news18-kannada Updated:March 15, 2020, 2:32 PM IST
ಕೇಂದ್ರ ಸಚಿವ ಪ್ರಲ್ಹಾದ್ಜೋಶಿ
ಹುಬ್ಬಳ್ಳಿ(ಮಾ.15): ನಾನು ಯಾವುದೇ ಅತೃಪ್ತ ಶಾಸಕರ ಸಭೆ ನಡೆಸಿಲ್ಲ. ಶಾಸಕರ ಸಭೆ ನಡೆಸಿದ್ದೇನೆ ಎನ್ನುವುದು ಶುದ್ಧ ಸುಳ್ಳು. ಶಾಸಕರ ಸಭೆ ನಡೆಸುವಷ್ಟು ದೊಡ್ಡ ನಾಯಕನೂ ನಾನಲ್ಲ. ಸಿಎಂ ಸ್ಥಾನವನ್ನು ಯಾರೂ ಅಭದ್ರಗೊಳಿಸುತ್ತಿಲ್ಲ. ಜಗದೀಶ್ ಶೆಟ್ಟರ್ ಕೂಡ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕೆಲವು ಅತೃಪ್ತ ಆತ್ಮಗಳು ಸುಳ್ಳು ವದಂತಿ ಹರಡುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪನವರೇ ಇನ್ನೂ ಮೂರು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ. ಯಡಿಯೂರಪ್ಪನವರು ಸಮರ್ಥವಾಗಿ ಸರ್ಕಾರವನ್ನು ನಡೆಸುತ್ತಿದ್ದಾರೆ. ಅನೇಕ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಅವರ ನೇತೃತ್ವದಲ್ಲಿಯೇ ರಾಜ್ಯ ಸರ್ಕಾರ ಮುಂದುವರಿಯಲಿದೆ ಎಂದರು.
ಕೊರೋನಾ ಭೀತಿ ಹಿನ್ನೆಲೆ 7,8,9ನೇ ತರಗತಿ ಪರೀಕ್ಷೆ ಮುಂದೂಡಿಕೆ; ಸಚಿವ ಸುರೇಶ್ ಕುಮಾರ್ ಆದೇಶ
ಇನ್ನು, ಕೊರೋನಾ ವೈರಸ್ ಕುರಿತಾಗಿ ಮಾತನಾಡಿದ ಜೋಶಿ, ಡಿಸೆಂಬರ್ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರು ಚೀನಾ ವಿದ್ಯಮಾನಗಳನ್ನು ನಮ್ಮ ಗಮನಕ್ಕೆ ತಂದಿದ್ದರು. ಅಧಿಕಾರಿಗಳ ತಂಡ ರಚಿಸಿ ಆರೋಗ್ಯ ಮಂತ್ರಿಗಳ ನೇತೃತ್ವದಲ್ಲಿ ಸಮಿತಿ ಮಾಡಿದ್ದರು. ಸ್ವತಃ ಪ್ರಧಾನಿಗಳೇ ಕೊರೊನಾ ನಿಯಂತ್ರಣದ ಬಗ್ಗೆ ನಿಗಾ ವಹಿಸಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ದೇಶ ಸಮರ್ಥವಾಗಿ ಕೊರೊನಾ ನಿಯಂತ್ರಿಸುತ್ತಿದೆ.
ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಸಮರ್ಥವಾಗಿ ನಿಭಾಯಿಸುವಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ನಮ್ಮ ಜನಸಂಖ್ಯೆಗೆ ಹೋಲಿಸಿದರೆ ಕೊರೋನಾ ಬಹಳ ನಿಯಂತ್ರಣದಲ್ಲಿದೆ ಎಂದು ಹೇಳಿದರು.
ಮುಂದುವರೆದ ಅವರು, ಕಲಬುರ್ಗಿಯಲ್ಲಿ ಸಿದ್ದಿಕಿ ಸಾವಿನ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸುತ್ತಿದೆ. ಯಾರದ್ದೇ ತಪ್ಪು ಕಂಡು ಬಂದರೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ರಾಜ್ಯ ಸರ್ಕಾರ ಸದ್ಯಕ್ಕೆ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ. ಕೊರೋನಾ ಎಮರ್ಜೆನ್ಸಿ ಕುರಿತು ಭಾರತ ಸರ್ಕಾರವೂ ಸೂಕ್ತ ಕ್ರಮ ಕೈಗೊಳ್ಳಲಿದೆ. ಹುಬ್ಬಳ್ಳಿಯಲ್ಲಿ ಕೊರೊನಾ ಪತ್ತೆ ಲ್ಯಾಬ್ ಮಾಡಲು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಹುಬ್ಬಳ್ಳಿಯಲ್ಲಿ ಕೇಂದ್ರದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಟ್ಟಿ, ಸಲಕರಣೆಗಳನ್ನು ಕೊಟ್ಟಿದ್ದೇವೆ. ರಾಜ್ಯ ಸರ್ಕಾರ ಸಮರ್ಪಕವಾಗಿ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದರು.
ದೇಶದಲ್ಲಿ 93ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ; ಇಟಲಿ, ಇರಾನ್ನಿಂದ ಭಾರತೀಯರು ವಾಪಸ್
First published:
March 15, 2020, 1:17 PM IST