ಕಲಬುರ್ಗಿ (ಡಿಸೆಂಬರ್. 23): ಕೊರೋನಾ ಹಾಟ್ ಸ್ಪಾಟ್ ಕಲಬುರ್ಗಿಗೆ ಈಗ ಬ್ರಿಟನ್ನಿಂದ ಬಂದವರಿಂದ ಆತಂಕ ಎದುರಾಗಿದೆ. ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದ್ದ ಜಿಲ್ಲೆಯಲ್ಲಿ ಮತ್ತೆ ಏರುಗತಿ ಕಾಣಲಾರಂಭಿಸಿದೆ. ಇದರ ನಡುವೆಯೇ ಬ್ರಿಟನ್ ನಿಂದ ವಾಪಸ್ಸಾದವರಿಂದ ಆತಂಕದ ತೂಗುಗತ್ತಿ ತೂಗಲಾರಂಭಿಸಿದೆ. ಬ್ರಿಟನ್ ನಿಂದ ಏಳು ಜನ ಜಿಲ್ಲೆಗೆ ವಾಪಸ್ಸಾಗಿದ್ದು, ಜನರನ್ನು ಕಂಗಾಲಾಗಿಸಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 20,933 ಗೆ ಏರಿಕೆಯಾಗಿದೆ. ಈ ಪೈಕಿ 20,381 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆಯೂ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಸಾವನ್ನಪ್ಪಿದವರ ಸಂಖ್ಯೆ 322 ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ಮತ್ತು ಸಾವನ್ನಪ್ಪುವವರ ಸಂಖ್ಯೆ ಏರಿಕೆಯಾದ ಸಂದರ್ಭದಲ್ಲಿಯೇ ಕಲಬುರ್ಗಿ ಜನರಿಗೆ ಬ್ರಿಟನ್ ಗುಮ್ಮ ಕಾಡಲಾರಂಭಿಸಿದೆ. ಇದರ ನಡುವೆಯೇ ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಕರ್ಫ್ಯೂ ಜಾರಿಗೆ ಮುಂದಾಗಿದೆ.
ಬ್ರಿಟನ್ ನಿಂದ ಕಲಬುರ್ಗಿಗೆ ಏಳು ಜನ ಆಗಮಿಸಿದ್ದು ಜನತೆಯಲ್ಲಿ ಆತಂಕ ಸೃಷ್ಟಿಸುವಂತಾಗಿದೆ. ಡಿಸೆಂಬರ್ 6 ರಿಂದ ಡಿಸೆಂಬರ್ 18 ರವರೆಗೆ ಒಟ್ಟು 7 ಜನ ಬ್ರಿಟನ್ ನಿಂದ ಆಗಮಿಸಿದ್ದಾರೆ. ಬ್ರಿಟನ್ ನಿಂದ ಆಗಮಿಸಿದವರ ಮೇಲೆ ಜಿಲ್ಲಾಡಳಿತ ಹದ್ದಿನಕಣ್ಣಿಟ್ಟಿದೆ. ಬ್ರಿಟನ್ ನಿಂದ ಕಲಬುರ್ಗಿಗೆ ಆಗಮಿಸಿದ 7 ಜನರ ಪೈಕಿ ಐವರು ಕಲಬುರ್ಗಿ ನಗರದಲ್ಲಿ ವಾಸ್ತವ್ಯ ಮಾಡಿದ್ದಾರೆ. ಇಬ್ಬರು ಬೀದರ್ ಗೆ ಪ್ರಯಾಣಿಸಿರುವ ಮಾಹಿತಿ ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ.
ಮಕ್ತಂಪುರ ಬಡಾವಣೆಯ ಇಬ್ಬರು, ವೀರೇಂದ್ರಪಾಟೀಲ್ ಬಡಾವಣೆಯ ಇಬ್ಬರು, ಎಸ್.ಬಿ ಟೆಂಪಲ್ ಬಡಾವಣೆಯ ಇಬ್ಬರು, ಸಂತೋಷ ಕಾಲೋನಿಯ ಇಬ್ಬರು ಸೇರಿ ಒಟ್ಟು ಏಳು ಜನ ಬ್ರಿಟನ್ ನಿಂದ ವಾಪಸ್ಸಾಗಿದ್ದಾರೆ. ಎಲ್ಲರಿಗೂ ಇಂದು ಕೊರನಾ ತಪಾಸಣೆಗೆ ಗುರಿಯಾಗಿಸಲಾಗಿದೆ. ಎಲ್ಲರಿಗೂ ಹೋಮ್ ಕ್ವಾರಂಟೈನ್ ನಲ್ಲಿರಲು ಸೂಚನೆ ನೀಡಿರುವುದಾಗಿ ಡಿಎಚ್ಒ ಡಾ. ರಾಜಾಶೇಖರ ಮಾಲಿ ಮಾಹಿತಿ ನೀಡಿದ್ದಾರೆ.
ಇದರ ನಡುವೆಯೇ ರಾತ್ರಿ ವೇಳೆ ಕರ್ಫ್ಯೂ ವಿಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಇದಕ್ಕೆ ಜನತೆಯ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ಏಕಾಏಕಿ ರಾತ್ರಿ ಕರ್ಫ್ಯೂಗೆ ಮುಂದಾಗಿರೋದಕ್ಕೆ ಜನತೆ ದಿಗ್ಭ್ರಮೆ ವ್ಯಕ್ತಪಡಿಸಿದೆ. ಮೊದಲೇ ಚಳಿಗಾಲವಿದೆ. ಹೀಗಿರುವಾಗ ರಾತ್ರಿ ವೇಳೆ ಕರ್ಫ್ಯೂ ವಿಧಿಸೋದ್ರಿಂದ ಏನು ಪ್ರಯೋಜನವಾಗುತ್ತದೆ.
ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಹಾಕುವುದನ್ನ, ಸಾಮಾಜಿಕ ಅಂತರ ಕಾಪಾಡುವುದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದಲ್ಲಿ ಎಲ್ಲವೂ ನಿಯಂತ್ರಣಕ್ಕೆ ಬರಲಿದೆ ಎಂದು ಕಲಬುರ್ಗಿ ನಿವಾಸಿ ಲಕ್ಷ್ಮಿಕಾಂತ್ ಸ್ವಾದಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರರುವ ರೈತ ಮುಖಂಡ ದಯಾನಂದ ಪಾಟೀಲ, ರಾಜ್ಯ ಸರ್ಕಾರ ಮನಸ್ಸಿಗೆ ಬಂದಂತೆ ಆಡಳಿತ ಮಾಡುತ್ತಿದೆ. ಯಾರೊಂದಿಗೂ ಸಮಾಲೋಚನೆ ಮಾಡದೆ ದಿಢೀರಾಗಿ ಕರ್ಫ್ಯೂ ವಿಧಿಸಿರುವುದು ಸರಿಯಾದ ಕ್ರಮವಲ್ಲ. ಹಗಲೆಲ್ಲಾ ಬೇಕಾಬಿಟ್ಟಿ ಅಡ್ಡಾಡಲು ಬಿಟ್ಟು, ರಾತ್ರಿ ವೇಳೆ ಕರ್ಫ್ಯೂ ಜಾರಿ ಮಾಡುವುದರಿಂದ ಏನು ಪ್ರಯೋಜನೆ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ, ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಈ ರೀತಿಯ ಕ್ರಮ ಅಗತ್ಯವಾಗಿತ್ತು. ಕರ್ಫ್ಯೂ ವಿಧಿಸಿರುವುದರಿಂದಾಗಿ ಕೊರೋನಾ ನಿಯಂತ್ರಣಕ್ಕೆ ಒಂದಷ್ಟ ಕಡಿವಾಣ ಬೀಡಲಿದೆ ಎಂದಿದ್ದಾರೆ.
ಇದನ್ನೂ ಓದಿ :
ಕೊರೋನಾ ಏನು ಗೂಬೆನಾ? ರಾತ್ರಿ ಮಾತ್ರ ಕರ್ಫ್ಯೂ ಜಾರಿ ಮಾಡಲು; ಎಚ್ಸಿ ಮಹದೇವಪ್ಪ ವ್ಯಂಗ್ಯ
ಮತ್ತೊಂದೆಡೆ ಜಿಲ್ಲಾಡಳಿತ ಪೊಲೀಸ್ ಇಲಾಖೆ ನೆರವಿನಿಂದ ಕರ್ಫ್ಯೂ ಜಾರಿಗೆ ಮುಂದಾಗಿದೆ. ಆದರೆ ಜನ ಮಾಸ್ಕ್ ಹಾಕಿಕೊಳ್ಳದೆ, ಸಾಮಾಜಿಕ ಅಂತರ ಕಾಪಾಡದೆ ಅಡ್ಡಾಡುತ್ತಿರೋದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಾತ್ರಿ ಕರ್ಫ್ಯೂ ವಿಧಿಸಿದರೂ, ಹಗಲು ಹೊತ್ತಿನಲ್ಲಿ ಜನ ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ. ಇದರ ಬಗ್ಗೆಯೂ ಜಿಲ್ಲಾಡಳಿತ ಗಂಭೀರವಾಗಿ ಚಿಂತನೆ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಒಟ್ಟಾರೆ ಜಿಲ್ಲೆಗೆ ಬ್ರಿಟನ್ ನಿಂದ ಏಳು ಜನ ಆಗಮಿಸಿರುವ ಆತಂಕ ಉಂಟಾದಾಗಲೇ ರಾಜ್ಯ ಸರ್ಕಾರದ ದಿಢೀರ್ ಕರ್ಫ್ಯೂ ನಿರ್ಧಾರ ಜನರನ್ನು ಗಲಿಬಿಲಿಗೊಳಿಸಿದೆ. ಸರ್ಕಾರದ ಆದೇಶದ ಪಾಲನೆ ಮಾಡುವ ಅನಿವಾರ್ಯತೆಯಲ್ಲಿ ಜನತೆಯಿದ್ದಾರೆ.
ವರದಿ: ಶಿವರಾಮ ಅಸುಂಡಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ