ಎಂಬತ್ತರ ದಶಕದಲ್ಲಿ 9 ಬಾರಿ ಅಥ್ಲೆಟಿಕ್ಸ್ ಚಾಂಪಿಯನ್ ಆಗಿದ್ದ ಕಂಬಳ ಆಟಗಾರ ಆನಂದ್ ಶೆಟ್ಟಿ

2013ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಕಂಬಳ ಆಟಗಾರ ಆನಂದ್ ಶೆಟ್ಟಿ ಅವರು 100 ಮೀ ಮತ್ತು 200 ಮೀ ಓಟದ ಸ್ಪರ್ಧೆಯಲ್ಲಿ 9 ಬಾರಿ ರಾಷ್ಟ್ರೀಯ ಚಾಂಪಿಯನ್ ಎನಿಸಿದ್ದರು.

ಆನಂದ್ ಶೆಟ್ಟಿ

ಆನಂದ್ ಶೆಟ್ಟಿ

  • News18
  • Last Updated :
  • Share this:
ಮಂಗಳೂರು(ಫೆ. 19): ದಕ್ಷಿಣ ಕನ್ನಡದ ಖ್ಯಾತ ಸ್ಪರ್ಧೆಯಾಗಿರುವ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ ಅವರ ಓಟ ಇಡೀ ದೇಶದ ಗಮನ ಸೆಳೆದಿತ್ತು. 143 ಮೀಟರ್ ದೂರವನ್ನು ಕೇವಲ 13.68 ಸೆಕೆಂಡ್​ಗಳಲ್ಲಿ ಓಡಿದ್ದರು. ಇದು ಉಸೇನ್ ಬೋಲ್ಟ್ ಅವರ ವಿಶ್ವದಾಖಲೆಯನ್ನೂ ಮೀರಿಸಿದ್ದು ಎಂದು ಎಲ್ಲರೂ ಕೊಂಡಾಡಿದರು. ಇದಾದ ಕೆಲವೇ ದಿನಗಳಲ್ಲಿ ನಿಶಾಂತ್ ಶೆಟ್ಟಿ ಎಂಬ ಮತ್ತೊಬ್ಬ ಕಂಬಳ ಓಟಗಾರ ಈ ದಾಖಲೆಯನ್ನೂ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಭಾರತದಲ್ಲಿ ಅತ್ಯಮೂಲ್ಯ ಪ್ರತಿಭೆಗಳು ಅವಕಾಶವಿಲ್ಲದೇ ಮುರುಟಿಹೋಗುತ್ತಿವೆ. ಶ್ರೀನಿವಾಸ ಗೌಡರಂಥವರನ್ನು ಒಲಿಂಪಿಕ್ಸ್​ಗೆ ಕಳುಹಿಸಿಬೇಕು ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಹಾಗೆಯೇ, ಕಂಬಳ ಓಟಗಾರರು ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾ ಎಂದೂ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ, ಎಂಬತ್ತರ ದಶಕದಲ್ಲಿ ಕಂಬಳ ಓಟಗಾರರೊಬ್ಬರು ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಸಂಗತಿ ಇಲ್ಲಿ ಸ್ಮರಿಸಬಹುದಾಗಿದೆ.

ದಕ್ಷಿಣ ಕನ್ನಡದಲ್ಲಿ ಕಂಬಳ ಆಟಗಾರರಾಗಿದ್ದ ಆನಂದ್ ಶೆಟ್ಟಿ ಅವರು ಎಂಬತ್ತರ ದಶಕದಲ್ಲಿ ಭಾರತದ ನಂಬರ್ ಒನ್ ಅಥ್ಲೆಟಿಕ್ಸ್ ಕ್ರೀಡಾಪಟುವಾಗಿದ್ದರು. 100 ಮೀ ಮತ್ತು 200 ಮೀ ಓಟದಲ್ಲಿ ಇವರು ಅನೇಕ ದಾಖಲೆಗಳನ್ನ ಸೃಷ್ಟಿಸಿದ್ದರು. ಪದಕಗಳನ್ನು ಜಯಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು. 1982ರ ಏಷ್ಯನ್ ಗೇಮ್ಸ್​​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 1981ರಿಂದ 1989ರವರೆಗೆ ಇವರು ರಾಷ್ಟ್ರೀಯ ಕ್ರೀಡಾಕೂಟದಲ್ಲಿ 100 ಮೀ ಮತ್ತು 200 ಮೀ ಓಟದಲ್ಲಿ ಸತತವಾಗಿ ಚಾಂಪಿಯನ್ ಎನಿಸಿದ್ದರು. ಭಾರತ ಕಂಡ ಸರ್ವಶ್ರೇಷ್ಠ ಅಥ್ಲೀಟ್ ಎನಿಸಿದ್ದ ಮಿಲ್ಕಾ ಸಿಂಗ್ ಫ್ಲೈಯಿಂಗ್ ಸಿಖ್ ಎಂದು ಖ್ಯಾತರಾಗಿದ್ದರು. ಅಂತೆಯೇ ಆನಂದ್ ಶೆಟ್ಟಿ ಅವರು ಫ್ಲೈಯಿಂಗ್ ಬಂಟ್ ಎಂದೇ ಪ್ರಖ್ಯಾತರಾಗಿದ್ದರು. ಇವರು 2013ರಲ್ಲಿ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದರು.

ಇದನ್ನೂ ಓದಿ: ಬಳ್ಳಾರಿಯ ಕೊಟ್ಟೂರೇಶ್ವರ ಜಾತ್ರೆಗೆ ಬಂದಿದ್ದ ವ್ಯಕ್ತಿ ಕರೆಂಟ್​ ಶಾಕ್​ನಿಂದ ಸಾವು

ಕಂಬಳ ಕ್ರೀಡೆಗೂ ಟ್ರ್ಯಾಕ್ ಅಂಡ್ ಫೀಲ್ಡ್ ಓಟಕ್ಕೂ ಸಾಕಷ್ಟು ವ್ಯತ್ಯಾಸ ಇದೆಯಾದರೂ ಕಂಬಳ ಕ್ರೀಡಾಪಟುಗಳಿಗೆ ಸರಿಯಾದ ತರಬೇತಿ ನೀಡಿದರೆ ಉತ್ತಮ ಸಾಧನೆ ಮಾಡಬಹುದು. ಇದಕ್ಕೆ ಎಂಬತ್ತರ ದಶಕದ ಆನಂದ್ ಶೆಟ್ಟಿ ಸಾಕ್ಷಿಯಾಗಿದ್ಧಾರೆ. ಆಗ ರಾಜ್ಯದಲ್ಲಿ ಸರಿಯಾದ ತರಬೇತಿ ಇಲ್ಲದಿದ್ದರೂ ಅಷ್ಟು ದೊಡ್ಡ ಮಟ್ಟದ ಯಶಸ್ಸು ಆನಂದ್ ಶೆಟ್ಟಿಗೆ ಲಭಿಸಿದ್ದು ಗಮನಿಸಬೇಕಾದ ಅಂಶ. ಈಗ ಶ್ರೀನಿವಾಸ ಗೌಡ, ನಿಶಾಂತ್ ಶೆಟ್ಟಿಯಂಥ ಕಂಬಳ ಕ್ರೀಡಾ ಪ್ರತಿಭೆಗಳನ್ನ ಹೆಕ್ಕಿ ಸೂಕ್ತ ತರಬೇಡಿ ನೀಡುವ ಕೆಲಸ ಆಗಬೇಕಿದೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರೂ ಕೂಡ ಕಂಬಳ ಕ್ರೀಡಾಪಟುಗಳ ಬಗ್ಗೆ ಉತ್ಸಾಹ ತೋರಿದ್ಧಾರೆ. ಮುಂದಿನ ದಿನಗಳಲ್ಲಿ ಕಂಬಳ ಕ್ರೀಡೆಯಲ್ಲಿ ಮುಳುಗಿಹೋಗಿರುವ ಪ್ರತಿಭೆಗಳು ಟ್ರ್ಯಾಕ್ ಅಂಡ್ ಫೀಲ್ಡ್​ಗೆ ಅಡಿ ಇಟ್ಟು ದೇಶದ ಕೀರ್ತಿ ಪತಾಕೆ ಹಾರಿಸಬಲ್ಲರೇ ಎಂಬುದು ಸದ್ಯಕ್ಕೆ ಇರುವ ಕುತೂಹಲ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: