ಕಲಬುರ್ಗಿ (ಜ.25): ವಯಸ್ಸಾದ ಮೇಲೆ ಹೆತ್ತವರನ್ನು ಮಕ್ಕಳು ನೋಡಿಕೊಳ್ಳೋ ರೀತಿಯೇ ಬದಲಾಗುತ್ತಿದೆ. ತಂದೆ - ತಾಯಿಯರನ್ನು ಸರಿಯಾಗಿ ನೋಡಿಕೊಳ್ಳದೇ ಹೊಡೆಯೊದು ಬಡಿಯೋದು, ಕೊನೆಗೆ ಮನೆಯಿಂದ ಹೊರಗೆ ಹಾಕೋ ಉದಾಹರಣೆಗಳು ಬಹಳಷ್ಟಿವೆ. ಎಷ್ಟೋ ಜನ ತಂದೆ - ತಾಯಿಗಳು ಮಕ್ಕಳ ಅನಾದರಕ್ಕೆ ಗುರಿಯಾಗಿ ಅನಾಥಾಶ್ರಮಗಳನ್ನು ಸೇರಿದ್ದಾರೆ. ಆದರೆ ಇಲ್ಲೊಬ್ಬ ಪುತ್ರ ಮಾತ್ರ ಅದಕ್ಕೆ ತದ್ವಿರುದ್ದ. ಈತ ಹೆತ್ತವರ ಸವಿನೆನಪಿಗಾಗಿ ಭವ್ಯವಾದ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಿ ನಿತ್ಯ ಪೂಜೆ ಕಾರ್ಯ ಮಾಡುತ್ತಿದ್ದಾನೆ.
ಹಾಲಿನ ಕಲ್ಲಿನಲ್ಲಿ ಕಟೆದ ಭವ್ಯವಾದ ಮೂರ್ತಿ ಪ್ರತಿಷ್ಠಾನ ಮಾಡಿರೋ ಮಕ್ಕಳು, ಮೂರ್ತಿಗೆ ಪೂಜೆ ಮಾಡೋ ವಿಧಿ -ವಿಧಾನಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಥದ್ದೊಂದು ಅಪರೂಪದ ದೃಶ್ಯಗಳಿಗೆ ಸಾಕ್ಷಿಯಾದದ್ದು ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ನಿರಗುಡಿ ಗ್ರಾಮ. ಗ್ರಾಮದಲ್ಲಿ ಪುತ್ರನೋರ್ವ ತನ್ನ ತಾಯಿ ಮತ್ತು ತಂದೆಯರ ಮೂರ್ತಿ ಪ್ರತಿಷ್ಠಾನೆ ಮಾಡಿ ಹೆತ್ತವರ ಋಣ ತೀರಿಸಿದ್ದಾನೆ. ನಿರಗುಡಿ ಗ್ರಾಮದ ವಿಶ್ವನಾಥ್ ಮತ್ತು ಲಕ್ಷ್ಮೀಬಾಯಿ ಕಳೆದ ನಾಲ್ಕು ವರ್ಷಗಳ ಹಿಂದೆ ಅಕಾಲಿಕವಾಗಿ ನಿಧನರಾಗಿದ್ದರು. ತಂದೆ ತಾಯಿಯರನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಕಾಣುತ್ತಿದ್ದ ಮಗ ದಶರಥ ಪಾತ್ರೆ, ತಂದೆ ಮತ್ತು ತಾಯಿಯ ನಾಲ್ಕನೇ ಪುಣ್ಯಸ್ಮರಣೆ ಪ್ರಯುಕ್ತ ಮತ್ತು ಅವರ ಸವಿನೆನಪಿಗಾಗಿ ತಮ್ಮದೇ ಸ್ಥಳದಲ್ಲಿ ಚಿಕ್ಕದಾದ ದೇವಸ್ಥಾನ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಕಾಸರಗೋಡಿನಲ್ಲಿ ಮಹಿಳೆಯನ್ನು ಚುಡಾಯಿಸಿ, ಥಳಿತಕ್ಕೊಳಗಾದ ವ್ಯಕ್ತಿ ಹೃದಯಾಘಾತದಿಂದ ಸಾವು!
ಆ ದೇವಸ್ಥಾನದಲ್ಲಿ ತಮ್ಮ ತಂದೆ ವಿಶ್ವನಾಥ್ ಮತ್ತು ತಾಯಿ ಲಕ್ಷ್ಮೀಬಾಯಿ ಅವರ ಮೂರ್ತಿಗಳನ್ನು ಪ್ರತಿಷ್ಟಾಪಿಸಿದ್ದಾರೆ. ವಿಶ್ವನಾಥ್ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ. ತಂದೆ -ತಾಯಿ ತೀರಿಕೊಂಡ ನಂತರ ಪುತ್ರ ದಶರಥ ತೀವ್ರ ದುಃಖ ಪಟ್ಟಿದ್ದರು. ಎಷ್ಟೋ ಕಷ್ಟ ಕಾರ್ಪಣ್ಯಗಳನ್ನ ಎದುರಿಸಿ ನಮ್ಮನ್ನೆಲ್ಲಾ ಬೆಳೆಸಿ, ಈ ಹಂತಕ್ಕೆ ತಂದಿದ್ದಾರೆ. ಜೀವನವಿಡೀ ನಮ್ಮ ಏಳಿಗೆ, ಶ್ರೇಯಸ್ಸನ್ನೇ ಬಯಸಿದ ತಂದೆ -ತಾಯಿಯನ್ನು ಕಳೆದುಕೊಂಡು ಅನಾಥ ಪ್ರಜ್ಞೆ ಕಾಡುತ್ತಿತ್ತು. ಹೀಗಾಗಿ ಅವರ ಸವಿನೆನಪಿಗಾಗಿ ನಿರಗುಡಿ ಗ್ರಾಮದಲ್ಲಿ ಪೋಷಕರ ಮಂದಿರ ನಿರ್ಮಿಸಿ, ಮೂರ್ತಿ ಪ್ರತಿಷ್ಠಾಪಿಸೋ ಮೂಲಕ ನಿತ್ಯವೂ ಪೂಜೆ ಮಾಡೋ ಸಂಕಲ್ಪ ಕೈಗೊಂಡಿದ್ದೇವೆ ಎಂದು ಹಿರಿಯ ಪುತ್ರ ದಶರಥ ತಿಳಿಸಿದ್ದಾರೆ.
ನಿನ್ನೆ ನಾಲ್ಕನೇ ಪುಣ್ಯಸ್ಮರಣೆ ಅಂಗವಾಗಿ ಮಹಾರಾಷ್ಟ್ರದ ಪಂಡರಪುರದ ಶಿಲ್ಪಿಗಳಿಂದ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಹೆತ್ತವರ ಮೂರ್ತಿಯನ್ನು ಪ್ರತಿಷ್ಟಾಪಿಸಿ ಆಧುನಿಕ ಶ್ರವಣನೆನಿಸಿಕೊಂಡಿದ್ದಾರೆ. ಹೆತ್ತವರ ಹೆಸರಲ್ಲಿ ಟ್ರಸ್ಟ್ ಸ್ಥಾಪಿಸಿ ವಿವಿಧ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಿರುವುದಾಗಿ ದಶರಥ ತಿಳಿಸಿದ್ದಾರೆ. ಹೆತ್ತವರನ್ನು ಯಾರೂ ಕಡೆಗಣಿಸಬಾರದು. ಅವರು ಕಷ್ಟಪಟ್ಟಿದ್ದರಿಂದಲೇ ನಾವು ಈ ಹಂತಕ್ಕೆ ಬೆಳೆಯಲು ಸಾಧ್ಯವಾಯಿತು. ಹೀಗಾಗಿ ಅವರು ಜೀವಂತವಿರುವಾಗ ಯಾರೂ ನಿರ್ಲಕ್ಷಿಸಬಾರದು. ಮೃತಪಟ್ಟ ನಂತರವೂ ಅವರನ್ನು ಗೌರವದಿಂದ ಸ್ಮರಿಸಿಕೊಳ್ಳಬೇಕು ಎಂದು ಮತ್ತೋರ್ವ ಪುತ್ರ ಧನರಾಜ್ ಅಭಿಪ್ರಾಯಪಟ್ಟಿದ್ದಾರೆ.
(ವರದಿ - ಶಿವರಾಮ ಅಸುಂಡಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ