ಶಿವಮೊಗ್ಗ(ಜ. 19): ಸ್ವಾಮಿಯೇ ಶರಣಂ ಅಯ್ಯಪ್ಪ - ಹೀಗೆ ಅಯ್ಯಪ್ಪ ಸ್ವಾಮಿಯನ್ನು ಸ್ತುತಿಸುತ್ತಾ, ಮಕರ ಸಂಕ್ರಾಂತಿಯಂದು, ದೂರದ ಕೇರಳದಲ್ಲಿರುವ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವವರು ಲಕ್ಷಾಂತರ ಮಂದಿ. ಈ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಅಯ್ಯಪ್ಪ ಸ್ವಾಮಿಯ ದೇವಾಲಯವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಇದು ಅಂತಿಂಥ ದೇವಾಲಯವಲ್ಲ, ವಿಶ್ವದ ಅತ್ಯಂತ ಚಿಕ್ಕ ಅಯ್ಯಪ್ಪ ದೇಗುಲ ಎಂದು ಹೆಸರು ಮಾಡುತ್ತಿದೆ.
ಶಿವಮೊಗ್ಗದ ಭದ್ರಾವತಿಯಲ್ಲಿ ಅಕ್ಕಸಾಲಿಗರಾಗಿರುವ ಸಚಿನ್ ಎಂಬುವವರು ಈ ಪುಟ್ಟ ದೇವಾಲಯವನ್ನು ಸಂಪೂರ್ಣವಾಗಿ ಬಂಗಾರದಲ್ಲೇ ಮಾಡಿದ್ದಾರೆ. ಕೇರಳದ ದಕ್ಷಿಣ ಅಂಚಿನ ಪತ್ತನಮ್ತಿಟ್ಟ ಜಿಲ್ಲೆಯಲ್ಲಿರುವ ಮೂಲ ಶಬರಿಮಲೆ ದೇವಾಲಯದ ರೀತಿಯಲ್ಲೇ ಅದೇ ಪಡಿಯಂಚಿರುವ ಪುಟಾಣಿ ಮಂದಿರವನ್ನು ಅವರು ಚಿನ್ನದಿಂದೇ ರಚಿಸಿದ್ದಾರೆ. ಈ ದೇವಾಲಯಕ್ಕೆ ಸಚಿನ್ ಅವರು ಬಳಸಿದ್ದ ಕೇವಲ 2.9 ಗ್ರಾಂ ಬಂಗಾರ ಮಾತ್ರ ಎಂದರೆ ಅಚ್ಚರಿ ಎನಿಸಬಹುದು.
ಗರ್ಭಗುಡಿಯ ಮೇಲ್ಭಾಗದ ಛಾವಣಿ, ದೇವಾಲಯದ ಮುಂಭಾಗದ 1 ಇಂಚಿನ ಗಡುಡಗಂಬ, 18 ಮೆಟ್ಟಿಲು, ಆಲಯ ಆವರಣದ ಎಡ ಮತ್ತು ಬಲಭಾಗದಲ್ಲಿ ಗಂಟೆಗಳು ಹೀಗೆ ಎಲ್ಲವನ್ನೂ ಇಷ್ಟೇ ಮಿತಿಯ ಬಂಗಾರದಲ್ಲಿ ಕೆತ್ತನೆ ಮಾಡಿದ್ದಾರೆ. ದೇವಾಲಯದ ಪ್ರಾಂಗಣವನ್ನು ಸಾಗುವನಿ ಮರ ಬಳಸಿ ರಚಿಸಿದ್ದಾರೆ.
![Sachin with his ayyappa temple]()
ಅಯ್ಯಪ್ಪ ದೇಗುಲ ಕೃತಿಯೊಂದಿಗೆ ಅಕ್ಕಸಾಲಿಗ ಸಚಿನ್
ಪ್ರತಿದಿನ ತಮ್ಮ ಕೆಲಸದ ಒತ್ತಡದ ನಡುವೆಯೂ ಸಚಿನ್ 2-3 ಗಂಟೆಯನ್ನು ಇದಕ್ಕಾಗಿ ಮೀಸಲಿಟ್ಟು, ಈ ಬಂಗಾರದ ದೇವಾಲಯವನ್ನು ಕೇವಲ 10 ದಿನದೊಳಗೆ ರಚಿಸಿದ್ದಾರೆ. ಸಚಿನ್ ಈ ದೇವಾಲಯ ರಚಿಸಲು ಕುಳಿತುಕೊಳ್ಳುವ ಮುನ್ನ, ಸ್ನಾನ ಮಾಡಿ ಮಡಿಯಿಂದ ವ್ರತಧಾರಿಯಾಗಿರುತ್ತಿದ್ದರಂತೆ.
ಇದನ್ನೂ ಓದಿ: ಈಶ್ವರಪ್ಪ-ಹೆಚ್ಡಿಕೆ ಟ್ವಿಟರ್ ವಾರ್; ಇವರ ಮಕ್ಕಳನ್ನು ಸೈನ್ಯಕ್ಕೆ ಕಳಿಸ್ತಾರ ಅಂತಾ ಹೇಳಿದ್ದರಲ್ಲಿ ತಪ್ಪೇನಿದೆ?: ಕುಮಾರಸ್ವಾಮಿ ಕಿಡಿ
ಸಚಿನ್ ಕೈಯಲ್ಲಿ ಅರಳಿರುವ ಈ ಸುಂದರ ಬಂಗಾರದ ಕಲಾಕೃತಿ, ಮಕರ ಸಂಕ್ರಾಂತಿ ಹಬ್ಬದ ದಿನವೇ ಪೂರ್ಣಗೊಂಡಿರುವುದು ವಿಶೇಷವಾಗಿದೆ. ಈ ಕಲಾಕೃತಿ ರಚಿಸುವ ಸಂದರ್ಭದಲ್ಲಿ ಅಯ್ಯಪ್ಪ ಮಾಲಧಾರಿ ಸ್ವಾಮಿಗಳ ಬಳಿ ಚರ್ಚಿಸಿ, ಅವರಿಗೆ ಇದನ್ನು ತೋರಿಸಿ, ಅವರ ಮಾರ್ಗದರ್ಶನ ಪಡೆದು ರಚಿಸಿದ್ದಾರೆ.
ಅಯ್ಯಪ್ಪ ಮಾಲಾಧಾರಿ ಸ್ವಾಮಿಗಳು ಇವರ ನಿವಾಸಕ್ಕೆ ಆಗಮಿಸಿ ಅಯ್ಯಪ್ಪ ಸ್ವಾಮಿಯ ಸಣ್ಣದರಲ್ಲಿಯೇ ಅತಿ ಸಣ್ಣದಾದ ಬಂಗಾರದ ಈ ದೇವಾಲಯವನ್ನು ವೀಕ್ಷಿಸಿ ದರ್ಶನ ಪಡೆದು ಕೃತಾರ್ಥರಾಗುತ್ತಿದ್ದಾರೆ. ಬಂಗಾರದ ಕುಸುರಿ ಕೆಲಸ ಮಾಡುವ ಸಚಿನ್ ಇದೀಗ ಇಂತಹ ಕಲಾಕೃತಿಗಳ ಮೂಲಕ ಮನೆ ಮಾತಾಗಿದ್ದಾರೆ.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ