ಬೆಳಗಾವಿ (ಫೆ.20): ಆ ಯೋಧ ದೇಶಸೇವೆಗಾಗಿ ತನ್ನ ಕುಟುಂಬವನ್ನು ಬಿಟ್ಟು ದೂರದ ಜಮ್ಮು ಕಾಶ್ಮೀರದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತ ಆತನ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿ, ದಿನವೂ ಸಂಕಟ ಪಡುತ್ತಿದೆ. ಇದು ಬೆಳಗಾವಿ ಜಿಲ್ಲೆಯ ಯೋಧನ ಕುಟುಂಬದ ಕಣ್ಣೀರಿನ ಕಥೆ.
ಜಿಲ್ಲೆಯ ರಾಮದುರ್ಗ ತಾಲೂಕಿನ ತೋಟಗಟ್ಟಿಯ ಯೋಧ ವಿಠ್ಠಲ್ ಕಡಕೋಳ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ತುತ್ತಾಗಿದೆ. ಇಲ್ಲಿನ ಅಂಗನವಾಡಿ ಕಟ್ಟಡದ ಸ್ಥಳವನ್ನು ವಿಠ್ಠಲ್ ಕುಟುಂಬ ಕಬಳಿಸುವ ಆರೋಪದ ಮೇಲೆ ಗ್ರಾಮಸ್ಥರು ಅವರನ್ನು ಊರಿನಿಂದ ಬಹಿಷ್ಕಾರ ಹಾಕಿದ್ದಾರೆ.
ಊರಿನಿಂದ ಬಹಿಷ್ಕಾರ ಹಾಕಿದ ಹಿನ್ನೆಲೆ ಇವರಿಗೆ ಯಾವುದೇ ನೆರವು ಕೂಡ ಸಿಗುತ್ತಿಲ್ಲ. ಈ ಕುರಿತು ವಿಠ್ಠಲ್ ಕುಟುಂಬದವರು 2017ರಲ್ಲಿಯೇ ಬೆಳಗಾವಿ ಡಿಸಿ ಹಾಗೂ ಎಸ್ಪಿಗೆ ಮನವಿ ಮಾಡಿದ್ದರು. ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.
ಇದನ್ನು ಓದಿ: ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ; ಧರಣಿ ಕೈ ಬಿಡುವಂತೆ ಸಾರಿಗೆ ನೌಕರರಿಗೆ ಲಕ್ಷ್ಮಣ ಸವದಿ ಮನವಿ
ಇನ್ನು ಮುಂದಿನ ತಿಂಗಳು ಯೋಧ ಮತ್ತು ಆತನ ಸಹೋದರ ನಿಶ್ಚಿತಾರ್ಥ ನಿಗದಿಯಾಗಿದ್ದು, ಇದರರ ಕಾರ್ಯಕ್ಕೆ ಕೂಡ ಯಾರು ಸಹಕಾರ ನೀಡುತ್ತಿಲ್ಲ. ಇನ್ನು ಈ ಮದುವೆ ಮಾಡಿಸಲು ಗ್ರಾಮದ ಅರ್ಚಕರು ಮುಂದೆ ಬಾರದೆ ಹಿನ್ನೆಲೆಯಲ್ಲಿ ಈ ಮದುವೆ ನಿಂತು ಹೋಗಬಹದೇನೋ ಎನ್ನುವ ಆತಂಕದಲ್ಲಿ ಈ ಕುಟುಂಬ ದಿನ ಕಳೆಯುತ್ತಿದೆ.
ಈ ಕುರಿತು ಸ್ಪಷ್ಟೀಕರಣ ನೀಡಿರುವ ತೋಟಗಟ್ಟಿ ಗ್ರಾ.ಪಂ ಸದಸ್ಯ ಈರಣ್ಯ ಹಿರೊಳ್ಳಿ, ಯೋಧನ ಕುಟುಂಬಕ್ಕೆ ನಾವು ಬಹಿಷ್ಕಾರ ಹಾಕಿಲ್ಲ. ಸ್ವಾತಂತ್ರ್ಯ ದಿನಾಚರಣೆಯಂದು ಯೋಧನಿಂದಲೇ ಧ್ವಜಾರೋಹಣ ನೆರವೇರಿಸಿದ್ದೇವೆ. ಬಹಿಷ್ಕಾರ ಹಾಕಿದ್ದೇವೆಂಬುದು ಸುಳ್ಳು. 7 ವರ್ಷಗಳ ಹಿಂದೆ ಅಂಗನವಾಡಿ ಕಟ್ಟಡ ವಿವಾದದಲ್ಲಿ ದಾರಿ ನೀಡುವುದಾಗಿ ಹೇಳಿ ಮಾತು ತಪ್ಪಿದ್ದರು. ಹೀಗಾಗಿ ಕುಟುಂಬಸ್ಥರ ಮೇಲೆ ಜನರಿಗೆ ಅಸಮಾಧಾನ ಇತ್ತು ಅಷ್ಟೆ ಎಂದಿದ್ದಾರೆ.
ಇನ್ನು ಈ ಕುರಿತು ಮಾತನಾಡಿದ ತಹಶಿಲ್ದಾರ ಗಿರಿಶ್ ಸ್ವಾಧಿ, ಯೋಧನ ಕುಟುಂಬದ ನಿಶ್ಚಿತಾರ್ಥ ಕಾರ್ಯಕ್ಕೆ ಪೂಜಾರಿ ಬಂದಿಲ್ಲ. ಪೂಜಾರಿಯನ್ನು ಕೇಳಿದರೆ ಹಿರಿಯರು ಹೋಗಬೇಡ ಎಂದಿದ್ದಾರೆ. ಹೀಗಾಗಿ ಹೋಗಿಲ್ಲ ಎಂದು ಹೇಳಿದ್ದಾರೆ. ಇಂದು ಸಂಧಾನ ಸಭೆ ನಡೆಸಲಾಗಿದೆ. ಆದರೇ ಗ್ರಾಮದ ಹಿರಿಯರು ಬಂದಿಲ್ಲ. ಹೀಗಾಗಿ ಇನ್ನೊಮ್ಮೆ ಸಭೆ ಕರೆದು ಸಂಧಾನ ಮಾಡಲಾಗುವುದು. ಗ್ರಾಮಸ್ಥರು ಹಾಗೂ ಕುಟುಂಬ ನಡುವೆ ವಿವಾದವಿದೆ. ಯಾವುದೇ ಸಾಮಾಜಿಕ ಬಹಿಷ್ಕಾರ ಹಾಕಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ