ದೆಹಲಿ, ಮಂಗಳೂರು ಗಲಭೆ ಹಿಂದೆ ಕಾಂಗ್ರೆಸ್ ಕೈವಾಡ; ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ

ದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ಹಿಂಸಾಚಾರ ಮತ್ತು ಈ ಹಿಂದೆ ಮಂಗಳೂರಿನಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆಯ ಹಿಂದಿನ ಮಾಸ್ಟರ್​ ಮೈಂಡ್​ ಕಾಂಗ್ರೆಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ
ನಳಿನ್​ ಕುಮಾರ್ ಕಟೀಲ್.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್.

 • Share this:
  ಗದಗ (ಫೆ. 28): ನವದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ಹಿಂಸಾಚಾರದಲ್ಲಿ 38 ಜನರು ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಈ ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.

  ದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ಹಿಂಸಾಚಾರ ಮತ್ತು ಈ ಹಿಂದೆ ಮಂಗಳೂರಿನಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆಯ ಹಿಂದಿನ ಮಾಸ್ಟರ್​ ಮೈಂಡ್​ ಕಾಂಗ್ರೆಸ್. ಮಂಗಳೂರು ಹಾಗೂ ದೆಹಲಿ ಗಲಭೆಗೆ ಕಾಂಗ್ರೆಸ್ ಪಕ್ಷವೇ ಕಾರಣ. ಗಲಭೆಯ ಹಿಂದೆ ಎಸ್​ಡಿಪಿಐ ಹಾಗೂ ಪಿಎಫ್​ಐ ಸಂಘಟನೆಗಳು ಇರುವುದು ಪೊಲೀಸ್ ಇಲಾಖೆಯಿಂದ ಬಹಿರಂಗವಾಗಿದೆ. ದೆಹಲಿಯ ಗಲಭೆಯ ಹಿಂದೆ ಈ ಸಂಘಟನೆಗಳು ಹಾಗೂ ಕಾಂಗ್ರೆಸ್ ಕೈವಾಡವಿದೆ. ಈ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಗದಗದಲ್ಲಿ ನಳಿನ್ ಕುಮಾರ್ ಕಟೀಲ್ ಆಗ್ರಹ ಮಾಡಿದ್ದಾರೆ.

  ದೆಹಲಿಯಲ್ಲಿ 2 ತಿಂಗಳಿಂದ ಸಿಎಎ ಮತ್ತು ಎನ್​ಆರ್​ಸಿ ವಿರೋಧಿ ಹೋರಾಟ ನಡೆದಿವೆ. ಆದರೆ, ಇದುವರೆಗೂ ಗಲಭೆ ಆಗಿರಲಿಲ್ಲ. ಅಮೇರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬರುವ ವೇಳೆ ಗಲಭೆ ಯಾಕೆ ಜೋರಾಯಿತು? ಶಾಂತಿಯುತ ಪ್ರತಿಭಟನೆ ಮಾಡುವವರ ಮಧ್ಯೆ ಹೇಗೆ ಪಿಸ್ತೂಲ್, ಕಲ್ಲುಗಳು, ಶಸ್ತ್ರಾಸ್ತ್ರಗಳು ಬಂದವು? ಇದರ ಹಿಂದೆ ಕಾಂಗ್ರೆಸ್​ನ ಮಾಸ್ಟರ್ ಮೈಂಡ್ ಇದೆ ಎಂದು ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.

  ಇದನ್ನೂ ಓದಿ: ದೆಹಲಿ ಹಿಂಸಾಚಾರ: ಎಎಪಿ ಕಾರ್ಪೋರೇಟರ್​​​​​​ ವಿರುದ್ಧ ಕೊಲೆ ಪ್ರಕರಣ; ತಾಹೀರ್ ಪಕ್ಷದಿಂದ ಉಚ್ಛಾಟನೆ

  ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಕಾಂಗ್ರೆಸ್ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ. 2014ರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷದ ನಾಯಕರಿಗೆ ಬೀದಿಗೆ ಇಳಿದು ಗಲಭೆ ಮಾಡಲು ಅವಕಾಶವಿಲ್ಲ. ಅವರಿಗೆ ಮೋದಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಯಾವುದೇ ಕಾರಣ ಸಿಕ್ಕಿರಲಿಲ್ಲ. ಜಮ್ಮು ಕಾಶ್ಮೀರ ಹಾಗೂ ಅಯೋಧ್ಯೆ ವಿಷಯದಲ್ಲಿ ಜನರು ದೇಶದ ಪರವಾಗಿ ನಿಂತರು. ಪೌರತ್ವ ಕಾಯ್ದೆ ತಿದ್ದುಪಡಿ ವಿಷಯ ಬಂದಾಗ ಅದರ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ನಾಯಕರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ನಳಿನ್ ಕುಮಾರ್ ಟೀಕಿಸಿದ್ದಾರೆ.

  ಇದನ್ನೂ ಓದಿ: ಕೆರೆ ಒತ್ತುವರಿ ಪ್ರಕರಣ; ಶೀಘ್ರವೇ ನೆಲಕ್ಕುರುಳುತ್ತಾ ಮಂತ್ರಿ ಮಾಲ್ ಕಟ್ಟಡ?

  ಕಾಂಗ್ರೆಸ್ ಬೆಂಕಿ ಹಾಕಿರೋದು ಕೇವಲ ಈ ರಾಷ್ಟ್ರದ ವಸ್ತುವಿಗಲ್ಲ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಯೋಚನೆಗಳಿಗೆ ಬೆಂಕಿ ಹಾಕಿದಂತಾಗಿದೆ. ಕಾಂಗ್ರೆಸ್ ಬೆಂಕಿ ಹಾಕಿರೋದು ತಮ್ಮದೇ ಪಕ್ಷದ ಹಿರಿಯ ನಾಯಕರ ವಿಚಾರಧಾರೆಗಳಿಗೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಪಾಕ್ತಿಸಾನದಿಂದ ಬಂದ ಅಲ್ಪಸಂಖ್ಯಾತರಿಗೆ ಮೊದಲ ಪೌರತ್ವ ನೀಡಬೇಕು ಅಂತ ಗಾಂಧೀಜಿಯೇ ಹೇಳಿದ್ದರು. ಅದನ್ನು ಕಾಂಗ್ರೆಸ್ ಪಕ್ಷ ಮಾಡಲಿಲ್ಲ. ಅಂದು ಬಾಂಗ್ಲಾದೇಶದಿಂದ ಬಂದವರಿಗೆ ಪೌರತ್ವ ನೀಡಬೇಕು ಅಂತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇಳಿದ್ದರು. ಅದಕ್ಕೂ ಕಾಂಗ್ರೆಸ್ ನ್ಯಾಯ ಕೊಟ್ಟಿಲ್ಲ. 2002ರಲ್ಲಿ ವಾಜಪೇಯಿ ಸರ್ಕಾರ ಇದ್ದಾಗ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವಂತೆ ಮನಮೋಹನ್ ಸಿಂಗ್ ಒತ್ತಾಯ ಮಾಡಿದ್ದರು ಎಂದು ನಳಿನ್ ಕುಮಾರ್ ಹೇಳಿದ್ದಾರೆ.

  ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಅವರ ವಿಚಾರಧಾರೆಗಳಿಗೆ ಮನ್ನಣೆ ನೀಡಿದ್ದು ಮೋದಿ ಸರ್ಕಾರ. ಸಿಎಎಯನ್ನು ವಿರೋಧಿಸುವ ಮೂಲಕ ಈ ಮೂವರು ನಾಯಕರಿಗೆ ಕಾಂಗ್ರೆಸ್ ಅವಮಾನ ಮಾಡಿದೆ. ದೆಹಲಿಯ ಗಲಭೆ ಹಿಂದಿರುವ ಮಾಸ್ಟರ್​ ಮೈಂಡ್​ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ನಳಿನ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

  (ವರದಿ: ಸಂತೋಷ್​ ಕೊಣ್ಣೂರ)
  First published: