ಬೆಂಗಳೂರು: ಪ್ರೀತಿ ನಿರಾಕರಿಸಿದಳು ಅಂತ ಕೆರಳಿದ ಯುವಕನೊಬ್ಬ (Youth) ಕನಕಪುರದ ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ (Acid Attack) ನಡೆಸಿದ್ದ. ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯ ಆರೋಗ್ಯದಲ್ಲಿ (Health) ಚೇತರಿಕೆ ಕಂಡು ಬಂದಿದ್ದು, ಸದ್ಯ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ (Bengaluru) ಮಿಂಟೋ ಆಸ್ಪತ್ರೆಯಿಂದ (Minto Hospital) ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ಶಿಫ್ಟ್ ಮಾಡಲಾಗಿದೆ. ಇಂದು ಮಧ್ಯಾಹ್ನ ಯುವತಿಯನ್ನು ಮಿಂಟೋದಿಂದ ವಿಕ್ಟೋರಿಯಾದ ಬರ್ನ್ಸ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಇದೇ ವೇಳೆ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಭೇಟಿ ನೀಡಿ ಬಾಲಕಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ಸಾಥ್ ನೀಡಿದ್ದು, ಬಾಲಕಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯ ಮುಂದುವರಿದಿದೆ. ನಿರ್ಭಯಾ ಪ್ರಕರಣ ಬಳಿಕ ಕಾನೂನಿನಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಅಪ್ರಾಪ್ತ ಹುಡುಗಿಯರಿಗೆ ಹಿಂಸೆ, ಕಿರುಕುಳ ಕೊಡುವವರಿಗೆ ಗಲ್ಲು ಶಿಕ್ಷೆ ಆಗುತ್ತೆ. ಆದರೆ ಕಾನೂನು ಕಾನೂನಾಗಿಯೇ ಉಳಿದುಕೊಳ್ಳುತ್ತಾ ಅಂತ ಈಗ ಅನಿಸುತ್ತಿದೆ.
ಆ್ಯಸಿಡ್ ದಾಳಿ ಮಾಡುವವರಿಗೆ ಉಗ್ರ ಶಿಕ್ಷೆ ಆಗಬೇಕು. ಅಪ್ರಾಪ್ತ ಬಾಲಕಿಯರ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗುತ್ತೆ, ಅದೇ ಥರ ಆ್ಯಸಿಡ್ ಹಾಕುವವರಿಗೂ ಶಿಕ್ಷೆ ಆಗಬೇಕು. ಅಲ್ಲದೆ, ಕನಕಪುರದಲ್ಲಿ ನಡೆದಿರುವ ಘಟನೆಯಲ್ಲಿ ಗಾಯಗೊಂಡಿರುವ ವಿದ್ಯಾರ್ಥಿನಿಗೆ ಶಿಕ್ಷಣ ಮುಂದುವರಿಸುವ ಇಚ್ಚೆ ಇದೆ. ಆದರೆ ಕನಕಪುರದಲ್ಲಿ ಶಿಕ್ಷಣ ಮುಂದುವರರಿಸಲು ಆಗಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಶಿಕ್ಷ ಣ ಮುಂದುವರಿಸುವ ಬಗ್ಗೆ ಅವರ ತಾಯಿಯೂ ಹೇಳಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.
ಇದೇ ವೇಳೆ ಕಾಂಗ್ರೆಸ್ ನಿಂದ ಪೋಸ್ಟರ್ ಅಭಿಯಾನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಪ್ರಜಾತಂತ್ರದ ವ್ಯವಸ್ಥೆಗೆ ಕಾಂಗ್ರೆಸ್ ಪಕ್ಷ ಅವಮಾನ ಮಾಡುತ್ತಿದೆ. ಕರ್ನಾಟಕ ಕಾಂಗ್ರೆಸ್‌ನವರು ತಮ್ಮ ಒಳ ಜಗಳ ಮುಚ್ಚಿ ಹಾಕಿಕೊಳ್ಳಲು ಈ ರೀತಿ ನಾಟಕ ಮಾಡುತ್ತಿದ್ದಾರೆ. ಅವರ ನಾಟಕವನ್ನು ಜನ ನೋಡಿದ್ದಾರೆ. ಅವರು ಇದ್ದಾಗಲೇ ಅಭಿವೃದ್ಧಿ ಮಾಡಲಿಲ್ಲ ಯಾಕೆ? 2013ರಲ್ಲಿ ಸರ್ಕಾರದಲ್ಲಿದ್ದವರೇ ಕಿವಿಗೆ ಹೂ ಇಟ್ಟುಕೊಂಡು ಬಂದಿದ್ದರು. ಅವರ ಸರ್ಕಾರ ಇದ್ದಾಗ ಯಾರ ಕಿವಿಗೆ ಹೂ ಮೂಡಿಸಿದರೂ ಅಂತ ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರೇಮಿಗಳ ಆತ್ಮಹತ್ಯೆ
ಯಾದಗಿರಿ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಬೆಳ್ಳಂಬೆಳಗ್ಗೆ ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಹಾಪುರ ತಾಲೂಕಿನ ಹುರಸಗುಂಡಗಿಯ ಸುವರ್ಣ ಹಾಗೂ ಈಶಪ್ಪ ಎಂಬ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುವರ್ಣ ಹಾಗೂ ಈಶಪ್ಪ ಕಳೆದ 5-6 ವರ್ಷಗಳಿಂದ ಪ್ರೀತಿಸುತ್ತಿದ್ದರು. 2 ವರ್ಷದ ಹಿಂದೆ ಸುವರ್ಣಳನ್ನು ಬೇರೆ ಯುವಕನ ಜೊತೆಗೆ ವಿವಾಹ ಮಾಡಿದ್ದರು. ಬಳಿಕ ತನ್ನ ಪತಿಯೊಂದಿಗೆ ಬೆಂಗಳೂರಿನಲ್ಲಿದ್ದ ಸುವರ್ಣ ನಿನ್ನೆ ಹುರಸಗುಂಡಗಿ ಗ್ರಾಮಕ್ಕೆ ಬಂದಿದ್ದಳು. ಇಂದು ಬೆಳಗ್ಗೆ ವಿಷ ಸೇವಿಸಿ ಸುವರ್ಣ, ಈಶಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ