಬ್ರವರಿ 12ನೇ ತಾರೀಕು ಒಂದೇ ಬಾರಿಗೆ 144.5 ರೂ ಏರಿಕೆ ಮಾಡಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಸಬ್ಸಿಡಿ ಕೊಡುತ್ತಿದ್ದೇವೆ ಎಂಬ ವಿತಂಡ ವಾದ ಮುಂದಿಟ್ಟು ಕೇಂದ್ರ ನುಣುಚಿಕೊಳ್ಳುವ ಖಯಾಲಿಯಲ್ಲಿ ತೊಡಗಿಕೊಂಡಿದೆ ಎಂದರು.

ಸರ್ಕಾರ ನೀಡುವ ಸಬ್ಸಿಡಿ ಹಣ ಜನರ ತೆರಿಗೆ ಹಣವೇ ಎಂಬುದನ್ನು ಕೇಂದ್ರ ಸರ್ಕಾರ ಮರೆತಂತಿದೆ. ಸಬ್ಸಿಡಿಯಿಂದ ಜನರಿಗೆ ಉಪಯೋಗವಾಗುತ್ತಿದೆ. ಆದರೀಗ ಬೆಲೆ ಹೆಚ್ಚಳ ಮಾಡುವ ಸಬ್ಸಿಡಿಯನ್ನು ಖಾಸಗಿ ಒಡೆತನದ ಮಾಲೀಕರ ಖಜಾನೆ ತುಂಬುವಂತೆ ಮಾಡಲಾಗುತ್ತಿದೆ. ಇದರಿಂದ ದೇಶದ ಆರ್ಥಿಕತೆಗೆ ಯಾವ ಉಪಯೋಗವೂ ಇಲ್ಲದಂತಾಗಿದೆ ಎಂದು ಹೇಳಿದರು.

ಇದನ್ನೂ ಓದಿ: LPG Cylinder Price: ಗ್ರಾಹಕರಿಗೆ ಕಹಿಸುದ್ದಿ; ಇಂದಿನಿಂದ ಎಲ್​ಪಿಜಿ ಸಿಲಿಂಡರ್ ಬೆಲೆ ಭಾರೀ ಹೆಚ್ಚಳ

2014ರಲ್ಲಿ ಯುಪಿಎ ಸರ್ಕಾರ LPG ಬೆಲೆ ಕೇವಲ 11 ರೂ. ಏರಿಕೆ ಮಾಡಿದ್ದಾಗ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬೀದಿಗಿಳಿದು ಪ್ರತಿಭಟಿಸಿದ್ದರು. ಅಂದು ಸರಣಿ ಹೋರಾಟಗಳನ್ನು ಮಾಡಿದ್ದ ಸ್ಮೃತಿ ಇರಾನಿ ಇಂದು ಕಾಣೆಯಾಗಿದ್ಧಾರೆ. ಇವರದ್ದೇ ಸರ್ಕಾರ ಈಗ ಪ್ರತಿ ಸಿಲಿಂಡರ್​​​ ಬೆಲೆ 144.5 ರೂ.ನಷ್ಟು ಏರಿಕೆ ಮಾಡಿದೆ. ಆದರೆ, ಇದರ ವಿರುದ್ಧ ಸ್ಮೃತಿ ಇರಾನಿ ತುಟಿ ಬಿಚ್ಚುತ್ತಿಲ್ಲ. ಎಲ್ಲಿದ್ದೀಯಕ್ಕಾ ಸ್ಮೃತಿ ಇರಾನಿ? ಎಂದು ಹುಡುಕಬೇಕಾಗಿದೆ ಎನ್ನುವ ಮೂಲಕ ಕುಟುಕಿದರು ಮೋಹನ್​​ ದಾಸರಿ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನ ಬಳಕೆಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಲೇ ಇವೆ. ಕಳೆದ ಮೂರು-ನಾಲ್ಕು ತಿಂಗಳಲ್ಲಿ ಏರಿಕೆಯಾಗಿದ್ದ ಈರುಳ್ಳಿ ಬೆಲೆ ಸುಧಾರಿಸಿಲ್ಲ. ಅದಕ್ಕೂ ಪರಿಹಾರ ಹುಡುಕದೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಾನು ಈರುಳ್ಳಿ ತಿನ್ನುವುದಿಲ್ಲ ಎನ್ನುತ್ತಾರೆ. ಹಾಗೆಯೇ ಬೆಲೆ ಏರಿಕೆ ಇಂದ ನನಗೇನು ಸಮಸ್ಯೆ ಇಲ್ಲ” ಎಂಬರ್ಥದ ಬೇಜವಾಬ್ದಾರಿ ಹೇಳಿಕೆಯನ್ನು ಸಂಸತ್​​ನಲ್ಲೇ ನೀಡುತ್ತಾರೆ ಎಂದರು.

ರಾಜ್ಯ ಸರ್ಕಾರವು ಹಾಲಿನ ಬೆಲೆ ಹೆಚ್ಚಳ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದೆ, ಇದೇ ಸಂದರ್ಭದಲ್ಲಿ ಕೆಎಸ್​ಆರ್​​ಟಿಸಿ ಮತ್ತು ಬಿಎಂಟಿಸಿ ಪ್ರಯಾಣ ದರವನ್ನು ಹೆಚ್ಚಿಸುವುದಾಗಿ ರಾಜ್ಯ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಎಲ್​​ಪಿಜಿ ಬೆಲೆ ಹೆಚ್ಚಿಸಿ ಈಗಾಗಲೇ ಸಂಕಷ್ಟದಲ್ಲಿರುವ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಖ್ಯ ಉದ್ದೇಶವೇ ದೇಶದ ಜನರನ್ನು ತನ್ನ ದುರಾಡಳಿತದಿಂದ ಹೈರಾಣಾಗುವಂತೆ ಮಾಡುವುದಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಗ್ರಾಹಕರಿಗೆ ಕಹಿ ಸುದ್ದಿ; ಇಂದಿನಿಂದ ಸಬ್ಸಿಡಿ ರಹಿತ ಎಲ್​ಪಿಜಿ ಗ್ಯಾಸ್​ ದರದಲ್ಲಿ ಏರಿಕೆ

ತರಕಾರಿ, ದಿನಸಿ ಸಾಮಗ್ರಿಗಳ ಬೆಲೆಗಳು ಗಗನಕ್ಕೇರುತ್ತಿವೆ. ಬೆಲೆ ಏರಿಕೆಯನ್ನು ನಿಯಂತ್ರಣ ಮಾಡುವ ಇಚ್ಛಾಶಕ್ತಿ ಕೇಂದ್ರ ಸರ್ಕಾರಕ್ಕೆ ಇದ್ದಂತಿಲ್ಲ. ಸಗಟುಬೆಲೆ ಹಣದುಬ್ಬರ ಶೇ. 1.92ರಷ್ಟು ಹೆಚ್ಚಾಗಿದೆ ಎನ್ನುತ್ತಾರೆ ಮೋಹನ್​​ ದಾಸರಿ.

ಜನರ ಬದುಕನ್ನು ಅಸ್ತವ್ಯಸ್ತಗೊಳಿಸುವಂತ ಹತ್ತಾರು ಸಮಸ್ಯೆಗಳು ದೇಶದಲ್ಲಿದ್ದರೂ, ರಾಜ್ಯ ಮತ್ತು ಕೇಂದ್ರ ಸರ್ಕಾರ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ಜನಸಾಮಾನ್ಯರ ಕಿಸೆಗೆ ಕನ್ನ ಹಾಕುತ್ತಿವೆ. ದಿನ ಬಳಕೆ ಸಾಮಗ್ರಿಗಳ ಮೇಲಿನ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಬಡವರು ಮತ್ತು ಸಾಮಾನ್ಯ ಜನ ಖರೀದಿ ಮಾಡಬಹುದಾದ ಹಂತಕ್ಕೆ ದಿನೋಪಯೋಗಿ ವಸ್ತುಗಳ ಬೆಲೆ ಇಳಿಸಬೇಕು. ಆರ್ಥಿಕತೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಅಗತ್ಯವಿರುವ ಯೋಜನೆಗಳನ್ನು ರೂಪಿಸಬೇಕು ಎಂದು ರಾಜ್ಯ ಆಪ್​ ಉಸ್ತುವಾರಿ ವಿ. ಲಕ್ಷ್ಮೀಕಾಂತ್ ರಾವ್ ಆಗ್ರಹಿಸಿದರು.

ಇನ್ನು, ಪ್ರತಿಭಟನೆಯಲ್ಲಿ ಆಪ್​​ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಆಪ್​​ ಮುಖಂಡರಾದ ರೇಣುಕಾ ವಿಶ್ವನಾಥನ್,  ಲಕ್ಷ್ಮೀಕಾಂತ್ ರಾವ್, ಚನ್ನಪ್ಪ ನಲ್ಲೂರು, ಜಗದೀಶ್ ಚಂದ್ರ, ಆಯುಬ್ ಖಾನ್ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

First published: