ವಠಾರ ಶಾಲೆಗೂ ವಕ್ಕರಿಸಿದ ಕೊರೋನಾ; ಶಾಲೆ ಪುನರಾರಂಭಿಸಲು ಮುಂದಾದ ಸರ್ಕಾರಕ್ಕೆ ಆರಂಭಿಕ ವಿಘ್ನ

ವಠಾರ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ನಾಲ್ವರು ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದಿರುವ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ.

ಕಲಬುರ್ಗಿಯ ಮಾಶಾಳ ಶಾಲೆ

ಕಲಬುರ್ಗಿಯ ಮಾಶಾಳ ಶಾಲೆ

  • Share this:
ಕಲಬುರ್ಗಿ (ಅ. 9): ಕೊರೋನಾ ದಿನೇ ದಿನೇ ವ್ಯಾಪಕಗೊಳ್ಳಲಾರಂಭಿಸಿದೆ. ಅದರಲ್ಲಿಯೂ ಕೊರೋನಾ ಹಾಟ್​ಸ್ಪಾಟ್ ಎನಿಸಿಕೊಂಡಿರುವ ಕಲಬುರ್ಗಿಯಲ್ಲೂ ಮಹಾಮಾರಿ ಸೋಂಕಿನ ರುದ್ರನರ್ತನ ಮುಂದುವರೆದಿದೆ. ನಿನ್ನೆಯಷ್ಟೇ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಐವರು ಬಲಿಯಾಗಿದ್ದಾರೆ. ಮೃತರ ಸಂಖ್ಯೆ 300ರ ಗಡಿ ಸಮೀಪಿಸಿದ್ದರೆ, ಸೋಂಕಿತರ ಸಂಖ್ಯೆ 18 ಸಾವಿರದ ಗಡಿ ದಾಟಿದೆ. ಇದು ಹೀಗಿರುವಾಗಲೇ ರಾಜ್ಯ ಸರ್ಕಾರ ಶಾಲೆಗಳ ಪುನರಾರಂಭಕ್ಕೆ ಮುಂದಾಗಿದೆ. ಇದೇ ಸಂದರ್ಭದಲ್ಲಿ ವಠಾರ ಶಾಲೆಗೂ ಕೊರೋನಾ ವಕ್ಕರಿಸಿ ಆತಂಕ ಸೃಷ್ಟಿಸಿದೆ. ಎಲ್ಲರ ಭೀತಿಗೂ ಕಾರಣವಾಗಿರೋ ಕೊರೋನಾ, ವಠಾರ ಶಾಲೆಗೂ ವಕ್ಕರಿಸಿದೆ. ಇದರಿಂದಾಗಿ ಪೋಷಕರ ದುಗುಡ ಮತ್ತಷ್ಟು ಹೆಚ್ಚಾಗಿದೆ. ವಠಾರ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ನಾಲ್ವರು ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದಿರುವ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ.

20 ದಿನಗಳ ಹಿಂದೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ತಪಾಸಣೆಗೆ ಗುರಿಪಡಿಸಲಾಗಿತ್ತು ಎನ್ನಲಾಗಿದೆ. ರ್ಯಾಂಡಮ್ ಆಗಿ ಪರೀಕ್ಷೆಗೊಳಪಡಿಸಿದಾಗ ವಿದ್ಯಾರ್ಥಿಗಳಲ್ಲಿ ಸೋಂಕಿರುವುದು ದೃಢಪಟ್ಟಿದೆ. 20 ಶಿಕ್ಷಕರಿಗೆ ಮತ್ತು 207 ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಿದ್ದು, ಈ ಪೈಕಿ ಶಿಕ್ಷಕರೆಲ್ಲರಿಗೂ ಕೊರೋನಾ ನೆಗೆಟಿವ್ ವರದಿ ಬಂದಿದೆ. ಆದರೆ, ನಾಲ್ವರು ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ. ಇನ್ನೂ 24 ವಿದ್ಯಾರ್ಥಿಗಳ ವರದಿ ಬರಬೇಕಿದೆ. ಈ ಕುರಿತು ಪ್ರತಿಕ್ರಿಯಿಸಿರೋ ಅಫಜಲಪುರ ಬಿಇಒ ಚಿತ್ರಶೇಖರ ದೇಗಲಮಡಿ, ಈ ಹಿಂದೆ ಮುಖ್ಯೋಪಾಧ್ಯಾಯರಿಗೆ ಪಾಸಿಟಿವ್ ಆಗಿತ್ತು ಎಂಬ ಮಾಹಿತಿ ಇದೆ. ಇದೀಗ ರಾಂಡಮ್ ಆಗಿ ತಪಾಸಣೆ ಮಾಡಿದಾಗ ಕೆಲ ವಿದ್ಯಾರ್ಥಿಗಳಿಗೆ ಸೋಂಕಿರೋದು ದೃಢಪಟ್ಟಿದೆ ಎಂಬ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ವಠಾರ ಶಾಲೆ ಬಂದ್ ಮಾಡಲು ಸೂಚಿಸಿದ್ದೇನೆ. ನಾನೇ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆಯುತ್ತೇನೆ ಎಂದು ನ್ಯೂಸ್ 18ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಲಿಬಿಯಾದಿಂದ ಭಾರತಕ್ಕೆ ಹೊರಟಿದ್ದ 7 ಭಾರತೀಯರ ಅಪಹರಣ; ವಿದೇಶಾಂಗ ಸಚಿವಾಲಯ ಮಾಹಿತಿ

40 ವಿದ್ಯಾರ್ಥಿಗಳಿಗೆ ಒಂದರಂತೆ ಗ್ರಾಮದಲ್ಲಿ ಒಟ್ಟು 19 ವಠಾರ ಶಾಲೆಗಳನ್ನು ಆರಂಭಿಸಲಾಗಿತ್ತು. ಒಂದೊಂದು ವಠಾರ ಶಾಲೆಯಲ್ಲಿ 40 ರಿಂದ 50 ಮಕ್ಕಳಿಗೆ ಬೋಧನೆ ಮಾಡಲಾಗುತ್ತಿತ್ತು. ಆದರೆ ವಿದ್ಯಾರ್ಥಿಗಳಿಗೆ ಕೊರೋನಾ ಬಂದಿರೋ ಹಿನ್ನೆಲೆಯಲ್ಲಿ ಐದು ವಠಾರ ಶಾಲೆಗಳನ್ನು ಸೀಲ್ ಡೌನ್ ಮಾಡಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ. ಎಲ್ಲ ವಠಾರ ಶಾಲೆಗಳನ್ನೂ ಸದ್ಯಕ್ಕೆ ಸ್ಥಗಿತಗೊಳಿಸಬೇಕೆಂದು ಮಾಶಾಳಾ ಗ್ರಾಮದ ನಿವಾಸಿ ಜೆ.ಎಂ.ಕೊರಂಬು ಆಗ್ರಹಿಸಿದ್ದಾರೆ. ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬಾರದು. ಈ ಬೆಳವಣಿಗೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸದ್ಯಕ್ಕೆ ಗ್ರಾಮದ ಎಲ್ಲ ವಠಾರ ಶಾಲೆಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿದ್ದಾರೆ.

ಸರ್ಕಾರ ಶಾಲೆ ಪುನರಾರಂಭಿಸಲು ತಯಾರಿ ನಡೆಸಿರುವಾಗಲೇ ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿರೋ ಬೆಳವಣಿಗೆ ನಡೆದಿದೆ. ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಕಲಬುರ್ಗಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ವಠಾರ ಶಾಲೆಗಳನ್ನು ಆರಂಭಿಸಲಾಗಿತ್ತು. ಮುಂದೆ ರಾಜ್ಯ ಸರ್ಕಾರ ವಿದ್ಯಾಗಮ ಜಾರಿಗೆ ತಂದು, ವಠಾರ ಶಾಲೆಯ ಮಾದರಿಯಲ್ಲಿಯೇ ಬೋಧನೆಗೆ ಸೂಚಿಸಿತ್ತು. ವಠಾರ ಶಾಲೆಗಳಿಗೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಆದರೆ ಮಾಶಾಳ ಗ್ರಾಮದಲ್ಲಿ ನಡೆದಿರೋ ಬೆಳವಣಿಗೆಯಿಂದ ವಿದ್ಯಾರ್ಥಿ ಮತ್ತು ಪೋಷಕರ ಆತಂಕ ಮತ್ತಷ್ಟು ಹೆಚ್ಚಿಸಿದೆ. ಶಾಲೆ ಪುನರಾರಂಭದ ಕುರಿತು ಸರ್ಕಾರವನ್ನು ಮರು ಪರಿಶೀಲನೆ ಮಾಡುವಂತೆ ಮಾಡಿದೆ.
Published by:Sushma Chakre
First published: