ರೈತ ಸಂಘಟನೆಗಳ ದುಂಡು ಮೇಜಿನ ಸಭೆ - ತೊಗರಿ ಖರೀದಿ ಮಿತಿ ಹೆಚ್ಚಳಕ್ಕೆ ಆಗ್ರಹ

ವಿಧಾನಸಭೆ ಸದನದಲ್ಲಿ ಶಾಸಕರು ಹೋರಾಟ ಮಾಡಬೇಕು, ಕಲಬುರ್ಗಿಯಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ರೈತರು ಹೋರಾಟ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ದುಂಡು ಮೇಜಿನ ಸಭೆ

ದುಂಡು ಮೇಜಿನ ಸಭೆ

  • Share this:
ಕಲಬುರ್ಗಿ(ಫೆ.14) : ತೊಗರಿ ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ಕನ್ನಡ ಭವನದಲ್ಲಿ ರೈತ ಸಂಘಟನೆಗಳ ಮತ್ತು ಜನಪ್ರತಿನಿಧಿಗಳ ದುಂಡು ಮೇಜಿನ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು ಬೆಂಬಲ ಬೆಲೆಯಡಿ ತೊಗರಿ ಖರೀದಿ ಮಿತಿಯನ್ನು 10 ರಿಂದ 20 ಕ್ವಿಂಟಲ್ ಗೆ ಹೆಚ್ಚಿಸುವ ಸಂಬಂಧ ಫೆಬ್ರವರಿ 17 ರಂದು ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಿ, ಸರ್ಕಾರವನ್ನು ಎಚ್ಚರಿಸುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘ, ಎಐಕೆಎಸ್ ಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಶಾಸಕರಾದ ಬಂಡೆಪ್ಪ ಕಾಶಂಪೂರ, ಎಂ.ವೈ.ಪಾಟೀಲ, ಮಾಜಿ ಸಚಿವ ಶರಣಪ್ರಕಾಶ ಪಾಟೀಲ, ಮಾಜಿ ಶಾಸಕ ಬಿ.ಆರ್.ಪಾಟೀಲ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಎಐಕೆಎಸ್ ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ ಮತ್ತಿತರರು ಭಾಗಿಯಾಗಿದ್ದರು.

ಈಗಾಗಲೇ ಬೆಂಬಲ ಬೆಲೆಯೊಂದಿಗೆ ಖರೀದಿ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ ಖರೀದಿ ಮಿತಿಯನ್ನು ಪ್ರತಿ ರೈತರಿಂದ 10 ಕ್ವಿಂಟಲ್ ಬದಲಿಗೆ 20 ಕ್ವಿಂಟಲ್ ಖರೀದಿಸಬೇಕೆಂಬ ಬೇಡಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿ ಭರವಸೆ ನೀಡಿದ್ದರು. ಆದರೆ ನೀಡಿದ ಭರವಸೆಯನ್ನು ಅನುಷ್ಠಾನಕ್ಕೆ ತರುವಂತೆ ದುಂಡು ಮೇಜಿನ ಸಭೆಯಲ್ಲಿ ಒತ್ತಾಯಿಸಲಾಯಿತು.

ಬೆಂಬಲ ಬೆಲೆಗೆ ತೊಗರಿ ಮಾರಬೇಕೆಂದರೆ ಅವಧಿಮೀರಿದ ಚಹಾ ಕೊಳ್ಳುವುದು ರೈತರಿಗೆ ಅನಿವಾರ್ಯ?

ಈ ವೇಳೆ ಮಾತನಾಡಿದ ಬಂಡೆಪ್ಪ ಕಾಶಂಪೂರ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೈತರ ಎಲ್ಲ ಬೆಳೆ ಖರೀದಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೆ ರಾಜ್ಯ ಸರ್ಕಾರವೇ 200 ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಆದರೆ ಬಿಜೆಪಿ ಸರ್ಕಾರ ಇದಕ್ಕಾಗಿ ಹಣ ಮೀಸಲಿಟ್ಟಿತ್ತ. ಪ್ರತಿ ರೈತರಿಂದ 10 ಕ್ವಿಂಟಲ್ ಬದಲಿಗೆ 20 ಕ್ವಿಂಟಲ್ ಖರೀದಿಸೋದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರೂ, ಅದು ಜಾರಿಗೆ ಬಂದಿಲ್ಲ. ಕೂಡಲೇ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಶಾಸಕ ಎಂ.ವೈ.ಪಾಟೀಲ, ಬಿಜೆಪಿ ಸರ್ಕಾರಕ್ಕೆ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ ಎಂದು ಆರೋಪಿಸಿದರು. ಯಡಿಯೂರಪ್ಪ ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡಾಗ ಒಂದು ಮಾತನಾಡುತ್ತಾರೆ, ಶಾಲು ತೆಗೆದಾಗ ಮತ್ತೊಂದು ಮಾತನಾಡುತ್ತಾರೆ. ನಾವು ವಿಧಾನಸಭೆ ಅಧಿವೇಶನದಲ್ಲಿ ರೈತರ ಪರ ಧ್ವನಿ ಎತ್ತುತ್ತೇವೆ. ತೊಗರಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವಂತೆ ಒಕ್ಕೂರಲಿನಿಂದ ಆಗ್ರಹಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ತೊಗರಿ ಖರೀದಿ ವಿಷಯದಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು. ಪ್ರತಿ ರೈತರಿಂದ 20 ಕ್ವಿಂಟಲ್ ತೊಗರಿ ಖರೀದಿಸಿದರೆ ಸರ್ಕಾರಕ್ಕೇನೂ ನಷ್ಟವಾಗೋಲ್ಲ ಎಂದರು. ಮಾಜಿ ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ತೊಗರಿ ಬೆಳೆಗಾರರು ಹೋರಾಟವನ್ನು ಮುಂದುವರೆಸಬೇಕು. ತೊಗರಿ ಮಂಡಳಿಯನ್ನೂ ಎಚ್ಚರಿಸುವ ಕಾರ್ಯ ಮಾಡಬೇಕು. ಪ್ರತಿ ಕ್ವಿಂಟಲ್ ತೊಗರಿಯನ್ನು 6100 ರೂಪಾಯಿ ಬದಲಿಗೆ ಕೃಷಿ ಬೆಲೆ ಆಯೋಗದ ಶಿಫಾರಸ್ಸಿನಂತೆ ಪ್ರತಿ ಕ್ವಿಂಟಲ್ ನ್ನು 7171 ರೂಪಾಯಿಗೆ ಖರೀದಿ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಪಾಕ್ ಹೆಸರು ಹೇಳದಿದ್ದರೆ ಮೋದಿಗೆ ತಿಂದ ಅನ್ನ ಕರಗುವುದಿಲ್ಲ: ಕಲಬುರ್ಗಿಯಲ್ಲಿ ಬೃಂದಾ ಕಾರಟ್ ಟೀಕೆ

ವಿಧಾನಸಭೆ ಸದನದಲ್ಲಿ ಶಾಸಕರು ಹೋರಾಟ ಮಾಡಬೇಕು, ಕಲಬುರ್ಗಿಯಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ರೈತರು ಹೋರಾಟ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಕಲಬುರ್ಗಿ ಡಿಸಿ ಕಛೇರಿಗೆ ಬೀಗ ಜಡಿಯುವ ಹೋರಾಟ ಹಮ್ಮಿಕೊಳ್ಳುವುದಾಗಿಯೂ ಮುಖಂಡರು ಪ್ರಕಟಿಸಿದರು.
First published: