ಕಲಬುರ್ಗಿ (ಡಿ. 10): ಎರಡು ತಲೆಯ ಹಾವಿಗಾಗಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ್ದ ತಂದೆ ಮಗನನ್ನು ಬಂಧಿಸುವಲ್ಲಿ ಕಲಬುರ್ಗಿ ಜಿಲ್ಲೆ ಕಮಲಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಮಚಂದ್ರ ಚಿಲಾನೋರ ಹಾಗೂ ಭರತ್ ಚಿಲಾನೋರ ಬಂಧಿತ ಆರೋಪಿಗಳಾಗಿದ್ದಾರೆ. ರಾಮಚಂದ್ರ ಚಿಲಾನೋರ ಮತ್ತು ಆತನ ಮಗ ಸೇರಿ ನವೆಂಬರ್ 4 ರಂದು ಸಿದ್ರಾಮಪ್ಪ ಸಾಸರವಗ್ಗೆ ಎಂಬಾತನನ್ನು ಕೊಲೆ ಮಾಡಿದ್ದರು. ಕೊಲೆಯಾದ ಸಿದ್ರಾಮಪ್ಪ ಪಟವಾದ ಗ್ರಾಮದ ಮುಲ್ಲಾಮಾರಿ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದ.
ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಪಟವಾದ ಗ್ರಾಮದಲ್ಲಿ ಕೊಲೆಯಾಗಿದ್ದ ಸಿದ್ರಾಮಪ್ಪ ಸಾಸರವಗ್ಗೆ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಕೊಡಂಬಲ ಗ್ರಾಮದ ನಿವಾಸಿಯಾಗಿದ್ದ. ಸಿದ್ಧರಾಮಪ್ಪ ಸಾಸರವಗ್ಗೆ ಹಾಗೂ ರಾಮಣ್ಣ ಚಿಲಾನೋರ ಸೇರಿ ಎರಡು ತಲೆಯ ಹಾವನ್ನು ಹಿಡಿದು ತಂದಿದ್ದರು. ನಂತರ ಎರಡು ತಲೆಯ ಹಾವನ್ನು ರಾಮಣ್ಣನ ಮನೆಯಲ್ಲೇ ಇಟ್ಟಿದ್ದ ಸಿದ್ರಾಮಪ್ಪ ತನ್ನ ಊರಿಗೆ ಹೊರಟು ಹೋಗಿದ್ದ. ಸಿದ್ರಾಮಪ್ಪನಿಗೆ ತಿಳಿಯದ ಹಾಗೆ ಹಾವನ್ನು ರಾಮಣ್ಣ ಕದ್ದುಮುಚ್ಚಿ ಶ್ರೀಮಂತ ಎಂಬಾತನಿಗೆ ಮಾರಿದ್ದ. ಹಾವು ಮಾರಾಟ ಮಾಡಿರುವ ವಿಚಾರನ್ನು ಸಿದ್ರಾಮಪ್ಪನ ಬಳಿ ರಾಮಣ್ಣ ಮುಚ್ಚಿಟ್ಟಿದ್ದ.
ನವೆಂಬರ್ 4ರಂದು ರಾಮಣ್ಣನ ಮನೆಗೆ ತೆರಳಿದ್ದ ಸಿದ್ರಾಮಪ್ಪ ಎರಡು ತಲೆಯ ಹಾವು ಕೊಡುವಂತೆ ಗಲಾಟೆ ತೆಗೆದು ಜಗಳ ಮಾಡಿದ್ದ. ಹಾವು ಕೊಡೋದಕ್ಕೆ ಹಿಂದೇಟು ಹಾಕಿದ್ದ ರಾಮಣ್ಣನಿಗೆ ಅವಾಚ್ಯ ಶಬ್ದಗಳಿಂದ ಸಿದ್ರಾಮಪ್ಪ ನಿಂದಿಸಿದ್ದ. ಅವಾಚ್ಯ ಶಬ್ದಗಳ ನಿಂದನೆ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ರಾಮಣ್ಣನ ಮಗ ಭರತ್, ಸಿದ್ರಾಮಪ್ಪನ ಕತ್ತಿಗೆ ಚಾಕುವಿನಿಂದ ಇರಿದಿದ್ದ. ಈ ವೇಳೆ ಮಗನಿಗೆ ಸಾಥ್ ನೀಡಿದ್ದ ರಾಮಣ್ಣ, ಮಚ್ಚಿನಿಂದ ಸಿದ್ರಾಮಪ್ಪನಿಗೆ ಹಲ್ಲೆ ಮಾಡಿದ್ದ. ತೀವ್ರ ರಕ್ತಸ್ರಾವದಿಂದ ಸಿದ್ರಾಮಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.
ಇದನ್ನೂ ಓದಿ: ಚಿಕ್ಕಮಗಳೂರು - ಮುಂದುವರೆದ ಚುನಾವಣಾ ಬಹಿಷ್ಕಾರ; ರಾಜಕೀಯಕ್ಕಿಂತ ಬದುಕೇ ಮುಖ್ಯ ಎಂದು ಸಿಡಿದೆದ್ದ ಕಾಫಿನಾಡಿಗರು
ನಂತರ ಸಿದ್ರಾಮಪ್ಪನ ಶವವನ್ನು ಕೌದಿಯಲ್ಲಿ ಕಟ್ಟಿ ತಮ್ಮದೇ ಟಿವಿಎಸ್ ಬೈಕ್ ಮೇಲೆ ತಂದು ಪಟವಾದ ಹಳ್ಳದ ಸೇತುವೆ ಬಳಿ ಎಸೆದು ತಂದೆ ಮತ್ತು ಮಗ ಎಸ್ಕೇಪ್ ಆಗಿದ್ದರು. ನದಿಯಲ್ಲಿ ಶವ ತೇಲುತ್ತಿರುವುದು ಗಮನಕ್ಕೆ ಬಂದ ನಂತರ ಕಮಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ ಮೃತ ವ್ಯಕ್ತಿಯ ಗುರುತು ಪತ್ತೆಯಾಗದ ಕಾರಣ ಅಪರಿಚಿತ ಶವ ಪತ್ತೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಾಗ ಕೊಲೆಯ ಅಸಲಿಯತ್ತು ಬಹಿರಂಗಗೊಂಡಿದೆ. ಎರಡು ತಲೆ ಹಾವಿಗಾಗಿ ಸಿದ್ರಾಮಪ್ಪನ ಕೊಲೆ ಮಾಡಿದ್ದ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.
(ವರದಿ - ಶಿವರಾಮ ಅಸುಂಡಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ