ಬೀದರ್​ನಲ್ಲಿ ದುರಸ್ತಿಯಾಗದ ಬ್ಯಾರೇಜ್; ತೆಲಂಗಾಣಕ್ಕೆ ಹರಿಯುತ್ತಿದೆ ಮಾಂಜ್ರಾ ನದಿ ನೀರು

ಕಳೆದೊಂದು ವಾರದಿಂದ ಜಿಲ್ಲೆಯ ಕೆಲವು ಕಡೆಗಳಲ್ಲಿ ಅಲ್ಪ ಸ್ವಲ್ಪ ಮಳೆಯಾಗುತ್ತಿದ್ದದ್ದರ ಪರಿಣಾಮವಾಗಿ ಬೀದರ್ ಜಿಲ್ಲೆಯ ಜೀವನಾಡಿ ಮಾಂಜ್ರಾ ನದಿಗೆ ಸ್ವಲ್ಪ ನೀರು ಬಂದಿದೆ. ಬ್ಯಾರೇಜ್ ದುರಸ್ತಿಯಾಗದಿರುವುದರಿಂದ ಆ ನೀರು ವ್ಯರ್ಥವಾಗಿ ಹರಿದು ತೆಲಂಗಾಣ ರಾಜ್ಯದ ಪಾಲಾಗುತ್ತಿದೆ.

ಮಾಂಜ್ರಾ ನದಿ ಸೇತುವೆ

ಮಾಂಜ್ರಾ ನದಿ ಸೇತುವೆ

  • Share this:
ಬೀದರ್ (ಆ. 30): ಕುಡಿಯುವ ನೀರು, ರೈತರ ಜಮೀನಿಗೆ ನೀರು ಕೊಡುವ ಉದ್ದೇಶದಿಂದ ಬೀದರ್ ತಾಲೂಕಿನ ಜನವಾಡ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗಿತ್ತು. ಮಳೆಗಾಲಕ್ಕೆ ಸಂಗ್ರಹವಾದ ನೀರು ಬೇಸಿಗೆಗೆ ಬಳಕೆಯಾಗಲೆಂಬ ಉದ್ದೇಶದಿಂದ ಕಟ್ಟಿಸಿದ ಬ್ರಿಡ್ಜ್ ಕಂ ಬ್ಯಾರೇಜ್​ನ ಪ್ರತಿದಿನ ಲಕ್ಷಾಂತರ ಲೀಟರ್ ನೀರು ಹರಿದು ತೆಲಂಗಾಣ ಸೇರುತ್ತಿದೆ. ನಾಲ್ಕು ವರ್ಷಗಳ ಹಿಂದೆ ಸುರಿದ ಮಳೆಗೆ ಬ್ಯಾರೇಜ್​ನ ಗೋಡೆ ಒಡೆದುಹೋಗಿದೆ. ಒಡೆದು ಹೋದ ಬ್ಯಾರೇಜ್ ದುರಸ್ತಿಯಾಗದೆ, ಜಿಲ್ಲೆಯ ರೈತರು ಇದೀಗ ಪರದಾಡುವಂತಾಗಿದೆ.

ಬೀದರ್ ಜಿಲ್ಲೆಯ ರೈತರ ಜಮೀನಿಗೆ ನೀರಾವರಿ ಕಲ್ಪಿಸುವ ಉದ್ದೇಶದಿಂದ 1990ರಲ್ಲಿ ಬೃಹತ್ ಬ್ಯಾರೇಜ್ ನಿರ್ಮಾಣ ಮಾಡಲಾಯಿತು. ಈ ಬ್ಯಾರೇಜ್ ನಿರ್ಮಾಣಕ್ಕೆ ಆ ಕಾಲಕ್ಕೆ ಸುಮಾರು 6.50 ಲಕ್ಷ ರೂಪಾಯಿ ವೆಚ್ಚಮಾಡಲಾಗಿತ್ತು. ಆದರೆ ನಾಲ್ಕು ವರ್ಷದ ಹಿಂದೆ ಬೀದರ್ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಬ್ಯಾರೇಜ್ ನಲ್ಲಿ ಹೆಚ್ಚಿಗೆ ನೀರು ಸಂಗ್ರಹವಾಗಿ ಬ್ಯಾರೇಜ್ ನ ಗೇಟ್ ಗಳನ್ನ ಓಪನ್ ಮಾಡದ ಕಾರಣ ಬ್ಯಾರೇಜ್ ಒಡೆದುಹೋಗಿತ್ತು.

Bidar District Manjra River Bridge Damaged.
ಮಾಂಜ್ರಾ ನದಿ ಸೇತುವೆ


ಇಂದಿಗೂ ಒಡೆದು ಹೋದ ಬ್ಯಾರೇಜ್ ದುರಸ್ತಿ ಮಾಡುವ ಕಾರ್ಯಕ್ಕೆ ಜಿಲ್ಲಾಡಳಿತವಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಮುಂದಾಗಿಲ್ಲ. ಇದರಿಂದ ಬೊಂಪಳ್ಳಿ, ಯರನಳ್ಳಿ, ಇಸ್ಲಾಂಪುರ, ಕೌಠಾ, ಸಾಂಗ್ವಿ, ಗೋರ್ಣಾ, ಬೊಂಬಳಗಿ, ಚಂದಾಪುರ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಹಳ್ಳಿಯ ರೈತರು ಬ್ಯಾರೇಜ್ ನಲ್ಲಿ ನೀರು ನಿಲ್ಲದ ಕಾರಣ ಬೆಸಿಗೆ ಕಾಲದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತಾ ಸ್ಥಿತಿ ನಿರ್ಮಾಣವಾಗುತ್ತದೆ.

ಕಳೆದೊಂದು ವಾರದಿಂದ ಜಿಲ್ಲೆಯ ಕೆಲವು ಕಡೆಗಳಲ್ಲಿ ಅಲ್ಪ ಸ್ವಲ್ಪ ಮಳೆಯಾಗುತ್ತಿದ್ದದ್ದರ ಪರಿಣಾಮವಾಗಿ ಬೀದರ್ ಜಿಲ್ಲೆಯ ಜೀವನಾಡಿ ಮಾಂಜ್ರಾ ನದಿಗೆ ಸ್ವಲ್ಪ ನೀರು ಬಂದಿದೆ. ಇದೀಗ ಬ್ಯಾರೇಜ್ ದುರಸ್ತಿಯಾಗದೆ ಇರುವುದರಿಂದ ಅದೇ ನೀರು ವ್ಯರ್ಥವಾಗಿ ಹರಿದು ನೆರೆಯ ತೆಲಂಗಾಣ ರಾಜ್ಯದ ಪಾಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಬೀದರ್ ತಾಲೂಕಿನ ಜನವಾಡ ಬಳಿ ಕಟ್ಟಿಸಲಾಗಿರುವ ಬ್ಯಾರೇಜ್ ಒಂದು ಭಾಗ ಸಂಪೂರ್ಣ ಒಡೆದು ಹೋಗಿದೆ. ಇದರಿಂದ ಮಾಂಜ್ರಾ ನದಿಯ ನೀರು ಒಂದೆಡರು ತಿಂಗಳಲ್ಲಿ ಖಾಲಿಯಾಗಲಿದೆ. ಇದು ಬೇಸಿಗೆಯಲ್ಲಿ ನೀರಿನ ಹಾಹಾಕಾರವನ್ನು ಸೃಷ್ಟಿಸಲಿದೆ.

ಈಗ ನೀರು ಸಂಗ್ರಹಿಸಿದರೆ ಬೀದರ್ ಜಿಲ್ಲೆಯಲ್ಲಿ ಕುಡಿಯುವ ನೀರು, ವ್ಯವಸಾಯಕ್ಕೆ ಬೇಕಾದ ನೀರನ್ನು ಬೇಸಿಗೆಯಲ್ಲಿ ಬಳಸಿಕೊಳ್ಳಬಹುದು. ಆದರೆ, ಗಡಿ ಜಿಲ್ಲೆ ಬೀದರ್ ನಲ್ಲಿ ಮಾತ್ರ ಇಂತಹ ಕೆಲಸವಾಗದೆ ಇದ್ದ ನೀರನ್ನು ನಿಷ್ಕಾಳಜಿಯಿಂದ ಸಂಗ್ರಹಿಸದೆ ಇರುವುದು ಬೇಸಿಗೆಯಲ್ಲಿ ಸಮಸ್ಯೆ ಸೃಷ್ಟಿಸಿರುವುದು ಮಾತ್ರ ವಿಪರ್ಯಾಸ.
Published by:Sushma Chakre
First published: