ಇಂದು ಸಾರಿಗೆ ನೌಕರರ ಮುಷ್ಕರ; ಕೆಎಸ್ಆರ್​ಟಿಸಿ, ಬಿಎಂಟಿಸಿ ಬಸ್​ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

ಪ್ರಯಾಣಿಕರ ಹಿತದೃಷ್ಟಿಯಿಂದ ಕೆಲವರ ರಜೆ ರದ್ದು ಮಾಡಲಾಗಿದೆ. ರಜೆ ಇಲ್ಲದೆ ಇರುವವರು ಮುಷ್ಕರದಲ್ಲಿ ಪಾಲ್ಗೊಂಡರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೆಎಸ್​ಆರ್​ಟಿಸಿ  ಎಂಡಿ ಶಿವಯೋಗಿ ಕಳಸದ್ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಇಂದು ಸಾರಿಗೆ ನೌಕರರು ಧರಣಿ ನಡೆಸಲಿದ್ದಾರೆ. ಬಸ್​ ಚಾಲಕ, ನಿರ್ವಾಹಕ ಮತ್ತು ಇತರೆ ಸಿಬ್ಬಂದಿ ಧರಣಿಯಿಂದಾಗಿ ಬಸ್​ ಓಡಾಟದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಧರಣಿ ನಡೆಸುವ ಸಲುವಾಗಿ ಈಗಾಗಲೇ 10 ಸಾವಿರ ನೌಕರರು ರಜೆ ಅರ್ಜಿ ಸಲ್ಲಿಸಿದ್ದಾರೆ. 

  ಸಾರಿಗೆ ಇಲಾಖೆಯ ನಾಲ್ಕು ನಿಗಮ ಮಂಡಳಿಗಳ ನೌಕರರು ಮತ್ತವರ ಕುಟುಂಬ ವರ್ಗದವರು ಇಂದು ಒಂದು ದಿನ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ನಾಲ್ಕು ನಿಗಮ ಮಂಡಳಿಗಳ ಸುಮಾರು 20 ಸಾವಿರಕ್ಕೂ ಹೆಚ್ಚು ನೌಕರರು ಮತ್ತು ಅವರ ಕುಟುಂಬ ವರ್ಗದವರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

  ಸಾರಿಗೆ ಸಂಸ್ಥೆ ನೌಕರರರು ಹಾಗೂ ನಿಗಮ ಮಂಡಳಿಗಳ ನೌಕರರ ವೇತನದಲ್ಲಿ ಶೇ.60 ವ್ಯತ್ಯಾಸ ಇದೆ. ಸರ್ಕಾರಿ ನೌಕರರಿಗೆ ಸಿಗುತ್ತಿರುವ ಸೌಲಭ್ಯ ಸಿಗುತ್ತಿಲ್ಲ. ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಹಿಂದೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಸರ್ಕಾರ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಮತ್ತೆ ಮುಷ್ಕರ ನಡೆಸಬೇಕಾಗಿದೆ ಎಂದು ಸಿಐಟಿಯು ಜಂಟಿ ಕಾರ್ಯದರ್ಶಿ ಆನಂದ್​ ತಿಳಿಸಿದ್ದಾರೆ.

  ಇದನ್ನು ಓದಿ: ಮಹಾ ಶಿವರಾತ್ರಿಯಂದು ಕೆಎಸ್​ಆರ್​ಟಿಸಿಯಿಂದ ಹೆಚ್ಚುವರಿಯಾಗಿ 300 ಬಸ್ ಸೇವೆ

  ಪ್ರತಿಭಟನೆಯಲ್ಲಿ ಭಾಗಿಯಾಗಲು ಬಿಎಂಟಿಸಿ ನೌಕರರು ನಿರ್ಧರಿಸಿದ್ದಾರೆ. ಇನ್ನು ಕೆಎಸ್​ಆರ್​ಟಿಸಿ ಸಿಬ್ಬಂದಿ ಕೂಡ ರಜೆಗೆ ಅರ್ಜಿ ದಾಖಲಿಸಿ, ಪ್ರತಿಭಟನೆಯಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ. ಇಂದು ರಜೆ ಹೊಂದಿರುವವರನ್ನು ಹೊರತುಪಡಿಸಿ ಅಗತ್ಯವಿರುವವರಿಗೆ ಮಾತ್ರ ರಜೆ ನೀಡಲಾಗಿದೆ. ಇಂದು ಬಹಳಷ್ಟು ಸಿಬ್ಬಂದಿ ರಜೆ ಕೇಳಿದ್ದಾರೆ. ವೈಯಕ್ತಿಕ ಕಾರಣಕ್ಕೆ ಕೆಲವರಿಗೆ ರಜೆ ಕೊಟ್ಟಿದ್ದೇವೆ. ಎಲ್ಲರೂ ಮುಷ್ಕರದಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಎಲ್ಲರೂ ಮುಷ್ಕರದಲ್ಲಿ ಪಾಲ್ಗೊಂಡರೆ ಸಾರ್ವಜನಿಕರಿಗೆ ತೊಂದರೆ ಆಗಲಿದೆ. ಈಗಾಗಲೇ ವೈಯಕ್ತಿಕ ಕಾರಣಗಳಿಗೆ ಕೆಲವರಿಗೆ ರಜೆ ನೀಡಲಾಗಿದೆ. ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.  ಪ್ರಯಾಣಿಕರ ಹಿತದೃಷ್ಟಿಯಿಂದ ಕೆಲವರ ರಜೆ ರದ್ದು ಮಾಡಲಾಗಿದೆ. ರಜೆ ಇಲ್ಲದೆ ಇರುವವರು ಮುಷ್ಕರದಲ್ಲಿ ಪಾಲ್ಗೊಂಡರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೆಎಸ್​ಆರ್​ಟಿಸಿ  ಎಂಡಿ ಶಿವಯೋಗಿ ಕಳಸದ್ ತಿಳಿಸಿದ್ದಾರೆ.

   
  First published: