ಕೋವಿಡ್ಗೆ ನಿನ್ನೆ ಬಲಿಯಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ಮರಣದ ಸುದ್ದಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಬರ ಸಿಡಿಲಿನಂತೆ ಬಡಿದಿದೆ. ಅವರ ಅಗಲಿಕೆ ಕುಟುಂಬ, ಸ್ನೇಹಿತರು, ಆಪ್ತರು, ಅಪಾರ ಅಭಿಮಾನಿ ಬಳಗ ಮಾತ್ರವಲ್ಲ ರಾಷ್ಟ್ರ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಅದರ ನಡುವೆಯೇ ಅವರ ದೇಶಪ್ರೇಮ ಸಾರುವ, ಸಾಮಾಜಿಕ ಕಳಕಳಿಯ ಹಿನ್ನೆಲೆಯಿರುವ ಸಿನಿಮಾ ಪ್ರೇಮದ ಬಗ್ಗೆ ಇಲ್ಲೊಂದು ಚಿತ್ರತಂಡ ಹೇಳಿಕೊಂಡಿದೆ. ಹೌದು, ಸಚಿವ ಸುರೇಶ್ ಅಂಗಡಿ ಸಮಾಜಕ್ಕೆ ಒಂದೊಳ್ಳೆ ಸಂದೇಶ ಸಾರುವ ಸಿನಿಮಾ ಒಂದಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಅದು ಎಷ್ಟರ ಮಟ್ಟಿಗೆ ಅಂದರೆ ಕೇವಲ ಮುಹೂರ್ತದ ದಿನ ಬಂದು ಕ್ಲ್ಯಾಪ್ ಮಾಡಿ ಶುಭಾಶಯ ತಿಳಿಸುವ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಕನ್ನಡ ಸಿನಿಮಾ ಲಾಂಚ್ ಮಾಡಿಸಿದ್ದರಂತೆ.
ಮೂಲತಃ ಕೃಷಿಕರಾದ ನಿರ್ಮಾಪಕ ನಂಜೇಗೌಡ, 2016ರಲ್ಲಿ 'ಜುಲೈ 22 1947 'ಎಂಬ ಸಿನಿಮಾ ನಿರ್ಮಿಸಿದ್ದರು. ಇದು ರಾಷ್ಟ್ರಧ್ವಜದ ಪ್ರಾಮುಖ್ಯತೆ ಸಾರುವ, ದೇಶಪ್ರೇಮದ ಪಾಠ ಮಾಡುವ ಸಿನಿಮಾ. ಆದರೆ ಕೃಷಿ ಹಿನ್ನೆಲೆಯ, ಸಿನಿಮಾರಂಗದ ಬಗ್ಗೆ ಹೆಚ್ಚು ಮಾಹಿತಿ ಇಲ್ಲದೆ ಸಾಕಷ್ಟು ಆತಂಕದಲ್ಲಿದ್ದರು. ಹೀಗಾಗಿಯೇ ಸುರೇಶ್ ಅಂಗಡಿಯವರ ಬಳಿ ಸಿನಿಮಾ ಬಗ್ಗೆ ತಿಳಿಸಿದ್ದರಂತೆ.
ಚಿತ್ರದ ಮಹತ್ವವನ್ನರಿತ ಸುರೇಶ್ ಅಂಗಡಿಯವರು, ಇದು ಪ್ರತಿಯೊಬ್ಬ ಕನ್ನಡಿಗ, ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ ಅಂತ ನಮಗೆ ಪ್ರಾರಂಭದಿಂದಲೂ ಬೆನ್ನೆಲುಬಾಗಿ ನಿಂತರು ಎಂದು ಹೇಳಿಕೊಳ್ಳುತ್ತಾರೆ ನಿರ್ಮಾಪಕ ನಂಜೇಗೌಡ.
ಸಿನಿಮಾ ಮುಹೂರ್ತಕ್ಕೆ ಬಂದು ಫಸ್ಟ್ ಕ್ಲ್ಯಾಪ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ ಸುರೇಶ್ ಅಂಗಡಿಯವರು, ನಂಜೇಗೌಡರು, ನಿರ್ದೇಶಕ ವಿಶಾಲ್ ರಾಜ್, ನಟ ಸುಚೇಂದ್ರ ಪ್ರಸಾದ್, ನಟಿ ಸುಧಾರಾಣಿ, ಸತೀಶ್, ಸಂಗೀತ ನಿರ್ದೇಶಕಿ ಸಂಗೀತಾ ಕಟ್ಟಿ ಸೇರಿದಂತೆ ಹಲವು ಚಿತ್ರತಂಡದ ಸದಸ್ಯರನ್ನು ದೆಹಲಿಗೆ ಕರೆದೊಯ್ದರಂತೆ. ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿಸಿ, ಚಿತ್ರದ ಬಗ್ಗೆ ತಿಳಿಸಿ, ಅವರಿಂದಲೇ ಲಾಂಚ್ ಕೂಡ ಮಾಡಿಸಿದ್ದರಂತೆ.
ನಮ್ಮ ಸಿನಿಮಾ ಬಗ್ಗೆ ತಿಳಿದು ಖುದ್ದು ಪ್ರಧಾನಿಗಳೂ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಕೋರಿದ್ದರು. ಹೀಗೆ ಪ್ರಧಾನಿ ಮೋದಿ ಲಾಂಚ್ ಮಾಡಿ ಮಟ್ಟ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ನಮ್ಮ 'ಜುಲೈ 22 1947' ಪಾತ್ರವಾಯಿತು. ಅದಕ್ಕೆ ಕಾರಣ ಸುರೇಶ್ ಅಂಗಡಿ ಅವರು ಎಂದು ಭಾವುಕರಾಗುತ್ತಾರೆ ನಿರ್ಮಾಪಕ ನಂಜೇಗೌಡ.
ಪ್ರಧಾನಿ ಮೋದಿ ಮಾತ್ರವಲ್ಲ ಸಚಿವರಾದ ಅರುಣ್ ಜೇಟ್ಲಿ ಹಾಗೂ ಸಚಿವೆ ನಿರ್ಮಲಾ ಸೀತಾರಾಮ ಟಿ ಮಾಡಿಸಿದರು. ಅವರ ಸಹಾಯವನ್ನು ನಾನೆಂದೂ ಮರೆಯಲಾರೆ. ಸಿನಿಮಾ ರಿಲೀಸ್ ಆಗುವವರೆಗೂ ನಮ್ಮ ಬೆನ್ನೆಲುಬಾಗಿ ನಿಂತಿದ್ದರು. ಪ್ರತಿ ಹಂತದಲ್ಲೂ ದೇಶಪ್ರೇಮದ ಕುರಿತ ಸಿನಿಮಾ ಯಶಸ್ಸು ಸಿಗುತ್ತದೆ ತಲೆಕೆಡಿಸಿಕೊಳ್ಳಬೇಡಿ ಅಂತ ನಮ್ಮ ಜೊತೆಗಿದ್ದು, ಧೈರ್ಯ ತುಂಬಿದ್ದರು. ಅವರ ಸಹಾಯವನ್ನು ಕೊನೆ ಕ್ಷಣದವರೆಗೂ ಮರೆಯಲು ಸಾಧ್ಯವಿಲ್ಲ. ಆ ಬಳಿಕವೂ ಹಲವು ಬಾರಿ ಸುರೇಶ್ ಅಂಗಡಿ ಅವರನ್ನು ಭೇಟಿಯಾಗಿದ್ದೆ. ಕೆಲ ದಿನಗಳ ಹಿಂದಷ್ಟೇ ದೂರವಾಣಿ ಮೂಲಕ ಮಾತನಾಡುತ್ತಾ ಸಿನಿಮಾನ ಹಿಂದಿಗೆ ಡಬ್ ಮಾಡಿಸಿ ಎಂದು ಸುರೇಶ್ ಅವರು ಹೇಳಿದ್ದರು ಎಂದು ಸ್ಮರಿಸಿಕೊಳ್ಳುತ್ತಾರೆ ನಂಜೇಗೌಡ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ