ಕೂಲಿಯಾಳು ಸಿಗದೆ ಹೊಲದಲ್ಲಿಯೇ ಕೊಳೆಯುತ್ತಿದೆ ಹತ್ತಿ ಬೆಳೆ; ಸಮಸ್ಯೆಯ ಸುಳಿಯಲ್ಲಿ ರಾಯಚೂರಿನ ರೈತರು

ರೈತರನ್ನು ಅನ್ನದಾತ, ನೇಗಿಲಯೋಗಿ ಎಂದೆಲ್ಲಾ ಹೊಗಳಿ ಕರೆಯುತ್ತೇವೆ. ವಾಸ್ತವದಲ್ಲಿ ದೇಶಕ್ಕೆ ಅನ್ನ ನೀಡುವ ರೈತ ತನ್ನ ಕುಟುಂಬ ನಿರ್ವಹಿಸಲಾಗದಂತಹ ಸ್ಥಿತಿಯಲ್ಲಿರುವುದು ದುರಂತವಾಗಿದೆ. ಸರ್ಕಾರಗಳು ಸುಳ್ಳು ಭರವಸೆಗಳನ್ನು ನೀಡದೆ ರೈತರಿಗೆ ನೆರವಾಗುವ ಮೂಲಕ ಅವರನ್ನು ರಕ್ಷಿಸಬೇಕಿದೆ.

 ಹತ್ತಿ ಬೆಳೆ

ಹತ್ತಿ ಬೆಳೆ

  • Share this:
ರಾಯಚೂರು(ಫೆ.20): ರಾಯಚೂರು ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರ ಕೊರತೆ ತೀವ್ರವಾಗಿದೆ. ಹತ್ತಾರು ಸಂಕಷ್ಟಗಳ ನಡುವೆ ರೈತರು ಬೆಳೆದ ಹತ್ತಿ ಹೂ ಬಿಟ್ಟು ಕಾಯಿಯಾಗಿ ಹೊಡೆದು ನಿಂತಿದೆ. ಆದರೆ, ಹೊಡೆದ ಹತ್ತಿಯನ್ನು ಬಿಡಿಸಲು ಕೃಷಿ ಕೂಲಿಕಾರರು ಸಿಗದೆ ಹತ್ತಿ ನೆಲಕ್ಕೆ ಬಿದ್ದು ಹಾಳಾಗುತ್ತಿದೆ.

ಎಕರೆಗೆ ಹತ್ತಿ ಬೆಳೆಯಲು ಸಾವಿರಾರು ರೂಪಾಯಿ ವೆಚ್ಚ ಮಾಡಿರುವ ರೈತರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಾದರೂ ಸಿಕ್ಕರೆ ಹೇಗಾದರೂ ಸುಧಾರಿಸಿಕೊಳ್ಳುತ್ತಾರೆ. ಆದರೆ ಬೆಲೆ ಕುಸಿತದಿಂದಾಗಿ ಮಾಡಿದ ವೆಚ್ಚ ಕಳೆದು ಜೀವನ ನಿರ್ವಹಣೆ ಮಾಡಲಾಗದಂತಹ ಸ್ಥಿತಿಯಲ್ಲಿ ಅನ್ನದಾತರಿದ್ದಾರೆ.

ಇಲ್ಲಿನ ಕೃಷಿ ಕೂಲಿಕಾರರು ಹೆಚ್ಚಿನ ಕೂಲಿಗಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ರೈತರ ಜಮೀನಿಗೆ ಕೂಲಿಗೆ ಹೋಗುತ್ತಿದ್ದು, ಇಲ್ಲಿನ ರೈತರು ಹತ್ತಿ ಬಿಡಿಸುವವರಿಲ್ಲದೆ ಬೆಳೆ ನಷ್ಟ ಅನುಭವಿಸುವಂತಾಗಿದೆ ಎಂದು ಗೋಳಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ತುಂಗಭದ್ರಾ ಮತ್ತು ಕೃಷ್ಣಾ ನದಿ ಹರಿಯುತ್ತಿವೆ. ತುಂಗಭದ್ರಾ ಎಡದಂಡೆ ಮತ್ತು ನಾರಾಯಣಪುರ ಬಲದಂಡೆ ಕಾಲುವೆಗಳಿಂದ ನೀರಾವರಿ ಆಗಿದ್ದರೂ ಸಮರ್ಪಕವಾಗಿಲ್ಲ. ರೈತರ ಜಮೀನಿಗೆ ನೀರುಣಿಸಿ ನೇಗಿಲ ಯೋಗಿಯ ಸಮಸ್ಯೆ ಬಗೆ ಹರಿಯಬೇಕಿತ್ತು .ಇಲ್ಲಿ ನೀರಾವರಿ ಸೌಲಭ್ಯ ಸಮರ್ಪಕವಾಗಿರದ ಹಿನ್ನೆಲೆಯಲ್ಲಿ ಕೂಲಿಕಾರರು ಬೆಂಂಗಳೂರು ಕಡೆ ದುಡಿಯಲು ಗುಳೆ ಹೋಗಿದ್ದಾರೆ.

ಇದನ್ನೂ ಓದಿ : ಅತಂತ್ರವಾಗಿರುವ ರಾಯಚೂರು ಜಿಲ್ಲಾಡಳಿತ ಭವನ‌‌ ; 10 ವರ್ಷಗಳಾದರೂ ಪೂರ್ಣಗೊಳ್ಳದ ಕಟ್ಟಡ ಕಾಮಗಾರಿ

ಇದರಿಂದ ಕೂಲಿಕಾರರು ಸಿಗುತ್ತಿಲ್ಲ, ಇಲ್ಲಿ ಸಮರ್ಪಕ ನೀರನ್ನು ಒದಗಿಸದೇ ಜಿಲ್ಲಾ ನಾಯಕರ ಮತ್ತು ಆಳುವ ಸರ್ಕಾರಗಳ ಉದಾಸೀನತೆಯಿಂದ ಹನಿ ನೀರು ಪಡೆಯಲು ರೈತರು ಪರದಾಡುವಂತಾಗಿದೆ. ಸಮರ್ಮಕವಾಗಿ ನೀರೊದಗಿಸಿದ್ದರೆ ಇಲ್ಲಿಯೇ ಕೃಷಿ ಕೂಲಿ ಸಿಕ್ಕು ಬೇರೆಡೆ ವಲಸೆ ಹೋಗುವುದು ತಪ್ಪುತಿತ್ತು ಎನ್ನುವುದು ರೈತರ ಆರೋಪವಾಗಿದೆ.

ರೈತರನ್ನು ಅನ್ನದಾತ, ನೇಗಿಲಯೋಗಿ ಎಂದೆಲ್ಲಾ ಹೊಗಳಿ ಕರೆಯುತ್ತೇವೆ. ವಾಸ್ತವದಲ್ಲಿ ದೇಶಕ್ಕೆ ಅನ್ನ ನೀಡುವ ರೈತ ತನ್ನ ಕುಟುಂಬ ನಿರ್ವಹಿಸಲಾಗದಂತಹ ಸ್ಥಿತಿಯಲ್ಲಿರುವುದು ದುರಂತವಾಗಿದೆ. ಸರ್ಕಾರಗಳು ಸುಳ್ಳು ಭರವಸೆಗಳನ್ನು ನೀಡದೆ ರೈತರಿಗೆ ನೆರವಾಗುವ ಮೂಲಕ ಅವರನ್ನು ರಕ್ಷಿಸಬೇಕಿದೆ.

 
First published: