Kalburgi Rain: ಕಲಬುರ್ಗಿಯಲ್ಲಿ ವರುಣನ ಅಬ್ಬರ; ಮನೆ ಕುಸಿದು ಐವರಿಗೆ ಗಂಭೀರ ಗಾಯ

Karnataka Rain: ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸಿರಗಾಪುರ, ಕಲಬುರಗಿ ತಾಲ್ಲೂಕಿನ ಕುಮಸಿ, ಆಲಗೂಡ, ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಮತ್ತಿತರ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. 

ಕಲಬುರ್ಗಿಯಲ್ಲಿ ಸುರಿದ ಮಳೆಯಿಂದ ಕುಸಿದ ಮನೆ

ಕಲಬುರ್ಗಿಯಲ್ಲಿ ಸುರಿದ ಮಳೆಯಿಂದ ಕುಸಿದ ಮನೆ

  • Share this:
ಕಲಬುರ್ಗಿ; ಕಲಬುರ್ಗಿ ಜಿಲ್ಲೆಯಲ್ಲಿ ವರುಣ ಮತ್ತೆ ಅಬ್ಬರಿಸಿದ್ದಾನೆ. ಕಲಬುರ್ಗಿ ನಗರದ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಕಳೆದ ರಾತ್ರಿ ಭಾರೀ ಮಳೆಯಾಗಿದೆ. ವರುಣನ ಅಬ್ಬರಕ್ಕೆ ಹಳ್ಳ-ಕೊಳ್ಳಗಳು, ನದಿಗಳು ಉಕ್ಕಿ ಹರಿಯುವಂತಾಗಿದೆ. ಮನೆ ಕುಸಿದು ಕಲಬುರ್ಗಿಯ ಗಾಜಿಪುರದಲ್ಲಿ ಐವರಿಗೆ ಗಾಯಗಳಾಗಿವೆ.  ಕಲಬುರ್ಗಿ ನಗರದ ಪೂಜಾ ಕಾಲೋನಿ ಸೇರಿ ಹಲವು ಬಡಾವಣೆಗಳಲ್ಲಿ ಮಳೆ ನೀರು ಆವರಿಸಿಕೊಂಡಿದೆ. ಬಡಾವಣೆ ರಸ್ತೆಗಳಲ್ಲಿ ಸುಮಾರು ಅರ್ಧ ಅಡಿಯಷ್ಟು ನೀರು ಹರಿಯುತ್ತಿದ್ದು, ನಿವಾಸಿಗಳು ಸಂಚರಿಸಲು ಪರದಾಡುವಂತಾಗಿದೆ. ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸಿರಗಾಪುರ, ಕಲಬುರಗಿ ತಾಲ್ಲೂಕಿನ ಕುಮಸಿ, ಆಲಗೂಡ, ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಮತ್ತಿತರ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.  ಹಲವು ಮನೆಗಳು ಮಳೆ ನೀರಿನಿಂದ ಜಲಾವೃತಗೊಂಡಿವೆ.

ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿನ ಧವಸ ಧಾನ್ಯಗಳು ಹಾಳಾಗಿವೆ. ರಾತ್ರಿ ಇಡೀ ಮನೆಯಿಂದ ನೀರು ಹೊರಹಾಕಲು ನಿವಾಸಿಗಳು ಹೈರಾಣಾಗಿದ್ದಾರೆ. ವರುಣ ಆರ್ಭಟಕ್ಕೆ ಜಿಲ್ಲೆಯಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಕಾಗಿಣಾ ನದಿ ಉಕ್ಕಿ ಹರಿಯುತ್ತಿರುವುದರಿಂದಾಗಿ ಕೋರವಾರ ಬಳಿ ಸೇತುವೆ ಮೇಲೆ ನುಗ್ಗಿ ಹರಿಯುತ್ತಿದೆ. ಇದರಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಕಲಬುರ್ಗಿ - ಚಿಂಚೋಳಿ ನಡುವಿನ ಸಂಪರ್ಕ ಕಡಿತಗೊಂಡಂತಾಗಿದೆ. ಗಂಡೋರಿ ನಾಲಾದ ಹಳ್ಳವೂ ತುಂಬಿ ಹರಿಯುತ್ತಿದ್ದು, ಮಹಾಗಾಂವ ಜನರ ಸಂಚಾರಕ್ಕೆ ತೊಂದರೆಯುಂಟು ಮಾಡಿದೆ. ಹಳ್ಳದ ನೀರು ಹೊಲಗಳಿಗೆ ನುಗ್ಗಿದೆ. ತಗ್ಗು ಪ್ರದೇಶದಲ್ಲಿನ ರೈತರ ಬೆಳೆಗಳು ಮಳೆ ನೀರಿನಿಂದ ಕೊಚ್ಚಿ ಹೋಗಿದೆ. ತೊಗರಿ, ಉದ್ದು, ಹೆಸರು, ಸಜ್ಜೆ ಬೆಳೆಗಳು ಜಲಾವೃತಗೊಂಡಿದ್ದು, ಅಪಾರ ಪ್ರಮಾಣದ ಹಾನಿಯ ಭೀತಿ ಸೃಷ್ಟಿಸಿದೆ.

ಇದನ್ನೂ ಓದಿ: Dakshina Kannada: ವೀಳ್ಯದೆಲೆ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸುತ್ತಿರುವ ಪುತ್ತೂರಿನ ರೈತ ಮಹಿಳೆ

ಮತ್ತೊಂದೆಡೆ ರಾತ್ರಿಯಿಡೀ ಸುರಿದ ಮಳೆಗೆ ಮನೆ ಕುಸಿದು ಬಿದ್ದ ಘಟನೆ ಕಲಬುರ್ಗಿಯ ಗಾಜೀಪೂರ ಅತ್ತರ ಕಂಪೌಂಡ ಬಳಿ ನಡೆದಿದೆ. ಬಾಬುರಾವ ವಾಂಗೆ ಎಂಬುವವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ನಸುಕಿನ ಜಾವ ಬಾಡಿಗೆದಾರರು ಮನೆಯಲ್ಲಿ ಮಲಗಿರುವಾಗ ಮನೆ ಕುಸಿತವಾಗಿದೆ. ಕಟ್ಟಡದ ಅವಶೇಷಗಳಲ್ಲಿ ಸಿಲುಕಿ ಅರ್ಧಗಂಟೆ ನರಳಾಡಿದ ಐವರು ಬಾಡಿಗೆದಾರರು. ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಹೊರತೆಗೆದು ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ. ಸಿದ್ದರಾಮ, ಅಂಬಿಕಾ, ಅಕ್ಷಯ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಇನ್ನಿಬ್ಬರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Kalburgi Rain: Heavy Rain Affected in Kalburgi Five Houses Collapsed.
ಕಲಬುರ್ಗಿಯಲ್ಲಿ ಸುರಿದ ಮಳೆ


ಘಟನೆ ನಡೆದು ಆರೇಳು ತಾಸು ಕಳೆದರೂ ಪಾಲಿಕೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬರದ ಕಾರಣ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ರಹ್ಮಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಆಗಾಗ ಮಳೆ ಸುರಿಯುತ್ತಲೇ ಇದ್ದು, ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು ಇತ್ಯಾದಿಗಳು ರೈತರ ಕೈ ಸೇರದಂತಾಗಿವೆ. ಅಪಾರ ಪ್ರಮಾಣದ ಬೆಳೆ ಹಾಳಾಗಿದ್ದು ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆ ಮತ್ತೆ ವರುಣ ಅಬ್ಬರಿಸಿದ್ದಾನೆ. ಇದರಿಂದಾಗಿ ತೊಗರಿ ಮತ್ತಿತರ ಬೆಳೆಗೂ ಕುತ್ತು ಬಂದೊದಗಿದೆ. ಈಗಲೂ ಜಿಲ್ಲೆಯಾದ್ಯಂತ ಜಡಿ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ.

ಮಳೆರಾಯನ ಅಬ್ಬರ ಇದೇ ರೀತಿ ಮುಂದುವರೆದರೆ ಮುಂಗಾರು ಬೆಳೆ ಸಂಪೂರ್ಣ ಹಾನಿಯಾಗೋ ಆತಂಕ ಎದುರಾಗಿದೆ. ಅತ್ಯಂತ ಕಡಿಮೆ ಬೀಳೋ ಕಲಬುರ್ಗಿ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆ ಮಳೆಗಿಂತ ದುಪ್ಪಟ್ಟು ಮಳೆಯಾಗಿದೆ. ಅತಿಯಾದ ಮಳೆಯಿಂದಾಗಿ ಅತಿವೃಷ್ಟಿಯಾಗಿದ್ದು, ರೈತರು ಮತ್ತು ನಾಗರಿಕರು ತತ್ತರಿಸುವಂತಾಗಿದೆ. ಹುಯ್ಯೋ.. ಹುಯ್ಯೋ.. ಮಳೆರಾಯ ಅನ್ನೋ ಬದಲಿಗೆ, ಸಾಕೋ... ಸಾಕೋ.. ಮಳೆರಾಯ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ.
Published by:Sushma Chakre
First published: