ಬೆಂಗಳೂರು: ಕನ್ನಡದ ಹಿರಿಯ ಕಥೆಗಾರ, ಕವಿ, ವಿಮರ್ಶಕ ಡಾ.ಕೆ.ವಿ. ತಿರುಮಲೇಶ್ ಹೈದರಾಬಾದ್ನಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. 82 ವರ್ಷ ವಯಸ್ಸಿನ ಅವರು ಹೈದರಾಬಾದ್‌ನ (Hyderabad) ತಮ್ಮ ಮಗಳ ನಿವಾಸದಲ್ಲಿ ನಿಧನರಾಗಿದ್ದಾರೆ. ಹೆಂಡತಿ, ಮೂವರು ಹೆಣ್ಣು ಮಕ್ಕಳನ್ನು ಕೆ.ವಿ. ತಿರುಮಲೇಶ್ (KV Tirumalesh) ಅಗಲಿದ್ದಾರೆ.
ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಕಳೆದ ರವಿವಾರವಷ್ಟೇ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು.
ಹೈದರಾಬಾದ್ನಲ್ಲಿ ವೃತ್ತಿ ಜೀವನ
ಹೈದರಾಬಾದಿಗೆ 1975ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೋಗಿದ್ದ ಕೆ.ವಿ.ತಿರುಮಲೇಶ್ ಅವರು ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ ವ್ಯಾಸಂಗ ಮಾಡಿದ್ದರು. ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಇಂಗ್ಲೀಷ್ ಆಂಡ್ ಫಾರಿನ್ ಲಾಂಗ್ವಿಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲೇ ವೃತ್ತಿ ಜೀವನದಿಂದ ನಿವೃತ್ತಿಯನ್ನು ಸಹ ಹೊಂದಿದ್ದರು.
ಹಿರಿಯ ಸಾಹಿತಿ ಕೆ.ವಿ.ತಿರುಮಲೇಶ್ ಅವರ ಬಗ್ಗೆ ಹಲವು ಸಾಹಿತ್ಯಾಭಿಮಾನಿಗಳು, ಹಿರಿಯ ಸಾಹಿತಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಕೆ.ವಿ.ತಿರುಮಲೇಶ್ ಬಗ್ಗೆ ತಿರು ಶ್ರೀಧರ ಅವರು ಫೇಸ್ಬುಕ್ನಲ್ಲಿ ಹಂಚಿಕೊಂಡ ವಿವರ ಹೀಗಿದೆ
ಕೆ. ವಿ. ತಿರುಮಲೇಶ ಅವರು 1940ರ ಸೆಪ್ಟೆಂಬರ್ 12 ರಂದು ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದಲ್ಲಿ ಜನಿಸಿದರು. ಅವರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಗಳು ಗ್ರಾಮಾಂತರ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸಾಗಿದವು. ನಂತರ ಕಾಸರಗೋಡು ಮತ್ತು ತಿರುವಂತಪುರದಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಅಭ್ಯಾಸ ಮಾಡಿ, 1966ರಿಂದ ಕೆಲವು ಕಾಲ ಕೇರಳದ ಹಲವು ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡಿದರು.
ಇದನ್ನೂ ಓದಿ: Vijayanagara: ವಿಜಯನಗರಕ್ಕೆ ಉದ್ದ ಕತ್ತಿನ ವಿಶೇಷ ಅತಿಥಿಯ ಆಗಮನ!
1975ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೈದರಾಬಾದಿಗೆ ತೆರಳಿದ ತಿರುಮಲೇಶರು ಅಲ್ಲಿ ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ ಗಳಿಸಿದರು. ಕನ್ನಡದ ವಾಕ್ಯರಚನೆ ಮತ್ತು ಕರ್ಮಣೀ ಪ್ರಯೋಗದ ನಿಯೋಗಗಳ ಕುರಿತು ಕ್ರಮಬದ್ಧವಾದ, ಸೂಕ್ಷ್ಮ ಒಳನೋಟಗಳನ್ನೊಳಗೊಂಡ ಭಾಷಾವೈಜ್ಞಾನಿಕ ಅಧ್ಯಯನ ಅವರ ಪಿಎಚ್.ಡಿ ಪ್ರಬಂಧವಾಗಿದೆ.
ಇದನ್ನೂ ಓದಿ: Dance class: ಬೆಂಗಳೂರಿನ ಬೆಸ್ಟ್ ಭರತನಾಟ್ಯ ಕ್ಲಾಸ್ಗಳ ಲಿಸ್ಟ್ ಇಲ್ಲಿದೆ
ತಿರುಮಲೇಶರು ಇಂಗ್ಲೆಂಡಿನ ರೆಡಿಂಗ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ವ್ಯಾಸಂಗ ಮಾಡಿ ಎಂ.ಎ (ಅನ್ವಯಿಕ ಭಾಷಾವಿಜ್ಞಾನ) ಪದವಿಯನ್ನೂ ಪಡೆದುಕೊಂಡರು. ಮುಂದೆ ಹೈದರಾಬಾದಿನಲ್ಲೇ ಅಧ್ಯಾಪನ ವೃತ್ತಿಯಲ್ಲಿ ನಿರತರಾಗಿದ್ದು, 25 ವರ್ಷಗಳ ನಂತರ 2002ರಲ್ಲಿ ನಿವೃತ್ತರಾದರು. ಕೆಲವು ವರ್ಷ ವಿದೇಶಗಳಲ್ಲೂ ಅಧ್ಯಾಪಕರಾಗಿದ್ದು 2011ರಲ್ಲಿ ಮರಳಿ ಹೈದರಾಬಾದಿನಲ್ಲಿ ನೆಲೆಸಿದರು. ಅಮೇರಿಕದ ಅಯೋವ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.
ತಿರುಮಲೇಶರು ಕನ್ನಡದ ನವ್ಯಸಾಹಿತ್ಯದ ಸಂದರ್ಭದಲ್ಲಿ ಬರೆಯಲು ತೊಡಗಿದವರು. ಸುಮಾರು ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ ಅನುವಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡು ಬಂದರು.
ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬುವು ತಿರುಮಲೇಶರ ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕಾದಂಬರಿಗಳು. ನಾಯಕ ಮತ್ತು ಇತರರು, ಕೆಲವು ಕಥಾನಕಗಳು, ಕಳ್ಳಿ ಗಿಡದ ಹೂ ಕಥಾಸಂಕಲನಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ ಮತ್ತು ಪೂರ್ವ ಯಾನ ಇವರ ಅನುವಾದಿತ ಕೃತಿಗಳು.
ಕೆ.ವಿ.ತಿರುಮಲೇಶ್ ಅವರ 'ಅಕ್ಷಯ ಕಾವ್ಯ' ಕೃತಿಗೆ 2015ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಂದಿತ್ತು. ಇದಲ್ಲದೆ ಕರ್ನಾಟಕ ಸಾಹಿತ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಗೋವಿಂದ ಪೈ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಸಂದಿದ್ದವು.
ತಿರುಮಲೇಶರ ಈ ಒಂದು ಮಾತು ಅವರ ಸಮಸ್ತವನ್ನೂ ಹೇಳುತ್ತದೆ: "ನೀವು ನವ್ಯವನ್ನು ಬಯ್ಯಿರಿ, ಅಥವಾ ಬಂಡಾಯವನ್ನು ತೆಗಳಿರಿ; ಪ್ರಗತಿಶೀಲವನ್ನು ಕಡೆಗಣಿಸಿರಿ, ಅಥವಾ ನವೋದಯವನ್ನು ಹೀಯಾಳಿಸಿರಿ; ಹಳೆಯ ಸಾಹಿತ್ಯವನ್ನೆಲ್ಲ ದೂರೀಕರಿಸಿರಿ, ಹೊಸ ಸಾಹಿತ್ಯವನ್ನು ಕೀಳ್ಗಣಿಸಿರಿ; ಲಿಖಿತ ಸಾಹಿತ್ಯದ ವಿರುದ್ಧ ಮೌಖಿಕ ಸಾಹಿತ್ಯವನ್ನು ಎತ್ತಿಕಟ್ಟಿರಿ, ಎಡ ಬಲವೆಂದು ಹೋರಾಡಿರಿ, ಸಹಿಷ್ಣುತೆಗಾಗಿ ಅಸಹಿಷ್ಣುವಾಗಿರಿ, ರಾಷ್ಟ್ರೀಯತೆಯ ವಿರುದ್ಧ ಸಂವಿಧಾನವನ್ನು ನಿಲ್ಲಿಸಿ, ನೀವೇ ಸರಿಯೆಂದೂ, ಎದುರಾಳಿ ತಪ್ಪೆಂದೂ ಮೇಜು ಕುಟ್ಟಿರಿ, ಏನು ಬೇಕಾದರೂ ಮಾಡಿ, ಆದರೆ ನನ್ನ ವಿನಂತಿ ಇಷ್ಟೇ: ಯಾವ ಸಾಹಿತ್ಯವನ್ನು ತೆಗಳುತ್ತೀರೋ ಅದನ್ನು ಮೊದಲು ಓದಿ ತಿಳಿದುಕೊಳ್ಳಿ. ಇದೊಂದು ಪ್ರಾಥಮಿಕ ಅಗತ್ಯ."
ಹಿರಿಯ ವಿದ್ವಾಂಸರಾದ ಕೆ.ವಿ. ತಿರುಮಲೇಶರ ಅಗಲಿಕೆ ನಮ್ಮ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ