• Home
  • »
  • News
  • »
  • state
  • »
  • Kanakadasa Jayanti 2020 – ಸರ್ಕಾರದಿಂದ ಕನಕದಾಸ ಜಯಂತಿ ಆಚರಣೆ: ದಾಸ ಶ್ರೇಷ್ಠರ ಬದುಕೇ ಆದರ್ಶ ಎಂದ ಸಿಎಂ

Kanakadasa Jayanti 2020 – ಸರ್ಕಾರದಿಂದ ಕನಕದಾಸ ಜಯಂತಿ ಆಚರಣೆ: ದಾಸ ಶ್ರೇಷ್ಠರ ಬದುಕೇ ಆದರ್ಶ ಎಂದ ಸಿಎಂ

ಶಾಸಕರ ಭವನದಲ್ಲಿರುವ ಕನಕದಾಸರ ಪುತ್ಥಳಿಗೆ ಸಿಎಂ ಅವರಿಂದ ಪುಷ್ಪಾರ್ಚಣೆ

ಶಾಸಕರ ಭವನದಲ್ಲಿರುವ ಕನಕದಾಸರ ಪುತ್ಥಳಿಗೆ ಸಿಎಂ ಅವರಿಂದ ಪುಷ್ಪಾರ್ಚಣೆ

ಸಮಾಜದ ಅಂಕುಡೊಂಕು ತಿದ್ದಿದ, ಸಮಾನತೆಯ ಸಂದೇಶ ಸಾರಿದ ಕನಕದಾಸರ ಬದುಕೇ ನಮಗೆ ಆದರ್ಶ ಎಂದು ಕನಕದಾಸ ಜಯಂತಿ ಆಚರಣೆ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

  • Share this:

ಬೆಂಗಳೂರು(ಡಿ. 03): ದಾಸ ಶ್ರೇಷ್ಠ, ದಾರ್ಶನಿಕ ಕನಕದಾಸರ ಜಯಂತಿ ಆಚರಣೆಯನ್ನು ಸರ್ಕಾರ ಇಂದು ನಡೆಸಿತು. ಶಾಸಕರ ಭವನದಲ್ಲಿರುವ ಕನಕದಾಸರ ಪುತ್ಥಳಿಗೆ ಸಿಎಂ ಪುಷ್ಪಾರ್ಚಣೆ ಮಾಡಿ ವಂದಿಸಿದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಬೈರತಿ ಬಸವರಾಜ, ಮಾಜಿ ಸಚಿವ ಎಚ್.ಎಂ. ರೇವಣ್ಣ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕನಕದಾಸರಿಗೆ ನಮನ ಸಲ್ಲಿಸಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ಕನಕ ಶ್ರೀ ಮತ್ತು ಕನಕ ಯುವ ಪುರಸ್ಕಾರ ಸಮಾರಂಭ ಕೂಡ ನಡೆಯಿತು. ಇಲ್ಲಿ ವಿವಿಧ ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಖ್ಯಮಂತ್ರಿ ಮತ್ತವರ ಕೆಲ ಸಹೋದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕನಕದಾಸರು ಒಬ್ಬ ದಾರ್ಶನಿಕ ಕವಿ, ಶ್ರೀ ಕೃಷ್ಣನ ಅನನ್ಯ ಭಕ್ತರು. ಕನ್ನಡ ಸಾರಸ್ವತ ಲೋಕದ ಕೀರ್ತನಾ ಪ್ರತಿಭೆಯಾದ ಅವರು ಸಮಾನತೆಯ ಸಂದೇಶ ಸಾರಿದವರು. ಸಮಾಜದ ಅಂಕು ಡೊಂಕು ತಿದ್ದವರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕಿದೆ. ಕನಕದಾಸರ ಬದುಕೇ ನಮಗೆ ಆದರ್ಶ ಎಂದು ಹೇಳಿದರು.


ಜಾತ್ಯತೀತ ಪರಿಕಲ್ಪನೆ ನಮ್ಮ ಆಶಯ. ಸರ್ವ ಜನಾಂಗದ ಅಭಿವೃದ್ಧಿಗೆ ಅನುದಾನ ನೀಡುತ್ತಾ ಬಂದಿದ್ದೇವೆ. ಕನಕ ದಾಸರ ಜನ್ಮಸ್ಥಳ ಬಾಡವನ್ನು ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಈ ವೇಳೆ ಯಡಿಯೂರಪ್ಪ ತಿಳಿಸಿದರು.


ಇದನ್ನೂ ಓದಿ: ಬ್ರಹ್ಮಗಿರಿ ಬೆಟ್ಟದಲ್ಲಿವೆ ನೂರಾರು ಇಂಗು ಗುಂಡಿಗಳು: ಬೆಟ್ಟ ಕುಸಿದರೆ ಕಾವೇರಿಯೇ ಬತ್ತುವ ಆತಂಕ


ಕನಕಗುರು ಪೀಠದ ಶ್ರೀ ಸಿದ್ಧರಾಮಾನಾನಂದಪುರಿ ಸ್ವಾಮೀಜಿ ಮಾತನಾಡಿ, ಕನಕದಾಸರ ಬಗ್ಗೆ ಸಾಕಷ್ಟು ಸಂಶೋಧನೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.


ದಾಸನಾಗು, ವಿಶೇಷನಾಗು, ಭವಪಾಶ ನೀಗು.. ಹೀಗೆಂದು ಸಂತ ಶ್ರೇಷ್ಠ ಕನಕದಾಸರು ಹೇಳಿದ್ದಾರೆ. ಕನಕ ಒಬ್ಬ ಮಾಂಡಲಿಕ ಅರಸನಾಗಿದ್ದ. ರಾಜನಿಂದ ಮೋಸಕ್ಕೆ ಒಳಗಾಗಿ ಮಾಂಡಲಿಕ ಸ್ಥಾನ ತ್ಯಾಗ ಮಾಡುತ್ತಾರೆ. ಕನಕದಾಸರಿಗೆ ಅವರಿವರು ಧೀಕ್ಷೆ ಕೊಟ್ಟಿದ್ದಾರೆ ಎಂಬುದು ಸುಳ್ಳು. ಯಾರೂ ಕೂಡ ದೀಕ್ಷೆ ನೀಡಿಲ್ಲ. ಸ್ವತಃ ಕೃಷ್ಣ ಪರಮಾತ್ಮನೇ ಅವರಿಗೆ ಧೀಕ್ಷೆ ನೀಡಿದ್ದಾನೆ. ಕನಕದಾಸರ ಸಾಹಿತ್ಯದಲ್ಲೂ ಅದು ಬಿಂಬಿತವಾಗಿದೆ. ಎನ್ನ ಮನಸಿನಲ್ಲಿ ನೆಲೆ ನಿಂತ ಆದಿಕೇಶವ ಎಂದು ಅವರು ಬರೆದಿದ್ದಾರೆ. ಕನಕರು ವೈಷ್ಣವಾತೀತರು, ಶೈವಾತೀತರು ಎಂದು ಕನಕಗುರು ಪೀಠದ ಶ್ರೀಗಳು ದಾಸ ಶ್ರೇಷ್ಠರಿಗೆ ವಂದನಾರ್ಪಣೆ ಮಾಡಿದರು.


ಮೌಢ್ಯ, ಕಂದಾಚಾರಗಳ ವಿರುದ್ಧ ಹೋರಾಡಿದ ಕನಕದಾಸರ ಜಯಂತಿಯಂದು ರಜೆ ನೀಡುವುದು ಬೇಡ ಎಂದು ಮನವಿ ಮಾಡಿಕೊಂಡ ಅವರು, ಸರ್ಕಾರಿ ಅಧಿಕಾರಿಗಳು ರಜೆ ಎಂದು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಈ ಅಧಿಕಾರಿಗಳಿಗಾದರೂ ಕನಕದಾಸರ ಬಗ್ಗೆ ಗೊತ್ತಾಗಬೇಕು ಎಂದು ಅಭಿಪ್ರಾಯಪಟ್ಟರು.


ಇದನ್ನೂ ಓದಿ: Karnataka Weather: ಬುರೇವಿ ಚಂಡಮಾರುತದ ಎಫೆಕ್ಟ್​; ಕರ್ನಾಟಕದ ಈ ಭಾಗಗಳಲ್ಲಿ ಇಂದಿನಿಂದ 3 ದಿನ ಮಳೆ ಹೆಚ್ಚಳ


ಈ ಕಾರ್ಯಕ್ರಮದಲ್ಲಿ ಯುಗಧರ್ಮ ರಾಜಣ್ಣ, ಪ್ರೊಫೆಸರ್ ಶಿವರಾಮ ಶೆಟ್ಟಿ, ಡಾ| ಶಶಿಧರ್ ಜಿ ವೈದ್ಯ, ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಮತ್ತು ಡಾ| ನರಸಿಂಹಮೂರ್ತಿ ಅವರಿಗೆ 2020ನೇ ಸಾಲಿನ ಕನಕ ಶ್ರೀ ಪ್ರಶಸ್ತಿ ದಯಪಾಲಿಸಲಾಯಿತು.


ಕನಕದಾಸರ ಜನ್ಮ:


ಕನಕದಾಸರ ಪೂರ್ವ ಹೆಸರು ತಿಮ್ಮಪ್ಪ ನಾಯಕ. 1509ರಲ್ಲಿ ಈಗಿನ ಹಾವೇರಿಯ ಬಂಕಾಪುರದ ಬಾಡ ಎಂಬ ಹಳ್ಳಿಯಲ್ಲಿ ಜನಿಸಿದವರು. ದಾಸ ಪರಂಪರೆಗೆ ಸೇರುವ ಮುನ್ನ ಕಿರಿಯ ವಯಸ್ಸಿನಲ್ಲೇ ವಿಜಯನಗರ ಆಳ್ವಿಕೆಯ ಬಂಕಾಪುರ ಪ್ರಾಂತ್ಯಕ್ಕೆ ಡಣ್ಣಾಯಕನಾಗಿದ್ದವರು. ವ್ಯಾಸರಾಯರ ಭಕ್ತನಾಗಿ ಉಡುಪಿಗೆ ಬಂದು ಜಾತಿ ವ್ಯವಸ್ಥೆಯ ಸಂಕೋಲೆಯ ಮಧ್ಯೆಯೂ ತಮ್ಮ ಭಕ್ತಿ ಮತ್ತು ಕೀರ್ತನೆಗಳ ಮೂಲಕವೇ ಸೆಟೆದು ನಿಂತವರು. ಬ್ರಾಹ್ಮಣ್ಯದ ಅಹಂಕಾರವನ್ನು ಮೆಟ್ಟಿದವರು. ಇವರ ದಾರ್ಶನಿಕ ಸಿದ್ಧಿಗೆ ಸ್ವತಃ ವ್ಯಾಸರಾಯರೇ ಮಾರುಹೋಗಿದ್ದರು. ಸ್ವತಃ ಶ್ರೀ ಕೃಷ್ಣನೇ ಕನಕದಾಸರಿಗೆ ಒಲಿದನೆಂಬ ಐತಿಹ್ಯವೂ ಇದೆ.

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು