ಮಂಡ್ಯ (ಮಾ. 1): ಎರಡು ವಾರದ ಹಿಂದೆ ಮಂಡ್ಯದ ಸೀತಾಪುರ ಗ್ರಾಮದ ಡಿಪ್ಲೊಮಾ ವಿದ್ಯಾರ್ಥಿಯೊಬ್ಬನ ಮರ್ಮಾಂಗವನ್ನು ಕತ್ತರಿಸಿದ್ದ ಪ್ರಕರಣ ಸುತ್ತಮುತ್ತಲಿನ ಜನರನ್ನು ಬೆಚ್ಚಿಬೀಳಿಸಿತ್ತು. ಯಾರೋ ದುಷ್ಕರ್ಮಿಗಳು ಆತನನ್ನು ಅಪಹರಿಸಿ, ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ಮೂಡಿತ್ತು. ಆದರೆ, ಆ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದ್ದು, ಸಲಿಂಗಿಯಾಗಿದ್ದ ವ್ಯಕ್ತಿಯ ಒತ್ತಾಯದಿಂದ ಆ ವಿದ್ಯಾರ್ಥಿಯೇ ತನ್ನ ಮರ್ಮಾಂಗ ಕತ್ತರಿಸಿಕೊಂಡಿದ್ದ ಎಂಬ ಸತ್ಯ ಹೊರಬಿದ್ದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ಪಾಂಡವಪುರ ತಾಲ್ಲೂಕು, ಸೀತಾಪುರ ಗ್ರಾಮದ ಸುನಿಲ್ ಕುಮಾರ್ ಅಲಿಯಾಸ್ ಸುನೀ ಗುಡ್ಡಪ್ಪ ಎಂಬ 28 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಸಲಿಂಗಕಾಮಕ್ಕೆ ಪ್ರಚೋದನೆ ನೀಡಿ, ಅಪ್ರಾಪ್ತ ಬಾಲಕ ತನ್ನ ಮರ್ಮಾಂಗವನ್ನು ಕತ್ತರಿಸಿಕೊಳ್ಳಲು ಪುಸಲಾಯಿಸಿದ್ದ ಎಂಬ ವಿಷಯ ಬಯಲಾಗಿದೆ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರಿಂದ ಪ್ರಕರಣದ ಆರೋಪಿ ಸುನಿಲ್ನನ್ನು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕ ದರ್ಶನ್ ನೀಡಿದ ಹೇಳಿಕೆ ಆಧರಿಸಿ ಸುನಿಲ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕೂಡ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತ ಸುನಿಲ್ ಕುಮಾರ್ ಸಲಿಂಗಕಾಮಿಯಾಗಿದ್ದು ಪ್ರತಿ ಶುಕ್ರವಾರ 17 ವರ್ಷದ ಬಾಲಕ ದರ್ಶನ್ ಜೊತೆ ದೇವಾಲಯಗಳಿಗೆ ತೆರಳುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಪ್ರೀತಿಸಲು ನಿರಾಕರಿಸಿದ್ದಕ್ಕೆ ಶೂಟ್ ಮಾಡಿದ; ಕೊಲೆ ಪ್ರಯತ್ನದ ರಹಸ್ಯ ಬಿಚ್ಚಿಟ್ಟ ಬೆಂಗಳೂರು ಯುವತಿ ಶುಭಶ್ರೀ
ತನ್ನ ಮೈಮೇಲೆ ದೇವರು ಬರುತ್ತದೆ ಎಂದು ದರ್ಶನ್ನನ್ನು ನಂಬಿಸಿದ್ದ ಸುನಿಲ್ ಕುಮಾರ್, ಮುಂದೆ ಮದುವೆ ಮಾಡಿಕೊಳ್ಳದೇ ತನ್ನ ಜತೆಯಲ್ಲೇ ಇರಬೇಕು ಎಂದು ಹೆದರಿಸಿದ್ದ. ಮರ್ಮಾಂಗ ಕತ್ತರಿಸಿಕೊಂಡರೆ ಬಾಲಕನಿಗೆ ಮನೆಯವರು ಮದುವೆ ಮಾಡುವುದಿಲ್ಲ. ಹೀಗಾಗಿ, ನಿನ್ನ ಮರ್ಮಾಂಗವನ್ನು ಕತ್ತರಿಸಿಕೋ ಎಂದು ಸುನಿಲ್ ಹೇಳಿದ್ದ. ಆತನ ಮಾತಿನಂತೆ ದರ್ಶನ್ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದ. ಫೆ.14ರಂದು ಪಾಂಡವಪುರದ ಸೀತಾಪುರ ಗ್ರಾಮದ ಬಳಿ ಈ ಘಟನೆ ನಡೆದಿತ್ತು.ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕೆ.ಆರ್. ಪೇಟೆ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ದರ್ಶನ್ನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು.
ಸುಳ್ಳಿನ ಕತೆ ಕಟ್ಟಿದ್ದ ಬಾಲಕ:
ಇದನ್ನು ತಾನೇ ಮಾಡಿಕೊಂಡೆ ಎಂದು ಹೇಳಿದರೆ ಮನೆಯಲ್ಲಿ ಹೊಡೆಯುತ್ತಾರೆಂದು ಹೆದರಿದ್ದ ದರ್ಶನ್, ಬೆಳಿಗ್ಗೆ 9 ಗಂಟೆಗೆ ಕಾಲೇಜಿಗೆ ಹೋಗಲು ಬಸ್ಗಾಗಿ ಅರಳುಕುಪ್ಪೆ ಬಳಿ ಸೀತಾಪುರ ಕ್ರಾಸ್ನಲ್ಲಿ ಕಾಯುತ್ತಿದ್ದೆ. ಆಗ ಕಾರಿನಲ್ಲಿ ಬಂದ ಯುವಕರ ಗುಂಪು ಕಾಲೇಜಿಗೆ ಡ್ರಾಪ್ ಕೊಡುವುದಾಗಿ ಹೇಳಿ ಕಾರು ಹತ್ತಿಸಿಕೊಂಡರು. ನಂತರ ಮಾರ್ಗ ಮಧ್ಯೆಯೇ ನನ್ನ ಮೇಲೆ ಹಲ್ಲೆ ಮಾಡಿ ಮರ್ಮಾಂಗವನ್ನು ಕಟ್ ಮಾಡಿದರು. ನಾನು ಕೂಗಿಕೊಳ್ಳುತ್ತಿದ್ದಂತೆ ದಾರಿ ಮಧ್ಯೆಯೇ ಕಾರ್ನಿಂದ ಹೊರತಳ್ಳಿ ಪರಾರಿಯಾದರು ಎಂದು ಹೇಳಿಕೆ ನೀಡಿದ್ದ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಗಳಮುಖಿಯ ಬರ್ಬರ ಕೊಲೆ; ಪ್ರಿಯಕರನಿಂದಲೇ ಹತ್ಯೆ?
ಈ ಪ್ರಕರಣದ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣದ ಸತ್ಯಾಂಶ ಬಯಲಾಗಿದೆ. ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು. ಈ ತಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ದರ್ಶನ್ನನ್ನು ವಿಚಾರಣೆ ಮಾಡಿದಾಗ ಆತ ಸತ್ಯ ಸಂಗತಿ ತಿಳಿಸಿದ್ದ. ಆತ ನೀಡಿದ ಹೇಳಿಕೆ ಆಧಾರದಲ್ಲಿ ಸುನಿಲ್ ಕುಮಾರ್ನನ್ನು ಬಂಧಿಸಲಾಗಿದೆ.
ದರ್ಶನ್ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಸುನಿಲ್ ಕುಮಾರ್ ಆತನ ಮೈ, ಎದೆ, ಮರ್ಮಾಂಗವನ್ನು ಮುಟ್ಟುತ್ತಿದ್ದ. ಆತನ ಮರ್ಮಾಂಗ ಕತ್ತರಿಸಿಕೊಳ್ಳಲು ತಾನೇ ಚಾಕುವನ್ನು ಕೊಟ್ಟಿದ್ದ. ಸ್ವಲ್ಪ ರಕ್ತ ಬರುತ್ತದೆ, ಗಾಯ ಬೇಗ ವಾಸಿಯಾಗುತ್ತದೆ ಎಂದು ಪುಸಲಾಯಿಸಿದ್ದ. ನಂತರ ಈ ಘಟನೆ ಬಗ್ಗೆ ಮನೆಯವರಿಗೆ ಹೇಳಬೇಡ ಎಂದೂ ಹೆದರಿಸಿದ್ದ. ಈ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಸುನಿಲ್ ಕುಮಾರ್ನನ್ನು ಬಂಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ