ಸಿಎಂ ಬಿಎಸ್​ವೈಗೆ ಮತ್ತೊಂದು ತಲೆನೋವು; ಶೆಟ್ಟರ್​ ಮನೆಯಲ್ಲಿ ರಾತ್ರೋರಾತ್ರಿ ಭಿನ್ನಮತೀಯರ ಸಭೆ

ಸೋಮವಾರ ಮಧ್ಯರಾತ್ರಿಯೇ ಗುಪ್ತಚರ ಇಲಾಖೆ ಮುಖ್ಯಸ್ಥರಿಗೆ ಫೋನ್ ಮಾಡಿರುವ ಸಿಎಂ ಯಡಿಯೂರಪ್ಪ, ಸಭೆಯ ವಿಷಯ ನಿಮಗೆ ಮೊದಲೇ ಯಾಕೆ ಗೊತ್ತಾಗಲಿಲ್ಲ? ಈ ಸಭೆಯಿಂದ ವಿರೋಧ ಪಕ್ಷಗಳಿಗೆ ಟೀಕೆ ಮಾಡಲು ಅವಕಾಶ ಕೊಟ್ಟಂತಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

  • Share this:
ಬೆಂಗಳೂರು (ಫೆ. 18): ಸಂಪುಟ ವಿಸ್ತರಣೆ ವೇಳೆ ವಲಸಿಗ ಶಾಸಕರಿಗೆ ಮಣೆ ಹಾಕಿದ್ದಕ್ಕೆ ಅನೇಕ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಉಂಟಾಗಿತ್ತು. ಹಲವರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದರು. ಸೋಮವಾರ ರಾತ್ರಿ ಕೆಲವು ಅತೃಪ್ತ ಶಾಸಕರು ಸಚಿವ ಜಗದೀಶ್ ಶೆಟ್ಟರ್​ ಮನೆಯಲ್ಲಿ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಸಭೆಯಿಂದ ಸಿಎಂ ಯಡಿಯೂರಪ್ಪನವರ ತಲೆಬಿಸಿ ಹೆಚ್ಚಾಗಿದ್ದು, ಗುಪ್ತಚರ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈಗಾಗಲೇ 10 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ಖಾತೆ ಹಂಚಿಕೆಯೂ ಆಗಿದೆ. ಖಾತೆ ಹಂಚಿಕೆ ವಿಷಯದಲ್ಲೂ ಅಸಮಾಧಾನಗಳು ತಲೆದೋರಿ, ಎರಡೆರಡು ಬಾರಿ ಖಾತೆ ಬದಲಾವಣೆ ಮಾಡಲಾಗಿತ್ತು. ಸಂಪುಟ ವಿಸ್ತರಣೆ ವೇಳೆ 10 ಸಚಿವ ಸ್ಥಾನವನ್ನು ವಲಸಿಗರಿಗೆ ನೀಡಿರುವುದಕ್ಕೆ ಅನೇಕ ಮೂಲ ಬಿಜೆಪಿ ನಾಯಕರ ಕಣ್ಣು ಕೆಂಪಾಗಿತ್ತು. ಸರ್ಕಾರ ರಚನೆಗೆ ಕಾರಣರಾದ ವಲಸಿಗ ಶಾಸಕರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಮೂಲ ಬಿಜೆಪಿಗರ ಅಸಮಾಧಾನಕ್ಕೆ ಕಾರಣರಾಗಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ 50 ವರ್ಷಗಳಿಂದ ಸೂರಿಗಾಗಿ ನಿಲ್ಲದ ವಸತಿ ರಹಿತರ ಹೋರಾಟ; ಜನಪ್ರತಿನಿಧಿಗಳಿಗೆ ಧ್ವನಿ ಕೇಳುವುದೆಂದೋ?

ನಿನ್ನೆ ನಡೆದ ಸಭೆಯಲ್ಲಿ ಸಚಿವ ಸ್ಥಾನ ನೀಡುವಾಗ ಪ್ರದೇಶವಾರು, ಜಾತಿವಾರು ಮನ್ನಣೆ ನೀಡಿಲ್ಲ ಎಂಬ ಬೇಸರ ವ್ಯಕ್ತವಾಗಿದೆ. ಉಮೇಶ್ ಕತ್ತಿ, ಮುರುಗೇಶ ನಿರಾಣಿ, ರಾಜೂಗೌಡ, ಎ.ಎಸ್​. ಪಾಟೀಲ್, ಬಸನಗೌಡ ಪಾಟೀಲ ಯತ್ನಾಳ್​ ಸೇರಿದಂತೆ ಇನ್ನೂ ಕೆಲವು ಶಾಸಕರು ಜಗದೀಶ್ ಶೆಟ್ಟರ್​ ಮನೆಯ  ಸಭೆಯಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸಿಎಂ ಯಡಿಯೂರಪ್ಪನವರ ಮಗ ಬಿ.ವೈ. ವಿಜಯೇಂದ್ರ ವಿರುದ್ಧ ಅಪಸ್ವರ ಕೇಳಿಬಂದಿದೆ ಎನ್ನಲಾಗಿದೆ.

minister Jagadish Shettar
ಸಚಿವ ಜಗದೀಶ್ ಶೆಟ್ಟರ್


ಬಿಜೆಪಿ ಹೈಕಮಾಂಡ್​ಗೆ ಸಿಎಂ ಯಡಿಯೂರಪ್ಪನವರ ಮೇಲಿನ ಅಸಮಾಧಾನದ ಬಗ್ಗೆ ಪತ್ರ ಬರೆಯುವುದು, ಭಿನ್ನಮತೀಯರನ್ನು ಸಚಿವರನ್ನಾಗಿ ಮಾಡದಿದ್ದರೆ ಸಿಎಂ ವಿರುದ್ಧ ದಂಗೇಳುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಮಂಗಳೂರು ಗೋಲಿಬಾರ್​​ ಕೇಸ್​​: ನಾಳೆ ವಿಡಿಯೋ ತುಣುಕು ಮತ್ತು ಸಾಕ್ಷ್ಯ ಸಲ್ಲಿಸಲು ಕೊನೆಯ ಅವಕಾಶ

ಈ ವಿಷಯ ತಿಳಿಯುತ್ತಿದ್ದಂತೆ ಸೋಮವಾರ ಮಧ್ಯರಾತ್ರಿಯೇ ಗುಪ್ತಚರ ಇಲಾಖೆ ಮುಖ್ಯಸ್ಥರಿಗೆ ಫೋನ್ ಮಾಡಿರುವ ಸಿಎಂ ಯಡಿಯೂರಪ್ಪ, ಸಭೆ ನಡೆಯುವ ವಿಷಯ ನಿಮಗೆ ಮೊದಲೇ ಯಾಕೆ ಗೊತ್ತಾಗಲಿಲ್ಲ? ಈ ಬಗ್ಗೆ ಸುಳಿವು ಕೊಟ್ಟಿದ್ದರೆ ಈ ಸಭೆ ನಡೆಯಲು ಅವಕಾಶ ನೀಡುತ್ತಿರಲಿಲ್ಲ. ಈಗ ಅಧಿವೇಶನ ನಡೆಯುತ್ತಿದೆ. ಈ ಸಭೆಯಿಂದ ವಿರೋಧ ಪಕ್ಷಗಳಿಗೆ ಟೀಕೆ ಮಾಡಲು ಅವಕಾಶ ಕೊಟ್ಟಂತಾಯಿತು. ಇನ್ನುಮುಂದೆ ಭಿನ್ನಮತೀಯರ ಮೇಲೆ ಒಂದು ಕಣ್ಣಿಡಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
First published: