ಮುಂದುವರೆದ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಗೊಂದಲ; ದಿನೇಶ್​ ಗುಂಡೂರಾವ್​ ಜೊತೆ ಚರ್ಚೆ ನಡೆಸಿದ ಹೈ ಕಮಾಂಡ್​​

ಭೇಟಿ ವೇಳೆ ತಮ್ಮ ರಾಜೀನಾಮೆ ಅಂಗೀಕಾರದಲ್ಲಿ ಆಗುತ್ತಿರುವ ವಿಳಂಬ ಹಾಗೂ ನೂತನ ಅಧ್ಯಕ್ಷರ ನೇಮಕಕ್ಕೆ ನಡೆಯುತ್ತಿರುವ ತೊಡಕುಗಳ ಬಗ್ಗೆ ಕೂಡ ದಿನೇಶ್​ ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ. 

ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್

  • Share this:
ಬೆಂಗಳೂರು (ಫೆ.20): ಉಪಚುನಾವಣೆ ಸೋಲಿನ ಹೊಣೆ  ಹೊತ್ತು ಕಾಂಗ್ರೆಸ್​ ನಾಯಕ ದಿನೇಶ್​ ಗುಂಡೂರಾವ್​  ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮೂರು ತಿಂಗಳಾಗಿದೆ. ಇಷ್ಟು ದಿನ ಕಳೆದರೂ ಹೊಸ ಅಧ್ಯಕ್ಷರ ನೇಮಕಕ್ಕೆ  ಹೈ ಕಮಾಂಡ್​  ಹಸಿರು ನಿಶಾನೆ ತೋರುತ್ತಿಲ್ಲ. ಇವೆಲ್ಲದರಿಂದ ಗೊಂದಲಕ್ಕೆ ಒಳಗಾಗಿರುವ ದಿನೇಶ್​ ಗುಂಡೂರಾವ್​ ಇಂದು ಖುದ್ದು  ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದು, ಈ ಕುರಿತು ಚರ್ಚೆ ನಡೆಸಿದರು. 

ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ  ಮೂಡಿರುವ ಗೊಂದಲಗಳು ಬಗೆಹರಿಯದ ಕಾರಣ ದಿನೇಶ್​ ಗುಂಡೂರಾವ್​ ಅವರಿಗೆ ದೆಹಲಿಗೆ ಬರಲು ಹೇಳುವಂತೆ ರಾಜ್ಯ ಉಸ್ತುವಾರಿ ವೇಣುಗೋಪಾಲ್​ಗೆ ಸೋನಿಯಾ ಗಾಂಧಿ ಸೂಚಿಸಿದ್ದರು. ಅದರಂತೆ ಇಂದು ದಿನೇಶ್​ ಗುಂಡೂರಾವ್​ ಭೇಟಿಯಾಗಿದ್ದು, ಈ ಕುರಿತು ಚರ್ಚೆ ನಡೆಸಿದ್ದಾರೆ.

ಈ ವೇಳೆ ತಮ್ಮ ರಾಜೀನಾಮೆ ಅಂಗೀಕಾರದಲ್ಲಿ ಆಗುತ್ತಿರುವ ವಿಳಂಬ ಹಾಗೂ ನೂತನ ಅಧ್ಯಕ್ಷರ ನೇಮಕಕ್ಕೆ ಆಗುತ್ತಿರುವ ತೊಡಕುಗಳ ಬಗ್ಗೆ ಕೂಡ ದಿನೇಶ್​ ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ.

ಭೇಟಿಗೆ ಮುನ್ನ ಮಾತನಾಡಿದ ದಿನೇಶ್​ ಗುಂಡೂರಾವ್​, "ನನ್ನ ರಾಜೀನಾಮೆ ಅಂಗೀಕಾರವಾಗಿದೆಯೋ ಇಲ್ಲವೋ ಎಂಬ ಬಗ್ಗೆ ಗೊತ್ತಿಲ್ಲ. ಹುದ್ದೆ ಆಯ್ಕೆಯಲ್ಲಿನ ವಿಳಂಬ ಸರಿಯಲ್ಲ.  ಈ ಬಗ್ಗೆ ಸೋನಿಯಾರನ್ನು ಭೇಟಿಯಾಗುತ್ತಿದ್ದೇನೆ. ಕಾಂಗ್ರೆಸ ಪಕ್ಷದಲ್ಲಿ ಯಾವ ಬಣವೂ ಇಲ್ಲ. ನಮಗೆ ಜನ ಬೆಂಬಲ ಇದೆ. ನಾನು ಅಧ್ಯಕ್ಷರ ಕುರ್ಚಿಯಲ್ಲಿ ಕೂರುತ್ತಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ," ಎಂದರು.

ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಪೈಪೋಟಿ ನಡೆಯುತ್ತಿದೆ. ಎಂಬಿ ಪಾಟೀಲ್​ ಹಾಗೂ ಡಿಕೆ ಶಿವಕುಮಾರ್​ ಈ ಸ್ಪರ್ಧೆಯಲ್ಲಿದ್ದು, ಯಾರಿಗೆ ಈ ಹುದ್ದೆ ನೀಡಬೇಕು ಎಂಬ ಗೊಂದಲದಲ್ಲಿ ಹೈ ಕಮಾಂಡ್​ ಮುಳುಗಿದೆ. ಈಗಾಗಲೇ ಈ ಕುರಿತು ರಾಜ್ಯ ನಾಯಕರೊಂದಿಗೆ ಹಲವು ಬಾರಿ ಚರ್ಚೆ ನಡೆಸಲಾಗಿದೆ.  ಈ ಹಿನ್ನೆಲೆ ಹಾಲಿ ಅಧ್ಯಕ್ಷ ಸ್ಥಾನದಲ್ಲಿಯೇ ಮುಂದುವರೆಯುತ್ತಿರುವ ದಿನೇಶ್​ ಗುಂಡೂರಾವ್​ ಜೊತೆ ರಾಜ್ಯ ರಾಜಕೀಯ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಕವಿ ಸಿರಾಜ್​ ಬಿಸರಳ್ಳಿ ಬಂಧನ ಖಂಡಿಸಿ ಸದನದಲ್ಲಿ ಅವರ ಕವಿತೆ ಓದಿದ ಎಚ್​ಡಿಕೆ

ಇನ್ನು ಭೇಟಿ ಬಳಿಕ ಮಾತನಾಡಿದ ಗುಂಡೂರಾವ್​,  "ಸೋನಿಯಾ ಗಾಂಧಿ ಜೊತೆಗೆ ಉತ್ತಮ ಚರ್ಚೆಯಾಗಿದ್ದು, ಶೀಘ್ರವೇ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡೊ ಎಂದು ತಿಳಿಸಿದ್ದೇನೆ. ಇದರೊಂದಿಗೆ ಕಾರ್ಯಕರ್ತರಲ್ಲಿರುವ ಗೊಂದಲ ನಿವಾರಣೆ ಮಾಡುವಂತೆ ಕೇಳಿಕೊಂಡಿದ್ದೇನೆ. ಎನೇನೂ ಚರ್ಚೆ ಆಗಿದೆ ಎಂಬುದನ್ನು ಮಾಧ್ಯಮಗಳಿಗೆ ತಿಳಿಸಲು ಸಾಧ್ಯವಿಲ್ಲ," ಎಂದು ತಿಳಿಸಿದರು.
First published: