ಪ್ರೊಬೇಷನರಿ ಪಿಎಸ್ಐ ಅನುಮಾನಾಸ್ಪದ ಸಾವು; ತಲಾ 10 ಸಾವಿರ ನೆರವು ಘೋಷಿಸಿ ಮಾನವೀಯತೆ ಮೆರೆದ ಪ್ರಶಿಕ್ಷಣಾರ್ಥಿಗಳು

ಕಲಬುರ್ಗಿ ನಗರದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರೊಬೆಷನರಿ ಪಿ.ಎಸ್.ಐ. ಬಸವರಾಜ್ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಿತು. ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಗೆ ಸಾವಿರಾರು ಜನ ಸಾಕ್ಷಿಯಾದರು.

ಪಿಎಸ್​ಐ ಬಸವರಾಜ್ ಅಂತ್ಯಕ್ರಿಯೆಯ ದೃಶ್ಯ

ಪಿಎಸ್​ಐ ಬಸವರಾಜ್ ಅಂತ್ಯಕ್ರಿಯೆಯ ದೃಶ್ಯ

  • News18
  • Last Updated :
  • Share this:
- ಶಿವರಾಮ ಅಸುಂಡಿ,

ಕಲಬುರ್ಗಿ(ಜ. 07): ನಿನ್ನೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರೊಬೆಷನರಿ ಪಿಎಎಸ್​ಐ ಬಸವರಾಜ್ ಅವರ ಅಂತ್ಯಕ್ರಿಯೆ ಇಂದು ನೆರವೇರಿತು. ಕಲುಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಇಂದು ಸೋಮವಾರ ಮದ್ಯಾಹ್ನ ಅಂತ್ಯಕ್ರಿಯೆ ನೆರವೇರಿತು. ನಾಗೇನಹಳ್ಳಿ ತರಬೇತಿ ಕೇಂದ್ರದಲ್ಲಿ ಪಿಎಸ್​ಐ ಪ್ರಶಿಕ್ಷಣಾರ್ಥಿಯಾಗಿದ್ದ ಬಸವರಾಜ್, ಆರೋಗ್ಯ ಸರಿಯಿಲ್ಲವೆಂದು ಮೇಲಧಿಕಾರಿಗಳ ಅನುಮತಿ ಪಡೆದು ಕಲಬುರ್ಗಿಗೆ ಆಗಮಿಸಿದ್ದ. ನಂತರದಲ್ಲಿ ಆತ ದೂರವಾಣಿ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಕಲಬುರ್ಗಿಯ ರಾಮಮಂದಿರ ವೃತ್ತದಲ್ಲಿನ ಕಾಂಪ್ಲೆಕ್ಸ್ ಬಳಿ ಅಪರಿಚಿತ ಶವ ಸಿಕ್ಕಿದೆ ಎಂದು ಮಾಹಿತಿ ಸಿಕ್ಕಾಗ ಪೊಲೀಸರು ಪರಿಶೀಲನೆ ನಡೆಸಿದ್ದರು. ಆ ವೇಳೆ ಬಸವರಾಜ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಸುದ್ದಿ ತಿಳಿಯುತ್ತಿದ್ದೆಯೇ ಕುಟುಂಬದ ಸದಸ್ಯರು, ತರಬೇತಿ ಕೇಂದ್ರದ ಸಹ ಪ್ರಶಿಕ್ಷಣಾರ್ಥಿಗಳು ಕಣ್ಣೀರು ಹಾಕಿದ್ದರು.

ನಿನ್ನೆ ಸಂಜೆ ನಾಗೇನಹಳ್ಳಿ ತರಬೇತಿ ಕೇಂದ್ರದಲ್ಲಿ ಬಸವರಾಜ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಮದ್ಯಾಹ್ನ ಸ್ವಗ್ರಾಮ ಬೆನಕನಹಳ್ಳಿಯಲ್ಲಿ ಬಸವರಾಜ್ ಅಂತ್ಯಕ್ರಿಯೆ ನೆರವೇರಿದೆ. ಕಲಬುರ್ಗಿ ಎಸ್.ಪಿ. ಎನ್. ಶಶಿಕುಮಾರ್, ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸವಿತಾ ಹೂಗಾರ, ಸಹ ಪ್ರಶಿಕ್ಷಣಾರ್ಥಿಗಳು, ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಬಸವರಾಜ್ ಕುಟುಂಬಕ್ಕೆ ತಲಾ 10 ಸಾವಿರ ರೂಪಾಯಿ ನೆರವು ನೀಡಲು ಪ್ರಶಿಕ್ಷಣಾರ್ಥಿಗಳು ಮುಂದಾಗುವ ಮೂಲಕ ನೋವಿಗೆ ಮಿಡಿಯುವ ಕೆಲಸ ಮಾಡಿದ್ದಾರೆ ಎಂದು ಕಲಬುರ್ಗಿ ಎಸ್.ಪಿ. ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಪ್ರಶಿಕ್ಷಣಾರ್ಥಿ ಬಸವರಾಜ್ ನಿಧನದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಪಿ.ಎಸ್.ಐ. ತರಬೇತುದಾರರ ಅಂತಿಮ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಂಶುಪಾಲರಾದ ಸವಿತಾ ಹೂಗಾರ್, ಬಸವರಾಜ್ ಸಾವಿನಿಂದಾಗಿ ಎಲ್ಲರಿಗೂ ದುಃಖವಾಗಿದೆ. ಆತನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದೇವೆ. ಬಸವರಾಜ್ ನಿಧನದ ಹಿನ್ನೆಲೆಯಲ್ಲಿ ಇಂದು ನಡೆಸಲು ಉದ್ದೇಶಿಸಿದ್ದ ಅಂತಿಮ ಪರೀಕ್ಷೆಯನ್ನು ಮುಂದೂಡಿರುವುದಾಗಿ ತಿಳಿಸಿದ್ದಾರೆ.

ಬಸವರಾಜ್ ನಿಧನದಿಂದಾಗಿ ಬೆನಕನಹಳ್ಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಸಹ ಪ್ರಶಿಕ್ಷಣಾರ್ಥಿಗಳು ಗೆಳೆಯನ ಅಗಲಿಕೆಗೆ ಕಣ್ಣೀರು ಹಾಕಿದ್ದಾರೆ. ನಾಗೇನಹಳ್ಳಿ ತರಬೇತಿ ಕೇಂದ್ರದಲ್ಲಿ ಸದ್ಯ 550ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳಿದ್ದು, ತಲಾ 10 ಸಾವಿರ ನೆರವು ನೀಡಲು ಮುಂದಾಗಿದ್ದಾರೆ. ತಲಾ 10 ಸಾವಿರ ಸಂಗ್ರಹಿಸಿದಲ್ಲಿ ಕನಿಷ್ಟವೆಂದರೂ ಬಸವರಾಜ್ ಕುಟುಂಬಕ್ಕೆ 55 ಲಕ್ಷ ರೂಪಾಯಿಗಳವರೆಗೆ ನೆರವು ನೀಡಬಹುದಾಗಿದ್ದು, ಆರ್ಥಿಕ ಸಹಾಯದ ಮೂಲಕ ಆತನ ಕುಟುಂಬಕ್ಕೆ ನೆರವಾಗುತ್ತೇವೆ ಎಂದು ಗೆಳೆಯರು ಅಭಯ ನೀಡಿ ಮಾನವೀಯತೆ ಮೆರೆದಿದ್ದಾರೆ.

ಈ ನಡುವೆ ಬಸವರಾಜ್ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಗೃಹ ಸಚಿವ ಎಂ.ಬಿ. ಪಾಟೀಲ್ ಸಂತಾಪ ಸೂಚಿಸಿದ್ದಾರೆ. ಕುಟುಂಬಕ್ಕೆ ಮೃತನ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಬಸವರಾಜ್ ಕುಟುಂಬಕ್ಕೆ ವೈಯಕ್ತಿಕವಾಗಿ 50 ಸಾವಿರ ರೂಪಾಯಿ ನೀಡುವುದಾಗಿ ಪ್ರಕಟಿಸಿದ್ದಾರೆ. ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಸವರಾಜ್ ಅಂತ್ಯಕ್ರಿಯೆ ನಡೆದಿದ್ದು, ಆತನ ಸಾವಿನ ಕುರಿತಾದ ತನಿಖೆ ಪ್ರಾರಂಭಗೊಂಡಿದೆ.
First published: