ಗ್ರಾಮ ಪಂಚಾಯಿತಿಯಲ್ಲಿ ಬೆಂಬಲಿಗರನ್ನು ಚುನಾಯಿಸಲು ಅವಿರೋಧ ಆಯ್ಕೆ ಆಟ; ಇತರೆ ಅಭ್ಯರ್ಥಿಗಳ ಆಕ್ರೋಶ

ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯ ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರು ಗ್ರಾಮದಲ್ಲಿ ನಡೆದಿದೆ.

ರಾವೂರು ಗ್ರಾಮಸ್ಥರ ಪ್ರತಿಭಟನೆ

ರಾವೂರು ಗ್ರಾಮಸ್ಥರ ಪ್ರತಿಭಟನೆ

  • Share this:
ಕಲಬುರ್ಗಿ(ಡಿ. 18): ಕಲಬುರ್ಗಿ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ಜೋರಾಗಿದೆ. ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಗಳ ನಡುವೆ ಬಿರುಸಿನ ಪೈಪೋಟಿ ಏರ್ಪಡಲಾರಂಭಿಸಿದೆ. ಕೆಲವೆಡೆ ಬಹಿರಂಗ ಹರಾಜು ಹಾಕಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳನ್ನು ಮಾರಾಟಕ್ಕಿಟ್ಟ ಘಟನೆಗಳೂ ಕಲಬುರ್ಗಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದವು. ಇದೀಗ ತಮ್ಮ ಬೆಂಬಲಿಗರನ್ನು ಚುನಾಯಿಸಲೆಂದು ಕೆಲವು ರಾಜಕೀಯ ನಾಯಕರು ಅವಿರೋಧ ಆಯ್ಕೆಯ ಆಟವಾಡಿ, ಇತರೆ ಅಭ್ಯರ್ಥಿಗಳಿಗೆ ಅನ್ಯಾಯ ಎಸಗಿರುವ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯ ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರು ಗ್ರಾಮದಲ್ಲಿ ನಡೆದಿದೆ.

ರಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 32 ಸದಸ್ಯರಿದ್ದು, ಎಲ್ಲರನ್ನೂ ಅವಿರೋಧವಾಗಿ ಆಯ್ಕೆ ಮಾಡಲು ಗ್ರಾಮದ ಕೆಲವರು ತಂತ್ರ ರೂಪಿಸಿದ್ದಾರೆ. ತಮ್ಮ ಬೆಂಬಲಿಗರನ್ನು ಯಾವುದೇ ಸ್ಪರ್ಧೆ ಇಲ್ಲದೆ ಗೆಲ್ಲಿಸಲು ಕೆಲವು ನಾಯಕರು ಅವಿರೋಧ ಆಯ್ಕೆಯ ರಣತಂತ್ರ ಹೆಣೆದಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ್ದ ಕೆಲವರ ಬಳಿ ನಾಮಪತ್ರ ವಾಪಾಸ್ ಪಡೆಯೋ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಕೆಲವರಿಗೆ ಧಮ್ಕಿ ಹಾಕಿ ನಾಮಪತ್ರ ವಾಪಾಸ್ ಪಡೆಯುವಂತೆ ನೋಡಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಚುನಾವಣೆಯಿಂದ ಹಿಂದೆ ಸರಿಸಲು ಅವಿರೋಧ ಆಯ್ಕೆಯ ನಾಟಕ ಆಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ ಕೆಲ ನಾಯಕರ ವರ್ತನೆ ಖಂಡಿಸಿ ಕೆಲ ಅಭ್ಯರ್ಥಿಗಳು ಗ್ರಾಮ ಪಂಚಾಯ್ತಿ ಎದುರು ಬಂದು ಪ್ರತಿಭಟನೆ ಮಾಡಿದ್ದಾರೆ. ನಮ್ಮ ಓಣಿಯ ಅಭಿವೃದ್ಧಿ ಕನಸು ಹೊತ್ತು ಚುನಾವಣೆಗೆ ಸ್ಪರ್ಧಿಸಬೇಕೆಂದು ನಾಮಪತ್ರ ಸಲ್ಲಿಸಿದ್ದೆವು. ಆದರೆ ನಿಮ್ಮ ವಾರ್ಡ್ ಗೆ ಬೇರೊಬ್ಬರನ್ನು ಆಯ್ಕೆ ಮಾಡಿದ್ದೇವೆ ಎಂದು ಗ್ರಾಮದ ಕೆಲ ಮುಖಂಡರು, ನಮ್ಮಿಂದ ನಾಮಪತ್ರ ವಾಪಾಸ್ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅವಿರೋಧ ಆಯ್ಕೆ ನಡೆಯಬಾರದು. ನಮಗೂ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕೆಂದು ಕೆಲ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ಮೋಸದಿಂದ ನಮ್ಮ ಸಹಿ ಪಡೆದು ನಾಮಪತ್ರ ವಾಪಾಸ್ ಪಡೆಯಲು ತಂತ್ರ ಹೆಣೆದಿದ್ದಾರೆ.

ಇದನ್ನೂ ಓದಿ: Bangalore Crime: ಬೆಂಗಳೂರಿನಲ್ಲಿ ಇಂದು ಮುಂಜಾನೆ ಪೊಲೀಸ್ ದಂಪತಿ ಆತ್ಮಹತ್ಯೆ

ಗ್ರಾಮದ ಹಿರಿಯ ರಾಜಕೀಯ ಮುಖಂಡರು ತಮ್ಮ ಬೆಂಬಲಿಗರಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ. ಉಳಿದವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಭ್ಯರ್ಥಿಗಳಾದ ಶ್ರೀದೇವಿ ಮತ್ತು ರೆಹಮಾನ್ ಪಟೇಲ್ ಆರೋಪಿಸಿದ್ದಾರೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಬೆಳವಣಿಗೆಗಳು ರಾವೂರು ಗ್ರಾಮದಲ್ಲಿ ನಡೆಯುತ್ತಿವೆ. ಚುನಾವಣೆಗೆ ಸ್ಪರ್ಧಿಸೋ ಹಕ್ಕನ್ನು ಕಸಿಯಲಾಗುತ್ತಿದೆ. ಪ್ರಭಾವಿ ವ್ಯಕ್ತಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡೋದಾಗಿಯೂ ರಾಘವೇಂದ್ರ ಹೂಗಾರ ಎನ್ನುವವರು ಎಚ್ಚರಿಸಿದ್ದಾರೆ.

ಗ್ರಾಮ ಪಂಚಾಯ್ತಿ ಸದಸ್ಯರ ಅವಿರೋಧ ಆಯ್ಕೆಗೆ ಬಹಿರಂಗ ಹರಾಜು ಹಾಕಿದ ಘಟನೆಯಿಂದ ಮಾನ ಹರಾಜಾಗಿರುವಾಗಲೇ ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳೂ ನಡೆಯುತ್ತಿವೆ. ತಮ್ಮ ಪ್ರಭಾವ ಬಳಸಿ ಶತಾಯಗತಾಯ ಗೆಲ್ಲಲೇ ಬೇಕೆಂದು ಕೆಲ ನಾಯಕರು ಇನ್ನಿಲ್ಲದ ಪ್ರಯತ್ನ ನಡೆಸಿದ್ದು, ಅದಕ್ಕೆ ಗ್ರಾಮಸ್ಥರು, ಕೆಲ ಅಭ್ಯರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ಏನು ಕ್ರಮ ಕೈಗೊಳ್ಳುತ್ತೆಯೇ ಅದರಂತೆ ರಾವೂರು ಗ್ರಾಮ ಪಂಚಾಯ್ತಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

(ವರದಿ - ಶಿವರಾಮ ಅಸುಂಡಿ)
Published by:Sushma Chakre
First published: