ಅಧಿಕೃತವಾಗಿ 'ಕೈ' ಹಿಡಿದ S Narayan​; 2023ಕ್ಕೆ ಕಾಂಗ್ರೆಸ್​​ನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ ಎಂದ ನಿರ್ದೇಶಕ

ಪಕ್ಷದ ಜಾತ್ಯಾತೀತ ಸಿದ್ದಾಂತಗಳು ಇಷ್ಟ ಆಯ್ತು. ಹಾಗಾಗಿ ನಾನು ಕಾಂಗ್ರೆಸ್ ಸೇರಿದೆ. ನಮ್ಮಲ್ಲರ ಗುರಿ 2023ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿದೆ.

ಡಿಕೆ ಶಿವಕುಮಾರ್- ಎಸ್​ ನಾರಾಯಣ್

ಡಿಕೆ ಶಿವಕುಮಾರ್- ಎಸ್​ ನಾರಾಯಣ್

 • Share this:
  ಬೆಂಗಳೂರು (ಮಾ. 16):  ಬೆಂಗಳೂರು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟನಾಗಿ ಗುರುತಿಸಿಕೊಂಡಿರುವ ಎಸ್​ ನಾರಾಯಣ್ (S Narayan)​ ರಾಜಕೀಯಕ್ಕೆ ಧುಮುಕಿದ್ದಾರೆ. ಇಂದು ಅವರು ಅಧಿಕೃತವಾಗಿ ಕಾಂಗ್ರೆಸ್ (Congress)​ ಪಕ್ಷ ಸೇರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar)​  ಸಮ್ಮುಖದಲ್ಲಿ ಎಸ್​ ನಾರಾಯಣ್​ ಅಧಿಕೃತವಾಗಿ ಕೈ ಹಿಡಿದಿದ್ದಾರೆ. ಇದೇ ವೇಳೆ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಣ ತಿಮ್ಮಯ್ಯ ಪುರ್ಲೆ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದರು.

  ಪಕ್ಷದ ಆದರ್ಶ ಮೆಚ್ಚಿ ಪಕ್ಷ ಸೇರ್ಪಡೆ

  ಎಸ್​ ನಾರಾಯಣ್​ ಅವರು ಕಾಂಗ್ರೆಸ್​ ಸೇರ್ಪಡೆಗೊಂಡ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಹು ಮುಖ ಪ್ರತಿಭೆ, ಸರಳ ವ್ಯಕ್ತಿತ್ವದ ನಾರಾಯಣ್ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಅವರು ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ವಾಣಿಜ್ಯ ಮಂಡಳಿ ಸೇರಿದಂತೆ ಸಮುದಾಯದ ಸಂಘಟನೆ ಮಾಡಲಿದ್ದಾರೆ. ಇನ್ನು ಪಕ್ಷಕ್ಕೆ ಸೇರುವವರ ದೊಡ್ಡ ಪಟ್ಟಿ ಇದೆ. ಅವರೆಲ್ಲಾ ಈಗಾಗಲೇ ಅರ್ಜಿ ಹಾಕಿದ್ದಾರೆ. ಅದಕ್ಕೆ ಸಮಯ ನಿಗದಿ ಮಾಡಬೇಕಿದೆ ಎಂದರು.

  ಜನ ಬದಲಾವಣೆ ಬಯಸಿದ್ದಾರೆ
  ಇದೇ ವೇಳೆ ಪಂಚ ರಾಜ್ಯ ಚುನಾವಣೆ ಸೋಲಿನ ಕುರಿತು ಬಿಜೆಪಿ ನಾಯಕರ ಟೀಕೆ ಕುರಿತು ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಮುಗಿದೇ ಹೋಯ್ತು, ಧೂಳೀಪಟ ಅಂತ ಬರೆದರು. ಪ್ರಿಯಾಂಕ ಗಾಂಧಿ 200 ಕ್ಕೂ ಹೆಚ್ಚು ಸಭೆ ಮಾಡಿದ್ದಾರೆ. ಪಂಜಾಬ್ ನಲ್ಲಿ ನಮ್ಮ ಅಂತರಿಕ ಕಲಹದಿಂದ ಕೈ ತಪ್ಪಿದೆ. ಯಡಿಯೂರಪ್ಪ, ಮುಖ್ಯ ಮಂತ್ರಿಗಳು ಏನೇ ಮಾತಾಡಲಿ. ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ, ನಮ್ಮ ಕಾಲ ಮೇಲೆ ನಾವು ನಿಲ್ಲಲಿದ್ದೇವೆ ಎಂದು ತಿಳಿಸಿದರು.

  ಪಕ್ಷಕ್ಕಾಗಿ ದುಡಿಯುವೆ

  ರಾಜಕೀಯ ಪ್ರವೇಶ ಎಂದಾಗ ನಾನು ಆಯ್ಕೆ‌ಮಾಡಿಕೊಂಡಿದ್ದು ಕಾಂಗ್ರೆಸ್ ಪಕ್ಷ. ದೇಶಕ್ಕಾಗಿ ಕಾಂಗ್ರೆಸ್ ತ್ಯಾಗ ಬಲಿದಾನ ಎಲ್ಲವನ್ನೂ ಕೊಟ್ಟಿದೆ. ಬಡವನಿಗೆ, ದಲಿತನಿಗೆ, ಹಿಂದುಳಿದವರ ಧ್ವನಿ ಈ ಕಾಂಗ್ರೆಸ್. ಪಕ್ಷದ ಜಾತ್ಯಾತೀತ ಸಿದ್ದಾಂತಗಳು ಇಷ್ಟ ಆಯ್ತು. ಹಾಗಾಗಿ ನಾನು ಕಾಂಗ್ರೆಸ್ ಸೇರಿದೆ. ನಮ್ಮಲ್ಲರ ಗುರಿ 2023ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿದೆ. ಪಕ್ಷಕ್ಕಾಗಿ ದುಡಿಯುತ್ತೇನೆ. ಕೊಟ್ಟ ಮಾತಿನಂತೆ ಕೆಲಸ ಮಾಡುತ್ತೇನೆ ಎಂದರು.

  ಇದನ್ನು ಓದಿ: ಕಾಂಗ್ರೆಸ್ ಮುಖಂಡರು ವಿಕೃತ ಮನಸ್ಸಿನವರು; 'The Kashmir Files' ಚಿತ್ರ ವೀಕ್ಷಣೆ ಬಳಿಕ ರೇಣುಕಾಚಾರ್ಯ ಕಿಡಿ

  ಎಚ್​​ಡಿಕೆ ಜೊತೆ ಉತ್ತಮ ಒಡನಾಟ 

  ಚಿತ್ರರಂಗದಲ್ಲಿ ಉತ್ತಮ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಎಸ್​ ನಾರಾಯಣ್ ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ ಜೊತೆ ಹೆಚ್ಚಿನ ಒಡನಾಟ ಹೊಂದಿದ್ದರು. ಎಸ್​ ನಾರಾಣ್​ ನಿರ್ದೇಶನದ ಹಲವು ಚಿತ್ರಗಳಿಗೆ ಎಚ್​ಡಿಕೆ ಅವರ ಚೆನ್ನಾಂಬಿಕಾ ಫಿಲ್ಮ್ಸ್​​​​ ಅಡಿ ನಿರ್ಮಾಣಗೊಂಡಿದ್ದವು. ರಾಜಕೀಯ ದಿಂದ ಅಂತರ ಕಾಯ್ದುಕೊಂಡಿದ್ದ ಅವರು ಇದೀಗ ಅಧಿಕೃತವಾಗಿ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯ ಜೀವನ ಆರಂಭಕ್ಕೆ ಮುಂದಾಗಿದ್ದಾರೆ.

  ಇದನ್ನು ಓದಿ: ಎಸಿಬಿ ಕೈ ಇರಿಸಿದ ಕಡೆಯಲ್ಲಾ ಚಿನ್ನ.. ಚಿನ್ನ: ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಸಂಪತ್ತು ನೋಡಿ

  ಈ ಹಿಂದೆಯೇ ಕಾಂಗ್ರೆಸ್​ ಸೇರುವ ಕುರಿತು ತಿಳಿಸಿದ್ದ ನಿರ್ದೇಶಕ

  ಇನ್ನು ಕಾಂಗ್ರೆಸ್​ ಪಕ್ಷ ಸೇರ್ಪಡೆ ಕುರಿತು ಕಳೆದ ಕೆಲವು ತಿಂಗಳ ಹಿಂದೆಯೇ ಅವರು ಸ್ಪಷ್ಟಪಡಿಸಿದ್ದರು. ತಮ್ಮ '5ಡಿ' ಚಿತ್ರದ ಫಸ್ಟ್‌ ಲುಕ್ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ಬಿಡುಗಡೆ ಮಾಡಿಸಿದ್ದರು. ಈ ವೇಳೆ ಅವರು ತಮ್ಮ ರಾಜಕೀಯ ಪ್ರವೇಶದ ಕುರಿತು ತಿಳಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಕೂಡ ಎಸ್​ ನಾರಾಯಣ್​ ಅವರು ತಮ್ಮನ್ನು ಭೇಟಿಯಾಗಿ ಪಕ್ಷ ಸೇರ್ಪಡನೆ ಕುರಿತು ಮಾತನಾಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮುಖೇನ ತಿಳಿಸಿದ್ದರು.
  Published by:Seema R
  First published: