ಕಲಬುರ್ಗಿ (ಫೆ .11): ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರ್ಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಳೆದ ವರ್ಷ ನಡೆದಿತ್ತು. ಸಮ್ಮೇಳನ ನಡೆದು ಒಂದು ವರ್ಷ ಗತಿಸಿದರೂ ಇದುವರೆಗೂ ಎಷ್ಟು ಹಣ ಬಂದಿತ್ತು. ಅದರಲ್ಲಿ ಎಷ್ಟು ಖರ್ಚಾಯಿತು, ಉಳಿತಾಯವೇನಾದ್ರೂ ಆಗಿದೆಯಾ ಅಥವಾ ಇನ್ನೂ ಸರ್ಕಾರದ ನೆರವು ಕೋರಬೇಕಾ ಎನ್ನೋ ಯಾವ ವಿಷಯವೂ ಬಹಿರಂಗಗೊಂಡಿಲ್ಲ. ಸಮ್ಮೇಳನಕ್ಕಾದ ಖರ್ಚು - ವೆಚ್ಚ ಸಲ್ಲಿಕೆಯಾಗದಿರುವುದಕ್ಕೆ ಆಕ್ರೋಶಕ್ಕೆ ಕಾರಣವಾಗಿದೆ. ಮಹಾ ನಗರದಲ್ಲಿ 2020 ರ ಫೆಬ್ರವರಿ 5, 6 ಹಾಗೂ 7 ರಂದು ಮೂರು ದಿನಗಳ ಕಾಲ ಅದ್ಧೂರಿಯಾಗಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇನಳ ನಡೆದಿತ್ತು. ರಾಜ್ಯ ಸರ್ಕಾರ, ರಾಜ್ಯ ಸರ್ಕಾರಿ ನೌಕರರು, ಸಂಘ, ಸಂಸ್ಥೆಗಳು ಸೇರಿ ವಿವಿಧ ಮೂಲಗಳಿಂದ ಸಮ್ಮೇಳನಕ್ಕೆ ನೆರವು ಹರಿದು ಬಂದಿತ್ತು. ಹಲವು ವರ್ಷಗಳ ನಂತರ ನಡೆದಿದ್ದ ಸಮ್ಮೇಳನ ಅತ್ಯಂತ ಯಶಸ್ವಿಯಾಗಿತ್ತು. ಆದರೆ ಸಮ್ಮೇಳನ ಮುಗಿದು ಒಂದು ವರ್ಷವಾದ್ರೂ ಲೆಕ್ಕ ಕೊಡದೇ ಇರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
2020ರ ಫೆಬ್ರವರಿ ಸಮ್ಮೇಳನ ಮುಗಿದು, ಹಾವೇರಿಯಲ್ಲಿ ಮತ್ತೊಂದು ಸಮ್ಮೇಳನಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಆದರೂ, ಕಲಬುರ್ಗಿಯಲ್ಲಿ ನಡೆದ ಸಮ್ಮೇಳನದ ಲೆಕ್ಕ ಕೊಟ್ಟಿಲ್ಲ. ಹಣ ದುರ್ಬಳಕೆಯಾಗಿರೋ ಸಾಧ್ಯತೆ ಹಿನ್ನೆಲೆಯಲ್ಲಿ ಲೆಕ್ಕ ಕೊಡುವಲ್ಲಿ ವಿಳಂಬವಾಗುತ್ತಿದೆ ಎನ್ನೋ ಆರೋಪ ಕೇಳಿ ಬಂದಿದೆ. ಸರಿಯಾದ ರೀತಿಯಲ್ಲಿ ಲೆಕ್ಕ ಇಟ್ಟಿದ್ದರೆ ಇಷ್ಟೊತ್ತಿಗಾಗಲೇ ಲೆಕ್ಕ ಕೊಡಬೇಕಾಗಿತ್ತು. ರಾಜ್ಯ ಸರ್ಕಾರದಿಂದ ಎಷ್ಷು ಹಣ ಬಂದಿದೆ, ರಾಜ್ಯ ಸರ್ಕಾರಿ ನೌಕರರು, ವಿವಿಧ ಸಂಘ ಸಂಸ್ಥೆಗಳು ಕೊಟ್ಟ ಹಣವೆಷ್ಟು, ಅದರಲ್ಲಿ ಖರ್ಚಾದ ಮೊತ್ತವೆಷ್ಟು ಎನ್ನೋದರ ಲೆಕ್ಕ ಕೊಡಲು ಅನಗತ್ಯ ವಿಂಳಂಬ ಮಾಡಲಾಗುತ್ತಿದೆ. ಲೆಕ್ಕ ಪತ್ರ ಸರಿಯಾಗಿ ಇಟ್ಟಿದ್ದಲ್ಲಿ ಇಷ್ಟೊತ್ತಿಗಾಗಲೇ ಕೊಡಬೇಕಾಗಿತ್ತು. ಸಮ್ಮೇಳನದಲ್ಲಿ ಭ್ರಷ್ಟಾಚಾರ ನಡೆದಿರೋದ್ರಿಂದಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ನಾಲವಾರಕರ್ ಆರೋಪಿಸಿದ್ದಾರೆ.
ಈ ಕುರಿತು ಪ್ರಶ್ನಿಸೋಣವೆಂದರೆ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಗೋವಿಂದ ಕಾರಜೋಳ ಕಲಬುರ್ಗಿಗೆ ಬರುತ್ತಿಲ್ಲ. ಅಂದಿನ ಡಿಸಿ ಶರತ್ ಬೇರೆ ಕಡೆ ವರ್ಗವಾಗಿದ್ದಾರೆ. ಹೀಗಾಗಿ ಸಮ್ಮೇಳನದ ಕಾರ್ಯದರ್ಶಿ, ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿಯೇ ಲೆಕ್ಕ ಕೊಡಬೇಕೆಂದು ನಾಲವಾರಕರ್ ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸೋ ವೀರಭದ್ರ ಸಿಂಪಿ, ಲೆಕ್ಕ ಕೊಡೋದು ತನ್ನ ಕೈಯಲ್ಲಿ ಇಲ್ಲ ಎಂದಿದ್ದಾರೆ.
ಇದನ್ನು ಓದಿ: ಟಾಪ್ ಟಕ್ಕರ್ ಹಾಡಿನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ
ಖರ್ಚು - ವೆಚ್ಚದ ವಿವರಗಳು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಗೆ ಮತ್ತು ಕಲಬುರ್ಗಿ ಜಿಲ್ಲಾಧಿಕಾರಿಗಳಿಗೆ ಮಾತ್ರ ಗೊತ್ತು. ನಾವೇನಿದ್ದರೂ ಸಮ್ಮೇಳನದ ಯಶಸ್ವಿಗಾಗಿ ಹಗಲಿರುಳು ಶ್ರಮಿಸಿದ್ದೇವೆ. ಖರ್ಚು - ವೆಚ್ಚದ ತಂಟೆಗೆ ಹೋಗಿಲ್ಲ. ಸಮ್ಮೇಳನದ ಲೆಕ್ಕ ಕೊಡುವಂತೆ ನಾನೂ ಸಹ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೇನೆ. ಆದರೆ ನನಗೂ ಇದುವರೆಗೆ ಸಕಾರಾತ್ಮಕ ಉತ್ತರ ಬಂದಿಲ್ಲ. ರಾಜ್ಯ ಸರ್ಕಾರಿ ನೌಕರರು ತನ್ನ ದೇಣಿಗೆ ನೀಡುವಲ್ಲಿ ಒಂದಷ್ಟು ವಿಳಂಬವಾಗಿದೆ.
ಕೊರೋನಾ ಬಂದಿದ್ದರಿಂದ ಸ್ವಲ್ಪ ತಡವಾಗಿರಬೇಕು. ಆದರೆ ಆದಷ್ಟು ಬೇಗ ಲೆಕ್ಕ ಕೊಡಬಹುದೆಂದು ನಾನೂ ನಿರೀಕ್ಷಿಸಿದ್ದೇನೆ. ಜಿಲ್ಲಾಡಳಿತವೇ ಇದೆಲ್ಲಕ್ಕೂ ಉತ್ತರ ನೀಡಬೇಕೆಂದು ವೀರಭದ್ರ ಸಿಂಪಿ ಕೈ ತೊಳೆದುಕೊಂಡಿದ್ದಾರೆ. ಹಾವೇರಿಯಲ್ಲಿ ಮುಂದಿನ ಸಮ್ಮೇಳನಕ್ಕೆ ತಯಾರಿ ನಡೆದಿದೆ. ಕೊರೋನಾ, ಪೂರ್ವ ಸಿದ್ಧತೆಯ ಕೊರತೆ ಕಾರಣಕ್ಕಾಗಿ ಸಮ್ಮೇಳನ ಕೆಲ ದಿನ ಮುಂದೆ ಹೋಗಿದೆ. ಮತ್ತೊಂದೆಡೆ ಕನ್ನಡ ಸಾಹಿತ್ಯ ಪರಿಷತ್ ಗೆ ಮೇ ನಲ್ಲಿ ಚುನಾವಣೆ ನಿಗದಿಯಾಗಿದೆ. ಇದೆಲ್ಲರದ ನಡುವೆ ಸಮ್ಮೇಳನದ ಖರ್ಚು - ವೆಚ್ಚದ ಲೆಕ್ಕ ಕೊಡದೇ ಇರೋದು ಚರ್ಚೆಗೆ ಗ್ರಾಸವಾಗಿದೆ. ಈಗಲಾದ್ರೂ ಲೆಕ್ಕ ಕೊಡಿ ಎಂಬ ಕೂಗು ಕೇಳಿ ಬಂದಿದೆ.
(ವರದಿ - ಶಿವರಾಮ ಅಸುಂಡಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ