• Home
  • »
  • News
  • »
  • state
  • »
  • ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನಿರಾಕರಿಸಿದ ತೇರದಾಳ ಶಾಸಕ ಸಿದ್ದು ಸವದಿ

ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನಿರಾಕರಿಸಿದ ತೇರದಾಳ ಶಾಸಕ ಸಿದ್ದು ಸವದಿ

ಬಿಜೆಪಿ ಶಾಸಕ ಸಿದ್ದು ಸವದಿ

ಬಿಜೆಪಿ ಶಾಸಕ ಸಿದ್ದು ಸವದಿ

ನಾನೇನು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಕೇಳಿರಲಿಲ್ಲ. ಮುಖ್ಯಮಂತ್ರಿಗಳು ಪ್ರೀತಿಯಿಂದ ನೀಡಿದ್ದಾರೆ. ನೇಕಾರ ಸಮುದಾಯದ ಕಾರ್ಯಕರ್ತರಿಗೆ, ಮುಖಂಡರಿಗೆ ಈ ನಿಗಮದ ಅಧ್ಯಕ್ಷ ಸ್ಥಾನ ಕೊಡಿ ಅನ್ನೋದು ನಮ್ಮ ಬೇಡಿಕೆ ಎಂದು ಸಿದ್ದು ಸವದಿ ಹೇಳಿದ್ದಾರೆ.

  • Share this:

ಬಾಗಲಕೋಟೆ (ಜು. 27): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ತುಂಬಿದ ಸಂಭ್ರಮದಲ್ಲಿ ಶಾಸಕರಿಗೆ ನಿಗಮ ಮಂಡಳಿ ಭಾಗ್ಯ ನೀಡಿದ್ದರೆ ಬಹುತೇಕ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿ ಹಿನ್ನೆಲೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ‌. ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿಗೆ ನೀಡಲಾಗಿದೆ. ಆದರೆ, ಆ ಸ್ಥಾನವನ್ನು ಅವರು ನಿರಾಕರಿಸುತ್ತಿದ್ದು, ನೇಕಾರ ಸಮುದಾಯದ ಕಾರ್ಯಕರ್ತರಿಗೆ, ಮುಖಂಡರಿಗೆ ಈ ಹುದ್ದೆಯನ್ನು ನೀಡಿ. ನನಗೆ ಬೇರೆ ನಿಗಮದ ಅಧ್ಯಕ್ಷ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದಾರೆ.


ಶಾಸಕ ಸಿದ್ದು ಸವದಿ ದೂರವಾಣಿ ಮೂಲಕ ನ್ಯೂಸ್ 18 ಗೆ ಮಾತನಾಡಿ, ನಾನೇನು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಕೇಳಿರಲಿಲ್ಲ. ಮುಖ್ಯಮಂತ್ರಿಗಳು ಪ್ರೀತಿಯಿಂದ ನೀಡಿದ್ದಾರೆ. ನೇಕಾರ ಸಮುದಾಯದ ಕಾರ್ಯಕರ್ತರಿಗೆ, ಮುಖಂಡರಿಗೆ ಈ ನಿಗಮದ ಅಧ್ಯಕ್ಷ ಸ್ಥಾನ ಕೊಡಿ ಅನ್ನೋದು ನಮ್ಮ ಬೇಡಿಕೆ. ಇದು ನೇಕಾರ ನಿಗಮ. ನೇಕಾರ ಸಮುದಾಯದ ಇಬ್ಬರು ಮುಖಂಡರು ಆಕಾಂಕ್ಷಿಗಳಿದ್ದರು. ನೇಕಾರರಿಗೆ ಕೊಟ್ಟಿದ್ದರೆ ಸೂಕ್ತವಾಗುತ್ತದೆಂದು ನಮ್ಮ ಬೇಡಿಕೆ. ನನ್ನನ್ನು ಈ ನಿಗಮಕ್ಕೆ ಅಧ್ಯಕ್ಷನನ್ನಾಗಿ ಮಾಡುವುದು ಸೂಕ್ತವಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ. ಬೇರೆಯವರಂತೆ ನನಗೆ ಅಸಮಾಧಾನವೂ ಇಲ್ಲ. ಈ ಕುರಿತು ನಾಳೆ ಅಥವಾ ನಾಡಿದ್ದು ಸಿಎಂ ಯಡಿಯೂರಪ್ಪನವರ ಭೇಟಿಯಾಗಿ ಚರ್ಚಿಸುವೆ ಎಂದಿದ್ದಾರೆ.


ಇದನ್ನೂ ಓದಿ: ನಾಲ್ವರು ಶಾಸಕರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೇಮಕ ಹಿಂಪಡೆದ ರಾಜ್ಯ ಸರ್ಕಾರ


ಬಾಗಲಕೋಟೆ ಜಿಲ್ಲೆ ತೇರದಾಳ ಮತಕ್ಷೇತ್ರದಲ್ಲಿ ರಾಜ್ಯದಲ್ಲೇ ಅತೀ ನೇಕಾರರಿದ್ದಾರೆ. ಹೀಗಾಗಿ ಸಿಎಂ ಬಿ ಎಸ್ ಯಡಿಯೂರಪ್ಪನವರು ಶಾಸಕ ಸಿದ್ದು ಸವದಿಗೆ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ತೇರದಾಳ ಮತಕ್ಷೇತ್ರ ಸೇರಿ ರಾಜ್ಯದ  ನೇಕಾರ ಮುಖಂಡರು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಪಡೆದರೆ ನೇಕಾರ ಮುಖಂಡರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಜೊತೆಗೆ ತೇರದಾಳ ಮತಕ್ಷೇತ್ರದಲ್ಲಿ ನೇಕಾರರ ಮತಗಳೇ ನಿರ್ಣಾಯಕ. ಹೀಗಾಗಿ ಶಾಸಕ ಸಿದ್ದು ಸವದಿ ನೇಕಾರ ಸಮುದಾಯದ ಕಾರ್ಯಕರ್ತರು, ಮುಖಂಡರಿಗೆ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಕೊಡಿ ಎನ್ನುತ್ತಿದ್ದಾರೆ ಎನ್ನಲಾಗುತ್ತಿದೆ.

Published by:Sushma Chakre
First published: