ಮಹಾರಾಷ್ಟ್ರದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು ಕರ್ನಾಟಕಕ್ಕೆ ಸೇರಲಿ; ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹತ್ವದ ನಿರ್ಣಯ

ಪ್ರಮುಖವಾಗಿ ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದ್ದ  ಮಹಾರಾಷ್ಟ್ರ ಸಿಎಂ ಗೆ ತಿರುಗೇಟು ನೀಡಲು, ಮಹಾರಾಷ್ಟ್ರದ ಸೊಲ್ಲಾಪುರ, ಜತ್ತ, ಅಕ್ಕಲಕೋಟ, ಸೇರಿದಂತೆ ರಾಜ್ಯದಿಂದ ಹೊರಗುಳಿದ ಕನ್ನಡ ಭಾಗಗಳು ಮತ್ತೆ ಕರ್ನಾಟಕಕ್ಕೆ ಸೇರಬೇಕು ಎಂದು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

  • Share this:
ಚಿಕ್ಕೋಡಿ(ಫೆ.01): ಬೆಳಗಾವಿ ಜಿಲ್ಲೆಯಲ್ಲಿ  14 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಜರುಗಿದ್ದು ಎರಡು ದಿನಗಳ ಕಾಲ ನಡೆದ ಕನ್ನಡದ ಹಬ್ಬಕ್ಕೆ ತೆರೆ ಬಿದ್ದಿದೆ. ಬೆಳಗಾವಿ ಜಿಲ್ಲೆಯ ಗಡಿಯ ಕಾಗವಾಡದಲ್ಲಿ ನಡೆದ ಕನ್ನಡದ ಹಬ್ಬಕ್ಕೆ 30 ಸಾವಿರಕ್ಕೂ ಅಧಿಕ ಕನ್ನಡ ಪ್ರೇಮಿಗಳ ಭೇಟಿ ನೀಡಿ ಸಮ್ಮೇಳನವನ್ನ ಯಶಸ್ವಿಗೊಳಿದ್ದಾರೆ. ಎರಡನೇ ದಿನದ ಸಮಾರೋಪ ಸಮಾರಂಭದಲ್ಲಿ ಮಹತ್ವದ ನಿರ್ಣಯ ತೆಗೆದುಕೊಂಡಿದ್ದು, ಮಹಾರಾಷ್ಟ್ರದ ಉದ್ದವ ಠಾಕ್ರೆ ಹಾಗೂ ಶಿವಸೇನೆಗೆ ತಕ್ಕ ಉತ್ತರ ನೀಡಿದ್ದಾರೆ. ಬೆಳಗಾವಿ ನಮ್ಮದು ಎಂದು ಹೇಳಿಕೆ ನೀಡಿದ್ದ ಉದ್ದವ್​ ಠಾಕ್ರೆಗೆ ತಿರುಗೇಟು ನೀಡಿರುವ ಕನ್ನಡ ಸಾಹಿತ್ಯ ಸಮ್ಮೇಳನ, ಮಹಾರಾಷ್ಟ್ರದಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನ ಕರ್ನಾಟಕಕ್ಕೆ ಸೇರಿಸಬೇಕು ಎಂಬ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.

ಎರಡು ದಿನಗಳ ಕಾಲ ಬೆಳಗಾವಿ ಗಡಿಯಲ್ಲಿ ನಡೆದ  14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸುಕಂಡಿದೆ. ಮೊದಲ ದಿನದಂದು ಕುಂಭ ಮೇಳ, ಡೊಳ್ಳು ಕುಣಿತ ಜೊತೆಗೆ ಸಮ್ಮೇಳನದ ಸರ್ವಾಧ್ಯಕ್ಷ ಪ್ರಭಾಕರ ಕೋರೆ ಅವರ ಮೆರವಣಿಗೆ ಯಶಸ್ಸು ಕಂಡಿದೆ. ಹಲವು ವಿಚಾರಗೋಷ್ಠಿಗಳು ನಡೆದಿದ್ದಿದ್ದು, ನಿನ್ನೆ ಎರಡನೆ ದಿನದ ಸಮ್ಮೇಳನದಲ್ಲಿ ಗಡಿಯ ವಿಚಾರ ಕುರಿತು ಸಾಕಷ್ಟು ಚಿಂತನ-ಮಂತನ ಹಾಗೂ ಗೋಷ್ಠಿಗಳು ನಡೆದವು. ಕೊನೆಗೆ ಸಮಾರೋಪ ಸಮಾರಂಭ ಕೂಡ ಜರುಗಿದೆ. ಗಡಿಯಲ್ಲಿ ನಡೆದ ಸಮ್ಮೇಳನದ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಪ್ರಮುಖವಾಗಿ ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದ್ದ  ಮಹಾರಾಷ್ಟ್ರ ಸಿಎಂ ಗೆ ತಿರುಗೇಟು ನೀಡಲು, ಮಹಾರಾಷ್ಟ್ರದ ಸೊಲ್ಲಾಪುರ, ಜತ್ತ, ಅಕ್ಕಲಕೋಟ, ಸೇರಿದಂತೆ ರಾಜ್ಯದಿಂದ ಹೊರಗುಳಿದ ಕನ್ನಡ ಭಾಗಗಳು ಮತ್ತೆ ಕರ್ನಾಟಕಕ್ಕೆ ಸೇರಬೇಕು ಎಂದು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಇದು 5 ರಾಜ್ಯಗಳ ಚುನಾವಣಾ ಬಜೆಟ್​: ಕೇಂದ್ರ ಬಜೆಟ್ ಬಗ್ಗೆ​​ ಡಿ.ಕೆ.ಸುರೇಶ್​ ವ್ಯಂಗ್ಯ

ಸಮ್ಮೇಳನದಲ್ಲಿ ಕೈಗೊಂಡ  ಪ್ರಮುಖ ನಿರ್ಣಯಗಳು

1.ನಂಜುಡಪ್ಪ ವರದಿ ಪ್ರಕಾರ ಜಿಲ್ಲೆಯ ಸಮಗ್ರ ನೀರಾವರಿ, ಮೂಲ ಸೌಕರ್ಯ, ರೈಲು ಮಾರ್ಗ, ನದಿ ನೀರು ಹಂಚಿಕೆ, ಸಂಪೂರ್ಣ ಅನುಷ್ಠಾನಕ್ಕೆ ಒತ್ತಾಯ

2. ಗಡಿ ಭಾಗದ ಶಾಲೆಗಳನ್ನ ಮುಚ್ಚಬಾರದು. ಇತರೆ ಭಾಷೆಯ ಶಾಲೆಗಳ ಆರಂಭಕ್ಕೆ ಅನುಮತಿ ನೀಡದೆ, ಗಡಿಭಾಗದ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿ ಮಾಡಬೇಕು.  ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂಬ ಒತ್ತಾಯ

3. ಗಡಿ ಭಾಗದ ಪ್ರತಿ ಹಳ್ಳಿಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ ಮಾಡಬೇಕು.

4. ಸುವರ್ಣ ವಿಧಾನಸೌಧದ ಸಮರ್ಪಕ ಬಳಕೆಗೆ ಮಹತ್ವದ ಇಲಾಖೆಗಳನ್ನ ಸ್ಥಳಾಂತರ ಮಾಡಬೇಕು, ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಬೇಕು.

5. ನೀಟ್ ಪರೀಕ್ಷೆ ಬಂದಾಗಿನಿಂದ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ವೈದ್ಯಕೀಯ ಶಿಕ್ಷಣದಲ್ಲಿ ಪ್ರವೇಶ ಸಿಗುತ್ತಿಲ್ಲ. ಈ ಅನ್ಯಾಯ ಸರಿಪಡಿಸಿ ಕನ್ನಡ ಮಾಧ್ಯಮದವರಿಗೆ ಮೀಸಲಾತಿ ನೀಡಬೇಕು.

6. ವಿದ್ಯುತ್ ನಿಗಮಗಳಾದ ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂ, ಬದಲು ಕನ್ನಡ ಪದಗಳ ಬಳಕೆ ಆಗಬೇಕು. ಸಾರಿಗೆ ಸಂಸ್ಥೆ ಹೆಸರುಗಳನ್ನ ಕಲ್ಯಾಣ ಕರ್ನಾಟಕ ಸಾರಿಗೆ, ಕಿತ್ತೂರು ಚೆನ್ನಮ್ಮ ಸಾರಿಗೆ ಎಂದು ಬದಲಾಯಿಸಬೇಕು.

7. ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಮಾಡಬೇಕು.  ಅದರಲ್ಲಿ ಉತ್ತರ ಕರ್ನಾಟಕದ ಮೂಲ ಸಮಸ್ಯೆಗಳನ್ನೆ ಪ್ರಮುಖವಾಗಿ ಚರ್ಚೆ ಮಾಡಬೇಕು ಎಂಬ ಪ್ರಮುಖ ನಿರ್ಣಯಗಳನ್ನು ಮಾಡಲಾಯಿತು.

ಒಟ್ಟಿನಲ್ಲಿ ಕನ್ನಡ ಹಾಗೂ ಕರ್ನಾಟಕದ ವಿಷಯದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮಹಾ ನಾಯಕರಿಗೆ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಗಡಿಯಲ್ಲೆ ಆಯೋಜ‌ನೆ ಮಾಡಿ, ಕನ್ನಡದ ಬಗ್ಗೆ ಗಡಿ ಜನರನ್ನು ಎಚ್ಚರಿಸುವ ಕೆಲಸ ಕಸಾಪ ಮಾಡಿದೆ. ಇನ್ನು ಮುಂದಿನ ವರ್ಷದ ಜಿಲ್ಲಾ ಸಮ್ಮೇಳನವನ್ನು ಚಿಕ್ಕೋಡಿಯಲ್ಲಿ ಮಾಡುವುದಾಗಿ ಜಿಲ್ಲಾ ಅದ್ಯಕ್ಷ ಮಂಗಲಾ ಮೆಟಗೂಡ್ ಘೋಷಣೆ ಮಾಡಿದ್ದು, ಕಸಾಪ ಮಾಡುತ್ತಿರುವ ಕೆಲಸಕ್ಕೆ ಈಗ ಮೆಚ್ಚುಗೆ ವ್ಯಕ್ತವಾಗಿದೆ.
Published by:Latha CG
First published: