HOME » NEWS » State » KALLINA RATHA SMARAKA OF HAMPI IN DANGER AS REPAIR WORKS DONE USING USING MACHINES SNVS

ವಿಶ್ವಪ್ರಸಿದ್ದ ಕಲ್ಲಿನರಥ ಸ್ಮಾರಕ ಬಳಿಯೇ ಕಾಮಗಾರಿ; ದೇವಾಲಯದ ಒಳಗೆ ಭಾರೀ ವಾಹನ ಒಳಗೆ ಬಿಟ್ಟಿದ್ದು ಯಾರು?

ಪುರಾತತ್ವ ಇಲಾಖೆಯ ನಿಯಮದಂತೆ ಯಂತ್ರಗಳು ಬಳಸದೇ ಮಾನವಕೇಂದ್ರಿತ ಕೆಲಸ ಮಾಡಬೇಕು. ಸ್ಮಾರಕದ ಸುತ್ತಲೂ ಛಾಯಾಗ್ರಹಣಕ್ಕೆ ಕ್ಯಾಮರಾಮನ್ ಟ್ರೈಪಾಡ್ ಕೂಡ ಬಳಸುವಂತಿಲ್ಲ.

news18-kannada
Updated:May 16, 2020, 3:07 PM IST
ವಿಶ್ವಪ್ರಸಿದ್ದ ಕಲ್ಲಿನರಥ ಸ್ಮಾರಕ ಬಳಿಯೇ ಕಾಮಗಾರಿ; ದೇವಾಲಯದ ಒಳಗೆ ಭಾರೀ ವಾಹನ ಒಳಗೆ ಬಿಟ್ಟಿದ್ದು ಯಾರು?
ಹಂಪಿ ಕಲ್ಲಿನರಥ ಸ್ಮಾರಕ
  • Share this:
ಬೆಂಗಳೂರು(ಮೇ 16): ವಿಶ್ವಪ್ರಸಿದ್ದ ಹಂಪಿ ಸ್ಮಾರಕಗಳಿಗೆ ಬಲು ಫೇಮಸ್ ! ಮಸ್ಟ್ ವಿಸಿಟ್ ಪ್ಲೇಸ್​ನಲ್ಲಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ ಹಂಪಿಯ ಸ್ಮಾರಕಗಳಿಗೆ ರಕ್ಷಣೆ ಇಲ್ಲದಂತಾಗಿದೆ. ವಿಶ್ವಪರಂಪರಾ ಪಟ್ಟಿಯಲ್ಲಿರುವ ಸ್ಮಾರಕಗಳ ರಕ್ಷಣೆಗಿರುವ ಇಲಾಖೆಯೇ ಬೇಲಿಯೇ ಹೊದ್ದು ಹೊಲ ಮೇಯುತ್ತಿದೆ ಎಂಬ ಗಂಭೀರ ಆರೋಪ ಎದುರಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಇನ್ನಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

ಅಷ್ಟಕ್ಕೂ ಹಂಪಿಯಲ್ಲಿ ಏನಾಗುತ್ತಿದೆ? ವಿಶ್ವಪರಂಪರಾ ಪಟ್ಟಿಯಲ್ಲಿರುವ ಹಂಪಿಯಲ್ಲಿ 40ಕ್ಕೂ ಹೆಚ್ಚು ಪ್ರಮುಖ ಸ್ಮಾರಕಗಳಿವೆ. ಅದರಲ್ಲಿ ಶ್ರೀ ವಿಜಯವಿಠ್ಠಲ ದೇವಾಲಯದ ಆವರಣದಲ್ಲಿರುವ ಕಲ್ಲಿನ ರಥ ನೋಡಿಲ್ಲದವರು ಯಾರಿದ್ದಾರೆ ಹೇಳಿ.! 50 ರೂಪಾಯಿ ನೋಟಿನಲ್ಲಿ ವಿರಾಜಿಸುತ್ತಿರುವ ಕಲ್ಲಿನರಥ ಫೋಟೋ ಇರುವ ಸ್ಮಾರಕದ ಬಳಿಯ ವಾಹನ, ಯಂತ್ರೋಪಕರಣಗಳ ಬಳಕೆ ರಾಜಾರೋಷವಾಗಿ ನಡೆಯುತ್ತಿದೆ. ಕಲ್ಲಿನ ರಥ ಹಿಂಭಾಗದ ದೇಗುಲದ ದುರಸ್ತಿ ಕಾರ್ಯ ನಡೆಯುವ ಸಂದರ್ಭದಲ್ಲಿ ಟ್ರಾಕ್ಟರ್ ಬಳಕೆಯಾಗಿದೆ. ಸ್ಮಾರಕದ ಸುತ್ತಮುತ್ತ ಕಲ್ಲಿನ ಬಂಡೆ ಸಾಗಾಟಕ್ಕೆ ಟ್ರಾಕ್ಟರ್ ಬಳಕೆ ಮಾಡಲಾಗಿದೆ. ಈ ಕುರಿತು ಸ್ಥಳೀಯರು ತೆಗೆದಿರುವ ಫೋಟೋ ಹಾಗೂ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ.

ಇದನ್ನೂ ಓದಿ: ಅಕ್ಕಿ ದೋಖಾ ಭಾಗ-3: ಅಕ್ಕಿ ಅಕ್ರಮ ಸಾಗಣೆಗೆ ರಾಜಕೀಯ ನಂಟು; ಸಿಕ್ಕಿಬಿದ್ದ ಕಾಂಗ್ರೆಸ್​ ಮುಖಂಡ

ಲಾಕ್ ಡೌನ್ ಸಂದರ್ಭದಲ್ಲಿ ಪುರಾತತ್ವ ಇಲಾಖೆ ದುರಸ್ತಿ ಹಾಗು ಪುನರುತ್ಥಾನದ  ಕಾಮಗಾರಿಯನ್ನು ಸ್ಥಳೀಯ ಗುತ್ತಿಗೆದಾರರ ಮೂಲಕ ಕಾರ್ಯನಿರ್ವಹಿಸಿದೆ. ಆದರೆ ಪುರಾತತ್ವ ಇಲಾಖೆಯ ನಿಯಮದಂತೆ ಯಂತ್ರಗಳು ಬಳಸದೇ ಮಾನವಕೇಂದ್ರಿತ ಕೆಲಸ ಮಾಡಬೇಕು. ಸ್ಮಾರಕದ ಸುತ್ತಲೂ ಛಾಯಾಗ್ರಹಣಕ್ಕೆ ಕ್ಯಾಮರಾಮನ್ ಟ್ರೈಪಾಡ್ ಬಳಸುವಂತಿಲ್ಲ. ಒಂದುವೇಳೆ ಬಳಸಿದರೂ ಪರವಾನಿಗೆ ಪಡೆದು ಸ್ಮಾರಕಗಳಿಗೆ ಹಾನಿಯಾಗದಂತೆ ಇಂತಿಷ್ಟು ಶುಲ್ಕ ಕಟ್ಟಿ ಸಿನಿಮಾ ಚಿತ್ರೀಕರಣ ಮಾಡಲು ಅವಕಾಶವಿದೆ. ಆದರೆ ಇಲ್ಲಿ ಬೆಲೆಕಟ್ಟಲಾಗದ ಹಂಪಿಯ ಐಕಾನ್ ಕಲ್ಲಿನ ರಥದ ಬಳಿ ಭಾರಿ ಗಾತ್ರದ ಬಂಡೆಗಳು, ಮರಳು ಹೊತ್ತ ಟ್ರಾಕ್ಟರ್ ಬಳಸಿರುವುದಕ್ಕೆ ಹಂಪಿ ಸ್ಮಾರಕ ಪ್ರಿಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಚ್ಚರಿಯ ವಿಷಯವೆಂದರೆ ವಿಜಯ ವಿಠ್ಠಲ ದೇಗುಲದ ಸುತ್ತಲೂ ಎರಡು ಕಿಲೋಮೀಟರ್ ಭಾರೀ ಹಾಗೂ ಲಘು ವಾಹನಗಳಿಗೆ ಪ್ರವೇಶವಿಲ್ಲ. ಇಂಥ ಪರಿಸ್ಥಿತಿಯಲ್ಲಿ ದುರಸ್ತಿ ಕಾರ್ಯಕ್ಕೆ ಪಕ್ಕದ ಸ್ಮಾರಕದ ಸಮೀಪವಿರುವ ಪುರಂದರದಾಸ ಮಂಟಪದ ಬಳಿ ಹಂಪಿ ತುಂಗಭದ್ರ ನದಿ ಮೂಲಕ ಮರಳು ಅಕ್ರಮವಾಗಿ ಲಿಫ್ಟ್ ಮಾಡಿ ಟ್ರಾಕ್ಟರ್ ಮೂಲಕ ತಂದು ಬಳಸುತ್ತಿದ್ದಾರೆ ಎಂಬ ಆರೋಪವಿದೆ. ಈ ಕುರಿತು ವೀಡಿಯೋ ಸಹ ಇದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

ಇದನ್ನೂ ಓದಿ: Smart City: ಕೇಂದ್ರದ ಮಹತ್ವಾಕಾಂಕ್ಷೆಯ ಸ್ಮಾರ್ಟ್‌ ಸಿಟಿ ಶ್ರೇಯಾಂಕದಲ್ಲಿ ಏರಿಕೆ ಕಂಡ ಶಿವಮೊಗ್ಗ

ಸದ್ಯ ಸ್ಮಾರಕದ ಬಳಿ ಟ್ರಾಕ್ಟರ್, ಯಂತ್ರೋಪಕರಣ ಬಳಕೆ ಮಾಡಿರುವ ಫೋಟೋ, ವೀಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಈ ಕುರಿತು ಪುರಾತತ್ವ ಇಲಾಖೆಯ ಹಂಪಿ ವಲಯದ ಸೂಪರಿಂಟೆಂಡೆಂಟ್ ಕಾಳಿಮುತ್ತು ಅವರು ಲಾಕ್ ಡೌನ್ ಸಂದರ್ಭದಲ್ಲಿ ಕಲ್ಲಿನರಥ ಸ್ಮಾರಕದ ಬಳಿ ಯಾವುದೇ ದುರಸ್ತಿ ಕಾರ್ಯ ಮಾಡಿಲ್ಲ. ಕೊರೊನೋ ಲಾಕ್ ಡೌನ್ ಮುಂಚಿತವಾಗಿ ಪುನರುತ್ಥಾನದ‌ ಕಾರ್ಯ ಜರುಗಿದೆ. ಕಳೆದ ವಾರ ನನಗೂ ಈ ಫೋಟೋ, ವೀಡಿಯೋ ಗಮನಕ್ಕೆ ಬಂದಿತ್ತು‌. ಸ್ಮಾರಕದ ಬಳಿ ಟ್ರಾಕ್ಟರ್, ಯಂತ್ರೋಪಕರಣ ಬಳಕೆ ಮಾಡಿರುವ ಮಾಹಿತಿಯಿಲ್ಲ. ಪ್ರತಿಯೊಂದು ಕೆಲಸ ಯಂತ್ರಗಳಿಲ್ಲದೆ ಮಾಡುವುದು ಕಷ್ಟವಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡುತ್ತಾರೆ.

ಈ ಹಿಂದೆ ಹಂಪಿಯ ಗಜಶಾಲೆ ಸ್ಮಾರಕದ‌ ಬಳಿ ನಿಂತಿದ್ದ ಸಾಲು ಕಂಬಗಳನ್ನು ಬೀಳಿಸಿ ಅದನ್ನು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾಕ್ಕೆ‌ ಹರಿಬಿಟ್ಟ ಕೆಲ ಕಿಡಿಗೇಡಿ ಯುವಕರನ್ನು ಆನಂತರದಲ್ಲಿ ಬಂಧಿಸಲಾಗಿತ್ತು. ಇದೀಗ ಬುದ್ದಿ ಹೇಳಿ ಕ್ರಮಕೈಗೊಳ್ಳಬೇಕಾದ ಪುರಾತತ್ವ ಇಲಾಖೆ ಮೌನಕ್ಕೆ ಶರಣಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ವರದಿ: ಶರಣು ಹಂಪಿ

First published: May 16, 2020, 2:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories