ಆರು ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ; ಪ್ರದೇಶದ ಅಭಿವೃದ್ಧಿಗೆ ವಿಶೇಷ ಯೋಜನೆಗಳ ಭರವಸೆ ಇತ್ತ ಸಿಎಂ ಯಡಿಯೂರಪ್ಪ
ಹೈದ್ರಾಬಾದ್ ಕರ್ನಾಟಕ ಎಂದು ಕೇವಲ ಹೆಸರು ಬದಲಾಯಿಸಿದರೆ ಉಪಯೋಗವಿಲ್ಲ, ಸಚಿವಾಲಯ ಸ್ಥಾಪಿಸಿ ವಿಶೇಷ ಅನುದಾನ ನೀಡುತ್ತೇವೆ. ಮುಂದೆ ಈ ಭಾಗಕ್ಕೂ ಸಂಪುಟದಲ್ಲಿ ಆದ್ಯತೆ ನೀಡುತ್ತೇನೆ. ಮುಂದಿನ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಿ, ಹಿಂದುಳಿದ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ-ಬಿಎಸ್ ಯಡಿಯೂರಪ್ಪ
ಬೆಂಗಳೂರು(ಸೆ. 17):ಹೈದ್ರಾಬಾದ್ ಕರ್ನಾಟಕ ವಿಮೋಚನ ದಿನದ ಬದಲಾಗಿ ಇಂದು ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಿಸಲಾಗಿದೆ.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಲಾಗಿದ್ದು, ರಾಯಚೂರು, ಬಳ್ಳಾರಿ, ಕಲಬುರ್ಗಿ, ಯಾದಗಿರಿ, ಕೊಪ್ಪಳ, ಬೀದರ್ ಜಿಲ್ಲೆಗಳಲ್ಲಿ ಉತ್ಸವ ಆಚರಣೆಗೆ ಸರ್ಕಾರ ಮುಂದಾಗಿದೆ.
ಕಲಬುರ್ಗಿಯ ಡಿಎಆರ್ ಮೈದಾನದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ವಿಮೋಚನೆಯಲ್ಲಿ ಭಾಗಿಯಾದ ಸ್ವಾತ್ರಂತ್ರ್ಯ ಸೇನಾನಿಗಳಿಗೆ ಅಭಿನಂದನೆ ತಿಳಿಸಿದ ಅವರು, ಈ ಭಾಗದ ಜನರ ಒತ್ತಾಯದ ಮೇರೆಗೆ ಹೈದರಾಬಾದ್-ಕರ್ನಾಟಕವನ್ನು ಕಲ್ಯಾಣ ಕರ್ನಾಟದವೆಂದು ಮರು ನಾಮಕರಣ ಮಾಡಲಾಗಿದೆ ಎಂದರು.
'ಹೈದ್ರಾಬಾದ್ ಕರ್ನಾಟಕ ಎಂದು ಕೇವಲ ಹೆಸರು ಬದಲಾಯಿಸಿದರೆ ಉಪಯೋಗವಿಲ್ಲ, ಸಚಿವಾಲಯ ಸ್ಥಾಪಿಸಿ ವಿಶೇಷ ಅನುದಾನ ನೀಡುತ್ತೇವೆ. ಮುಂದೆ ಈ ಭಾಗಕ್ಕೂ ಸಂಪುಟದಲ್ಲಿ ಆದ್ಯತೆ ನೀಡುತ್ತೇನೆ. ಮುಂದಿನ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಿ, ಹಿಂದುಳಿದ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ. ಜನರ ಆಶೋತ್ತರಗಳಿಗೆ ನಮ್ಮ ಸರ್ಕಾರ ಸ್ಪಂದಿಸಲಿದೆ. ಈ ಬಾರಿ ಹಿನ್ನೆಲೆ ಹೆಚ್ಚಿನ ಅನುದಾನ ನೀಡಲಾಗುತ್ತಿಲ್ಲ. ಆದರೆ, ಮುಂದಿನ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಿ, ಹಿಂದುಳಿದ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇನೆ' ಎಂದು ಭರವಸೆ ನೀಡಿದರು.
ಹೈದ್ರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ 371(ಜೆ) ಯಲ್ಲಿನ ನ್ಯೂನತೆಗಳನ್ನ ಸರಿಪಡಿಸಿ ನೇಮಕಾತಿ ಮತ್ತು ಮುಂಬಡ್ತಿಯಲ್ಲಾಗುತ್ತಿರುವ ಗೊಂದಲ ನಿವಾರಣೆ ಮಾಡಲಾಗುವುದು. ಜೊತೆಗೆ ಇಲ್ಲಿ ಕಲ್ಯಾಣ ಕರ್ನಾಟಕ ಅಧ್ಯಯನ ಪೀಠ ಸ್ಥಾಪನೆ ಮುಂದಾಗಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬಳ್ಳಾರಿಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಸಿಎಂ ಲಕ್ಷಣ ಸವದಿ
ಬಳ್ಳಾರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಭಾಗಿಯಾದ ಡಿಸಿಎಂ ಲಕ್ಷಣ ಸವದಿ, ತಮ್ಮನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿಯಾಗಿ ನೇಮಿಸಿದ್ದು ಸಂತೋಷವಾಗಿದೆ. ಈ ಭಾಗವನ್ನ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತೇನೆ. ಉಸ್ತುವಾರಿ ಸಚಿವನಾಗುವ ನಿರೀಕ್ಷೆ ಇರಲಿಲ್ಲ. ನಾನು ಶಾಸಕ ಅಲ್ಲದಿದ್ದರೂ ಸಚಿವ ಆದದ್ದು, ಉಸ್ತುವಾರಿ, ಡಿಸಿಎಂ ಆಗಿದ್ದು ಎಲ್ಲವೂ ಅನಿರೀಕ್ಷಿತ ಎಂದರು.
ಬೀದರ್ ಕಾರ್ಯಕ್ರಮದಲ್ಲಿ ಸಚಿವ ಪ್ರಭು ಚೌವಾಣ
ಬೀದರ್ನಲ್ಲಿ ಅಲ್ಲಿಯ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವಾಣ ಅವರು ಕಲ್ಯಾಣ ಕರ್ನಾಟಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧ್ವಜಾರೋಹಣ ಮಾಡಿದರು. ಈ ವೇಳೆ ಶಾಸಕ ಬಂಡೆಪ್ಪ ಖಾಶಂಪುರ್, ರಹೀಮ್ ಖಾನ್ .ಸಂಸದ ಭಗವಂತ ಖೂಬ ಸೇರಿದಂತೆ ಇತರರು ಭಾಗಿಯಾಗಿದ್ದರು.
ರಾಯಚೂರಿನಲ್ಲಿ ಡಿಸಿಎಂ ಗೋವಿಂದ ಕಾರಜೋಳ ಭಾಗಿ
ರಾಯಚೂರಿನಲ್ಲಿ ಧ್ವಜಾರೋಹಣಕ್ಕೂ ಮುನ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಡಿಸಿಎಂ ಗೋವಿಂದ ಕಾರಜೋಳ ಮಾಲಾರ್ಪಣೆ ಮಾಡಿದರು.
ಕೊಪ್ಪಳದಲ್ಲಿ ಸಿಸಿ ಪಾಟೀಲ್ ಧ್ವಜಾರೋಹಣ
72ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಕೊಪ್ಪಳದಲ್ಲಿ ಸಚಿವ ಸಿಸಿ ಪಾಟೀಲ್ ರಾಷ್ಟ್ರ ಧ್ವಜಾರೋಹಣ ಮಾಡಿದರು. ದಿನಾಚರಣೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ಕರಡಿ ಸಂಗಣ್ಣ ಭಾಗಿಯಾಗಿದ್ದರು.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ