ಮೈಸೂರು (ಮಾ. 17): ರಾಜ್ಯಾದ್ಯಂತ ಕೊರೋನಾ ವೈರಸ್ ಭೀತಿ ಬೆನ್ನಲ್ಲೇ ಹಕ್ಕಿಜ್ವರದ ಲಕ್ಷಣಗಳು ಹೆಚ್ಚಾಗುತ್ತಿವೆ. ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಸಾಕಿರುವ ಕೋಳಿ ಮತ್ತು ಕೊಕ್ಕರೆಯ ಸ್ಯಾಂಪಲ್ನಲ್ಲಿ ಹಕ್ಕಿಜ್ವರ ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮೈಸೂರಿನಲ್ಲಿ ಕೋಳಿಗಳ ಮಾರಾಟವನ್ನು ನಿಷೇಧಿಸಲಾಗಿದೆ. ಅಲ್ಲದೆ. ಮನೆಯಲ್ಲಿ ಸಾಕಿರುವ ಎಲ್ಲಾ ರೀತಿಯ ಹಕ್ಕಿಗಳನ್ನೂ ಕೊಲ್ಲಲು ಜಿಲ್ಲಾಡಳಿತ ಆದೇಶಿಸಿದೆ.
ಮೈಸೂರು ಜಿಲ್ಲಾಡಳಿತ ಮಾ.12 ರಂದು ಸ್ಯಾಂಪಲ್ ಕಳುಹಿಸಿತ್ತು. ಸೋಮವಾರ ಸಂಜೆ ಲ್ಯಾಬ್ನಿಂದ ಹಕ್ಕಿ ಜ್ವರದ ಪಾಸಿಟಿವ್ ವರದಿ ಬಂದಿದೆ. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಕೂಡ ಮೈಸೂರಿನಲ್ಲಿ ಹಕ್ಕಿಜ್ವರ ಇರುವುದರ ಬಗ್ಗೆ ಖಾತರಿಪಡಿಸಿದ್ದಾರೆ.
ಮೈಸೂರು ನಗರ ವ್ಯಾಪ್ತಿಯಲ್ಲಿ ಕೋಳಿಗಳ ಮಾರಾಟವನ್ನು ಬಂದ್ ಮಾಡಲಾಗಿದೆ. ಕುಂಬಾರಕೊಪ್ಪಲು ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿ ಮಾರಾಟ ಬಂದ್ ಆಗಿದೆ. ಕುಂಬಾರಕೊಪ್ಪಲು ಸುತ್ತಲಿನ 1 ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿಗಳನ್ನು ತಿನ್ನುವಂತಿಲ್ಲ, ಯಾವುದೇ ಪಕ್ಷಿಗಳನ್ನು ಸಾಕುವಂತೆಯೂ ಇಲ್ಲ. ಕಲ್ಲಿಂಗ್ ಆಪರೇಷನ್ ಮೂಲಕ ಇಂದಿನಿಂದಲೇ ಎಲ್ಲ ಪಕ್ಷಿಗಳನ್ನು ಸಾಯಿಸಬೇಕು ಎಂದು ಜಿಲ್ಲಾಡಳಿತ ಆದೇಶಿಸಿದೆ.
ಕೇವಲ ಕೋಳಿ ಮಾತ್ರವಲ್ಲದೆ ಗಿಳಿ, ಪಾರಿವಾಳ, ಲವ್ ಬರ್ಡ್ಸ್, ಬಾತುಕೋಳಿ, ಕೊಕ್ಕರೆ, ಸೇರಿದಂತೆ ಯಾವುದೇ ಪಕ್ಷಿಗಳನ್ನು ಸಾಕಿದ್ದರೂ ಸಾಯಿಸಬೇಕು. ಪಕ್ಷಿಗಳನ್ನ ಸಂರಕ್ಷಿಸುವ ಪ್ರಯತ್ನ ಮಾಡಲೇಬಾರದು. ಹಾಗೇನಾದರೂ ಪಕ್ಷಿಗಳನ್ನು ಸಂರಕ್ಷಿಸಿದರೆ ಕೂಂಬಿಂಗ್ ಕಾರ್ಯಚರಣೆ ಮಾಡಿ ಆ ಪಕ್ಷಿಗಳನ್ನು ಸಾಯಿಸಲಾಗುತ್ತದೆ. ಇದು ಪಕ್ಷಿಗಳಿಂದ ಪಕ್ಷಿಗಳಿಗೆ ಹರಡುವ ಜ್ವರ. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಕೊರೋನಾ ವೈರಸ್: ರಾಜ್ಯದಲ್ಲಿ 8ಕ್ಕೇರಿದ ಸೋಂಕಿತರ ಸಂಖ್ಯೆ; ತೀವ್ರ ಆತಂಕದಲ್ಲಿ ಜನ
ಕಲ್ಲಿಂಗ್ ಆಪರೇಷನ್ ಎಂದರೇನು?
ಕಲ್ಲಿಂಗ್ ಆಪರೇಷನ್ ಎಂದರೆ ಎಲ್ಲ ವಿಧವಾದ ಪಕ್ಷಿಗಳನ್ನು ಕೊಲ್ಲುವುದು. ಹಕ್ಕಿಜ್ವರ ಸೊಂಕು ಪತ್ತೆಯಾದ 1 ಕಿ.ಮೀ. ಸುತ್ತಳತೆಯ ಎಲ್ಲ ಪಕ್ಷಿಗಳನ್ನು ಕೊಲ್ಲುವುದು. ಪಶುಸಂಗೋಪನಾ ಇಲಾಖೆ ಸಿಬ್ಬಂದಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ಈ ಕಲ್ಲಿಂಗ್ ಆಪರೇಷನ್ ಮಾಡುತ್ತಾರೆ. ಕನಿಷ್ಠ 50 ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.
ಸೋಂಕು ಪತ್ತೆಯಾದ ಕುಂಬಾರಕೊಪ್ಪಲು ಸುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯ ಎಲ್ಲ ಮನೆಗಳಲ್ಲಿ ಪಕ್ಷಿಸಾಕಣೆ ಬಗ್ಗೆ ಸರ್ವೆ ನಡೆಸಲಾಗುವುದು. ಸರ್ವೆಯಲ್ಲಿ ಎಲ್ಲ ವಿಧವಾದ ಪಕ್ಷಿಗಳ ಮಾಹಿತಿ ಸಂಗ್ರಹ ಮಾಡಲಾಗುವುದು. ಕೋಳಿ, ಗಿಳಿ, ಪಾರಿವಾಳ, ಲವ್ ಬರ್ಡ್ಸ್, ಬಾತುಕೋಳಿ, ಕೊಕ್ಕರೆ ಸೇರಿ ಎಲ್ಲ ಪಕ್ಷಿಗಳನ್ನ ಸಾಯಿಸಲಾಗುವುದು. ಪಕ್ಷಿಗಳ ಕತ್ತು ಹಿಸುಕಿ ಅಥವಾ ಕತ್ತು ಕೊಯ್ದು ಸಾಯಿಸೋದೆ ಕಲ್ಲಿಂಗ್ ಆಪರೇಷನ್.
ಆ ಕಲ್ಲಿಂಗ್ ಆಪರೇಷನ್ನಿಂದ ಯಾವೊಂದು ಪಕ್ಷಿಯನ್ನು ಪಾರು ಮಾಡುವಂತಿಲ್ಲ. ಪಕ್ಷಿಗಳಿಂದ ಪಕ್ಷಿ ಕ್ಷಣಮಾತ್ರದಲ್ಲಿ ಹರಡುವ ಸೊಂಕು ಇದಾಗಿರುವುದರಿಂದ ಈ ಕಾರ್ಯಾಚರಣೆ ಅನಿವಾರ್ಯ. ಪ್ರತಿ ಮನೆಗೂ ತೆರಳಿ ಪಕ್ಷಿ ಮಾಹಿತಿ ಸಂಗ್ರಹಿಸಿ ಪಕ್ಷಿಗಳನ್ನು ಕೊಲ್ಲಲಾಗುವುದು. ಕಲ್ಲಿಂಗ್ ನಡೆಯುವ ಸ್ಥಳಕ್ಕೆ ಯಾರಿಗೂ ಪ್ರವೇಶವಿರುವುದಿಲ್ಲ.
ಇದನ್ನೂ ಓದಿ: ಕೊರೋನಾ ಗೆದ್ದ ಕಾರವಾರದ ಯುವಕ; ಜಪಾನ್ ಹಡಗಿನಲ್ಲಿ 18 ದಿನ ಸಿಲುಕಿ ಸುರಕ್ಷಿತವಾಗಿ ಊರಿಗೆ ಬಂದ ಅಭಿಷೇಕ್
ಕಲ್ಲಿಂಗ್ ಆಪರೇಷನ್ ನಲ್ಲಿ ಭಾಗಿಯಾಗುವ ಅಧಿಕಾರಿಗಳನ್ನು ಸಹ ಏಳು ದಿನಗಳ ಕಾಲ ನಿಗಾದಲ್ಲಿ ಇಡಲಾಗುವುದು. ಏಳು ದಿನದ ಕಾಲ ಕಲ್ಲಿಂಗ್ ಆಪರೇಷನ್ನಲ್ಲಿ ತೊಡಗಿದವರು ಮನೆಗೆ ಹೋಗುವಂತಿಲ್ಲ. ಆಪರೇಷನ್ ಮುಗಿದ ನಂತರ ಅವರನ್ನ ಚಿಕಿತ್ಸೆಗೆ ಒಳಪಡಿಸಲಾಗುವುದು. ಕಲ್ಲಿಂಗ್ ಆಪರೇಷನ್ ದೃಶ್ಯಗಳನ್ನ ಸೆರೆಹಿಡಿಯುವಂತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ