HOME » NEWS » State » KANNADA GRAHAKARA KOOTA STARTED NEW CAMPAIGN CALLED NO KANNADA NO BUSINESS GNR

‘ನೋ ಕನ್ನಡ ನೋ ಬ್ಯುಸಿನೆಸ್​​​’ – ಕನ್ನಡ ಗ್ರಾಹಕರ ಕೂಟದಿಂದ ಭಾಷಾ ರಕ್ಷಣೆಗೆ ಹೊಸ ಅಭಿಯಾನ

ಕನ್ನಡ ನಾಮಫಲಕ ಏಕೆ ಹಾಕಬೇಕು ಎಂದು ಕೇಳೋದು; ಬ್ಯಾಂಕಿನಲ್ಲಿ ಕನ್ನಡದಲ್ಲಿ ಸೇವೆ ಕೊಡದೆ ಇರೋದು; ಇವೆಲ್ಲವೂ ಸಮಸ್ಯೆಗಳಿಗೆ ಒಂದೇ ಕಾರಣ. ಕನ್ನಡಿಗರು ಅನಾಥರು. ಅವರ ರಕ್ಷಣೆಗೆ ಯಾರೂ ಇಲ್ಲ ಎಂದು ಗಣೇಶ್​​ ಚೇತನ್​​ ಮತ್ತೊಂದು ಟ್ವೀಟ್​​ನಲ್ಲಿ ಉಲ್ಲೇಖ ಮಾಡಿದ್ಧಾರೆ.

news18-kannada
Updated:December 28, 2019, 3:43 PM IST
‘ನೋ ಕನ್ನಡ ನೋ ಬ್ಯುಸಿನೆಸ್​​​’ – ಕನ್ನಡ ಗ್ರಾಹಕರ ಕೂಟದಿಂದ ಭಾಷಾ ರಕ್ಷಣೆಗೆ ಹೊಸ ಅಭಿಯಾನ
ಕನ್ನಡ ಧ್ವಜ
  • Share this:
ಬೆಂಗಳೂರು(ಡಿ.28): "ಸರ್ವ್​​​ ಇನ್​​ ಮೈ ಲಾಂಗ್ವೇಜ್" ಕ್ಯಾಂಪೇನ್​​ ಬೆನ್ನಲ್ಲೀಗ ಕನ್ನಡ ಗ್ರಾಹಕರ ಕೂಟ "ನೋ ಕನ್ನಡ, ನೋ ಬ್ಯುಸಿನೆಸ್"​​​​ ಎಂಬ ಅಭಿಯಾನ ಶುರು ಮಾಡಿದೆ. ಕೇಂದ್ರ ಸರ್ಕಾರದ ಭಾಷಾನೀತಿಯಿಂದಾಗಿ ಸರಕಾರಿ ಒಡೆತನದ ಬ್ಯಾಂಕ್, ಅಂಚೆ, ಎಲ್.ಐ.ಸಿ, ರೈಲ್ವೆಗಳಂತಹ ಇಲಾಖೆಗಳಲ್ಲಿ ಕನ್ನಡ ಮಾಯವಾಗಿದೆ. ಕರ್ನಾಟಕದ ಗ್ರಾಹಕ ಒಂದು ಬ್ಯಾಂಕ್ ಖಾತೆಯನ್ನು ತೆರೆಯಬೇಕಾದರೆ, ಖಾತೆಗೆ ಹಣ ತುಂಬ ಬೇಕಾದರೆ ಆಂಗ್ಲ/ಹಿಂದಿ ಭಾಷೆ ಬಲ್ಲವರ ಮೇಲೆ ಅವಲಂಬಿತವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ಸಿಗುವ ಚೆಕ್ಕು, ಎಲ್ಐಸಿ ಬಾಂಡು, ಅಂಚೆ ಚೀಟಿ, ರೈಲ್ವೆ ಟಿಕೇಟು ಇನ್ನೂ ಅನೇಕ ಕಡೆ ಕನ್ನಡ ಗ್ರಾಹಕನಿಗೆ ಅನ್ಯಾಯವಾಗುತ್ತಿದೆ. ಹಾಗೆಯೇ ಕನ್ನಡ ನಾಮಫಲಕ ಕಡ್ಡಾಯ ಎಂದು ಹೈಕೋರ್ಟ್​​​​ ತೀರ್ಪು ನೀಡಿದರೂ ಮತ್ತೆ ಖಾಸಗಿ ವಾಣಿಜ್ಯ ಸಂಸ್ಥೆಗಳು ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​​​ ಮೊರೆ ಹೋಗಿವೆ. ಹೀಗಾಗಿ ಕರ್ನಾಟಕದಲ್ಲಿ ವ್ಯವಹಾರ ಮಾಡಬೇಕಾದರೆ ಕನ್ನಡ ಬಳಕೆ ಕಡ್ಡಾಯ(ನೋ ಕನ್ನಡ, ನೋ ಬ್ಯುಸಿನೆಸ್​​) ಎಂಬ ಅಭಿಯಾನವೂ ಕನ್ನಡ ಗ್ರಾಹಕರ ಕೂಟದಿಂದ ಹಮ್ಮಿಕೊಳ್ಳಲಾಗಿದೆ.

ಗ್ರಾಹಕ ಸೇವೆ ನಮ್ಮ ಭಾಷೆಯಲ್ಲಿ ನೀಡಿ(ಸರ್ವ್​​​ ಇನ್​​ ಮೈ ಲಾಂಗ್ವೇಜ್) ಆಂದೋಲನ ಬಹಳ ಪರಿಣಾಮಕಾರಿಯಾಗಿ ಆಗಿದೆ. ಹಾಗಯೇ ನಮ್ಮ ಕರ್ನಾಟಕದಲ್ಲಿ ವ್ಯವಹಾರ ಮಾಡಬೇಕಾದರೆ ಕನ್ನಡ ಬಳಕೆ ಕಡ್ಡಾಯ ಅಭಿಯಾನವೂ ಪ್ರಭಾವ ಬೀರಲಿದೆ ಎಂದು ಕನ್ನಡ ಗ್ರಾಹಕ ಕೂಟದ ಸದಸ್ಯ ಗಣೇಶ್​​​ ಚೇತನ್​​​ ಟ್ವೀಟ್​​ ಮಾಡಿದ್ದಾರೆ.




ಇನ್ನು ಕನ್ನಡದ ಚಿತ್ರಗಳಿಗೆ ಚಿತ್ರಮಂದಿರ ಕೊಡದೆ ಇರೋದು; ಕನ್ನಡಕ್ಕೆ ಡಬ್ ಆದ ಚಿತ್ರಗಳಿಗೆ ಚಿತ್ರಮಂದಿರ ಕೊಡದೆ ಇರೋದು; ಕನ್ನಡ ನಾಮಫಲಕ ಏಕೆ ಹಾಕಬೇಕು ಎಂದು ಕೇಳೋದು; ಬ್ಯಾಂಕಿನಲ್ಲಿ ಕನ್ನಡದಲ್ಲಿ ಸೇವೆ ಕೊಡದೆ ಇರೋದು; ಇವೆಲ್ಲವೂ ಸಮಸ್ಯೆಗಳಿಗೆ ಒಂದೇ ಕಾರಣ. ಕನ್ನಡಿಗರು ಅನಾಥರು. ಅವರ ರಕ್ಷಣೆಗೆ ಯಾರೂ ಇಲ್ಲ ಎಂದು ಗಣೇಶ್​​ ಚೇತನ್​​ ಮತ್ತೊಂದು ಟ್ವೀಟ್​​ನಲ್ಲಿ ಉಲ್ಲೇಖ ಮಾಡಿದ್ಧಾರೆ. ಜತೆಗೆ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿದರೆ ನಡೆಯತ್ತೆ. ಸರ್ಕಾರ, ಉದ್ಯಮ, ಪರಭಾಷಿಕರು ಎಲ್ಲರದ್ದೂ ಒಂದೇ ಧೋರಣೆ ಎಂದು ಕುಟುಕಿದ್ದಾರೆ.


ಇತ್ತೀಚೆಗೆ ಕನ್ನಡ ಭಾಷೆಯಲ್ಲಿ ನಾಮಫಲಕ ಹೊಂದಿಲ್ಲದ ಅಂಗಡಿ ಮುಂಗಟ್ಟು, ಕಚೇರಿ ಇತ್ಯಾದಿಗಳ ಪರವಾನಿಗೆ ಹಿಂಪಡೆಯಲು ಬಿಬಿಎಂಪಿ ತೀರ್ಮಾನ ಮಾಡಿದ ಬೆನ್ನಲ್ಲೇ ಕೆಲವು ವಾಣಿಜ್ಯ ಖಾಸಗಿ ಸಂಸ್ಥೆಗಳು ಸುಪ್ರೀಂಕೋರ್ಟ್​​ ಮೊರೆ ಹೋಗಿವೆ. ಬೆಂಗಳೂರಿನ ಸುಮಾರು 13 ಸಾವಿರ ಅಂಗಡಿ, ಮುಂಗಟ್ಟು ಮತ್ತು ಮಳಿಗೆಗಳಿಗೆ ಬಿಬಿಎಂಪಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಿ ಎಂದು ನೀಡಿದ ನೋಟೀಸ್ ರದ್ದು ಮಾಡುವಂತೆ ಈ ಸಂಸ್ಥೆಗಳು ಮನವಿ ಅರ್ಜಿ ಸಲ್ಲಿಸಿವೆ. ಸದ್ಯದಲ್ಲೇ ಸುಪ್ರೀಂಕೋರ್ಟ್​ ಈ ಬಗ್ಗೆ ಚರ್ಚೆ ನಡೆಸಿ ತೀರ್ಪು ನೀಡಲಿದೆ.

ಇದನ್ನೂ ಓದಿ: ವರ್ಷದಲ್ಲಿ ಕನ್ನಡಿಗರು ಮಾಡುವ ಖರ್ಚು 4 ಲಕ್ಷ 20 ಸಾವಿರ ಕೋಟಿ: ಗ್ರಾಹಕ ಸೇವೆ ನಮ್ಮ ಭಾಷೆಯಲ್ಲಿ ನೀಡಿ ಆಂದೋಲನ

ಈ ಮುನ್ನ ಕಳೆದ ನವೆಂಬರ್ 30ರೊಳಗೆ ಕನ್ನಡ ನಾಮಫಲಕ ಹಾಕಿಲ್ಲದ ಅಂಗಡಿಗಳ ಲೈಸೆಲ್ಸ್ ರದ್ದುಗೊಳಿಸುವುದಾಗಿ ಬಿಬಿಎಂಪಿ ನೋಟೀಸ್ ನೀಡಿದ್ದರ ವಿರುದ್ಧ ಮೆಟ್ರೋ ಕ್ಯಾಶ್​​ ಅಂಡ್​​ ಕ್ಯಾರಿ ಎಂಬ ಸಂಸ್ಥೆಯೂ ಹೈಕೋರ್ಟ್​​ ಮೆಟ್ಟಿಲೇರಿದೆ. ನಿನ್ನೆ ಕನ್ನಡದಲ್ಲಿ ನಾಮಫಲಕ ಕಡ್ಡಾಯ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ಸಂಸ್ಥೆಗೆ ಛೀಮಾರಿ ಹಾಕಿತ್ತು. ನೀವಿರೋದು ಕನ್ನಡ ನಾಡಿನಲ್ಲಿ, ಇಲ್ಲಿನ ಭಾಷೆ ಮತ್ತು ಸಂಸ್ಕೃತಿ ಗೌರವಿಸುವುದು ನಿಮ್ಮ ಜವಾಬ್ದಾರಿ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನ ಗೌರವಿಸಿ ಎಂದು ಅರ್ಜಿದಾರರಿಗೆ ಮೌಖಿಕವಾಗಿಯೇ ಹೈಕೋರ್ಟ್​​ ಕಿವಿಮಾತು ಹೇಳಿತ್ತು.

ಮೊದಲಿಗೆ ಕನ್ನಡ ನಾಮಫಲಕ ಕಡ್ಡಾಯ ಪ್ರಶ್ನಿಸಿ ರೀಟೇಲರ್ಸ್ ಆಸೋಸಿಯೇಷನ್ಸ್ ಆಫ್ ಇಂಡಿಯಾ ಸಂಸ್ಥೆ ತಕರಾರು ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಬೆನ್ನಲ್ಲೇ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಕೂಡ ಅರ್ಜಿ ಸಲ್ಲಿಸಿತ್ತು. ಹಾಗಾಗಿ ಒಂದರ ನಂತರ ಮತ್ತೊಂದು ಅರ್ಜಿ ವಿಚಾರಣೆ ನಡೆಸಬೇಕಾದ ಕಾರಣ ವಿಚಾರಣೆ ಹೈಕೋರ್ಟ್​​ ಜನವರಿಗೆ ಮುಂದೂಡಿತ್ತು.

ಬಿಬಿಎಂಪಿಯ ನಿಯಮಾವಳಿ ಪ್ರಕಾರ, ಯಾವುದೇ ಅಂಗಡಿ ಅಥವಾ ಮಳಿಗೆಯು ತನ್ನ ನಾಮಫಲಕದಲ್ಲಿ ಕನಿಷ್ಠ ಶೇ. 60ರಷ್ಟು ಕನ್ನಡ ಭಾಷೆ ಬಳಕೆ ಮಾಡಬೇಕು. ಇನ್ನುಳಿದ ಭಾಗವನ್ನು ಯಾವುದೇ ಭಾಷೆಯಲ್ಲಾದರೂ ಬರೆದುಕೊಳ್ಳಬಹುದು. ನವೆಂಬರ್ 1ರಂದೇ ಈ ಕ್ರಮ ಅನುಷ್ಠಾನಕ್ಕೆ ಬರಬೇಕಿತ್ತು. ಆದರೆ, ನೂತನ ಬೆಂಗಳೂರು ಮೇಯರ್ ಗೌತಮ್ ಕುಮಾರ್ ಜೈನ್ ಅವರು ಕನ್ನಡ ನಾಮಫಲಕ ಅಳವಡಿಕೆಗೆ ನವೆಂಬರ್ 30ವರೆಗೆ ಗಡುವು ನೀಡಿದ್ದರು.
Published by: Ganesh Nachikethu
First published: December 28, 2019, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories