ಉಡುಪಿ ಕೃಷ್ಣ ಮಠದ ಮುಖ್ಯದ್ವಾರದ ಫಲಕದಲ್ಲೇ ಕನ್ನಡ ಮಾಯ; ಕನ್ನಡಪರ ಸಂಘಟನೆಗಳಿಂದ ವ್ಯಾಪಕ ಆಕ್ರೋಶ

ಮಠದ ಮುಂಭಾಗ ಇದ್ದ ಕೃಷ್ಣ ಮಠ ಎಂಬ ಕನ್ನಡ ಹಾಗೂ ಆಂಗ್ಲಭಾಷೆಯಲ್ಲಿದ್ದ ನಾಮಫಲಕವನ್ನ ತೆರವು ಮಾಡಿದ್ದು, ಸಂಸ್ಕೃತ ಹಾಗೂ ತುಳುವಿನಲ್ಲಿ ಬರೆದ ಫಲಕ ಅಳವಡಿಸಲಾಗಿದೆ.

ಕನ್ನಡ ಕಣ್ಮರೆಯಾಗಿರುವ ಫಲಕ

ಕನ್ನಡ ಕಣ್ಮರೆಯಾಗಿರುವ ಫಲಕ

  • Share this:
 ಉಡುಪಿ (ಡಿ. 1): ಶ್ರೀಕೃಷ್ಣ ಮಠದ ಮುಖ್ಯದ್ವಾರದಲ್ಲಿ ಈ ಹಿಂದೆ ಕನ್ನಡದಲ್ಲಿ ಕೃಷ್ಣ ಮಠ ಎಂಬ ಫಲಕ ಇತ್ತು. ಈ ಕನ್ನಡ ನಾಮಫಲಕ ತೆರವು ಮಾಡಲಾಗಿದ್ದು, ಮಠದ ಈ ಕಾರ್ಯಕ್ಕೆ ವ್ಯಾಪಕ ಟೀಕೆ‌, ಆಕ್ರೋಶಗಳು ಕೇಳಿಬಂದಿದೆ.  ನಾಮಫಲಕ ತೆರವಾಗಿ ಮೂರು ದಿನಗಳು ಕಳೆದರೂ ಇನ್ನೂ ಅಳವಡಿಸದಿರುವುದಕ್ಕೆ ಕನ್ನಡಾಭಿಮಾನಿಗಳು, ಕೃಷ್ಣನ ಭಕ್ತರು ಆಕ್ರೋಶ ಹೊರಹಾಕಿದ್ದಾರೆ‌. ಎರಡು ದಿನದ ಹಿಂದೆ ಕೃಷ್ಣ ಮಠದ ಮುಂಭಾಗ ಇದ್ದ ಕೃಷ್ಣ ಮಠ ಎಂಬ ಕನ್ನಡ ಹಾಗೂ ಆಂಗ್ಲಭಾಷೆಯಲ್ಲಿದ್ದ ನಾಮಫಲಕವನ್ನ ತೆರವು ಮಾಡಿರುವ ಮಠದ ಪರ್ಯಾಯ‌ ಅದಮಾರು‌ ಮಠದ ಆಡಳಿತ ಮಂಡಳಿ, ಇದೀಗ ತುಳು ಹಾಗೂ ಸಂಸ್ಕೃತದಲ್ಲಿ ಶ್ರೀ ಕೃಷ್ಣ ಮಠ, ರಜತಪೀಠ ಪುರಂ  ಎಂಬ ಬರಹವನ್ನ ಮರದಲ್ಲಿ ಕೆತ್ತನೆ ಮಾಡಿ ಮಠದ ಮುಂಭಾಗ ಅಳವಡಿಸಿದೆ. ಈ‌ ಫಲಕ ಕಂಡ‌ ಭಕ್ತರು ಒಂದು ಕ್ಷಣ ಗೊಂದಲಕ್ಕೆ ಒಳಗಾಗಿದ್ದರು. ಫಲಕದಲ್ಲಿದ್ದ ಕನ್ನಡ ಕಾಣೆಯಾಗಿದ್ದಕ್ಕೆ  ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.

ಬರೆದಿರುವ ಫಲಕ ಪರ್ಯಾಯ‌ ಶ್ರೀ ಗಳ‌ ಸೂಚನೆ ಮೇಲೆ ಆಡಳಿತ‌ ಮಂಡಳಿ ಮಾಡಿರುವ  ಬದಲಾವಣೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಕ್ರೋಶ ವ್ಯಕ್ತಪಡಿಸಿ,  ಕೃಷ್ಣಮಠದ ಫಲಕ ಬದಲಾವಣೆ ತುಂಬಾ ಬೇಸರದ ಸಂಗತಿ. ಧಾರ್ಮಿಕ ಸಂಸ್ಥೆ ಸಮಾಜಕ್ಕೆ ಬುದ್ಧಿಹೇಳುವ ಸಂಸ್ಥೆಯಾಗಬೇಕು. ಕೃಷ್ಣಮಠದಲ್ಲಿ ಕನ್ನಡವೇ ಕಾಣೆಯಾಗಿದೆ. ಇಷ್ಟರವರೆಗೆ ಕೃಷ್ಣಮಠ ಎಂದು ಕನ್ನಡದಲ್ಲಿ ಬರೆಯಲಾಗಿತ್ತು. ಈಗ ಆ ಫಲಕ ತೆಗೆದು ತುಳುವಿನಲ್ಲಿ ಬರೆಯಲಾಗಿದೆ. ತುಳು ನಮ್ಮ ಸೋದರ ಭಾಷೆ ಒಪ್ಪಿಕೊಳ್ಳುತ್ತೇವೆ. ಆದರೆ ನಾಮಫಲಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ.  ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ.  ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸುತ್ತೇವೆ. ಕನ್ನಡ ಮತ್ತು ತುಳುವಿನ ನಡುವೆ ಕಂದಕ ಏರ್ಪಡಿಸುವ ಕೆಲಸ ಮಾಡಬೇಡಿ. ಎಷ್ಟೇ ದೊಡ್ಡವರಾಗಿ ಇರಲಿ, ಕಾನೂನು ರೀತಿಯಲ್ಲಿ ಅಪರಾಧ ಮಾಡಿದ್ದಾರೆ. ಕನ್ನಡಿಗರು ಕ್ಷಮಿಸಲಾರದಂತಹ ಅಪರಾಧ  ಇದು ಎಂದು ನೀಲಾವರ ಸುರೇಂದ್ರ ಅಡಿಗ ಆಕ್ರೋಶ ವ್ಯಕ್ತಪಡಿಸಿದರು.

ಈ‌ ಆಕ್ರೋಶದ ಬೆನ್ನಲ್ಲೇ ಧಾರ್ಮಿಕ ಮುಖಂಡರಾಗಿರುವ ವಾಸುದೇವ ಭಟ್ ಕೂಡ‌ ಆಕ್ರೋಶ‌ ಹೊರಹಾಕಿದ್ದಾರೆ. ತುಳು ಇಲ್ಲಿನ ಆಡು ಭಾಷೆ ಎಂಬುದು ನಿಜ. ಆದರೆ ನಾಮಫಲಕದಲ್ಲಿ ಕನ್ನಡ ಕಡ್ಡಾಯ ಎಂಬುದನ್ನು ಸರಕಾರವೇ ಸ್ಪಷ್ಟಪಡಿಸಿದೆ. ಕನ್ನಡದಲ್ಲಿ ಬರೆದು ಬಳಿಕ ತುಳು, ಸಂಸ್ಕೃತ ದಲ್ಲಿ ಬರೆಯಲಿ. ಆದರೆ ಕನ್ನಡವನ್ನೇ ಮಾಯ ಮಾಡುವುದು ಅಪರಾಧ. ಪರ್ಯಾಯ ಅದಮಾರು ಮಠಕ್ಕೆ ಯಾರು ಈ ಯೋಜನೆ ಕೊಟ್ಟಿದ್ದಾರೋ ಗೊತ್ತಿಲ್ಲ. ಮಠಮಾನ್ಯಗಳು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕೇ ಹೊರತು ಇಂತಹ ಬೆಳವಣಿಗೆಗಳಿಗೆ ಅವಕಾಶ ನೀಡಬಾರದು ಬೇಸರ ವ್ಯಕ್ತಪಡಿಸಿದ್ದಾರೆ.‌

ಇದನ್ನು ಓದಿ: ಕುರುಬ ಮೀಸಲಾತಿ ಹೋರಾಟಕ್ಕೆ ನನ್ನ ಮಕ್ಕಳಾಣೆ ಸಿದ್ದರಾಮಯ್ಯ ಅವರನ್ನು ಕರೆದಿದ್ದೇನೆ; ಸಚಿವ ಈಶ್ವರಪ್ಪ

ಇಷ್ಟಾಗುತ್ತಲ್ಲೇ ಪರ್ಯಾಯ ಅದಮಾರು ಮಠದಿಂದ ಸ್ಪಷ್ಟನೆ ನೀಡಿದೆ.  ಕೃಷ್ಣ ಮಠದ ಪುನಶ್ಚೇತನಗೊಳಿಸುವ ಜವಾಬ್ದಾರಿ ಹೊತ್ತಿರುವ ಮಠದ ಸಲಹೆಗಾರರಾಗಿರುವ ಕಲಾವಿದ ಪುರುಷೋತ್ತಮ ಅಡ್ವೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ,  ಕೃಷ್ಣ ಮಠವನ್ನು ಪುನಶ್ಚೇತನ ಗೊಳಿಸಲಾಗುತ್ತಿದೆ. ಪುನಶ್ಚೇತನದ ಸಂದರ್ಭ ಮಖ್ಯದ್ವಾರದ ಪ್ಲಾಸ್ಟಿಕ್ ಬೋರ್ಡ್ ತೆಗೆಯಲಾಗಿದೆ. ಮರದಲ್ಲಿ ತಯಾರಿಸಿ ಬೋರ್ಡ್ ಅಳವಡಿಸುವ ಯೋಜನೆ ಇದೆ. ದ್ವಾರದ ಮೇಲ್ಬಾಗದಲ್ಲಿ ಕನ್ನಡ ಬೋರ್ಡ್ ಅಳವಡಿಸುತ್ತೇವೆ. ಕೆಳಭಾಗದಲ್ಲಿ ಸಂಸ್ಕೃತ, ತುಳುವಿನಲ್ಲಿ ಬೋರ್ಡ್ ಅಳವಡಿಸಲಾಗುವುದು. ಈ ಬಗ್ಗೆ  ಪರ್ಯಾಯ ಅದಮಾರು ಮಠಾಧೀಶರು ಸೂಚನೆಯನ್ನು ಕೊಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಬೋರ್ಡ್ ಕಾಮಗಾರಿ ಪೂರ್ಣಗೊಳ್ಳುವ ಮೊದಲು ಲಕ್ಷದೀಪೋತ್ಸವ ಬಂದಿದೆ. ಮಠದ ಮುಖ್ಯದ್ವಾರಕ್ಕೆ ಬೋರ್ಡ್ ಅಳವಡಿಸಬೇಕಾದ ಪ್ರಮೇಯ ಬಂತು. ಕನ್ನಡದ ಬೋರ್ಡ್ ಇನ್ನಷ್ಟೇ ತಯಾರು ಆಗಬೇಕಾಗಿದೆ. ಸಂಸ್ಕೃತ ಮತ್ತು ತುಳುವಿನ ಬೋರ್ಡ್ ಮೊದಲೇ ಸಿದ್ಧವಾಗಿರುವ ಕಾರಣ ಅದನ್ನು ಅಳವಡಿಸಲಾಗಿದೆ. ತುಳುವಿಗೆ ಮಾನ್ಯತೆ ಕೊಡುವ ಉದ್ದೇಶದಿಂದ ಈ ಬೋರ್ಡ್ ಅಳವಡಿಸಲಾಗಿದೆ. ಕನ್ನಡ ಬೋರ್ಡ್ ಸಿದ್ಧವಾದ ಕೂಡಲೇ ಅದನ್ನು ಮೇಲ್ಭಾಗದಲ್ಲಿ ಅಳವಡಿಸುತ್ತೇವೆ ಎಂದು ಸ್ಪಷ್ಟನೆ‌ ನೀಡಿದರು.‌
ಒಟ್ಟಾರೆ ಕನ್ನಡ ನಾಮಫಲಕ ವಿಳಂಭವಾಗಿದ್ದೇ‌ ಈ ಗೊಂದಲಕ್ಕೆ ಕಾರಣವಾಗಿದ್ದು ಶ್ರೀಕೃಷ್ಣಮಠದ ಆಡಳಿತ ಮುಖ್ಯಸ್ಥರು ಆದಷ್ಟು ಶೀಘ್ರವಾಗಿ ಕನ್ನಡ ನಾಮಫಲಕ ಅಳವಡಿಸದಿದ್ದಲ್ಲಿ ಹೋರಾಟ‌ ನಡೆಸಲು ಕನ್ನಡ ಪರ ಸಂಘಟನೆ ಸಜ್ಜಾಗಿದೆ.
Published by:Seema R
First published: