Kalburgi: ಕಲಬುರ್ಗಿಯಲ್ಲಿ ಮುಂದುವರಿದ ಗುತ್ತಿಗೆ ವೈದ್ಯರ ಮುಷ್ಕರ; ಕೊರೋನಾ ವರದಿ ನೀಡಲು ನಕಾರ

ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ, ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕಲಬುರ್ಗಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

news18-kannada
Updated:September 25, 2020, 1:16 PM IST
Kalburgi: ಕಲಬುರ್ಗಿಯಲ್ಲಿ ಮುಂದುವರಿದ ಗುತ್ತಿಗೆ ವೈದ್ಯರ ಮುಷ್ಕರ; ಕೊರೋನಾ ವರದಿ ನೀಡಲು ನಕಾರ
ಕಲಬುರ್ಗಿಯಲ್ಲಿ ಗುತ್ತಿಗೆ ವೈದ್ಯರ ಮುಷ್ಕರ
  • Share this:
ಕಲಬುರ್ಗಿ (ಸೆ. 25): ರಾಜ್ಯ ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಗುತ್ತಿಗೆ, ಹೊರಗುತ್ತಿಗೆ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮುಷ್ಕರ ತೀವ್ರಗೊಳಿಸಿದ್ದಾರೆ. ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಕೋವಿಡ್ ವರದಿಗಳನ್ನು ನೀಡದೆ ಅಸಹಕಾರ ತೋರಿಸುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆ, ಜಿಮ್ಸ್, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಗುತ್ತಿಗೆ, ಹೊರಗುತ್ತಿಗೆ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ, ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕಲಬುರ್ಗಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡಲಾಯಿತು. ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ನೌಕರರು ಮುಷ್ಕರ ಮುಂದುವರಿಸಿದ್ದು, ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದನ್ನು ಖಂಡಿಸಿ ಪ್ರತಿಭಟಿಸಿದರು. ಜಿಲ್ಲಾ ಆಸ್ಪತ್ರೆ, ಜಿಮ್ಸ್, ಸಮುದಾಯ ಆರೋಗ್ಯ ಕೇಂದ್ರ ಮತ್ತಿತರ ಕಡೆ ಕರ್ತವ್ಯಕ್ಕೆ ಗೈರು ಹಾಜರಾದರು. ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿದ್ದೇವೆ. ಆದರೂ ರಾಜ್ಯ ಸರ್ಕಾರ ಸೇವಾ ಭದ್ರತೆ ಒದಗಿಸುತ್ತಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನವನ್ನೂ ನೀಡುತ್ತಿಲ್ಲ. ಜೀವದ ಹಂಗು ತೊರೆದು ಕೋವಿಡ್ ಕರ್ತವ್ಯದಲ್ಲಿದ್ದೇವೆ. ಈಗಲಾದರೂ ಸೇವಾ ಭದ್ರತೆ ಕಲ್ಪಿಸಬೇಕು. 6ನೇ ವೇತನ ಆಯೋಗದ ಅನ್ವಯ ಮೂಲ ವೇತನ ನೀಡಬೇಕು. ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ಕೋವಿಡ್ ವಿಮಾ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.

ತಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲವೆಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಪ್ರಮೋದ್ ಗುಂಡಗುರ್ತಿ ಎಚ್ಚರಿಸಿದ್ದಾರೆ. ಸರ್ಕಾರ ನಮ್ಮ ತಾಳ್ಮೆ ಪರೀಕ್ಷಿಸದೆ ಬೇಡಿಕೆ ಈಡೇರಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಖಚಿತ ಎಂದು ಪ್ರಮೋದ್ ಎಚ್ಚರಿಸಿದ್ದಾರೆ.

ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಮುಷ್ಕರಿಂದಾಗಿ ಕಳೆದ ಎರಡು ದಿನಗಳಿಂದ ವೈದ್ಯಕೀಯ ವರದಿಗಳನ್ನೂ ನೀಡಲಾಗುತ್ತಿಲ್ಲ. ಕೋವಿಡ್ ಗೆ ಸಂಬಂಧಿಸಿ ಕೇವಲ ಪಾಸಿಟಿವ್ ವರದಿ ಮಾತ್ರ ಬರುತ್ತಿದೆ. ಆದರೆ, ಕೋವಿಡ್​ನಿಂದ ಸಾವನ್ನಪ್ಪಿದವರು ಹಾಗೂ ಸೋಂಕಿನಿಂದ ಗುಣಮುಖಗೊಂಡವರ ವರದಿಯನ್ನು ಕೊಡಲಾಗುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಕೋವಿಡ್ ಸಂಕಷ್ಟಕ್ಕೆ ಗುರಿಯಾದವರು ಮತ್ತಷ್ಟು ಸಮಸ್ಯೆ ಎದುರಿಸೋ ಆತಂಕ ಎದುರಾಗಿದೆ.
Published by: Sushma Chakre
First published: September 25, 2020, 1:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading